ಪ್ರೊಟೀನ್ ಆಹಾರ ಕ್ರಮದಿಂದ ಮಧುಮೇಹದಲ್ಲಿ ಏರಿಕೆಯಾಗಿದೆಯೆ?; ಸಾಮಾಜಿಕ ಜಾಲತಾಣದಲ್ಲಿ ವೈದ್ಯರ ಚರ್ಚೆ
ಸಾಂದರ್ಭಿಕ ಚಿತ್ರ | Photo Credit : freepik.com
ಪ್ರೊಟೀನ್ ಮತ್ತು ಇನ್ಸುಲಿನ್ಗೆ ಸಂಬಂಧಿಸಿದಂತೆ ‘ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ ವೈದ್ಯರ ನಡುವೆ ಬಿಸಿಬಿಸಿ ಚರ್ಚೆಯಾಗುತ್ತಿದೆ. ಹಾಗಿದ್ದರೆ ಅತಿಯಾಗಿ ಪ್ರೊಟೀನ್ ಸೇವಿಸಬಾರದು ಎನ್ನುವ ಸಲಹೆ ಸರಿಯೆ? ಎರಡೂ ಕಡೆಯ ವೈದ್ಯರು ಭಾರತದಲ್ಲಿ ವ್ಯಾಪಕ ಪ್ರೊಟೀನ್ ಕೊರತೆಯನ್ನು ಎತ್ತಿ ತೋರಿಸಿದ್ದಾರೆ. ಸಕ್ಕರೆ ಅಂಶ ಕಡಿಮೆ ಮಾಡಿ ಆರೋಗ್ಯಕರ ಆಹಾರ ಸೇವನೆಗೆ ಸಲಹೆ ನೀಡಿದ್ದಾರೆ.
ಲಂಡನ್ ಮೂಲದ ವೈದ್ಯರಾದ ಡಾ. ಸುಮಿತ್ ಶರ್ಮಾ ಅವರು ಜನವರಿ 16ರಂದು ಇನ್‌ಸುಲಿನ್ ಕುರಿತಂತೆ ‘ಸತ್ಯಾಂಶ’ ಎಂದು ಬರೆದ ಪೋಸ್ಟ್‌ಗೆ ಉತ್ತರವಾಗಿ ವೈದ್ಯರಾದ ಅರವಿಂದ್ ಜನವರಿ 17ರಂದು ಹಾಕಿದ ಪೋಸ್ಟ್ ಒಂದು ಇದೀಗ ಚರ್ಚೆಗೆ ಗ್ರಾಸವಾಗಿದೆ.
ಸುಮಿತ್ ಅವರು ವಿವಿಧ ಆಹಾರಗಳು ಹೇಗೆ ಇನ್ಸುಲಿನ್ ಟ್ರಿಗರ್ ಮಾಡುತ್ತವೆ ಎಂದು ವಿವರಿಸಿದ್ದರು. “ಡೈರಿ ಉತ್ಪನ್ನಗಳು ವೈಟ್ ಬ್ರೆಡ್ಗೂ ಹೆಚ್ಚಿನ ಪ್ರಮಾಣದಲ್ಲಿ ಇನ್ಸುಲಿನ್ ಪ್ರಚೋದಿಸಬಹುದು. ಬೆಳಗ್ಗೆ ಎದ್ದ ತಕ್ಷಣ 2 ಗಂಟೆಯೊಳಗೆ ಕಾರ್ಬೋಹೈಡ್ರೇಟ್ ಸೇವನೆ, ಸತು-ಮೆಗ್ನೇಶಿಯಂ-ಕ್ರೋಮಿಯಂಗಳ ಕೊರತೆಯಿಂದ ಇನ್‌ಸುಲಿನ್ ಪ್ರಚೋದಿಸಬಹುದು. ಸೋಯ, ತರಕಾರಿ ಎಣ್ಣೆ, ಕೆನೊಲ ಎಣ್ಣೆಗಳು ಉತ್ತಮವಲ್ಲ. ಕಾರ್ಬೊಹೈಡ್ರೇಟ್ ಸಂಪೂರ್ಣವಾಗಿ ಶತ್ರುವಲ್ಲ” ಮೊದಲಾದ ವಿವರಗಳನ್ನು ಬರೆದಿದ್ದರು.
