ಕರಿದ ಎಣ್ಣೆಯನ್ನು ಮರಳಿ ಬಳಸದಂತೆ ಎಚ್ಚರಿಸಿದ ಏಮ್ಸ್ ವೈದ್ಯೆ; ಕಾರಣವೇನು?
ಸಾಂದರ್ಭಿಕ ಚಿತ್ರ | Photo Credit : freepik
ಕರಿದ ಪದಾರ್ಥಗಳಿಂದ ಉಳಿದ ಎಣ್ಣೆಯನ್ನು ಮತ್ತೆ ಬಿಸಿ ಮಾಡುವುದು ಅಗ್ಗದ ಆಯ್ಕೆಯಂತೆ ಕಾಣಿಸಿದರೂ ಅಪಾಯಕಾರಿ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.
ಭಾರತೀಯ ಅಡುಗೆಮನೆಗಳಲ್ಲಿ ಒಮ್ಮೆ ಕರಿಯಲು ಬಳಸಿದ ಎಣ್ಣೆಯನ್ನು ಮರುಬಳಕೆ ಮಾಡುವುದು ಸಾಮಾನ್ಯವಾಗಿ ಕಂಡುಬರುವ ಅಭ್ಯಾಸವಾಗಿದೆ. ಕರಿದ ಪದಾರ್ಥಗಳಿಂದ ಉಳಿದ ಎಣ್ಣೆಯನ್ನು ಉಳಿಸಿ ನಂತರ ಮತ್ತೆ ಬಿಸಿ ಮಾಡುವುದು ಅಗ್ಗದ ಆಯ್ಕೆಯಂತೆ ಕಾಣಿಸಬಹುದು. ಸಾಮಾನ್ಯವಾಗಿ ಎಲ್ಲಾ ಫಾಸ್ಟ್ ಫುಟ್ ಚೈನ್ಗಳು ನಿಯಮಿತವಾಗಿ ಹೀಗೆ ಎಣ್ಣೆ ಉಳಿಸುತ್ತಾರೆ. ಆದರೆ ಅಗ್ಗದ ಎಣ್ಣೆ ಎಂದು ಪದೇಪದೇ ಬಳಸಿದ ಎಣ್ಣೆಯನ್ನೇ ಬಳಸಬಹುದೆ? ಹೀಗೆ ಕರಿದ ಎಣ್ಣೆಯನ್ನು ಒಂದಕ್ಕಿಂತ ಹೆಚ್ಚು ಬಾರಿ ಬಳಸುವುದರಿಂದ ಕ್ಯಾನ್ಸರ್ ಅಪಾಯವೂ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಹೊಸದಿಲ್ಲಿಯ ಏಮ್ಸ್ನಲ್ಲಿ ನರವಿಜ್ಞಾನಿ ಮತ್ತು ವೈದ್ಯೆಯಾಗಿರುವ ಡಾ. ಪ್ರಿಯಾಂಕಾ ಸೆಹ್ರಾವತ್ ಹೀಗೆ ಅಡುಗೆ ಎಣ್ಣೆಗಳನ್ನು ಪದೇಪದೆ ಬಿಸಿ ಮಾಡುವುದರಿಂದ ಆಗುವ ಅಪಾಯಗಳನ್ನು ನಾವು ನಿರ್ಲಕ್ಷಿಸುತ್ತಿದ್ದೇವೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಫೆಬ್ರವರಿ 23ರಂದು ಅವರು ಇನ್ಸ್ಟಾಗ್ರಾಂ ವೀಡಿಯೊದಲ್ಲಿ ಈ ಬಗ್ಗೆ ವಿವರ ನೀಡಿದ್ದಾರೆ. ಅಡುಗೆ ಮನೆಯ ಇಂತಹ ಅಭ್ಯಾಸವು ದೀರ್ಘಕಾಲೀನ ಆರೋಗ್ಯ ಅಪಾಯಗಳಿಗೆ ಸದ್ದಿಲ್ಲದೆ ಕೊಡುಗೆ ಕೊಡುತ್ತದೆ. ಚಯಾಪಚಯ ಅಡಚಣೆಯಿಂದ ತೊಡಗಿ ಹೃದಯ ರಕ್ತನಾಳದ ಕಾಯಿಲೆ ಮತ್ತು ಕ್ಯಾನ್ಸರ್ನಂತಹ ಗಂಭೀರ ಸ್ಥಿತಿಗಳಿಗೆ ಕಾರಣವಾಗಬಹುದು ಎಂದು ಅವರು ಎಚ್ಚರಿಸಿದ್ದಾರೆ.
ಎಣ್ಣೆಯನ್ನು ಮರಳಿ ಬಿಸಿ ಮಾಡುವುದರಿಂದ ಏನಾಗುತ್ತದೆ?
ಪ್ರಿಯಾಂಕಾ ಅವರ ಪ್ರಕಾರ, ಅಡುಗೆ ಎಣ್ಣೆಯನ್ನು ಪದೇಪದೇ ಬಿಸಿ ಮಾಡುವುದು ಗಂಭೀರ ಮತ್ತು ಹೆಚ್ಚಾಗಿ ನಾವು ಅಲಕ್ಷಿಸುವ ಕ್ಯಾನ್ಸರ್ ಅಪಾಯಕ್ಕೆ ಕಾರಣವಾಗಲಿದೆ. ಜೈಪುರದ ಫಾಸ್ಟ್ ಫುಡ್ ಔಟ್ಲೆಟ್ಗಳಲ್ಲಿ ಇತ್ತೀಚೆಗೆ ನಡೆಸಲಾದ ಸಮೀಕ್ಷೆಯನ್ನು ಅವರು ಉಲ್ಲೇಖಿಸಿದ್ದಾರೆ. ಒಂದೇ ಎಣ್ಣೆಯನ್ನು ಸಂಪೂರ್ಣ ಕಪ್ಪು ಬಣ್ಣಕ್ಕೆ ತಿರುಗುವವರೆಗೆ ಬಿಸಿ ಮಾಡಲಾಗಿದೆ. ಆಳವಾಗಿ ಕರಿಯಲು ಬಳಸುವ ಎಣ್ಣೆಯನ್ನು ಪದೇಪದೆ ಬಿಸಿ ಮಾಡಿದಾಗ ಅದು ಒಡೆಯುತ್ತದೆ ಮತ್ತು ಕ್ಯಾನ್ಸರ್ ಜನಕ ಸಂಯುಕ್ತಗಳು ಮತ್ತು ಇತರ ಹಾನಿಕರ ವಸ್ತುಗಳನ್ನು ಬಿಡುಗಡೆ ಮಾಡುತ್ತದೆ ಎಂದು ಪ್ರಿಯಾಂಕಾ ಹೇಳಿದ್ದಾರೆ.
ಜೈಪುರದ ಫಾಸ್ಟ್ ಫುಡ್ ಔಟ್ಲೆಟ್ನಲ್ಲಿ ನಡೆದ ಸಮೀಕ್ಷೆಯಲ್ಲಿ ಪದೇಪದೆ ಬಿಸಿ ಮಾಡಿದ ಎಣ್ಣೆ ಬಳಸುವ ಕುರಿತಾದ ಸಮೀಕ್ಷೆಯಲ್ಲಿ ಕ್ಯಾನ್ಸರ್ಜನಕ ಸಂಯುಕ್ತಗಳು ಇರುವುದು ಬಹಿರಂಗವಾಗಿದೆ. ಎಣ್ಣೆ ಸಂಪೂರ್ಣವಾಗಿ ಕಪ್ಪಾಗಿತ್ತು. ಆಳವಾಗಿ ಕರಿದ ವಸ್ತುಗಳನ್ನು ತಯಾರಿಸಿದ ಎಣ್ಣೆಯನ್ನು ಮತ್ತೆ ಕರಿದ ಪದಾರ್ಥಗಳನ್ನು ತಯಾರಿಸಲು ಬಳಸಿದರೆ ಕ್ಯಾನ್ಸರ್ ಜನಕ ಸಂಯುಕ್ತಗಳು, ಒಟ್ಟು ಪೋಲಾರ್ ಸಂಯುಕ್ತಗಳು, ಪಾಲಿಸೈಕ್ಲಿಕ್ ಆರೋಮ್ಯಾಟಿಕ್ ಹೈಡ್ರೋಕಾರ್ಬನ್ಗಳು, ಟ್ರಾನ್ಸ್ ಕೊಬ್ಬುಗಳು ಮತ್ತು ಫ್ರೀ ರ್‍ಯಾಡಿಕಲ್ಗಳನ್ನು ಬಿಡುಗಡೆ ಮಾಡುತ್ತದೆ.
ಕರಿದ ಎಣ್ಣೆಯಿಂದ ಆರೋಗ್ಯ ಅಪಾಯಗಳು
ಕ್ಯಾನ್ಸರ್ ಅಪಾಯ ಮುಖ್ಯವಾಗಿ ಕಂಡುಬಂದಿದೆ. ಅಲ್ಲದೆ, ಹೃದಯದ ಆರೋಗ್ಯದ ಮೇಲೂ ಗಂಭೀರ ಪರಿಣಾಮಗಳನ್ನು ಬೀರುತ್ತವೆ. ಕೊಳೆತ ಎಣ್ಣೆಯಲ್ಲಿ ಬೇಯಿಸಿದ ಆಹಾರವನ್ನು ನಿಯಮಿತವಾಗಿ ಸೇವಿಸುವುದರಿಂದ ಹೃದಯಾಘಾತ ಸೇರಿದಂತೆ ಹೃದಯರಕ್ತನಾಳದ ರೋಗಗಳ ಅಪಾಯ ಹೆಚ್ಚಾಗುತ್ತದೆ. ಅಲ್ಲದೆ, ಬಿಸಿ ಮಾಡಿದ ಎಣ್ಣೆಯು ರಕ್ತದಲ್ಲಿ ಕೆಟ್ಟ ಎಲ್ಡಿಎಲ್ ಕೊಲೆಸ್ಟರಾಲ್ ಮಟ್ಟವನ್ನು ಹೆಚ್ಚಿಸಲು ಕೊಡುಗೆ ನೀಡುತ್ತದೆ. ಹೃದಯದಲ್ಲಿ ಲೋಳೆಗಳ ನಿರ್ಮಾಣ ಮತ್ತು ದೀರ್ಘಕಾಲೀನ ಸಮಸ್ಯೆಗಳ ಸಾಧ್ಯತೆಯನ್ನು ಸೃಷ್ಟಿಸುತ್ತದೆ.
ಈ ಸಮಸ್ಯೆಗೆ ಪರಿಹಾರವೇನು?
ಪದೇಪದೆ ಎಣ್ಣೆ ಬಳಸುವುದರಿಮದ ಅಲ್ಪಾವಧಿಯ ಉಳಿತಾಯಕ್ಕೆ ಪ್ರಯತ್ನಿಸಿ ದೀರ್ಘಾವಧಿ ಅಪಾಯ ತಂದುಕೊಳ್ಳಲಾಗುತ್ತಿದೆ ಎಂದು ವೈದ್ಯೆ ಪ್ರಿಯಾಂಕಾ ಎಚ್ಚರಿಸಿದ್ದಾರೆ. ಎಣ್ಣೆಯನ್ನು ಮರಳಿ ಬಳಸಬೇಕೆಂದರೆ ಅದನ್ನು ಸೋಸಿ ಸೂಕ್ತ ರೀತಿಯಲ್ಲಿ ಸಂಗ್ರಹಿಸಿಡಬೇಕು ಮತ್ತು ಮುಂದಿನ ಒಂದೆರಡು ದಿನಗಳಲ್ಲಿ ಒಗ್ಗರಣೆ ಮತ್ತಿತರ ಲಘು ಅಡುಗೆಗಳಿಗೆ ಬಳಸಬಹುದು. ಹಾಗಿದ್ದರೂ ಅಧಿಕ ತಾಪಮಾನದಿಂದ ಎಣ್ಣೆಯ ಗುಣಮಟ್ಟ ಇನ್ನಷ್ಟು ತಗ್ಗುತ್ತದೆ ಮತ್ತು ಹಾನಿಕರ ಸಂಯುಕ್ತಗಳ ರಚನೆಯನ್ನು ಏರಿಸುತ್ತದೆ.