ಸ್ಮಿತ್ ಮಚ್ಚಾರ್ ,  ಶೇಖ್ ಹಮ್ದಾನ್ ಬಿನ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ | Photo : X 

ದುಬೈ: ಫ್ಲೈದುಬೈ ವಿಮಾನದಲ್ಲಿ ಸಹ ಪೈಲಟ್‌ ನಿಂದ ಚಾಕು ದಾಳಿಗೆ ಒಳಗಾದರೂ, ಪ್ರಯಾಣಿಕರ ಸುರಕ್ಷತೆಗಾಗಿ ಕಾಕ್‌ ಪಿಟ್ ಬಾಗಿಲು ತೆರೆದು ದಾಳಿಕೋರನನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ನೆರವಾದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್ ಅವರನ್ನು ಯುಎಇ ಉಪ ಪ್ರಧಾನಿ ಶೇಖ್ ಹಮ್ದಾನ್ ಬಿನ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ಶನಿವಾರ ಆಸ್ಪತ್ರೆಯಲ್ಲಿ ಭೇಟಿ ಮಾಡಿದರು.

ಮಚ್ಚಾರ್ ಅವರು ‘ಅತ್ಯುನ್ನತ ಮಟ್ಟದ ಧೈರ್ಯ ಮತ್ತು ಜವಾಬ್ದಾರಿ’ ಪ್ರದರ್ಶಿಸಿದ್ದಾರೆ ಎಂದು ಅಲ್ ಮಕ್ತೂಮ್ ಶ್ಲಾಘಿಸಿದರು. ಭಾರತೀಯ ಪೈಲಟ್‌ ಮಚ್ಚಾರ್ ಅವರ ಧೈರ್ಯ ಮತ್ತು ಜವಾಬ್ದಾರಿಯುತ ನಡೆಗೆ ಯುಎಇ ಮೆಚ್ಚುಗೆ ವ್ಯಕ್ತಪಡಿಸಿದೆ ಎಂದು ಅವರು ಹೇಳಿದರು.

ದುಬೈ–ಟೆಲ್ ಅವಿವ್ ನಡುವಿನ ಫ್ಲೈದುಬೈ ವಿಮಾನದ ಕ್ಯಾಪ್ಟನ್ ಆಗಿದ್ದ ಮಚ್ಚಾರ್ ಅವರ ಮೇಲೆ, ವಿಮಾನದಲ್ಲಿದ್ದ ಒಮಾನ್ ಪ್ರಜೆ ಹಮಾಮ್ ಅಲ್-ಹಮ್ಮಮಿ ಎಂದು ಗುರುತಿಸಲಾಗಿರುವ ಸಹ ಪೈಲಟ್ ಚಾಕುವಿನಿಂದ ದಾಳಿ ನಡೆಸಿದ್ದನು. ಗಾಯಗೊಂಡಿದ್ದರೂ ಮಚ್ಚಾರ್ ಕಾಕ್‌ ಪಿಟ್ ಬಾಗಿಲು ತೆರೆಯುವಲ್ಲಿ ಯಶಸ್ವಿಯಾದರು. ಇದರಿಂದ ಪ್ರಯಾಣಿಕರು ಕಾಕ್‌ ಪಿಟ್‌ ಗೆ ತೆರಳಿ ಸಹ ಪೈಲಟ್‌ ನನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಸಾಧ್ಯವಾಯಿತು.

ಬಳಿಕ ವಿಮಾನದಲ್ಲಿದ್ದ ಮತ್ತೊಂದು ತಂಡದ ಪೈಲಟ್‌ ಗಳು ವಿಮಾನದ ನಿಯಂತ್ರಣ ವಹಿಸಿಕೊಂಡರು. ಪ್ರಯಾಣಿಕರಲ್ಲಿದ್ದ ದಂತವೈದ್ಯರೊಬ್ಬರು ಸೌದಿ ಅರೇಬಿಯದ ತಬುಕ್‌ ನಲ್ಲಿ ವಿಮಾನ ಇಳಿಯುವವರೆಗೂ ಮಚ್ಚಾರ್ ಅವರಿಗೆ ವೈದ್ಯಕೀಯ ನೆರವು ನೀಡಿದರು.

‘ಎಕ್ಸ್‌’ನಲ್ಲಿ ಮಚ್ಚಾರ್ ಅವರೊಂದಿಗಿನ ಭೇಟಿಯ ಫೋಟೊ ಹಂಚಿಕೊಂಡ ಅಲ್ ಮಕ್ತೂಮ್, ‘ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರು ಅತ್ಯುನ್ನತ ಮಟ್ಟದ ಧೈರ್ಯ, ಜವಾಬ್ದಾರಿ ಮತ್ತು ಮಾನವ ಜೀವದ ಬಗ್ಗೆ ಕಾಳಜಿಯನ್ನು ಪ್ರದರ್ಶಿಸಿದ ಫ್ಲೈದುಬೈ ಪೈಲಟ್’ ಎಂದು ಬರೆದಿದ್ದಾರೆ.

‘ನಮ್ಮಿಂದ ಮತ್ತು ರಾಷ್ಟ್ರದ ನಾಯಕತ್ವದಿಂದ ಅವರಿಗೆ ಸಂಪೂರ್ಣ ಮೆಚ್ಚುಗೆ ಮತ್ತು ಪ್ರಶಂಸೆ ಸಲ್ಲುತ್ತದೆ. ಅವರು ನಮ್ಮ ತಂಡದ ಭಾಗವಾಗಿರುವುದಕ್ಕೆ, ನಮ್ಮ ರಾಷ್ಟ್ರದ ಕಥೆಯ ಭಾಗವಾಗಿರುವುದಕ್ಕೆ ಮತ್ತು ಯುಎಇ ಯಾವುದಕ್ಕಾಗಿ ನಿಂತಿದೆಯೋ ಅದರ ಭಾಗವಾಗಿರುವುದಕ್ಕೆ ನಮಗೆ ಹೆಮ್ಮೆಯಿದೆ. ಯುಎಇ ಸಹಾನುಭೂತಿಯ ರಾಷ್ಟ್ರ, ಶಾಂತಿಯ ರಾಷ್ಟ್ರ ಮತ್ತು ಜೀವವನ್ನು ಗೌರವಿಸುವ ರಾಷ್ಟ್ರ’ ಎಂದು ಅವರು ಹೇಳಿದ್ದಾರೆ.