ಅದಕ್ಕೆ ಉತ್ತರಿಸಿದ ಡಾ ಅರವಿಂದ್, “ಪ್ರೊಟೀನ್ ಇನ್ಸುಲಿನ್ ಅನ್ನು ಟ್ರಿಗರ್ ಮಾಡುತ್ತದೆ. ಭಾರತದಲ್ಲಿ ನಡೆಯುತ್ತಿರುವ ಪ್ರೊಟೀನ್ ಪ್ರಚಾರಾಭಿಯಾನದ ಹಿಂದಿನ ಉದ್ದೇಶವೇನು ಎಂದು ಯಾರಿಗೆ ಹೇಳುವುದು. ಭಾರತೀಯರಿಗೆ ಅತಿಯಾದ ಪ್ರೊಟೀನ್ ಸೇವನೆಯನ್ನು ಉತ್ತೇಜಿಸುವ ಮೂಲಕ ಈಗಾಗಲೇ ಏರಿರುವ ಬೆಲೆಯನ್ನು (ಮೊಟ್ಟೆಗಳು ಮತ್ತು ಹಾಲು) ಇನ್ನಷ್ಟು ಏರಿಸಲಾಗುತ್ತಿದೆ. ಹಾಗಿರುವಾಗ ನಿಜವಾಗಿಯೂ ಪ್ರೊಟೀನ್ ಕೊರತೆ ಇರುವ ಬಡಜನರು ಪ್ರೊಟೀನ್ ಸಮೃದ್ಧ ಆಹಾರವನ್ನು ಪಡೆಯುವುದು ಹೇಗೆ? ಈಗ ಅನಗತ್ಯ ಪ್ರೊಟೀನ್ ಸೇವಿಸಿದರೆ ನಂತರ ನೀವು ಮಧುಮೇಹಿಗಳಾಗಿ ಪರಿವರ್ತನೆಯಾಗಬಹುದು. ಆದ್ದರಿಂದ ಪೌಷ್ಠಿಕಾಂಶದ ಸೇವನೆ ಮಿತಗೊಳಿಸುವುದು ಉತ್ತಮ. ಸಂಸ್ಕರಿಸಿದ ಕಾರ್ಬೋಹೈಡ್ರೇಟ್ ಕಡಿಮೆಗೊಳಿಸಿ. ಅಗತ್ಯವಿರುವಷ್ಟೇ ಪ್ರೊಟೀನ್ ಸೇವಿಸಿ. ತರಕಾರಿ ಹೆಚ್ಚು ಸೇವಿಸುವ ಮೂಲಕ ಫೈಬರ್, ವಿಟಮಿನ್ಗಳು ಮತ್ತು ಖನಿಜಾಂಶಗಳನ್ನು ಹೆಚ್ಚಿಸಿಕೊಳ್ಳಿ. ಆದರೆ ನಮ್ಮ ತುಪ್ಪ ಕೆಟ್ಟದು, ತೆಂಗಿನೆಣ್ಣೆ ಕೆಟ್ಟದು ಮತ್ತು ಉಪಾಹಾರ ಕೆಟ್ಟದು ಎನ್ನುವ ವಸಾಹತುಶಾಹಿ ಮನಸ್ಸುಗಳಿಂದ ಹೊರಬನ್ನಿ” ಎಂದು ಅವರು ಬರೆದುಕೊಂಡಿದ್ದಾರೆ.
ಅರವಿಂದ್ ಅವರ ಪೋಸ್ಟ್ ಬಹಳ ಚರ್ಚೆಗೆ ಕಾರಣವಾಗಿದೆ. ಅತಿಯಾಗಿ ಪ್ರೊಟೀನ್ ಸೇವಿಸಬೇಡಿ ಎಂಬ ಅವರ ಸಲಹೆಗೆ ಎಲ್ಲಾ ವೈದ್ಯರು ಒಮ್ಮತ ವ್ಯಕ್ತಪಡಿಸಿಲ್ಲ.
