ಅಜ್ಮಾನ್ (ಯುಎಇ): ತುಂಬೆ ಗ್ರೂಪ್ ನ ಪ್ರಮುಖ ಶೈಕ್ಷಣಿಕ ಸಂಸ್ಥೆಯಾದ ಗಲ್ಫ್ ಮೆಡಿಕಲ್ ಯೂನಿವರ್ಸಿಟಿ (GMU), ‘ಟೈಮ್ಸ್ ಹೈಯರ್ ಎಜುಕೇಶನ್ (THE) ವರ್ಲ್ಡ್ ಯೂನಿವರ್ಸಿಟಿ ರ‍್ಯಾಂಕಿಂಗ್ಸ್ 2027’ರಲ್ಲಿ ‘International Outlookʼ ವಿಭಾಗದಲ್ಲಿ ವಿಶ್ವದಲ್ಲೇ ಮೊದಲ ಸ್ಥಾನ ಪಡೆದಿದೆ.

ಈ ವರ್ಷದ ಶ್ರೇಯಾಂಕದಲ್ಲಿ 118 ದೇಶಗಳು ಮತ್ತು ಪ್ರದೇಶಗಳ 2,297 ವಿಶ್ವವಿದ್ಯಾಲಯಗಳು ಸ್ಥಾನ ಪಡೆದಿವೆ. ಈ ಪೈಕಿ GMU 99.4 ಅಂಕ ಗಳಿಸಿದ್ದು, ಎಲ್ಲ ವಿಶ್ವವಿದ್ಯಾಲಯಗಳಿಗಿಂತ ಅತ್ಯಧಿಕ ಅಂಕವಾಗಿದೆ. ‘International Outlook’ ವಿಭಾಗದಲ್ಲಿ ಯುಎಇಯಲ್ಲೂ GMU ಮೊದಲ ಸ್ಥಾನದಲ್ಲಿದೆ.

‘THE ವರ್ಲ್ಡ್ ಯೂನಿವರ್ಸಿಟಿ ರ‍್ಯಾಂಕಿಂಗ್ಸ್ ನಲ್ಲಿ GMU ಸ್ಥಾನ ಪಡೆದಿರುವುದು ಇದೇ ಮೊದಲು. ಒಟ್ಟಾರೆ ಶ್ರೇಯಾಂಕದಲ್ಲಿ ವಿಶ್ವವಿದ್ಯಾಲಯವು 1001–1200ರ ಶ್ರೇಣಿಯಲ್ಲಿ ಸ್ಥಾನ ಪಡೆದಿದೆ. 2027ರ ಆವೃತ್ತಿಯಲ್ಲಿ ಸ್ಥಾನ ಪಡೆದಿರುವ ಯುಎಇಯ ಏಕೈಕ ವಿಶೇಷ ವೈದ್ಯಕೀಯ ಮತ್ತು ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯವೂ GMU ಆಗಿದೆ.

ವಿಶ್ವವಿದ್ಯಾಲಯಗಳ ಮೌಲ್ಯಮಾಪನಕ್ಕೆ ʼTHEʼ ಬಳಸುವ ಐದು ಪ್ರಮುಖ ಮಾನದಂಡಗಳಲ್ಲಿ ‘International Outlook’ ಕೂಡ ಒಂದು. ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಲ್ಲಿ ಎಷ್ಟು ಮಂದಿ ವಿದೇಶಗಳಿಂದ ಬಂದಿದ್ದಾರೆ, ಸಿಬ್ಬಂದಿಯಲ್ಲಿ ಎಷ್ಟು ಮಂದಿ ವಿದೇಶಗಳಿಂದ ಬಂದಿದ್ದಾರೆ ಮತ್ತು ಅಂತರರಾಷ್ಟ್ರೀಯ ಸಹ-ಲೇಖಕರೊಂದಿಗೆ ಎಷ್ಟು ಸಂಶೋಧನಾ ಕಾರ್ಯಗಳು ಪ್ರಕಟವಾಗಿವೆ ಎಂಬ ಮೂರು ಅಂಶಗಳನ್ನು ಈ ಮಾನದಂಡದಲ್ಲಿ ಪರಿಗಣಿಸಲಾಗುತ್ತದೆ.

ಸರಳವಾಗಿ ಹೇಳುವುದಾದರೆ, ವಿಶ್ವವಿದ್ಯಾಲಯವು ಎಷ್ಟು ಜಾಗತಿಕ ಸ್ವರೂಪ ಹೊಂದಿದೆ ಎಂಬುದನ್ನು ಈ ಮಾನದಂಡ ಅಳೆಯುತ್ತದೆ. ವಿಶ್ವದಾದ್ಯಂತ ಶ್ರೇಯಾಂಕ ಪಡೆದ 2,297 ವಿಶ್ವವಿದ್ಯಾಲಯಗಳ ಪೈಕಿ GMU ಈ ವಿಭಾಗದಲ್ಲಿ ಅತ್ಯಧಿಕ ಅಂಕ ಗಳಿಸಿದೆ.

