×
Ad

ಕಾಫಿ ಹೇಗೆ ಕುಡಿದರೆ ಚೆನ್ನ? ವೈದ್ಯರ ನಡುವಿನ ಚರ್ಚೆಯ ವಿವರ ಇಲ್ಲಿದೆ…

Update: 2026-01-13 19:01 IST

ಸಾಂದರ್ಭಿಕ ಚಿತ್ರ | Photo Credit : freepik

ಕ್ಲೋರೋಜೆನಿಕ್ ಆಮ್ಲ ಉರಿಯೂತದ ವಿರುದ್ಧ ಸಹಜವಾದ ಮಿತ್ರನಾಗಿರುತ್ತದೆ. ಅದನ್ನು ಪ್ರೊಟೀನ್ ಮತ್ತು ಮಸಾಲೆಗಳ ಜೊತೆಗೆ ಬೆರೆಸಿ ಸೇವಿಸುವುದರಿಂದ ಪರಿಣಾಮ ಇನ್ನಷ್ಟು ಉತ್ತಮವಾಗುತ್ತದೆ.

ವೈದ್ಯರು ಮತ್ತು ಆರೋಗ್ಯ ಲೇಖಕರಾಗಿರುವ ಡಾಕ್ಟರ್ ಕ್ರಿಸ್ಟೀ ಲಿಯಾಂಗ್ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಕಾಫಿಯನ್ನು ಹೇಗೆ ಕುಡಿಯಬೇಕು ಎಂದು ವಿವರಿಸುವ ಮೂಲಕ ಕಾಫಿ ಚರ್ಚೆಯನ್ನು ಆರಂಭಿಸಿದ್ದಾರೆ. ಬೆಳಗ್ಗೆ ಎದ್ದಾಗ ಸೇವಿಸುವ ಸರಳ ಕಾಫಿ ಹೇಗೆ ದೈಹಿಕವಾಗಿ ಉತ್ತಮ ಪರಿಣಾಮ ಬೀರಬಹುದು ಎಂದು ಅವರು ವಿವರಿಸಿದ್ದಾರೆ. ಕ್ರಿಸ್ಟೀ ಅವರು ವಿವರಿಸುವ ಪ್ರಕಾರ ಕಾಫಿ ಅದಾಗಲೇ ತನ್ನಲ್ಲಿರುವ ಪಾಲಿಫೀನಾಲ್ಗಳ ಮೂಲಕ ಕ್ಲೋರೋಜೆನಿಕ್ ಆಮ್ಲದ ಮೂಲಕ ಉರಿಯೂತದ ಮಾರ್ಗಗಳನ್ನು ಮಾರ್ಪಡಿಸುತ್ತದೆ. ಹೀಗಾಗಿ ಕಾಫಿಯನ್ನು ಕೆಲವು ವಸ್ತುಗಳ ಜೊತೆಗೆ ಸೇವಿಸಿದರೆ ಉರಿಯೂತ ನಿವಾರಕ ಪ್ರಯೋಜನಗಳನ್ನು ಹೆಚ್ಚಿಸಬಹುದು!

ಈ ಸಂಯುಕ್ತಗಳ ಜೊತೆಗೆ ಕಾಫಿ ಸೇವಿಸಿ

“ಪ್ರೊಟೀನ್ ಸಮೃದ್ಧವಾಗಿರುವ ಸೋಯಾ ಅಥವಾ ಡೈರಿಯ ಜೊತೆಗೆ ಸೇವಿಸಿದರೆ ಪಾಲಿಫಿನಾಲ್ ಬಂಧ ಬಲಿಷ್ಠವಾಗುತ್ತದೆ. ದಾಲ್ಚಿನ್ನಿಯ ಜೊತೆಗೆ ಸೇರಿದರೆ ಉರಿಯೂತದ ಮಾರ್ಕರ್ಗಳನ್ನು ಕಡಿಮೆಗೊಳಿಸುತ್ತದೆ.

ಕೋಕಾ ಜೊತೆಗೆ ಬೆರೆಸಿದರೆ ರಿಯಾಕ್ಟಿವ್ ಆಕ್ಸಿಜನ್ ಸ್ಪೇಸಿಸ್ (ಆರ್ಒಎಸ್), ಸೈಟೊಕೈನ್ಗಳನ್ನು ಕಡಿಮೆಗೊಳಿಸುತ್ತದೆ. (ಆರ್ಒಎಸ್ ಹೆಚ್ಚು ಅಸ್ಥಿರವಾಗಿದ್ದು, ಸಾಮಾನ್ಯ ಜೀವಕೋಶ ಚಪಯಾಪಚಯ ಕ್ರಿಯೆಯ ಸಮಯದಲ್ಲಿ ಅಥವಾ ಬಾಹ್ಯ (ಮಾಲಿನ್ಯ) ಅಂಶಗಳಿಂದ ರೂಪುಗೊಳ್ಳುತ್ತವೆ. ಅವು ಇತರ ಅಣುಗಳೊಂದಿಗೆ ಸುಲಭವಾಗಿ ಪ್ರತಿಕ್ರಿಯಿಸಿ ಆಕ್ಸಿಡೇಟಿವ್ ಒತ್ತಡ ಹೇರುತ್ತವೆ. ಅಲ್ಲದೆ ಬೆಳವಣಿಗೆ ಮತ್ತು ರೋಗನಿರೋಧಕ ಶಕ್ತಿಯಂತಹ ಜೀವಕೋಶದ ಕಾರ್ಯಗಳಿಗೆ ನಿರ್ಣಾಯಕ ಸಂಕೇತ ನೀಡುವ ಅಣುಗಳಾಗಿ ಕೆಲಸ ಮಾಡುತ್ತವೆ. ಹೀಗಾಗಿ ಕೋಕಾ ಜೊತೆಗೆ ಬೆರೆಸಿ ಸೇವಿಸಿದರೆ ಪ್ರಯೋಜನವಾಗುತ್ತದೆ.)