ಅರವಿಂದ್ ಅವರ ಪೋಸ್ಟ್ಗೆ ಉತ್ತರಿಸಿದ ಚೆನ್ನೈ ಮೂಲದ ಯೂರೋಲಜಿಸ್ಟ್ ಡಾ ಜೇಸನ್ ಫಿಲಿಪ್, “ಎಂದಿನಂತೆ ಈ ವ್ಯಕ್ತಿ ಈಗಲೂ ಕಸವನ್ನೇ ತುಂಬುತ್ತಿದ್ದಾರೆ. ಪ್ರೊಟೀನ್ ಇನ್ಸುಲಿನ್ ಸ್ರವಿಸುವಿಕೆಯನ್ನು ಉತ್ತೇಜಿಸುವುದು ಕೆಟ್ಟದಲ್ಲ. ಮಧುಮೇಹವು ಇನ್ಸುಲಿನ್ ಸ್ರವಿಸುವಿಕೆಯಿಂದಲ್ಲ, ಇನ್ಸುಲಿನ್ ಪ್ರತಿರೋಧದಿಂದ ಉಂಟಾಗುತ್ತದೆ. ಕಾರ್ಬೋಹೈಡ್ರೇಟ್ಗಳಿಗೆ ಹೋಲಿಸಿದರೆ ಪ್ರೊಟೀನ್ನಿಂದ ಇನ್ಸುಲಿನ್ ಏರಿಕೆ ಅತಿ ಕಡಿಮೆ. ಕಾರ್ಬೋಹೈಡ್ರೇಟ್ನಂತಲ್ಲದೆ ಪ್ರೊಟೀನ್ ಎರಡೂ ಗ್ಲುಕಗೊನ್ ಮತ್ತು ಇನ್ಸುಲಿನ್ ಅನ್ನು ಪ್ರಚೋದಿಸುತ್ತದೆ” ಎಂದು ಫಿಲಿಪ್ ವೈಜ್ಞಾನಿಕವಾಗಿ ತಮ್ಮ ವಾದವನ್ನು ಮುಂದಿಟ್ಟಿದ್ದಾರೆ.
ಈ ನಡುವೆ ಚರ್ಚೆಯಲ್ಲಿ ಭಾಗವಹಿಸಿದ ವೈದ್ಯರಾದ ಲ್ಯೂಕ್ ಕೌಟಿನ್ಹೊ, ಅಧಿಕ ಪ್ರೊಟೀನ್ ಸೇವನೆಯಿಂದ ಆಗುವ ಸಮಸ್ಯೆಗಳತ್ತ ಗಮನಹರಿಸಿದ್ದಾರೆ. “ಜನರೇ ಎಚ್ಚೆತ್ತುಕೊಳ್ಳಿ. ಅಧಿಕ ಪ್ರೊಟೀನ್ ಸೇವನೆಯಿಂದ ಉರಿಯೂತ, ಕರುಳಿನ ಸಮಸ್ಯೆ ಮತ್ತು ಸಕ್ಕರೆ ಪ್ರಮಾಣ ಏರಿಸಿಕೊಳ್ಳಬೇಡಿ. ಪ್ರೊಟೀನ್ ಸೇವನೆಯ ಪ್ರಚಾರದಲ್ಲಿ ನಿಮ್ಮ ಹಣವನ್ನು ಖರ್ಚು ಮಾಡುತ್ತಿದ್ದೀರಿ. ನಮಗೆ ಮ್ಯಾಜಿಕ್ ಪ್ರೊಟೀನ್ ಸಂಖ್ಯೆ 30ಗ್ರಾಂ, 50 ಗ್ರಾಂ ಮೇಲೆ ಗುರಿ ಇದೆ. ಆದರೆ ಅತ್ಯಧಿಕ ಪ್ರೊಟೀನ್ ಸೇವನೆಯ ನಡುವೆ ದೇಹಕ್ಕೆ ಕಸವನ್ನು ತುಂಬುತ್ತಿದ್ದೀರಿ” ಎಂದು ಎಚ್ಚರಿಸಿದ್ದಾರೆ.
