ಮೊಟ್ಟೆಯ ಹಳದಿ ಭಾಗದಿಂದ ಕೊಲೆಸ್ಟರಾಲ್ ಏರುತ್ತದೆ ಎನ್ನುವುದು ನಿಜವೇ?; ಇಲ್ಲಿದೆ ಮಾಹಿತಿ...
ಸಾಂದರ್ಭಿಕ ಚಿತ್ರ | Photo Credit : freepik
ಬಹಳಷ್ಟು ಮಂದಿ ಮೊಟ್ಟೆಯ ಬಿಳಿ ಭಾಗವನ್ನು ಮಾತ್ರ ಸೇವಿಸುತ್ತಾರೆ. ಹಳದಿ ಲೋಳೆ ತಮ್ಮ ಕೊಲೆಸ್ಟರಾಲ್ ಮಟ್ಟಗಳನ್ನು ಏರಿಸಬಹುದು ಮತ್ತು ಅದರಿಂದ ಹೃದಯದ ಸಮಸ್ಯೆಗಳಿಗೆ ಕಾರಣವಾಗಬಹುದು ಎನ್ನುವ ಭಾವನೆ ಹಲವರಲ್ಲಿದೆ.
ಮೊಟ್ಟೆಗಳು ಬಹಳ ಪೌಷ್ಠಿಕ ಆಹಾರ. ಉತ್ತಮ ಗುಣಮಟ್ಟದ ಪ್ರೊಟೀನ್, ಆರೋಗ್ಯಕರ ಕೊಬ್ಬುಗಳು, ಅಗತ್ಯ ವಿಟಮಿನ್ಗಳು ಮತ್ತು ಖನಿಜಗಳ ಅತ್ಯುತ್ತಮ ಮೂಲವಾಗಿದೆ. ಆದರೆ ಬಹಳಷ್ಟು ಮಂದಿ ಇಡೀ ಮೊಟ್ಟೆಯನ್ನು ಸೇವಿಸದೆ, ಬಿಳಿ ಭಾಗವನ್ನು ಮಾತ್ರ ಸೇವಿಸುತ್ತಾರೆ. ಕೊಲೆಸ್ಟ್ರಾಲ್ ಸಮೃದ್ಧವಾಗಿರುವ ಹಳದಿ ಲೋಳೆ (ಯೋಕ್) ತಮ್ಮ ಕೊಲೆಸ್ಟರಾಲ್ ಮಟ್ಟಗಳನ್ನು ಏರಿಸಬಹುದು ಮತ್ತು ಅದರಿಂದ ಹೃದಯದ ಸಮಸ್ಯೆಗಳಿಗೆ ಕಾರಣವಾಗಬಹುದು ಎನ್ನುವ ಭಾವನೆ ಹಲವರಲ್ಲಿದೆ. ಆದರೆ ಈ ದೃಷ್ಟಿಕೋನವು ಆಹಾರದ ಕೊಲೆಸ್ಟ್ರಾಲ್ ಬಗ್ಗೆ ಹಳೇ ಮಾಹಿತಿ ಮತ್ತು ತಪ್ಪು ಗ್ರಹಿಕೆಯನ್ನು ಆಧರಿಸಿದೆ. ಇತ್ತೀಚೆಗೆ ಖ್ಯಾತ ಹೃದಯರೋಗ ತಜ್ಞರಾದ ಡಾ ಅಲೋಕ್ ಚೋಪ್ರಾ ಮೊಟ್ಟೆಯ ಕುರಿತ ಈ ಮೂಡ ನಂಬಿಕೆಯ ಬಗ್ಗೆ ಇನ್ಸ್ಟಾಗ್ರಾಂ ಪುಟದಲ್ಲಿ ಜನರನ್ನು ಎಚ್ಚರಿಸಿದ್ದಾರೆ.
