ಖತರ್ ಅಂಡರ್ 19 ಕ್ರಿಕೆಟ್ ತಂಡಕ್ಕೆ ಮಂಗಳೂರು ಮೂಲದ ಯುವಕ ಎಸ್ಸಾಮ್ ಮನ್ಸೂರ್ ಆಯ್ಕೆ
ಎಸ್ಸಾಮ್ ಮನ್ಸೂರ್
ದೋಹಾ: ಖತರ್ ಅಂಡರ್ 19 ಕ್ರಿಕೆಟ್ ತಂಡಕ್ಕೆ ಮಂಗಳೂರು ಮೂಲದ ಯುವಕ ಎಸ್ಸಾಮ್ ಮನ್ಸೂರ್ ಆಯ್ಕೆಯಾಗಿದ್ದಾರೆ.
ಪ್ರಸ್ತುತ ಖತರ್‌ನ ದೋಹಾದಲ್ಲಿ ನೆಲೆಸಿರುವ ಮನ್ಸೂರ್ ಹಸನಬ್ಬ ಹೆಂತಾರ್ ಮತ್ತು ರಝಿಯಾ ಸುಲೈಮಾನ್ ಸಾಲ್ಮರ ಅವರ ಹಿರಿಯ ಪುತ್ರನಾಗಿರುವ ಎಸ್ಸಾಮ್ ಮನ್ಸೂರ್, ಯುನಿವರ್ಸಿಟಿ ಆಫ್ ದೋಹಾ ಫಾರ್ ಸೈನ್ಸ್ ಅಂಡ್ ಟೆಕ್ನಾಲಜಿ (ಯುಡಿಎಸ್‌ಟಿ)ಯಲ್ಲಿ ಮೊದಲ ವರ್ಷದ ಪದವಿ ವ್ಯಾಸಾಂಗವನ್ನು ಮಾಡುತ್ತಿದ್ದಾರೆ.
ಎಸ್ಸಾಮ್ ಮನ್ಸೂರ್ ಹಲವು ವರ್ಷಗಳ ಕಠಿಣ ಪರಿಶ್ರಮದ ಬಳಿಕ ಖತರ್ ಅಂಡರ್ 19 ಕ್ರಿಕೆಟ್ ತಂಡದಲ್ಲಿ ಅವಕಾಶವನ್ನು ಪಡೆದುಕೊಂಡಿದ್ದಾರೆ. ಈ ಮೂಲಕ ಬ್ಯಾರಿ ಸಮುದಾಯದಿಂದ ಖತರ್ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದ ಮೊದಲ ಬಾಲಕ ಎಂಬ ಹಿರಿಮೆಗೂ ಪಾತ್ರರಾಗಿದ್ದಾರೆ.
ಎಸ್ಸಾಮ್ ನವೆಂಬರ್ 17ರಂದು ಅಂಡರ್ 19 ಎಸಿಸಿ ಪ್ರೀಮಿಯರ್ ಕಪ್‌ನಲ್ಲಿ ಭಾಗವಹಿಸಲು ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ತೆರಳಲಿದ್ದಾರೆ.
ಕ್ರಿಕೆಟ್ ಮೇಲಿದ್ದ ಆಸಕ್ತಿ ಮತ್ತು ಶಿಸ್ತು, ಬದ್ಧತೆ ಎಸ್ಸಾಮ್ ಈ ಮಟ್ಟಕ್ಕೆ ಬೆಳೆಯಲು ಕಾರಣವಾಗಿದೆ. ಎಸ್ಸಾಮ್ ಆಯ್ಕೆಯಾಗಿರುವುದು ನಮ್ಮ ಕುಟುಂಬಕ್ಕೆ ಮಾತ್ರವಲ್ಲ, ಸಮುದಾಯಕ್ಕೂ ಹೆಮ್ಮೆಯ ಕ್ಷಣವಾಗಿದೆ ಎಂದು ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.
ಪ್ರೀಮಿಯರ್ ಕಪ್ ಮತ್ತು ಭವಿಷ್ಯದ ಕ್ರಿಕೆಟ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡಿ ದೇಶವನ್ನು ಹೆಮ್ಮೆಪಡುವಂತೆ ಮಾಡುವ ಭರವಸೆ ಇದೆ ಎಂದು ಎಸ್ಸಾಮ್ ತಂದೆ ಇಂಜಿನಿಯರ್ ಆಗಿರುವ ಮನ್ಸೂರ್ ಹಸನಬ್ಬ ಹಾಗೂ ತಾಯಿ ರಝಿಯಾ ಸುಲೈಮಾನ್ ಹೇಳಿದ್ದಾರೆ.
ಖತರ್ ಮತ್ತು ಕರಾವಳಿ ಕರ್ನಾಟಕದ ಜನರು ಎಸ್ಸಾಮ್ ಸಾಧನೆಯನ್ನು ಶ್ಲಾಘಿಸಿದ್ದಾರೆ.