ಭಾರತೀಯರಲ್ಲಿ ಕಬ್ಬಿಣದಂಶದ ಕೊರತೆ; 8 ಆರಂಭಿಕ ಚಿಹ್ನೆಗಳನ್ನು ಆಲಕ್ಷಿಸಬೇಡಿ…
ಸಾಂದರ್ಭಿಕ ಚಿತ್ರ | Photo Credit : freepik
ಕೇಂದ್ರ ಸರ್ಕಾರ 2018ರಲ್ಲಿ ಅನೀಮಿಯ ಮುಕ್ತ್ ಭಾರತ್ (ಎಎಂಬಿ) ಕಾರ್ಯಯೋಜನೆಯನ್ನು ಆರಂಭಿಸಿತ್ತು. ಆದರೆ ರಕ್ತಹೀನತೆಯನ್ನು ಸಂಪೂರ್ಣವಾಗಿ ತೊಡೆದು ಹಾಕಬೇಕಾದರೆ ಆರಂಭಿಕ ಚಿಹ್ನೆಗಳನ್ನು ಪತ್ತೆಹಚ್ಚಿ ಬದಲಾವಣೆ ತರಬೇಕಿದೆ. ರಕ್ತಹೀನತೆಯ ಆರಂಭಿಕ ಚಿಹ್ನೆಗಳು ಯಾವುವು?
ಕಬ್ಬಿಣಂಶದ ಕೊರತೆ ಭಾರತದಲ್ಲಿ ಸಾರ್ವಜನಿಕ ಆರೋಗ್ಯ ಬಿಕ್ಕಟ್ಟು. ಕಬ್ಬಿಣವು ಮಾನವ ದೇಹದಲ್ಲಿ ಬಹಳ ಮುಖ್ಯ ಪಾತ್ರವಹಿಸುವ ಸೂಕ್ಷ್ಮ ಪೋಷಕಾಂಶವಾಗಿದೆ. ಕೆಂಪು ರಕ್ತಕಣಗಳಲ್ಲಿ ಹಿಮೋಗ್ಲೋಬಿನ್ ಮೂಲಕ ಆಮ್ಲಜನಕ ಸಾಗಿಸಲು ಈ ಖನಿಜ ಮುಖ್ಯವಾಗಿದೆ. ಇದು ಶಕ್ತಿ ಉತ್ಪಾದನೆಗೆ ಸಹಕರಿಸುತ್ತದೆ. ಪ್ರತಿರಕ್ಷಣಾ ವ್ಯವಸ್ಥೆಯನ್ನು ಬೆಂಬಲಿಸುತ್ತದೆ. ಸ್ನಾಯು ಚಟುವಟಿಕೆಯನ್ನು ಬೆಂಬಲಿಸುತ್ತದೆ. ಜೀವಕೋಶಗಳ ಬೆಳವಣಿಗೆ, ಡಿಎನ್ಎ ಸಂಶ್ಲೇಷಣೆ ಮತ್ತು ಹಾರ್ಮೋನ್ ಉತ್ಪಾದನೆಗೆ ನೆರವಾಗುತ್ತದೆ. ದೇಹದಲ್ಲಿ ಕಬ್ಬಿಣದಂಶದ ಕೊರತೆ ಇದ್ದರೆ, ಸುಸ್ತು, ಆಯಾಸ ಆವರಿಸುತ್ತದೆ ಮತ್ತು ಅರಿವಿನ ಕಾರ್ಯ ಕಳಪೆಯಾಗುತ್ತದೆ. ಮಾತ್ರವಲ್ಲದೆ ಕಬ್ಬಿಣಂಶದ ಕೊರತೆಯು ರಕ್ತಹೀನತೆಗೂ ಕಾರಣವಾಗುತ್ತದೆ.
ಭಾರತದಲ್ಲಿ ಕಬ್ಬಿಣಂಶದ ಕೊರತೆಯು ರಕ್ತಹೀನತೆಗೆ ಪ್ರಮುಖ ಕಾರಣವಾಗಿದೆ. ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚಾಗಿರುತ್ತದೆ. ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆ 5ರ ಪ್ರಕಾರ 6ರಿಂದ 59 ತಿಂಗಳ ನಡುವಿನ ಮಕ್ಕಳಲ್ಲಿ ರಕ್ತಹೀನತೆ ಶೇ 67.2ರಷ್ಟಿದ್ದರೆ, ಬಾಲಕಿಯರಲ್ಲಿ ಶೇ 59.1ರಷ್ಟು ಇರುತ್ತದೆ. 15ರಿಂದ 49ರ ವಯಸ್ಸಿನ ಮಹಿಳೆಯರಲ್ಲಿ ಶೇ 57ರಷ್ಟು ಮತ್ತು ಅದೇ ವಯಸ್ಸಿನ ಪುರುಷರಲ್ಲಿ ಶೇ 25ರಷ್ಟು ಪ್ರಮಾಣದಲ್ಲಿ ರಕ್ತಹೀನತೆ ಇರುವುದು ಪತ್ತೆಯಾಗಿದೆ. ಕೇಂದ್ರ ಸರ್ಕಾರ 2018ರಲ್ಲಿ ಅನೀಮಿಯ ಮುಕ್ತ್ ಭಾರತ್ (ಎಎಂಬಿ) ಕಾರ್ಯಯೋಜನೆಯನ್ನು ಆರಂಭಿಸಿತ್ತು. ಆದರೆ ರಕ್ತಹೀನತೆಯನ್ನು ಸಂಪೂರ್ಣವಾಗಿ ತೊಡೆದು ಹಾಕಬೇಕಾದರೆ ಆರಂಭಿಕ ಚಿಹ್ನೆಗಳನ್ನು ಪತ್ತೆಹಚ್ಚಿ ಬದಲಾವಣೆ ತರಬೇಕಿದೆ.
ರಕ್ತಹೀನತೆಯ ಆರಂಭಿಕ ಚಿಹ್ನೆಗಳು ಯಾವುವು?
ಸುಸ್ತು ಮತ್ತು ಆಯಾಸ
ಸಾಕಷ್ಟು ವಿಶ್ರಾಂತಿ ಪಡೆದರೂ ಪದೇಪದೆ ಆಯಾಸವಾಗುವುದು ರಕ್ತಹೀನತೆಯ ಆರಂಭಿಕ ಲಕ್ಷಣಗಳಲ್ಲಿ ಒಂದಾಗಿದೆ. ರಕ್ತದಲ್ಲಿ ಸಾಕಷ್ಟು ಆಮ್ಲಜನಕ ಇಲ್ಲದೆ ಇದ್ದಾಗ ಸ್ನಾಯುಗಳು ಮತ್ತು ಮೆದುಳಿಗೆ ಚೈತನ್ಯ ನೀಡಲು ಸಾಧ್ಯವಾಗದು. ಹೀಗಾಗಿ ಕೊನೆಗೆ ನಡಿಗೆ ಮತ್ತು ಮೆಟ್ಟಿಲು ಹತ್ತುವಂತಹ ಕೆಲಸದಲ್ಲೂ ಸುಸ್ತು ಆರಂಭವಾಗುತ್ತದೆ. ರಕ್ತಹೀನತೆಯಿಂದ ಬಳಲುತ್ತಿರುವವರಿಗೆ ಆಯಾಸದಿಂದಾಗಿ ದೈನಂದಿನ ಚಟುವಟಿಕೆಗಳನ್ನೂ ಮಾಡಲು ಸಾಧ್ಯವಾಗುವುದಿಲ್ಲ.
ಹಳದಿ ಬಣ್ಣಕ್ಕೆ ತಿರುಗುವ ಚರ್ಮ
ಚರ್ಮ ತನ್ನ ಸಹಜವಾದ ಬಣ್ಣವನ್ನು ಕಳೆದುಕೊಳ್ಳಬಹುದು. ಮುಖ್ಯವಾಗಿ ಮುಖ, ಅಂಗೈ ಅಥವಾ ಕಣ್ಣಿನ ಒಳಗೆ ಬಣ್ಣ ಮಾಸಬಹುದು. ಆಮ್ಲಜನಕ ಸಾಗಿಸುವ ಹಿಮೋಗ್ಲೋಬಿನ್ ಕಡಿಮೆಯಾಗುವುದರಿಂದ ಬಣ್ಣ ಮಾಸಬಹುದು ಮತ್ತು ಸೌಮ್ಯವಾದ ಚರ್ಮದ ಟೋನ್ಗಳಲ್ಲಿ ಹೆಚ್ಚು ಗಮನಾರ್ಹವಾಗಿ ಕಂಡುಬರಬಹುದು. ಕೆಲವೊಮ್ಮೆ ಹಳದಿ ಬಣ್ಣ ಕಾಮಾಲೆ ಸಂಬಂಧಿತ ಸಮಸ್ಯೆಗಳ ಸಂಕೇತವೂ ಆಗಿರಬಹುದು.
ಉಸಿರಾಟದ ಸಮಸ್ಯೆ
ಆಮ್ಲಜನಕದ ಕೊರತೆ ನೀಗಿಸಲು ದೇಹ ವೇಗವಾಗಿ ಉಸಿರಾಡಲು ಪ್ರಯತ್ನಿಸುವಾಗ ಸೌಮ್ಯವಾದ ಪರಿಶ್ರಮ ಕೂಡ ಉಸಿರಾಟದ ತೊಂದರೆಗೆ ಕಾರಣವಾಗಬಹುದು. ವ್ಯಾಯಾಮ ಮಾಡುವಾಗ ಅಥವಾ ಮೆಟ್ಟಿಲನ್ನು ಹತ್ತುವಾಗ ಈ ಸಮಸ್ಯೆ ಕಾಡಬಹುದು. ಅಂದರೆ, ಆಮ್ಲಜನಕ ತಲುಪಿಸಲು ಹೃದಯ ಮತ್ತು ಶ್ವಾಸಕೋಶಗಳ ಮೇಲೆ ಹೆಚ್ಚು ಒತ್ತಡ ಬಿದ್ದಿರುತ್ತದೆ. ಹೀಗಾಗಿ ದೀರ್ಘಕಾಲದಲ್ಲಿ ಹೃದಯದ ಅಪಾಯಗಳೂ ಸಂಭವಿಸಬಹುದು.