ಫ್ಲೈದುಬೈ ವಿಮಾನ FZ1073ರಲ್ಲಿ ನಡೆದ ದಾಳಿಯನ್ನು ಯುಎಇ ಅಧ್ಯಕ್ಷರ ಸಲಹೆಗಾರ ಅನ್ವರ್ ಗರ್ಗಾಶ್ ಭಯೋತ್ಪಾದಕ ಕೃತ್ಯ’ ಎಂದು ಹೇಳಿದ್ದಾರೆ. ಆಗಸದಲ್ಲಿ ಸಂಭವಿಸಿದ ಬಿಕ್ಕಟ್ಟಿನ ಸಂದರ್ಭದಲ್ಲಿ ಮಚ್ಚಾರ್ ತೋರಿದ ಧೈರ್ಯ ಮತ್ತು ಕಾರ್ಯವೈಖರಿಯನ್ನು ಅವರು ಶ್ಲಾಘಿಸಿದ್ದಾರೆ.

‘ಉಗ್ರವಾದ ಮತ್ತು ಭಯೋತ್ಪಾದನೆಯನ್ನು ಎದುರಿಸುವಾಗ ಜಾಗರೂಕತೆ ಮತ್ತು ಮುನ್ನೆಚ್ಚರಿಕೆ ಅತ್ಯಗತ್ಯ’ ಎಂದು ಗರ್ಗಾಶ್ ‘ಎಕ್ಸ್‌’ನಲ್ಲಿ ಹೇಳಿದ್ದಾರೆ.

‘ಅಪಾಯಕಾರಿ ಭಯೋತ್ಪಾದಕ ಕೃತ್ಯ ಮತ್ತು ಸಂಭವನೀಯ ದುರಂತದ ಸಂದರ್ಭದಲ್ಲಿ ಈ ಭಾರತೀಯ ಪೈಲಟ್ ಧೈರ್ಯ ಮತ್ತು ಜವಾಬ್ದಾರಿಯ ಸಾಕಾರಮೂರ್ತಿಯಾಗಿ ನಿಂತರು. ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿಯೂ ಅವರು ತೋರಿದ ವೃತ್ತಿಪರತೆ ಮತ್ತು ನೈತಿಕ ಪ್ರಜ್ಞೆಯು ಅವರನ್ನು ನಿಜವಾದ ಹೀರೋ ಆಗಿ ಮಾಡಿದೆ. ಅವರು ಸಂಪೂರ್ಣ ಮೆಚ್ಚುಗೆಗೆ ಅರ್ಹರು’ ಎಂದು ಗರ್ಗಾಶ್ ಹೇಳಿದ್ದಾರೆ.

ಪ್ರಧಾನಿ ಮೋದಿ ಅವರೊಂದಿಗಿನ ವಿಡಿಯೊ ಸಂಭಾಷಣೆಯಲ್ಲಿ ಮಚ್ಚಾರ್ ಅವರು ದಾಳಿಯ ವೇಳೆ ಎದುರಿಸಿದ ಬಿಕ್ಕಟ್ಟಿನ ಕ್ಷಣಗಳನ್ನು ವಿವರಿಸಿದ್ದರು.

ಗಾಯಗಳಿಂದಾಗಿ ನೆಲದ ಮೇಲೆ ಬಿದ್ದಿದ್ದರೂ ವಿಮಾನ ಕೆಳಮುಖವಾಗಿ ಚಲಿಸುತ್ತಿರುವುದು ತಮಗೆ ಅರಿವಾಯಿತು ಎಂದು ಅವರು ಹೇಳಿದರು.

‘ನಾನು ನೆಲದ ಮೇಲೆ ಬಿದ್ದಿದ್ದಾಗ, ವಿಮಾನವು ಕೆಳಗೆ ಹೋಗುತ್ತಿದೆ ಎಂದು ನನಗೆ ಅರಿವಾಯಿತು. ಆಗ ನನಗೆ ಖಚಿತವಾಗಿ ಅನ್ನಿಸಿತು: ಇದು ಕೊನೆಯ ಪ್ರಯತ್ನ, ಸ್ಮಿತ್. ಇದನ್ನು ಮಾಡಲೇಬೇಕು. ಬಾಗಿಲು ಇಲ್ಲೇ ಹತ್ತಿರದಲ್ಲಿದೆ’ ಎಂದು ಮಚ್ಚಾರ್ ಮೋದಿ ಅವರಿಗೆ ವಿವರಿಸಿದರು.

‘ನನ್ನ ಮೇಲೆ ಹಲ್ಲೆ ನಡೆಯುತ್ತಿದ್ದರೂ ಹೇಗೋ ಆ ಬಾಗಿಲನ್ನು ತೆರೆಯುವಲ್ಲಿ ಯಶಸ್ವಿಯಾದೆ. ಬಳಿಕ ಇತರರು ಅಲ್ಲಿಗೆ ಬಂದರು. ಈ ಘಟನೆಯಲ್ಲಿ ಇತರರೂ ಸಮಾನ ಪಾತ್ರ ವಹಿಸಿದ್ದಾರೆ’ ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor