ಚಳಿಗಾಲದ ಅತಿಥಿ ಮೂಲಂಗಿಯ ಆರು ಲಾಭಗಳು
ಸಾಂದರ್ಭಿಕ ಚಿತ್ರ | Photo Credit : freepik
ಅಗತ್ಯ ಪೋಷಕಾಂಶಗಳು, ನೀರಿನಂಶದಿಂದಾಗಿ ಮತ್ತು ಮುಖ್ಯವಾಗಿ ಕಡಿಮೆ ಕ್ಯಾಲರಿ ಹೊಂದಿರುವ ಕಾರಣದಿಂದ ಮೂಲಂಗಿ ಇತ್ತೀಚೆಗಿನ ದಿನಗಳಲ್ಲಿ ಅತ್ಯುತ್ತಮ ಆಯ್ಕೆಯಾಗುತ್ತಿದೆ.
ಮೂಲಂಗಿ ಮಸ್ಟರ್ಡ್ ಅಥವಾ ಸಾಸಿವೆ ಕುಟುಂಬಕ್ಕೆ ಸೇರಿದ ಹೂಬಿಡುವ ಸಸ್ಯವಾಗಿದೆ. ತೀಕ್ಷ್ಣವಾದ ಪರಿಮಳ ಮತ್ತು ಬೇಗನೇ ಮುರಿಯುವ ರಚನೆಯನ್ನು ಹೊಂದಿದೆ. ಚಳಿಗಾಲದಲ್ಲಿ ಭಾರತೀಯ ಮನೆಗಳಲ್ಲಿ ಬಹುತೇಕ ಹೆಚ್ಚು ಬಳಕೆಯಾಗುತ್ತದೆ. ಈ ಬೇರು ತರಕಾರಿಯನ್ನು ಸಲಾಡ್‌ಗಳಲ್ಲೂ ಬಳಸಲಾಗುತ್ತದೆ. ಅಗತ್ಯ ಪೋಷಕಾಂಶಗಳು, ನೀರಿನಂಶದಿಂದಾಗಿ ಮತ್ತು ಮುಖ್ಯವಾಗಿ ಕಡಿಮೆ ಕ್ಯಾಲರಿ ಹೊಂದಿರುವ ಕಾರಣದಿಂದ ಈ ತರಕಾರಿಯು ಇತ್ತೀಚೆಗಿನ ದಿನಗಳಲ್ಲಿ ಅತ್ಯುತ್ತಮ ಆಯ್ಕೆಯಾಗುತ್ತಿದೆ. ಮೂಲಂಗಿಯ ಆರು ಲಾಭಗಳು ಹೀಗಿವೆ:
ಜೀರ್ಣಕ್ರಿಯೆಗೆ ಸಹಕಾರಿ
ಮೂಲಂಗಿಗಳು ನೈಸರ್ಗಿಕವಾಗಿ ಜೀರ್ಣಕ್ರಿಯೆಗೆ ಸಹಕಾರಿ. ನಾರು ಪದಾರ್ಥವಾಗಿರುವುದರಿಂದ ಕರುಳಿನ ಚಲನೆಯನ್ನು ಸುಗಮಗೊಳಿಸಿ ಮಲಬದ್ಧತೆಯ ಸಮಸ್ಯೆಯನ್ನು ನಿವಾರಿಸುತ್ತದೆ. ಆಯುರ್ವೇದದಲ್ಲಿ ಊಟಕ್ಕೆ ಮೊದಲು ಜೀರ್ಣಕ್ರಿಯೆಯನ್ನು ಉತ್ತೇಜಿಸಲು ಬಳಸಲಾಗುತ್ತದೆ. ಜೀರ್ಣಾಂಗದ ರಸಗಳು ಮತ್ತು ಪಿತ್ತರಸ ಸ್ರವಿಸಲು ನೆರವು ನೀಡುತ್ತದೆ. ಕೊಬ್ಬನ್ನು ಒಡೆಯಲು ಮತ್ತು ಪೌಷ್ಠಿಕಾಂಶಗಳ ಹೀರುವಿಕೆ ಸುಧಾರಿಸಲು ನೆರವಾಗುತ್ತದೆ.
ಸೋಂಕುಗಳ ವಿರುದ್ಧ ಹೋರಾಡುವ ಶಕ್ತಿ
ಮೂಲಂಗಿಯಲ್ಲಿ ಶಕ್ತಿಯುತವಾದ ಆಂಟಿ ಆಕ್ಸಿಡಂಟ್ ಆಗಿರುವ ವಿಟಮಿನ್ ಸಿ ಸಮೃದ್ಧವಾಗಿರುವ ಕಾರಣದಿಂದ ಬಿಳಿ ರಕ್ತಕಣಗಳ ಉತ್ಪಾದನೆಯನ್ನು ಉತ್ತೇಜಿಸಿ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಸಾಮಾನ್ಯ ಸೋಂಕುಗಳಾದ ಶೀತ ಮತ್ತು ಜ್ವರದ ವಿರುದ್ಧ ದೇಹಕ್ಕೆ ಸಹಿಷ್ಣುತೆ ನೀಡುತ್ತದೆ. ಮೂಲಂಗಿಯಲ್ಲಿ ಬ್ಯಾಕ್ಟೀರಿಯ ವಿರೋಧಿ ಮತ್ತು ಶಿಲೀಂಧ್ರನಾಶಕ ತತ್ವಗಳಿರುವ ಸಲ್ಪರ್ ಸಂಯುಕ್ತವಾದ ರಾಫನಿನ್ ಇರುತ್ತದೆ. ಈ ಸಂಯುಕ್ತವು ದೇಹ ಸಣ್ಣಪುಟ್ಟ ಸೋಂಕುಗಳಿಂದ ಬೇಗನೇ ಚೇತರಿಕೆಯಾಗಲು ನೆರವಾಗುತ್ತದೆ. ರೋಗ ನಿರೋಧಕ ಶಕ್ತಿಗಾಗಿ ಸತು ಮತ್ತು ಕಬ್ಬಿಣದಂತಹ ಖನಿಜಾಂಶಗಳನ್ನೂ ಮೂಲಂಗಿ ನೀಡುತ್ತದೆ. ಹೀಗಾಗಿ ನಿಯಮಿತ ಸೇವನೆಯಿಂದ ಆಕ್ಸಿಡೇಟಿವ್ ಒತ್ತಡ ಕಡಿಮೆಯಾಗುತ್ತದೆ. ಜೀವಕೋಶಗಳ ಹಾನಿಯಿಂದ ರಕ್ಷಿಸುತ್ತದೆ. ಮೂಲಂಗಿ ರಸವನ್ನು ಸಾಂಪ್ರದಾಯಿಕ ವೈದ್ಯದಲ್ಲಿ ಉಸಿರಾಟದ ಸೋಂಕುಗಳಿಗೆ ಬಳಸಲಾಗುತ್ತದೆ.
ಮಧುಮೇಹದ ನಿಯಂತ್ರಣದಲ್ಲಿ ಪರಿಣಾಮಕಾರಿ
ಮಧುಮೇಹಿಗಳಿಗೆ ಉಪಯುಕ್ತ. ಏಕೆಂದರೆ ರಕ್ತದಲ್ಲಿನ ಸಕ್ಕರೆ ಪ್ರಮಾಣ ತ್ವರಿತವಾಗಿ ಏರಿಕೆಯಾಗದಂತೆ ಗಮನಹರಿಸುತ್ತದೆ. ಮೂಲಂಗಿಯಲ್ಲಿರುವ ನಾರಿನಂಶವು ರಕ್ತಪ್ರವಾಹಕ್ಕೆ ಸಕ್ಕರೆ ಹೀರುವಿಕೆಯನ್ನು ನಿಧಾನಗೊಳಿಸುತ್ತದೆ. ಹೀಗಾಗಿ ಸ್ಥಿರವಾದ ಗ್ಲುಕೋಸ್ ಮಟ್ಟವನ್ನು ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ. 2024ರ ಅಧ್ಯಯನವೊಂದು ಹೇಳಿರುವ ಪ್ರಕಾರ ಮೂಲಂಗಿ ಬೇರಿನ ಸಾರವು ಗ್ಲುಕೋಸ್ ನಿಯಂತ್ರಣ ಮತ್ತು ಇನ್‌ಸುಲಿನ್ ಸೆನ್ಸಿಟಿವಿಟಿ ಸುಧಾರಿಸಲು ನೆರವಾಗುತ್ತದೆ. ಹೀಗಾಗಿ ಮಧುಮೇಹಿಗಳಿಗೆ ಉತ್ತಮ ಆಹಾರ.
ಲಿವರ್ ಮತ್ತು ಕಿಡ್ನಿಗೂ ಸಹಕಾರಿ
ಮೂಲಂಗಿಗಳಲ್ಲಿನ ನಿರ್ವಿಷಗೊಳಿಸುವ (ಡಿಟಾಕ್ಸಿಫೈ) ಗುಣದಿಂದಾಗಿ ಸಾಂಪ್ರದಾಯಿಕ ಔಷಧದಲ್ಲಿ ಬಳಸಲಾಗುತ್ತದೆ. ಕಾಮಾಲೆ ರೋಗಕ್ಕೆ ಮೂಲಂಗಿ ಜ್ಯೂಸ್ ಅನ್ನು ನೈಸರ್ಗಿಕ ಪರಿಹಾರವಾಗಿ ಬಳಸಲಾಗುತ್ತದೆ. ರಕ್ತದಿಂದ ಹೆಚ್ಚುವರಿ ಬಿಲಿರುಬಿನ್ ತೆಗೆದು ಹಾಕುವ ಕಾರಣದಿಂದ ಲಿವರ್‌ಗೆ ಉತ್ತಮ ಎನ್ನಲಾಗಿದೆ. ಮೂಲಂಗಿ ನೈಸರ್ಗಿಕವಾಗಿ ಮೂತ್ರದ ಉತ್ಪಾದನೆಯನ್ನು ಹೆಚ್ಚಿಸುತ್ತದೆ ಮತ್ತು ಮೂತ್ರಪಿಂಡಗಳು ಮತ್ತು ಮೂತ್ರನಾಳದಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ.
ಚರ್ಮದ ಆರೋಗ್ಯಕ್ಕೂ ಉತ್ತಮ
ಮೂಲಂಗಿಗಳಲ್ಲಿ ನೀರಿನಂಶ ಹೆಚ್ಚಿರುವ ಕಾರಣದಿಂದ ಆರೋಗ್ಯವಂತ ಚರ್ಮವನ್ನು ನಿರ್ವಹಿಸಲು ನೆರವಾಗುತ್ತವೆ. ಚರ್ಮದ ಸ್ಥಿತಿಸ್ಥಾಪಕತ್ವವನ್ನು ನಿರ್ವಹಿಸಲು ಅಗತ್ಯವಿರುವ ಜಲಸಂಚಯನ ಮಾಡುತ್ತದೆ. ಚರ್ಮ ಮುಪ್ಪಾಗುವುದು, ಸುಕ್ಕುಗಳು ಮತ್ತು ಮಂದವಾಗಲು ಮುಖ್ಯ ಕಾರಣ ಆಕ್ಸಿಡೇಟಿವ್ ಒತ್ತಡವಾಗಿರುತ್ತವೆ. ಮೂಲಂಗಿಗಳಲ್ಲಿ ವಿಟಮಿನ್ ಸಿ ಮತ್ತು ಫ್ಲಾವನಾಯ್ಡ್‌ಗಳು ಸಮೃದ್ಧವಾಗಿರುವುದರಿಂದ ಆಕ್ಸಿಡೇಟಿವ್ ಒತ್ತಡವನ್ನು ತೊಡೆದು ಹಾಕುತ್ತವೆ. ಅಲ್ಲದೆ ಕಲಾಜಿನ್ ಸಂಶ್ಲೇಷಣೆಗೆ ನೆರವಾಗುವುದರಿಂದ ಚರ್ಮ ದೃಢವಾಗಿರುತ್ತದೆ.
ಉರಿಯೂತ ವಿರೋಧಿ ಅಂಶಗಳು
ಅನೇಕ ಆಧುನಿಕ ಆರೋಗ್ಯ ಸಮಸ್ಯೆಗಳಿಗೆ ಉರಿಯೂತ ಕಾರಣವಾಗಿರುತ್ತದೆ. ಸಂಧಿವಾತ, ಆಸ್ತಮಾ ಮತ್ತು ಹೃದಯದ ರೋಗಗಳಿಗೆ ಉರಿಯೂತ ಕಾರಣವಾಗಿರುತ್ತದೆ. ಮೂಲಂಗಿಗಳು ಜೈವಿಕ ಸಕ್ರಿಯವಾಗಿರುವ ಸಂಯುಕ್ತಗಳನ್ನು ಹೊಂದಿರುವುದರಿಂದ ಉರಿಯೂತವನ್ನು ಸಹಜವಾಗಿ ನಿವಾರಿಸುತ್ತವೆ. ಜರ್ನಲ್ ಆಫ್ ಫುಡ್ ಸೈನ್ಸ್ ಆಂಡ್ ಟೆಕ್ನಾಲಜಿಯಲ್ಲಿ ಪ್ರಕಟವಾದ ವೈಜ್ಞಾನಿಕ ಅಧ್ಯಯನದ ಪ್ರಕಾರ ನೋವು ಮತ್ತು ಊತಕ್ಕೆ ಕಾರಣವಾಗುವ COX-2ನಂತಹ ಉರಿಯೂತವನ್ನು ನಿಗ್ರಹಿಸುವ ಶಕ್ತಿ ಮೂಲಂಗಿಯಲ್ಲಿದೆ.
ಈ ಲೇಖನವನ್ನು ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿನ ವಿವರಗಳಿಂದ ಬರೆಯಲಾಗಿದೆ. ಯಾವುದೇ ದೈಹಿಕ ಬದಲಾವಣೆಗಳಿಗೆ ಮೊದಲು ವೈದ್ಯರನ್ನು ಸಂಪರ್ಕಿಸಿ.