ಈ ಚರ್ಚೆಯಲ್ಲಿ ಭಾಗವಹಿಸಿದ ವೈದ್ಯರಾದ ಶಶಿ ಅಯ್ಯಂಗಾರ್, ಪ್ರೊಟಿನ್ ಇನ್ಸುಲಿನ್ ಪ್ರಚೋದಿಸುತ್ತದೆ ಎನ್ನುವುದು ವಿಭಿನ್ನ ಸಂದರ್ಭಗಳಲ್ಲಿ ನಿಜವಾಗಬಹುದು. ಜೀವಶಾಸ್ತ್ರ ಮುಖ್ಯವಾಗುತ್ತದೆ ಎಂದು ತಮ್ಮ ವಾದವನ್ನು ಮುಂದಿಟ್ಟಿದ್ದಾರೆ. “ಎಲ್ಲಾ ಇನ್ಸುಲಿನ್ ಏರಿಕೆಯನ್ನು ಒಂದೇ ಸಮವಾಗಿ ನೋಡುವುದನ್ನು ಬಿಟ್ಟುಬಿಡೋಣ” ಎಂದು ಹೇಳಿದ ಅವರು ಏಳು ಅಂಶಗಳನ್ನು ಮುಂದಿಟ್ಟು ಒಟ್ಟು ಚರ್ಚೆಗೆ ತಮ್ಮ ವಿವರವನ್ನು ಸೇರಿಸಿದ್ದಾರೆ.
ಶಶಿ ಅವರಿಗೆ ಉತ್ತರ ನೀಡಿರುವ ಕರುಳು ತಜ್ಞೆ ಡಾ ಜಸ್ಮೀತ್ ಕೌರ್ ಅವರೂ ಪ್ರೊಟೀನ್ನಿಂದ ಇನ್ಸುಲಿನ್ ಟ್ರಿಗರ್ ಆಗುತ್ತದೆ ಎಂದು ಹೇಳಿದ್ದಾರೆ. “ಹೌದು, ಸಾಮಾನ್ಯ ದೈಹಿಕ ಪ್ರಕ್ರಿಯೆ ನಡೆಯುವುದೇ ಹಾಗೆ. ಇನ್ಸುಲಿನ್ ಅನ್ನು ಪ್ರೊಟೀನ್ ಟ್ರಿಗರ್ ಮಾಡದೆ ಇದ್ದರೆ ಅದರ ಬಹುಭಾಗ ಹೆಚ್ಚುವರಿ ಇಂಧನವಾಗುತ್ತಿತ್ತು ಮತ್ತು ಗ್ಲುಕೋಸ್ ಉತ್ಪಾದನೆಗೆ ಹೋಗುತ್ತಿತ್ತು” ಎಂದು ವಿವರಿಸಿದ್ದಾರೆ.
ಚಿಕಾಗೋ ಮೂಲದ ವೈದ್ಯ ಡಾ ಲೇಮನ್ ಅವರು ವಿವರಿಸಿ, “ಪ್ರೊಟೀನ್ ಸಂಶ್ಲೇಷಣೆಯನ್ನು ಬಲಪಡಿಸಲು ಪ್ರೊಟೀನ್ ಹಂತ 1 ಇನ್ಸುಲಿನ್ ಬಿಡುಗಡೆ ಮಾತ್ರ ಪ್ರಚೋದಿಸುತ್ತದೆ. ಗ್ಲುಕೋಸ್ ವಿಲೇವಾರಿಗೆ ಹಂತ 11 ಅನ್ನು ಪ್ರಚೋದಿಸುತ್ತದೆ” ಎಂದು ತಿಳಿಸಿದ್ದಾರೆ.
ಈ ನಡುವೆ ಲಿವರ್ ಡಾಕ್ಟರ್ ಎಂದೇ ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಖ್ಯಾತಿ ಗಳಿಸಿರುವ ಸಿರಿಯಾಕ್ ಅಬಿ ಫಿಲಿಪ್ಸ್ ಅವರೂ ಚರ್ಚೆಯಲ್ಲಿ ಭಾಗವಹಿಸಿ ಅನೇಕ ಸಂಶೋಧನೆಗಳ ವಿವರಗಳನ್ನು ನೀಡಿ ತಮ್ಮ ವಾದವನ್ನು ಮುಂದಿಟ್ಟಿದ್ದಾರೆ.