Dubai | ನ.22ರಂದು 'ಐಕ್ಯತೆಯ ಕರ್ನಾಟಕ ರಾಜ್ಯೋತ್ಸವ 2026': ಡಾ.ರೊನಾಲ್ಡ್ ಕೊಲಾಸೊ
ಒಂದೇ ವೇದಿಕೆಯಲ್ಲಿ ಒಗ್ಗೂಡಿ ಆಚರಿಸಲು ಕರ್ನಾಟಕ ಸಂಘ ದುಬೈ-ಕನ್ನಡಿಗರ ಕೂಟ ದುಬೈ ತೀರ್ಮಾನ
ದುಬೈ: ಕರ್ನಾಟಕ ಸಂಘ ದುಬೈ ಹಾಗು ಕನ್ನಡಿಗರ ಕೂಟ ದುಬೈ ಇದರ ಜಂಟಿ ಆಶ್ರಯದಲ್ಲಿ 'ದುಬೈ ಕನ್ನಡಿಗರ ಐಕ್ಯತೆಯ ಕರ್ನಾಟಕ ರಾಜ್ಯೋತ್ಸವ 2026'ನ್ನು ನ. 22ರ ರವಿವಾರದಂದು ದುಬೈಯ ಅಲ್ ಖಿಸೈಸ್‌ನ ನ್ಯೂ ಡಾನ್ ಪ್ರೈವೇಟ್ ಸ್ಕೂಲ್‌ನಲ್ಲಿ ಒಗ್ಗೂಡಿ ಅದ್ದೂರಿಯಾಗಿ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಖ್ಯಾತ ಅನಿವಾಸಿ ಭಾರತೀಯ ಉದ್ಯಮಿ, ಸಮಾಜ ಸೇವಕ ಡಾ.ರೊನಾಲ್ಡ್ ಕೊಲಾಸೊ ತಿಳಿಸಿದ್ದಾರೆ.
ಈ ಬಗ್ಗೆ ರವಿವಾರ ದುಬೈನ ಕರಾಮದಲ್ಲಿರುವ ಫೋರ್ಚುನ್ ಆಟ್ರಿಯಂ ಹೋಟೆಲ್ ನಲ್ಲಿ ನಡೆದ ಕರ್ನಾಟಕ ಸಂಘ ದುಬೈ ಹಾಗು ಕನ್ನಡಿಗರ ಕೂಟ ದುಬೈನ ಜಂಟಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಡಾ.ರೊನಾಲ್ಡ್ ಕೊಲಾಸೊ, ದುಬೈ ಕನ್ನಡಿಗರಲ್ಲಿನ ಐಕ್ಯತೆಯನ್ನು ನಾವು ಈ ಬಾರಿ ಜಗತ್ತಿಗೆ ತೋರಿಸಲಿದ್ದೇವೆ ಎಂದರು.
ಈ ಬಾರಿಯ ಕರ್ನಾಟಕ ರಾಜ್ಯೋತ್ಸವವನ್ನು ಕನ್ನಡಿಗರೆಲ್ಲರೂ ಒಗ್ಗಟ್ಟು, ಐಕ್ಯತೆಯ ಮೂಲಕ ಆಚರಿಸುವುದರೊಂದಿಗೆ ಇತಿಹಾಸವನ್ನು ಸೃಷ್ಟಿಸಲು ಕೈಜೋಡಿಸಬೇಕು ಎಂದು ಕರೆ ನೀಡಿದ ಕೊಲಾಸೊ, 'ಒಗ್ಗಟ್ಟಿನ ಒಲವಿನಿಂದ ಒಮ್ಮೂಡಿದ ಒಮ್ಮತದ ಉತ್ಸವ'ವಾಗಬೇಕು ಎಂದರು.
ಈ ಹಿಂದೆ ಪ್ರತ್ಯೇಕವಾಗಿ ಕರ್ನಾಟಕ ರಾಜ್ಯೋತ್ಸವ ಆಚರಿಸುವ ಸಂದರ್ಭದಲ್ಲಿ ಕಾರ್ಯಕ್ರಮ ಆಯೋಜನೆಗೆ ಸಮಯದ ಅಭಾವ, ಕಲಾವಿದರನ್ನು ಆಹ್ವಾನಿಸುವುದು ಹಾಗೂ ಕಾರ್ಯಕ್ರಮದ ಸಂಘಟನೆಯಂತಹ ಹಲವು ಸವಾಲುಗಳು ಎದುರಾಗುತ್ತಿದ್ದವು. ಆದರೆ, ಎರಡು ಸಂಘಟನೆಗಳು ಒಂದೇ ವೇದಿಕೆಯಲ್ಲಿ ಕೈಜೋಡಿಸಿರುವುದರಿಂದ ಇನ್ನು ಮುಂದೆ ಇಂತಹ ಸಮಸ್ಯೆಗಳು ಎದುರಾಗುವುದಿಲ್ಲ. ಎರಡೂ ಸಂಘಟನೆಗಳ ಒಗ್ಗಟ್ಟಿನಿಂದ ಈ ಬಾರಿಯ ರಾಜ್ಯೋತ್ಸವವನ್ನು ಇನ್ನಷ್ಟು ಅದ್ದೂರಿಯಾಗಿ ಹಾಗೂ ಸುಸೂತ್ರವಾಗಿ ಆಯೋಜಿಸಲು ಸಾಧ್ಯವಾಗಲಿದೆ ಎಂದು ಅವರು ತಿಳಿಸಿದರು.