ವಿಶ್ವದ ವಿವಿಧ ಭಾಗಗಳ ವಿದ್ಯಾರ್ಥಿಗಳು, ಬೋಧಕರು ಮತ್ತು ಸಂಶೋಧಕರು ಒಟ್ಟಾಗಿ ಕಲಿಯುವ ಮೂಲಕ ಅತ್ಯುತ್ತಮ ಆರೋಗ್ಯ ರಕ್ಷಣೆ ಶಿಕ್ಷಣ ಸಾಧ್ಯವಾಗುತ್ತದೆ ಎಂಬ ಕಲ್ಪನೆಯ ಆಧಾರದ ಮೇಲೆ GMU ನಿರ್ಮಾಣಗೊಂಡಿದೆ.

ಇಂದು GMUಯ ಅಜ್ಮಾನ್ ಕ್ಯಾಂಪಸ್ ನಲ್ಲಿ 115ಕ್ಕೂ ಹೆಚ್ಚು ರಾಷ್ಟ್ರೀಯತೆಗಳ ವಿದ್ಯಾರ್ಥಿಗಳು ಮತ್ತು 56 ದೇಶಗಳ ಬೋಧಕರು ಇದ್ದಾರೆ. ತರಗತಿಗಳಲ್ಲಿ, ತುಂಬೇ ಗ್ರೂಪ್ ನ ಶೈಕ್ಷಣಿಕ ಆಸ್ಪತ್ರೆಗಳಲ್ಲಿ ಮತ್ತು ಜಗತ್ತಿನ ವಿವಿಧ ಭಾಗಗಳ ಸಂಶೋಧನಾ ಸಹಭಾಗಿತ್ವಗಳ ಮೂಲಕ ಇವರೆಲ್ಲರೂ ಒಟ್ಟಾಗಿ ಕಲಿಯುತ್ತಿದ್ದಾರೆ ಹಾಗೂ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಶ್ರೇಯಾಂಕವು ಆರೋಗ್ಯ ವಿಜ್ಞಾನ ಶಿಕ್ಷಣದ ಜಾಗತಿಕ ತಾಣವಾಗಿ ಯುಎಇಯ ಸ್ಥಾನವನ್ನು ಮತ್ತಷ್ಟು ಬಲಪಡಿಸಿದೆ. ವಿಶ್ವದರ್ಜೆಯ ವೈದ್ಯಕೀಯ ತರಬೇತಿ ಪಡೆಯಲು ವಿದ್ಯಾರ್ಥಿಗಳು ಇನ್ನು ಸಾಂಪ್ರದಾಯಿಕ ಶಿಕ್ಷಣ ಕೇಂದ್ರಗಳನ್ನೇ ಅವಲಂಬಿಸಬೇಕಿಲ್ಲ.

“‘THE ವರ್ಲ್ಡ್ ಯೂನಿವರ್ಸಿಟಿ ರ‍್ಯಾಂಕಿಂಗ್ಸ್ ನಲ್ಲಿ ಮೊದಲ ಬಾರಿಗೆ ಸ್ಥಾನ ಪಡೆದಿರುವುದು ಮತ್ತು ‘International Outlook’ದಲ್ಲಿ ನೇರವಾಗಿ ವಿಶ್ವದ ನಂ.1 ಸ್ಥಾನ ಪಡೆದಿರುವುದು ನಮ್ಮ ಬಗ್ಗೆ ಬಹಳಷ್ಟು ಹೇಳುತ್ತದೆ. ಆರೋಗ್ಯ ರಕ್ಷಣೆಗೆ ಯಾವುದೇ ಗಡಿಗಳಿಲ್ಲ; ಶಿಕ್ಷಣಕ್ಕೂ ಗಡಿಗಳಿಲ್ಲ. ಈ ಸಾಧನೆಯ ಶ್ರೇಯಸ್ಸು ನಮ್ಮ ವಿದ್ಯಾರ್ಥಿಗಳು, ಬೋಧಕರು ಮತ್ತು ಸಹಭಾಗಿಗಳಿಗೆ ಸಲ್ಲುತ್ತದೆ. ಜಗತ್ತಿನ ಎಲ್ಲ ಭಾಗಗಳಿಗೂ ತನ್ನ ಬಾಗಿಲುಗಳನ್ನು ತೆರೆದಿರುವ ಯುಎಇ ಕೂಡ ಈ ಸಾಧನೆ ಸಾಧ್ಯವಾಗಲು ಪ್ರಮುಖ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಸಂಶೋಧನೆ ಮತ್ತು ಶೈಕ್ಷಣಿಕ ಕಾರ್ಯಕ್ಷಮತೆಯ ಎಲ್ಲ ಕ್ಷೇತ್ರಗಳಲ್ಲೂ ಮತ್ತಷ್ಟು ಸುಧಾರಣೆ ತಂದು ಈ ಸಾಧನೆ ಯನ್ನು ಮುಂದುವರಿಸುತ್ತೇವೆ” ಎಂದು ಗಲ್ಫ್ ಮೆಡಿಕಲ್ ಯೂನಿವರ್ಸಿಟಿಯ ಕುಲಪತಿ ಪ್ರೊ. ಮಂದಾ ವೆಂಕಟ್ರಮಣ ಹೇಳಿದ್ದಾರೆ.