ಮೊಟ್ಟೆ ಪೌಷ್ಠಿಕ ಆಹಾರ
“ಇಡೀ ಮೊಟ್ಟೆಯನ್ನು ಸೇವಿಸಿ. ಮೊಟ್ಟೆ ಬಹಳ ಪೌಷ್ಠಿಕ ಆಹಾರ. ನೀವು ಸೇವಿಸಬಹುದಾದ ಬಹುಮುಖಿ ಆಹಾರದಲ್ಲಿ ಸೇರಿದೆ. ಹಾಗಿದ್ದರೂ ಮೊಟ್ಟೆಯ ಬಗ್ಗೆ ಅನಗತ್ಯ ಮೌಡ್ಯ ಜನರಲ್ಲಿದೆ. ನಿರ್ದಿಷ್ಟವಾಗಿ ಹೇಳುವುದಾದರೆ ಮೊಟ್ಟೆಯ ಹಳದಿ ಲೋಳೆಯಲ್ಲಿ ಕೊಲೆಸ್ಟರಾಲ್ ಇದೆ ಎಂದು ಹೇಳಲಾಗುತ್ತಿದೆ. ವಾಸ್ತವದಲ್ಲಿ ಮೊಟ್ಟೆಯ ಬಹಳಷ್ಟು ಪೋಷಕಾಂಶಗಳು ಹಳದಿ ಭಾಗದಲ್ಲೇ ಇರುತ್ತದೆ. ಬಿಳಿಭಾಗವನ್ನು ಹೋಲಿಸಿದರೆ ಹಳದಿ ಬಾಗದಲ್ಲಿ ವಿಟಮಿನ್ ಎ, ವಿಟಮಿನ್ ಇ ಮತ್ತು ಒಮೆಗಾ-3 ಫ್ಯಾಟಿ ಆಸಿಡ್ಗಳು ಇರುತ್ತವೆ” ಎಂದು ಅಲೋಕ್ ಚೋಪ್ರಾ ಹೇಳಿದ್ದಾರೆ.
ಆಧುನಿಕ ಸಂಶೋಧನೆಗಳು ಹೇಳಿರುವ ಪ್ರಕಾರ ಮೊಟ್ಟೆಯ ಆಹಾರದಲ್ಲಿರುವ ಕೊಲೆಸ್ಟರಾಲ್ನಿಂದ ರಕ್ತದ ಕೊಲೆಸ್ಟರಾಲ್ ಮಟ್ಟದ ಮೇಲೆ ಅತಿ ಕಡಿಮೆ ಪರಿಣಾಮ ಬೀರುತ್ತದೆ. ಕೊಲೆಸ್ಟರಾಲ್ ಮಟ್ಟ ಏರಿದರೂ, ಅದು ಉತ್ತಮ ಕೊಲೆಸ್ಟರಾಲ್ ಆಗಿರುತ್ತದೆ. ಅವು ಕೆಟ್ಟ ಕೊಲೆಸ್ಟರಾಲ್ ನ ನಕಾರಾತ್ಮಕ ಅಂಶದ ಮೇಲೂ ಪರಿಣಾಮ ಬೀರಿ ಆರೋಗ್ಯವನ್ನು ರಕ್ಷಿಸುತ್ತದೆ. ಇತ್ತೀಚೆಗಿನ ಸಂಶೋಧನೆ ತೋರಿಸಿರುವ ಪ್ರಕಾರ, ಬಹಳಷ್ಟು ಮಂದಿ ಅತಿ ಕಡಿಮೆ ಪ್ರಮಾಣದಲ್ಲಿ ಸೇವಿಸುವ ಮೊಟ್ಟೆಯ ಹಳದಿ ಭಾಗದಿಂದ ರಕ್ತದ ಕೊಲೆಸ್ಟರಾಲ್ ಮಟ್ಟಗಳ ಮೇಲೆ ಹೆಚ್ಚು ಪರಿಣಾಮ ಬೀರುವುದಿಲ್ಲ. ದೇಹವು ಕೊಲೆಸ್ಟರಾಲ್ ಉತ್ಪಾದನೆಯನ್ನು ನಿಯಂತ್ರಿಸುತ್ತದೆ ಮತ್ತು ಆಹಾರದ ಕೊಲೆಸ್ಟರಾಲ್ ಸೇವಿಸಿದಾಗ ದೇಹದಲ್ಲಿ ಉತ್ಪತ್ತಿಯಾಗಿರುವ ಕೊಲೆಸ್ಟರಾಲ್ ಪ್ರಮಾಣ ಕಡಿಮೆಯಾಗುತ್ತದೆ. ಹೀಗಾಗಿ ಮೊಟ್ಟೆಯ ಹಳದಿ ಭಾಗದಲ್ಲಿರುವ ಕೊಲೆಸ್ಟರಾಲ್ ಆರೋಗ್ಯಕ್ಕೆ ಮಾರಕವಲ್ಲ.
ಕೊಲೆಸ್ಟರಾಲ್ ಆರೋಗ್ಯಕ್ಕೆ ಮಾರಕವಲ್ಲ:
“ಕೊಲೆಸ್ಟರಾಲ್ ಅನ್ನೇ ಬಹಳ ತಪ್ಪು ಅಂದಾಜಿಸಲಾಗಿದೆ. ಕೊಲೆಸ್ಟರಾಲ್ ಸ್ವತಃ ಜೀವಕೋಶದ ರಚನೆಗೆ, ಹಾರ್ಮೋನ್ ಉತ್ಪಾದನೆಗೆ, ಮೆದುಳಿನ ಕಾರ್ಯಕ್ಕೆ ಮತ್ತು ಆರೋಗ್ಯಕರ ರೋಗನಿರೋಧಕ ವ್ಯವಸ್ಥೆಗೆ ಅವಶ್ಯಕ. ನೀವು ಏನು ಸೇವಿಸುತ್ತೀರಿ ಎನ್ನುವ ಹೊರತಾಗಿ, ದೇಹದಲ್ಲಿರುವ ಶೇ 85ರಷ್ಟು ಕೊಲೆಸ್ಟರಾಲ್ ಅನ್ನು ನಿಮ್ಮದೇ ಲಿವರ್ ಉತ್ಪಾದಿಸುತ್ತದೆ. ದೇಹ ಸ್ವತಃ ಕೊಲೆಸ್ಟರಾಲ್ಗಳನ್ನು ಉತ್ಪಾದಿಸುವಾಗ ಅದು ದೇಹಕ್ಕೆ ಹೇಗೆ ಅಪಾಯಕಾರಿಯಾಗಿರುತ್ತದೆ?” ಎಂದು ಅವರು ಪ್ರಶ್ನಸಿದ್ದಾರೆ.
ಯಾರು ತಿನ್ನಬಾರದು?
ಈಗಾಗಲೇ ಹೃದಯ ರೋಗ ಇರುವವರು, ಮಧುಮೇಹಿ ರೋಗಿಗಳು, ಕೊಲೆಸ್ಟರಾಲ್ ಆಹಾರ ಸೇವಿದ ತಕ್ಷಣ ರಕ್ತದ ಕೊಲೆಸ್ಟರಾಲ್ ಮಟ್ಟ ಏರುವ ಮಂದಿ, ಜಠರದ ಸಮಸ್ಯೆ ಇದ್ದವರು ಹಳದಿ ಭಾಗವನ್ನು ತಿನ್ನಬಾರದು. ಮುಖ್ಯವಾಗಿ ಸಾಧಾರಣ ಪ್ರಮಾಣದಲ್ಲಿ ಸೇವಿಸಿದಲ್ಲಿ ಮೊಟ್ಟೆ ಆರೋಗ್ಯಕರ ಆಹಾರ. ಬಹುತೇಕ ಮಂದಿಗೆ ಮೊಟ್ಟೆಯಲ್ಲಿರುವ ಕೊಲೆಸ್ಟರಾಲ್ ಅಂಶ ಹಾನಿಕರವಲ್ಲ.
ಕೃಪೆ: ndtv.com