ಇದೇ ವೇಳೆ ಅವರು ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ಮತ್ತು ಸಹಾಯ ಘೋಷಿಸಿದರು ಹಾಗು ಎರಡು ಸಂಘದ ಅಧ್ಯಕ್ಷರಿಗೆ ಮತ್ತು ಕಾರ್ಯಕಾರಿ ಸಮಿತಿಗಳಿಗೆ ಒಂದುಗೂಡಿರುವ ಈ ಒಪ್ಪಂದಕ್ಕೆ ಸಮ್ಮತಿ ಸೂಚಿಸಿದ್ದಕ್ಕಾಗಿ ಅಭಿನಂದನೆ ಸಲ್ಲಿಸಿದರು.
ಈ ವರ್ಷ ಕರ್ನಾಟಕ ಸಂಘ ದುಬೈ ನೇತೃತ್ವ; ಮುಂದಿನ ವರ್ಷ ಕನ್ನಡಿಗರ ಕೂಟ ದುಬೈ ಸಾರಥ್ಯ
ಈ ವರ್ಷದಿಂದ ದುಬೈನಲ್ಲಿ "ಐಕ್ಯತೆಯ ಕರ್ನಾಟಕ ರಾಜ್ಯೋತವ" ನಡೆಯಲಿದ್ದು, ಆಯೋಜಕ ಸಂಸ್ಥೆಯಾದ ಕರ್ನಾಟಕ ಸಂಘ ದುಬೈ ಅಧ್ಯಕ್ಷ ಶಶಿಧರ್ ನಾಗರಾಜಪ್ಪ ಮತ್ತು ಕಾರ್ಯಕಾರಿ ಸಮಿತಿಯ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಸಹಯೋಗಿ ಸಂಸ್ಥೆಯಾದ ಕನ್ನಡಿಗರ ಕೂಟ ದುಬೈ ಅಧ್ಯಕ್ಷ ಅರುಣ್ ಕುಮಾರ್ ಮತ್ತು ತಂಡ ಸಕಲ ಸಹಕಾರ ಮತ್ತು ಸಂಘಟನಾತ್ಮಕ ಸಹಭಾಗಿತ್ವ ಘೋಷಿಸಿದರು.
ಮುಂದಿನ ವರ್ಷದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಮುಖ್ಯ ಆಯೋಜನೆಯನ್ನು “ಕನ್ನಡಿಗರ ಕೂಟ ದುಬೈ”ಯು ಕರ್ನಾಟಕ ಸಂಘ ದುಬೈನ ಸಹಯೋಗದಿಂದ ನಿರ್ವಹಿಸುವುದಾಗಿ ಘೋಷಿಸಲಾಯಿತು.
ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳ ಮೆರುಗು
ಸಮಾರಂಭದಲ್ಲಿ ಹಲವು ಗಣ್ಯ ಅತಿಥಿಗಳು, ಪ್ರಮುಖ ಭಾಷಣಕಾರರು ಹಾಗೂ ವಿವಿಧ ಕ್ಷೇತ್ರಗಳ ಸಾಧಕರು ಭಾಗವಹಿಸಲಿದ್ದಾರೆ. ಕರ್ನಾಟಕದ ವೈವಿಧ್ಯಮಯ ಕಲೆ ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಹಲವು ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಕರ್ನಾಟಕ ಮತ್ತು UAEಯ ಪ್ರತಿಭಾವಂತ ಕಲಾವಿದರು ತಮ್ಮ ಕಲಾ ಪ್ರದರ್ಶನಗಳ ಮೂಲಕ ರಾಜ್ಯೋತ್ಸವದ ಸಂಭ್ರಮಕ್ಕೆ ಮೆರುಗು ನೀಡಲಿದ್ದಾರೆ.
ಯುಎಇ ಕನ್ನಡಿಗರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಉದ್ದೇಶ
UAEಯ ಕನ್ನಡಿಗರನ್ನು ಒಂದೇ ವೇದಿಕೆಯಡಿ ಒಗ್ಗೂಡಿಸಿ ಕರ್ನಾಟಕದ ಭಾಷೆ, ಕಲೆ, ಸಂಸ್ಕೃತಿ, ಪರಂಪರೆ ಹಾಗೂ ಕನ್ನಡಿಗರ ಏಕತೆಯನ್ನು ಸಂಭ್ರಮಿಸುವ ಉದ್ದೇಶದಿಂದ ಈ ಅದ್ದೂರಿಯ ರಾಜ್ಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಸಂಘ ದುಬೈ ಅಧ್ಯಕ್ಷ ಶಶಿಧರ್ ನಾಗರಾಜಪ್ಪ ಹಾಗು ಕನ್ನಡಿಗರ ಕೂಟ ದುಬೈ ಅಧ್ಯಕ್ಷ ಅರುಣ್ ಕುಮಾರ್ ಸ್ಪಷ್ಟಪಡಿಸಿದರು.
ದುಬೈಯ ವಿವಿಧ ಕನ್ನಡ ಸಂಘ-ಸಂಸ್ಥೆಗಳನ್ನು ಒಂದೇ ವೇದಿಕೆಯಡಿ ಕರೆತಂದು “ಏಕತೆಯಲ್ಲಿ ಕರ್ನಾಟಕ” ಎಂಬ ಆಶಯವನ್ನು ಮತ್ತಷ್ಟು ಬಲಪಡಿಸುವ ಪ್ರಯತ್ನವಾಗಿ ಈ ಬಾರಿಯ ರಾಜ್ಯೋತ್ಸವವನ್ನು ವಿಶೇಷವಾಗಿ ರೂಪಿಸಲಾಗಿದೆ. ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಮೇಲಿನ ಅಭಿಮಾನವನ್ನು ಮುಂದಿನ ಪೀಳಿಗೆಗೂ ತಲುಪಿಸುವುದರ ಜೊತೆಗೆ ಯುಎಇಯ ಕನ್ನಡಿಗರ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವುದು ಕಾರ್ಯಕ್ರಮದ ಆಶಯವಾಗಿದೆ ಎಂದು ಅವರು ಒಮ್ಮತ ಸೂಚಿಸಿದರು.
ಪ್ರತೀತಿಯಂತೆ ದುಬೈ ಕರ್ನಾಟಕ ರಾಜ್ಯೋತ್ಸವದಲ್ಲಿ ಪ್ರತೀ ವರ್ಷವೂ ಕನ್ನಡ ಮಿತ್ರರು ಯು.ಎ.ಇ ಆಯೋಜನೆಯ ವಿಶ್ವದ ಅತೀ ದೊಡ್ಡ ಹೊರನಾಡ ಕನ್ನಡ ಪಾಠ ಶಾಲೆಯ 13 ನೇ ವರ್ಷದ ಉಚಿತ ತರಗತಿಗಳಿಗೆ ಔಪಚಾರಿಕ ಚಾಲನೆ ನೀಡಲಾಗುವುದು ಎಂದು ಅಧ್ಯಕ್ಷ ಶಶಿಧರ್ ನಾಗರಾಜಪ್ಪ ತಿಳಿಸಿದರು.
ಸಾಧಕರಿಗೆ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ
ಇದೇ ಕಾರ್ಯಕ್ರಮದಲ್ಲಿ ಕರ್ನಾಟಕ ಸಂಘ ದುಬೈ ನೀಡುವ ಪ್ರತಿಷ್ಠಿತ “ದುಬೈ ಕರ್ನಾಟಕ ರಾಜ್ಯೋತ್ಸವ” ಪ್ರಶಸ್ತಿ ಹಾಗೂ ವಿವಿಧ ರಂಗಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ ಸಾಧಕರಿಗೆ “ಸೇವಾ ರತ್ನ” ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಶಶಿಧರ್ ನಾಗರಾಜಪ್ಪ ಮಾಹಿತಿ ಘೋಷಣೆ ಮಾಡಿದರು.
ಪ್ರತೀತಿಯಂತೆ ದುಬೈ ಕರ್ನಾಟಕ ರಾಜ್ಯೋತ್ಸವದಲ್ಲಿ ಪ್ರತೀ ವರ್ಷವೂ ಕನ್ನಡ ಮಿತ್ರರು ಯುಎಇ ಆಯೋಜನೆಯ ವಿಶ್ವದ ಅತೀ ದೊಡ್ಡ ಹೊರನಾಡ ಕನ್ನಡ ಪಾಠ ಶಾಲೆ ಯ 13 ನೇ ವರ್ಷದ ಉಚಿತ ತರಗತಿಗಳಿಗೆ ಔಪಚಾರಿಕ ಚಾಲನೆ ನೀಡಲಾಗುವುದು ಎಂದು ಅಧ್ಯಕ ಶಶಿಧರ್ ನಾಗರಾಜಪ್ಪ ತಿಳಿಸಿದರು.
ಅದೇ ರೀತಿ ಕನ್ನಡಿಗರ ಕೂಟ ದುಬೈ ಯು ಹಲವು ವರ್ಷಗಳಿಂದ ಕರ್ನಾಟಕದ ಸಾಧಕರಿಗೆ ನೀಡುವ “ಅಂತಾರಾಷ್ಟ್ರೀಯ ಕನ್ನಡ ರತ್ನ” ಪ್ರಶಸ್ತಿ ಮತ್ತು ಮಧ್ಯಪ್ರಾಚ್ಯದ ಸಾಧಕರಿಗೆ ನೀಡಿ ಗೌರವಿಸುವ " ಡಾ. ಪುನೀತ್ ರಾಜ್ ಕುಮಾರ್" ಪ್ರಶಸ್ತಿಯನ್ನು ಸಹ ನೀಡಲಾಗುವುದು ಎಂದು ಅಧ್ಯಕ್ಷ ಅರುಣ್ ಕುಮಾರ್ ತಿಳಿಸಿದರು.
ಕನ್ನಡಪರ ಕಾರ್ಯಕ್ರಮಗಳಿಗೆ ಸದಾ ಸಹಕಾರ: ಪ್ರವೀಣ್ ಕುಮಾರ್ ಶೆಟ್ಟಿ
ಈ ವೇಳೆ ಮಾತನಾಡಿದ KNRI ಅಧ್ಯಕ್ಷರು ಹಾಗೂ ಖ್ಯಾತ ಉದ್ಯಮಿಗಳಾದ ಪ್ರವೀಣ್ ಕುಮಾರ್ ಶೆಟ್ಟಿ, ಈ ಬಾರಿಯ ಕಾರ್ಯಕ್ರಮಕ್ಕೆ ತಮ್ಮ ಸಹಯೋಗ ಮತ್ತು ಸಹಕಾರ ವ್ಯಕ್ತ ಪಡಿಸಿದರು. ದುಬೈಯಲ್ಲಿ ಕನ್ನಡಪರ ಯಾವುದೇ ಕಾರ್ಯಕ್ರಮ ನಡೆದರೂ ಅವರೊಂದಿಗೆ ನಾವು ಸದಾ ಇದ್ದು ಸಹಕಾರ ನೀಡಲಿದ್ದೇವೆ. ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಇನ್ನಷ್ಟು ಚೆಂದವಾಗಿ ನಡೆಯುವಂತಾಗಿ ಎಂದು ಶುಭ ಹಾರೈಸಿದರು.
ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿ: ಹಿದಾಯತ್ ಅಡ್ಡೂರು
BCCI ಅಧ್ಯಕ್ಷ ಹಿದಾಯತ್ ಅಡ್ಡೂರು ಮಾತನಾಡಿ, ಪ್ರತಿಷ್ಠಿತ ಕನ್ನಡಪರ ಸಂಘಟನೆಗಳೆರಡೂ ಒಟ್ಟುಗೂಡಿ ರಾಜ್ಯೋತ್ಸವ ಆಚರಿಸಲು ಮುಂದಾಗಿರುವುದು ಒಳ್ಳೆಯ ನಿರ್ಧಾರ. ಇಂಥ ಐತಿಹಾಸಿಕ ಕಾರ್ಯಕ್ರಮಕ್ಕೆ ಯುಎಇಯಲ್ಲಿರುವ ಕನ್ನಡಿಗರೆಲ್ಲರೂ ಸಾಕ್ಷಿಯಾಗಬೇಕೆಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಕನ್ನಡಿಗರ ಕೂಟ ದುಬೈನ ಉಪಾಧ್ಯಕ್ಷ ಮಲ್ಲಿಕಾರ್ಜುನ ಅಂಗಡಿ, ಮುಖ್ಯ ಸಲಹಾಗರ ಸಾದನ್ ದಾಸ್ ಹಾಗು ಕರ್ನಾಟಕ ಸಂಘ ದುಬೈನ ಉಪಾಧ್ಯಕ್ಷ ದಯಾ ಕಿರೋಡಿಯನ್, ಸಲಹೆಗಾರ ರೊನಾಲ್ಡ್ ಮಾರ್ಟಿಸ್ ಅವರು ಈ ಐತಿಹಾಸಿಕ ಕ್ಷಣಕ್ಕೆ ಅಭಿನಂದನೆ ಸಲ್ಲಿಸಿದರು.