“99.4 ಅಂಕಗಳು ಅದೃಷ್ಟದ ಫಲವಲ್ಲ. ವಿಶ್ವದಾದ್ಯಂತದ ಪ್ರತಿಭೆಗಳನ್ನು ನೇಮಿಸಿಕೊಳ್ಳಲು, ನೈಜ ಅಂತರ ರಾಷ್ಟ್ರೀಯ ಸಂಶೋಧನಾ ಸಹಯೋಗಗಳನ್ನು ನಿರ್ಮಿಸಲು ಮತ್ತು ನಾವು ಪ್ರತಿಯೊಂದು ಕ್ಷೇತ್ರದಲ್ಲೂ ಜಾಗತಿಕ ಮಾನದಂಡಗಳನ್ನು ಅಳವಡಿಸಿಕೊಳ್ಳಲು ವರ್ಷಗಳ ಕಾಲ ನಡೆಸಿದ ಉದ್ದೇಶಪೂರ್ವಕ ಕೆಲಸದ ಫಲಿತಾಂಶ ಇದು. ‘THE ವರ್ಲ್ಡ್ ಯೂನಿವರ್ಸಿಟಿ ರ್ಯಾಂ ಕಿಂಗ್ಸ್’ಗೆ ಮೊದಲ ಸ್ಥಾನ ಸಿಕ್ಕಿರುವುದ ನಮಗೆ ಸ್ಪಷ್ಟವಾದ ಮತ್ತು ಸ್ವತಂತ್ರ ಮಾನದಂಡವನ್ನು ಒದಗಿಸಿದೆ. ಈಗ ನಮ್ಮ ಕಾರ್ಯವೆಂದರೆ ಎಲ್ಲಾ ಐದು ಮಾನದಂಡಗಳಲ್ಲೂ ಕಾರ್ಯಕ್ಷಮತೆ ಯನ್ನು ಹೆಚ್ಚಿಸುವುದು. ಇದರಿಂದ ನಮ್ಮ ಉಳಿದ ಶ್ರೇಯಾಂಕಗಳೂ ನಮ್ಮ ‘International Outlook’ನಲ್ಲಿ ಜಗತ್ತು ಈಗ ಗುರುತಿಸಿರುವ ಅದೇ ಗುಣಮಟ್ಟವನ್ನು ಪ್ರತಿಬಿಂಬಿಸುವಂತಾಗಬೇಕು” ಎಂದು GMUನ ಡೀನ್ ಪ್ರೊ. ಅಮ್ಮರ್ ಅಲ್ಮಾಯ್ತಾ ಹೇಳಿದ್ದಾರೆ.

ಅಜ್ಮಾನ್ ನ ಗಲ್ಫ್ ಮೆಡಿಕಲ್ ಯೂನಿವರ್ಸಿಟಿ ಯುಎಇಯ ಖಾಸಗಿ ವೈದ್ಯಕೀಯ ವಿಶ್ವವಿದ್ಯಾಲಯವಾಗಿದ್ದು, ತುಂಬೆ ಗ್ರೂಪ್ನ ಸಮಗ್ರ ಆರೋಗ್ಯ ರಕ್ಷಣಾ ಪರಿಸರ ವ್ಯವಸ್ಥೆಯ ಶೈಕ್ಷಣಿಕ ಆಧಾರವಾಗಿದೆ. ವೈದ್ಯಕೀಯ, ದಂತ ವೈದ್ಯಶಾಸ್ತ್ರ, ಫಾರ್ಮಸಿ, ನರ್ಸಿಂಗ್, ಫಿಸಿಯೋಥೆರಪಿ, ಬಯೋಮೆಡಿಕಲ್ ಸೈನ್ಸ್ ಮತ್ತು ಆರೋಗ್ಯ ರಕ್ಷಣಾ ನಿರ್ವಹಣೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ವಿಶ್ವವಿದ್ಯಾಲಯವು ಶಿಕ್ಷಣ ನೀಡುತ್ತದೆ.

ತುಂಬೆ ಗ್ರೂಪ್ನ ಅತಿದೊಡ್ಡ ಶೈಕ್ಷಣಿಕ ಆಸ್ಪತ್ರೆಗಳ ಜಾಲದ ಮೂಲಕ ವಿದ್ಯಾರ್ಥಿಗಳಿಗೆ ಕ್ಲಿನಿಕಲ್ ತರಬೇತಿಯನ್ನು ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ www.gmu.ac.aeಗೆ ಭೇಟಿ ನೀಡಬಹುದು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor