×
Ad

ಉಮ್ರಾ ವೀಸಾ ನಿಯಮಗಳಿಗೆ ಹೊಸ ತಿದ್ದುಪಡಿ ಮಾಡಿದ ಸೌದಿ ಅರೇಬಿಯಾ‌

ಇನ್ಮುಂದೆ ವೀಸಾ ನೀಡಿದ ದಿನದಿಂದ ಒಂದು ತಿಂಗಳ ಒಳಗೆ ಸೌದಿ ಪ್ರವೇಶಿಸಬೇಕು!

Update: 2025-11-02 20:20 IST

Photo | Reuters

ರಿಯಾದ್: ಸೌದಿ ಅರೇಬಿಯಾದ ಹಜ್ ಮತ್ತು ಉಮ್ರಾ ಸಚಿವಾಲಯ ಉಮ್ರಾ ವೀಸಾ ನಿಯಮಗಳಿಗೆ ಹೊಸ ತಿದ್ದುಪಡಿ ಮಾಡಿದೆ. ಉಮ್ರಾ ಪ್ರವೇಶ ವೀಸಾದ ಮಾನ್ಯತಾ ಅವಧಿ ಇನ್ನು ಮುಂದೆ ಮೂರು ತಿಂಗಳ ಬದಲು ಒಂದು ತಿಂಗಳು ಮಾತ್ರ ಇರಲಿದೆ ಎಂದು gulfnews.com ವರದಿ ಮಾಡಿದೆ.

ಯಾತ್ರಿಕರು ವೀಸಾ ನೀಡಿದ ದಿನದಿಂದ ಒಂದು ತಿಂಗಳ ಒಳಗೆ ಸೌದಿ ಅರೇಬಿಯಾಗೆ ಪ್ರವೇಶಿಸಬೇಕಾಗಿದೆ. ಯಾತ್ರಿಕರು ಸೌದಿ ಅರೇಬಿಯಾಗೆ ಬಂದ ನಂತರ ಮೂರು ತಿಂಗಳು ಅಲ್ಲಿ ವಾಸಿಸಲು ಅವಕಾಶವಿದೆ. ಆ ನಿಯಮಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು Al Arabiya ಉಲ್ಲೇಖಿಸಿ ಮೂಲಗಳು ತಿಳಿಸಿವೆ. ಹೊಸ ನೀತಿ ಮುಂದಿನ ವಾರ ಜಾರಿಗೆ ಬರಲಿದೆ.

ಹೊಸ ನಿಯಮಗಳ ಪ್ರಕಾರ, ಉಮ್ರಾ ವೀಸಾ ನೀಡಿದ 30 ದಿನಗಳಲ್ಲಿ ವೀಸಾ ಸ್ವಯಂಚಾಲಿತವಾಗಿ ರದ್ದಾಗುತ್ತದೆ. ಈ ಕ್ರಮವು ಸೌದಿ ವಿಷನ್ 2030 ಭಾಗವಾಗಿ ವೀಸಾ ನಿರ್ವಹಣೆಯನ್ನು ಸರಳಗೊಳಿಸಲು ಮತ್ತು ಯಾತ್ರಿಕರಿಗೆ ಸುಗಮ ಪ್ರವೇಶವನ್ನು ಕಲ್ಪಿಸುವ ಗುರಿಯನ್ನು ಹೊಂದಿದೆ ಎಂದು ಹೇಳಲಾಗಿದೆ.

ಉಮ್ರಾ ಯಾತ್ರಿಕರ ಸಂಖ್ಯೆಯಲ್ಲಿ ಹೆಚ್ಚಳವಾಗುವ ಸಾಧ್ಯತೆಯಿರುವುದರಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ವಿಶೇಷವಾಗಿ ಮಕ್ಕಾ ಮತ್ತು ಮದೀನಾದಲ್ಲಿ ಎರಡು ಪವಿತ್ರ ನಗರಗಳಲ್ಲಿ ಜನದಟ್ಟಣೆಯನ್ನು ತಡೆಗಟ್ಟುವುದು ಇದರ ಉದ್ದೇಶವಾಗಿದೆ ಎಂದು ನ್ಯಾಷನಲ್ ಕಮಿಟಿ ಫಾರ್ ಉಮ್ರಾ ಆಂಡ್ ವಿಸಿಟ್ ಸಲಹೆಗಾರರಾಗಿರುವ ಅಹ್ಮದ್ ಬಜೈಫರ್ ಅವರು Al Arabiyaಗೆ ತಿಳಿಸಿದರು.

ಜೂನ್ ಆರಂಭದಲ್ಲಿ 40 ಲಕ್ಷಕ್ಕೂ ಹೆಚ್ಚು ಉಮ್ರಾ ವೀಸಾಗಳನ್ನು ನೀಡಲಾಗಿದೆ ಎಂದು Saudi Gazette ವರದಿ ಮಾಡಿದೆ. ಕಳೆದ ತಿಂಗಳು, ಹಜ್ ಮತ್ತು ಉಮ್ರಾ ಸಚಿವಾಲಯ ವೈಯಕ್ತಿಕ ವೀಸಾ, ಫ್ಯಾಮಿಲಿ ವೀಸಾ, ಟ್ರಾನ್ಸಿಟ್ ಹಾಗೂ ಉದ್ಯೋಗ ವೀಸಾ ಹೊಂದಿರುವವರು ಸೇರಿದಂತೆ ಎಲ್ಲಾ ರೀತಿಯ ವೀಸಾಗಳನ್ನು ಹೊಂದಿರುವವರು ಈಗ ಸೌದಿ ಅರೇಬಿಯಾದಲ್ಲಿ ಉಮ್ರಾ ನಿರ್ವಹಿಸಲು ಅರ್ಹರಾಗಿದ್ದಾರೆ ಎಂದು ಹೇಳಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News