ಸರ್ವಕಾಲಿಕ ಮಟ್ಟ ತಲುಪಿದ ಚಿನ್ನದ ದರ; ಹೂಡಿಕೆ ಬಗ್ಗೆ ತಜ್ಞರು ಹೇಳುವುದೇನು?
ಹೊಸದಿಲ್ಲಿ: ಭಾರತದಲ್ಲಿ ಚಿನ್ನದ ದರ ಅ.1ರಂದು ಸರ್ವಕಾಲಿಕ ದಾಖಲೆ ಮಟ್ಟವನ್ನು ತಲುಪಿದ್ದು, 10 ಗ್ರಾಂ ಚಿನ್ನದ ಬೆಲೆ 1.17 ಲಕ್ಷ ರೂಪಾಯಿಗೆ ಏರಿದೆ. ರಾಷ್ಟ್ರ ರಾಜಧಾನಿಯಲ್ಲಿ ಶೇಕಡ 99.9 ಪರಿಶುದ್ಧತೆಯ ಪ್ರತಿ ಹತ್ತು ಗ್ರಾಂ ಚಿನ್ನದ ದರ 1,100 ಹೆಚ್ಚಳ ಕಂಡು 10 ಗ್ರಾಂಗೆ 1.21 ಲಕ್ಷ ರೂಪಾಯಿ ತಲುಪಿದ್ದಾಗಿ ಅಖಿಲ ಭಾರತ ಸರಾಫ್ ಅಸೋಸಿಯೇಶನ್ ಹೇಳಿದೆ ಎಂದು ಪಿಟಿಐ ವರದಿ ಮಾಡಿದೆ.
ಅಮೆರಿಕ ಸರ್ಕಾರದ ಫೆಡರಲ್ ಬಜೆಟ್ ಗೆ ಅಲ್ಲಿನ ಸದನದಲ್ಲಿ ಒಪ್ಪಿಗೆ ಸಿಗದ ಹಿನ್ನೆಲೆಯಲ್ಲಿ ಅಮೆರಿಕ ಸರ್ಕಾರ 'ಶಟ್‌ಡೌನ್' ಘೋಷಿಸಿದ ಬೆನ್ನಲ್ಲೇ ದರ ಗಗನಮುಖಿಯಾಗಿದೆ. ಅಮೆರಿಕ ಸರ್ಕಾರದ ನಿರ್ಧಾರದಿಂದ ಹಲವು ಮಂದಿ ಸರ್ಕಾರಿ ಉದ್ಯೋಗ ಕಳೆದುಕೊಂಡಿದ್ದು, ವಿಮಾನಯಾನ ಕಡಿಮೆಯಾಗಿದೆ. ವೈಜ್ಞಾನಿಕ ಸಂಶೋಧನೆಗಳು ಸ್ಥಗಿತಗೊಂಡಿದ್ದು, ಅಮೆರಿಕದ ಸೇನೆಗೂ ವೇತನ ತಡೆಹಿಡಿಯಲಾಗಿದೆ.
ಏತನ್ಮಧ್ಯೆ ದೀಪಾವಳಿ ಸಂದರ್ಭದಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡಬಹುದೇ ಎಂಬ ಆತಂಕ ಭಾರತೀಯ ಗ್ರಾಹಕರಲ್ಲಿದೆ. "ಅಮೆರಿಕದಲ್ಲಿ ನಿರೀಕ್ಷಿತ ಬಡ್ಡಿದರ ಕಡಿತದಂಥ ಜಾಗತಿಕ ಅಂಶಗಳು, ಹಬ್ಬದ ಬೇಡಿಕೆ, ಭೌಗೋಳಿಕ- ರಾಜಕೀಯ ಅನಿಶ್ಚಿತತೆಗಳ ಕಾರಣದಿಂದ ಭಾರತದಲ್ಲಿ ಚಿನ್ನದ ದರ ಗಗನಮುಖಿಯಾಗಿದೆ" ಎಂದು ಇಂಡ್‌ಮನಿ (INDmoney) ಉಪಾಧ್ಯಕ್ಷ ಮಾಯಾಂಕ್ ಮಿಶ್ರಾ ವಿಶ್ಲೇಷಿಸಿದ್ದಾರೆ.
ಜಾಗತಿಕ ಅಸ್ಥಿರತೆ ಮುಂದುವರಿದರೆ ದರ ಇನ್ನೂ ಹೆಚ್ಚುವ ಸಾಧ್ಯತೆ ಇದೆ. ಬೆಲೆ ಚಂಚಲವಾಗಿರುವ ಹಿನ್ನೆಲೆಯಲ್ಲಿ ಅಲ್ಪಾವಧಿ ಹೂಡಿಕೆ ಬೇಡ ಎಂದು ಅವರು ಸಲಹೆ ಮಾಡಿದ್ದಾರೆ. ಚಿನ್ನಕ್ಕೆ ಎಲ್ಲ ಅನಿಶ್ಚಿತತೆಗಳನ್ನೂ ಮೀರುವ ಸಾಮಥ್ರ್ಯ ಇದ್ದರೂ, ಅಲ್ಪಾವಧಿಯಲ್ಲಿ ಪ್ರತಿಫಲ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.