ಅರಶಿಣ ಬೆರೆಸಿ ಸೇವಿಸಿದರೆ ಅದರಲ್ಲಿರುವ ಕ್ಯುರ್ಕ್ಯುಮಿನ್ನಿಂದಾಗಿ ಉರಿಯೂತ ವಿರೋಧಿ ಲಾಭಗಳನ್ನು ಪಡೆಯಬಹುದು. ಜೊತೆಗೆ ಲಘು ಅಥವಾ ಮಧ್ಯಮ ಹುರಿದ ಕಾಫಿ ಕ್ಲೋರೋಜೆನಿಕ್ ಆಮ್ಲಗಳನ್ನು ಸಂರಕ್ಷಿಸಲು ಅತ್ಯುತ್ತಮ ಹಾದಿಯಾಗಿರುತ್ತದೆ. ಕ್ಲೋರೋಜೆನಿಕ್ ಆಮ್ಲಗಳಲ್ಲಿ ಆಂಟಿಆಕ್ಸಿಡಂಟ್ ಲಾಭಗಳು ಸಿಗುತ್ತವೆ” ಎನ್ನುತ್ತಾರೆ ಕ್ರಿಸ್ಟಿ.

ಅವರ ಪ್ರಕಾರ ಕ್ಲೋರೋಜೆನಿಕ್ ಆಮ್ಲ ಉರಿಯೂತದ ವಿರುದ್ಧ ಸಹಜವಾದ ಮಿತ್ರನಾಗಿರುತ್ತದೆ. ಅದನ್ನು ಪ್ರೊಟೀನ್ ಮತ್ತು ಮಸಾಲೆಗಳ ಜೊತೆಗೆ ಬೆರೆಸಿ ಸೇವಿಸುವದುರಿಂದ ಪರಿಣಾಮ ಇನ್ನಷ್ಟು ಉತ್ತಮವಾಗುತ್ತದೆ. ಸರಳವಾದ ಅಭ್ಯಾಸದಿಂದ ದೇಹದ ಸಹಿಷ್ಣುತೆಗೆ ಉತ್ತಮ ಆರೈಕೆ ಸಾಧ್ಯವಿದೆ ಎಂದು ಅವರು ಹೇಳಿದ್ದಾರೆ.

ಜೈವಿಕವಾಗಿ ಸಕ್ರಿಯ ಕಾಫಿಯಿಂದ ಲಾಭ

ಕ್ರಿಸ್ಟಿ ಅವರ ಪೋಸ್ಟ್ಗೆ ಉತ್ತರಿಸಿದ ಡಾ ಬಿಗ್ಲೀ ಮುರಳಿ, “ಕಾಫಿ ಈಗಾಗಲೇ ಜೈವಿಕವಾಗಿ ಸಕ್ರಿಯವಾಗಿದೆ. ಅದನ್ನು ಸಂಯುಕ್ತಗಳೊಂದಿಗೆ ಬೆರೆಸಿ ದೈನಂದಿನ ಸೇವನೆಯ ಅಭ್ಯಾಸ ಮಾಡಿದಲ್ಲಿ ನಿಜವಾದ ದೈಹಿಕ ಲಾಭ ಗಳಿಸಬಹುದು. ಉರಿಯೂತ ವಿರೋಧಿ ಅಭ್ಯಾಸವಾಗಿ ಬದಲಾಗಬಹುದು” ಎಂದು ಹೇಳಿದ್ದಾರೆ.

ಡಿಜಿಟಲ್ ಹೆಲ್ತ್ನಲ್ಲಿ ಜನಪ್ರಿಯ ವೈದ್ಯರಾದ ಡಾ ಹೇಮಲತಾ ರಾಮಚಂದ್ರನ್ ಅವರೂ ಪ್ರತಿಕ್ರಿಯಿಸಿ, “ಕಾಫಿಯನ್ನು ದಾಲ್ಚಿನ್ನಿ, ಕೋಕಾ ಅಥವಾ ಅರಶಿಣದ ಜೊತೆಗೆ ಕುಡಿಯುವ ಸಲಹೆ ನಿಜಕ್ಕೂ ಅತ್ಯುತ್ತಮ. ರುಚಿಕರವಾಗಿಯೂ ಇರುತ್ತದೆ ಮತ್ತು ಉರಿಯೂತ ವಿರೋಧಿ ಶಕ್ತಿಯನ್ನೂ ಕೊಡುತ್ತದೆ” ಎಂದು ಹೇಳಿದ್ದಾರೆ.

ಕಾಫಿ ಕುರಿತ ಹೊಸ ಅಧ್ಯಯನ ಏನು ಹೇಳುತ್ತದೆ?

ಈ ನಡುವೆ ಚರ್ಚೆಯಲ್ಲಿ ಭಾಗವಹಿಸಿದ ವೈದ್ಯರಾದ ಬ್ರಿಯಾನ್ ಕಾಫಿ ಕುರಿತ ಇತ್ತೀಚೆಗಿನ ಸಂಶೋಧನೆಯೊಂದರ ಕಡೆಗೆ ಗಮನ ಹರಿಸುವಂತೆ ಮಾಡಿದ್ದಾರೆ. ಇತ್ತೀಚೆಗಿನ ಅಧ್ಯಯನದಲ್ಲಿ ಹುರಿದ ಕಾಫಿಯಲ್ಲಿ ಈ ಹಿಂದೆ ತಿಳಿದಿರದೆ ಇದ್ದ ರಕ್ತದಲ್ಲಿನ ಸಕ್ಕರೆ ನಿಯಂತ್ರಣಕ್ಕೆ ಸಂಬಂಧಿಸಿದ ಪ್ರಮುಖ ಕಿಣ್ವವನ್ನು ಪ್ರತಿಬಂಧಿಸುವ ಸಾಮರ್ಥ್ಯವಿರುವ ಸಂಯುಕ್ತಗಳಿವೆ ಎಂದು ತಿಳಿಸಿದ್ದಾರೆ.

ಚೀನಾ ಅಕಾಡಮಿ ಆಫ್ ಸೈನ್ಸಸ್ನ ಕುನ್ಮಿಂಗ್ ಇನ್ಸ್ಟಿಟ್ಯೂಟ್ ಆಫ್ ಬಾಟನಿಯಲ್ಲಿ ಮಿಂಗ್ವಾ ಕಿಯು ಅವರ ತಂಡವು ನಡೆಸಿದ ಅಧ್ಯಯನದ ವಿವರಗಳು ಬಿವರೇಜ್ ಪ್ಲಾಂಟ್ ರೀಸರ್ಜ್ನಲ್ಲಿ ಪ್ರಕಟವಾಗಿದೆ. ಈ ಅಧ್ಯಯನವು ಕಾಫಿಯನ್ನು ಆಂಟಿಬಯಾಟಿಕ್ ಸಂಯುಕ್ತದ ಪ್ರಮುಖ ಮೂಲ ಎಂದು ಹೇಳಿದೆ.

ಅಧ್ಯಯನದ ಪ್ರಕಾರ ಜೀರ್ಣಕ್ರಿಯೆಯ ಸಂದರ್ಭದಲ್ಲಿ ಕಾರ್ಬೋಹೈಡ್ರೇಟ್ಗಳನ್ನು ಒಡೆಯುವಲ್ಲಿ ಬಹುಮುಖ್ಯ ಪಾತ್ರವಹಿಸುವ ಕಿಣ್ವವಾಗಿರುವ α-ಗ್ಲುಕೊಸಿಡೇಸ್ ಅನ್ನು ಬಲವಾಗಿ ಪ್ರತಿಬಂಧಿಸುವ ಮೂರು ಸಂಯುಕ್ತಗಳನ್ನು ವಿಜ್ಞಾನಿಗಳು ಗುರುತಿಸಿದ್ದಾರೆ. ಕಿಣ್ವವನ್ನು ನಿರ್ಬಂಧಿಸುವುದರಿಂದ ಊಟದ ನಂತರದ ರಕ್ತದಲ್ಲಿನ ಸಕ್ಕರೆಯ ಏರಿಕೆಯನ್ನು ನಿಯಂತ್ರಿಸಲು ನೆರವಾಗುತ್ತದೆ. ಹೀಗಾಗಿ ಟೈಪ್ 2 ಮಧುಮೇಹ ನಿರ್ವಹಿಸುವ ಆಹಾರ ಅಂಶಗಳನ್ನು ತಯಾರಿಸುವ ಹೊಸ ಸಾಧ್ಯತೆ ತೆರೆದುಕೊಂಡಿದೆ.

ಈ ಲೇಖನವನ್ನು ಸಾಮಾಜಿಕ ಜಾಲತಾಣಗಳಲ್ಲಿರುವ ಮಾಹಿತಿಯಿಂದ ಬರೆಯಲಾಗಿದೆ. ಯಾವುದೇ ಆಹಾರದಲ್ಲಿನ ಅಥವಾ ದೈಹಿಕ ಬದಲಾವಣೆಗಳಿಗೆ ಮೊದಲು ವೈದ್ಯರನ್ನು ಸಂಪರ್ಕಿಸಿ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News