Saudi Arabia | ವಿಮಾನ ನಿಲ್ದಾಣ, ವಾಯುಪ್ರದೇಶ ಬಳಸದಂತೆ ಹೂತಿಗಳ ಎಚ್ಚರಿಕೆ
ಸಾಂದರ್ಭಿಕ ಚಿತ್ರ | Photo Credit : PTI
ಸನಾ, ಅ. 11: ಸೌದಿ ವಿಮಾನ ನಿಲ್ದಾಣಗಳು ಮತ್ತು ವಾಯುಪ್ರದೇಶವನ್ನು ಬಳಸದಂತೆ ವಿಮಾನಯಾನ ಸಂಸ್ಥೆಗಳು ಮತ್ತು ಪ್ರಯಾಣಿಕರಿಗೆ ಯಮನ್ ನ ಹೂತಿ ಸಂಘಟನೆ ರವಿವಾರ ಎಚ್ಚರಿಕೆ ನೀಡಿದೆ.
ಸೌದಿ ಅರೇಬಿಯದ ರಿಯಾದ್ ನಲ್ಲಿರುವ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ನಡೆದ ದಾಳಿಯಲ್ಲಿ 12 ಜನರು ಸಾವನ್ನಪ್ಪಿದ್ದು, 300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ದಾಳಿಯ ನೇರ ಹೊಣೆಯನ್ನು ಹೂತಿಗಳು ತಕ್ಷಣವೇ ವಹಿಸಿಕೊಳ್ಳದಿದ್ದರೂ, ಮಕ್ಕಾ ಮತ್ತು ಮದೀನಾ ಪವಿತ್ರ ನಗರಗಳನ್ನು ಹೊರತುಪಡಿಸಿ ಸೌದಿ ಅರೇಬಿಯದ ಇತರ ವಿಮಾನ ನಿಲ್ದಾಣಗಳ ಮೇಲೆ ಹೊಸ ದಾಳಿಗಳನ್ನು ನಡೆಸುವುದಾಗಿ ಬೆದರಿಕೆ ಹಾಕಿದ್ದಾರೆ.
ಘಟನೆಗೆ ಸಂಬಂಧಿಸಿದ ಕೆಲವು ಪ್ರಮುಖ ಬೆಳವಣಿಗೆಗಳು:
► ಸೌದಿ ಅರೇಬಿಯದ ವಿಮಾನ ನಿಲ್ದಾಣಗಳು ನಮ್ಮ ದಾಳಿಯ ಪಟ್ಟಿಯಲ್ಲಿವೆ. ಎಲ್ಲರೂ ನಮ್ಮ ಎಚ್ಚರಿಕೆಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಹೂತಿ ಪಡೆಗಳ ಮಿಲಿಟರಿ ವಕ್ತಾರ ಬ್ರಿಗೇಡಿಯರ್ ಜನರಲ್ ಯಾಹ್ಯಾ ಸಾರೀ ಆಗ್ರಹಿಸಿದ್ದಾರೆ.
► ರಿಯಾದ್ ವಿಮಾನ ನಿಲ್ದಾಣದ ಮೇಲಿನ ಇತ್ತೀಚಿನ ದಾಳಿಯನ್ನು ಇರಾಕ್, ಲೆಬನಾನ್ ಮತ್ತು ಸಿರಿಯಾ ಸೇರಿದಂತೆ ಅರಬ್ ದೇಶಗಳು ಖಂಡಿಸಿವೆ. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಮತ್ತು ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೆಯೆನ್ ಕೂಡ ಹೆಚ್ಚುತ್ತಿರುವ ಉದ್ವಿಗ್ನತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
► ಈ ದಾಳಿಯಲ್ಲಿ ಅಮೆರಿಕದ ಪ್ರಜೆಯೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ತಿಳಿಸಿದ್ದಾರೆ. ಈ ಶತ್ರುತ್ವದ ಕ್ರಮಗಳನ್ನು ತಕ್ಷಣವೇ ನಿಲ್ಲಿಸುವಂತೆ ಹೂತಿಗಳನ್ನು ಒತ್ತಾಯಿಸಿದ್ದಾರೆ.
► ಇರಾನ್ ಬೆಂಬಲಿತ ಹೂತಿ ಬಂಡುಕೋರರ ವಿರುದ್ಧ ಸೌದಿ ಅರೇಬಿಯಾದೊಂದಿಗೆ ಸೇರಿ ದಾಳಿ ನಡೆಸುವುದನ್ನು ಅಮೆರಿಕ ಪರಿಗಣಿಸಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
►ಯಮನ್ ರಾಜಧಾನಿ ಸನಾ ಮೇಲೆ ಎರಡು ವೈಮಾನಿಕ ದಾಳಿಗಳು ನಡೆದಿವೆ ಎಂದು ಹೂತಿಗಳು ಹೇಳಿಕೊಂಡಿದ್ದು, ಅದಕ್ಕೆ ಸೌದಿ ಅರೇಬಿಯಾವನ್ನು ಹೊಣೆಗಾರರನ್ನಾಗಿ ಮಾಡಿದ್ದಾರೆ ಎಂದು ‘ಅಸೋಸಿಯೇಟೆಡ್ ಪ್ರೆಸ್’ ವರದಿ ಮಾಡಿದೆ.