ಅನಿಯಮಿತ ಹೃದಯ ಬಡಿತ
ಚಟುವಟಿಕೆಯ ಸಮಯದಲ್ಲಿ ತ್ವರಿತ ಮತ್ತು ಅನಿಯಮಿತ ಹೃದಯದ ಬಡಿತ ಕಂಡುಬರಬಹುದು. ವಿಶೇಷವಾಗಿ ಚಟುವಟಿಕೆಯ ಸಮಯದಲ್ಲಿ ಹೃದಯ ಬೇಗಬೇಗನೇ ಬಡಿದುಕೊಳ್ಳಬಹುದು. ಹೃದಯವು ರಕ್ತಪರಿಚಲನೆಗೆ ಹೆಚ್ಚು ಶ್ರಮಿಸಿದಾಗ ಇದು ಸಂಭವಿಸುತ್ತದೆ.
ತಲೆತಿರುಗುವಿಕೆ ಮತ್ತು ತಲೆನೋವು
ಹಗುರವಾದ ತಲೆನೋವು ಅಥವಾ ಆಗಾಗ ತಲೆನೋವು ಬರುವುದು ಮೆದುಳಿನ ಆಕ್ಸಿಜನೇಶನ್ ಸಾಕಷ್ಟು ಇಲ್ಲದೆ ಇದ್ದಾಗ ಸಂಭವಿಸುತ್ತದೆ. ತ್ವರಿತವಾಗಿ ನಿಲ್ಲಲು ಪ್ರಯತ್ನಿಸಿದಾಗ ಹೆಚ್ಚು ದುಸ್ತರವಾಗಬಹುದು. ಗಮನ ಕೇಂದ್ರೀಕರಿಸಲು ಕಷ್ಟವಾಗಬಹುದು. ಅಂತಹ ಸಂದರ್ಭ ಮೆದುಳು ಮಂಜಾಗುವುದು ಅಥವಾ ವರ್ಟಿಗೊಗೆ ಕಾರಣವಾಗಬಹುದು.
ಕೈಗಳು ತಂಪಾಗಿರುವುದು
ರಕ್ತಪರಿಚಲನೆ ಸರಿಯಾಗಿ ಆಗದೆ ಇದ್ದಾಗ ಬೆಚ್ಚನೆಯ ಪರಿಸರದಲ್ಲೂ ಕೈಗಳು ಮತ್ತು ಪಾದಗಳು ತಂಪಾಗಬಹುದು. ಆಮ್ಲಜನಕ ಕೊರತೆ ಇರುವ ರಕ್ತವು ದೂರದ ಅಂಗಾಂಶಗಳನ್ನು ತಲುಪಲು ಕಷ್ಟಪಡುವುದರಿಂದ ಇದು ಸಂಭವಿಸಬಹುದು.
ಅಸಹಜವಾದ ಹಸಿವು
ಪೈಕಾ ರೋಗವು ಐಸ್, ಜೇಡಿಮಣ್ಣು, ಮಣ್ಣು ಅಥವಾ ಸೀಮೆ ಸುಣ್ಣದಂತಹ ಆಹಾರೇತರ ವಸ್ತುಗಳನ್ನು ತಿನ್ನುವ ಹಂಬಲ ತರುತ್ತದೆ. ಕಬ್ಬಿಣದ ಕೊರತೆ ಇದ್ದರೆ ಇಂತಹ ವಿಚಿತ್ರ ಹಸಿವು ಉಂಟಾಗುತ್ತದೆ. ಬಾಯಿ ಹುಣ್ಣು, ತುಟಿಗಳು ಬಿರುಕುಬಿಡುವುದು ಅಥವಾ ನಾಲಿಗೆಯಲ್ಲಿ ನೋವು ಕೂಡ ರಕ್ತಹೀನತೆಯ ಲಕ್ಷಣಗಳಾಗಿವೆ.
ಕೂದಲು ಉದುರುವಿಕೆ
ಬೆಳವಣಿಗೆಗೆ ಅಗತ್ಯವಿರುವ ಸಾಕಷ್ಟು ಪೋಷಕಾಂಶಗಳು ಇಲ್ಲದೆ ಉಗುರುಗಳು ಸುಲಭವಾಗಿ ಒಡೆದು ಹೋಗಬಹುದು, ಚಮಚದ ಆಕಾರಕ್ಕೆ ತಿರುಗಬಹುದು. ಕೂದಲುಗಳು ಉದುರಬಹುದು. ಇವು ತೀವ್ರವಾದ ಆಯಾಸಕ್ಕೆ ಮೊದಲು ಕಾಣಿಸಿಕೊಳ್ಳುತ್ತವೆ. ಆಯಾಸದ ಜೊತೆಗೆ ಹೀಗಾದರೆ ಖಂಡಿತಾ ರಕ್ತಹೀನತೆಯ ಚಿಹ್ನೆಗಳು.
ಕೃಪೆ: ndtv.com