ಕರುಳಿನ ಸಮಸ್ಯೆ ಇದ್ದರೆ ಫೈಬರ್ ಅಂಶ ಸೇವನೆ ಸಲ್ಲದು!
ಸಾಂದರ್ಭಿಕ ಚಿತ್ರ | Photo Credit : freepik
ಕರುಳು ಉಬ್ಬಿರುವಾಗ ಏನು ಸೇವಿಸಬಹುದು ಮತ್ತು ಸೇವಿಸಬಾರದು ಎಂದು ತಿಳಿದುಕೊಳ್ಳುವುದರಿಂದ ಬೇಗನೇ ಚೇತರಿಸಿಕೊಳ್ಳಬಹುದು
ಬಹುತೇಕರು ಫೈಬರ್ ಅಂಶ ಜೀರ್ಣಕ್ರಿಯೆಗೆ ಉತ್ತಮ ಎಂಬ ಭಾವನೆ ಇದೆ, ಆದರೆ ಉಬ್ಬಿರುವ ಕರುಳು ಸಮಸ್ಯೆ ಇರುವವರಿಗೆ ಫೈಬರ್ ಸೇವನೆ ತಾಜಾ ಗಾಯದ ಮೇಲೆ ಸ್ಯಾಂಡ್ ಪೇಪರ್ನಿಂದ ಉಜ್ಜಿದ ಅನುಭವವಾಗುತ್ತದೆ! ಹೀಗೆಂದು ಹೇಳಿದವರು ಹಾರ್ಮೋನಲ್ ತರಬೇತುದಾರರಾಗಿರುವ ಡೇವಿಡಾ ಸೈನ್. ಅವರು ತಮ್ಮ ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿ ಅವರು ಹೇಳಿರುವ ಪ್ರಕಾರ, “ಕರುಳಿನ ಸಮಸ್ಯೆ ಇರುವವರಿಗೆ ಫೈಬರ್ ಅಂಶವನ್ನು ಸೇವಿಸುವುದು ಗಾಯವನ್ನು ಸ್ಯಾಂಡ್ ಪೇಪರ್ನಿಂದ ಉಜ್ಜಿದ ರೀತಿ ಇರುತ್ತದೆ. ಲೋಳೆಪೊರೆ ಉಬ್ಬಿಕೊಂಡಿದೆ ಮತ್ತು ಚಲನಶೀಲತೆ ನಿಧಾನವಾಗಿರುವ ಸಂದರ್ಭದಲ್ಲಿ ಫೈಬರ್ ಕೂರುತ್ತದೆ ಮತ್ತು ಹುದುಗುತ್ತದೆ. ಇದರಿಂದ ಹೊಟ್ಟೆ ಉಬ್ಬರಿಸುವುದು, ಗ್ಯಾಸ್ ಮತ್ತು ಮಲಬದ್ಧತೆ ಉಂಟಾಗುತ್ತದೆ. ದುರಂತವೆಂದರೆ, ನೀವು ಅದರ ಮೇಲೆ ಇನ್ನಷ್ಟು ಫೈಬರ್ ಅಂಶಗಳನ್ನು ಸೇರಿಸುತ್ತೀರಿ. ಹಾಗೆ ಮಾಡಬೇಡಿ ಎಂದು ಬೇಡುತ್ತಿದ್ದೇನೆ” ಎನ್ನುತ್ತಾರೆ ಡೇವಿಡಾ.
ಮೊದಲಿಗೆ ಕರುಳಿನ ಕಾರ್ಯವನ್ನು ಸ್ಥಿರಗೊಳಿಸಿದರೆ ನಂತರ ಅದು ಫೈಬರ್ ಅಂಶವನ್ನು ಸಹಿಸುವ ಶಕ್ತಿ ಪಡೆಯುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ಬಗ್ಗೆ ಮುಂಬೈ ಸೆಂಟ್ರಲ್ನ ವಾಕ್ಹಾರ್ಡ್ಟ್ ಹಾಸ್ಪಿಟಲ್ಸ್ನ ಜಿಐ ಎಂಡೊಸ್ಕೋಪಿಸ್ಟ್ ಮತ್ತು ಜಠರಕರುಳಿನ ತಜ್ಞರಾಗಿರುವ ಡಾ ಸಾಯಿಪ್ರಸಾದ್ ಗಿರೀಶ್ ಲ್ಯಾಡ್ ಹೇಳುವ ಪ್ರಕಾರ, ಕರುಳಿನ ಲೈನಿಂಗ್ ಉರಿಯೂತಗೊಂಡಿದ್ದಾಗ ಮತ್ತು ಕರುಳಿನ ಚಲನೆ ನಿಧಾನಗೊಂಡಾಗ ಫೈಬರ್ ಸಂಗ್ರಹಗೊಳ್ಳುತ್ತದೆ ಮತ್ತು ಹುದುಗುತ್ತದೆ. ಹೀಗಾಗಿ ಹೆಚ್ಚು ಗ್ಯಾಸ್ ತುಂಬಿ ಹೊಟ್ಟೆ ಉಬ್ಬರಿಸುತ್ತದೆ, “ಇದೇ ಕಾರಣದಿಂದ ಕೆಲವರು ಸಲಾಡ್ಗಳು, ಬೇಳೆ-ಕಾಳುಗಳು ಅಥವಾ ಇತರ ಅಧಿಕ ಫೈಬರ್ ಇರುವ ಆಹಾರ ಸೇವಿಸಿದರೆ ಮಲಬದ್ಧತೆ ಇನ್ನಷ್ಟು ಹದಗೆಡುತ್ತದೆ. ಕರುಳು ಉಬ್ಬಿರುವಾಗ ಏನು ಸೇವಿಸಬಹುದು ಮತ್ತು ಸೇವಿಸಬಾರದು ಎಂದು ತಿಳಿದುಕೊಳ್ಳುವುದರಿಂದ ಬೇಗನೇ ಚೇತರಿಸಿಕೊಳ್ಳಬಹುದು” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಉರಿಯೂತದ ಸಂದರ್ಭದಲ್ಲಿ ಫೈಬರ್ ಏಕೆ ಬೇಡ
ಫೈಬರ್ ಜೀರ್ಣವಾಗುವುದಿಲ್ಲ. ಅಂದರೆ ದೇಹ ಅದನ್ನು ಮುರಿಯುವುದಿಲ್ಲ. “ಕರುಳು ಆರೋಗ್ಯವಾಗಿದ್ದರೆ ಫೈಬರ್ ಅಂಶ ಸೇವನೆ ಉತ್ತಮ. ಆಸರೆ ಲೈನಿಂಗ್ ಉಬ್ಬಿಕೊಂಡಿದ್ದಲ್ಲಿ ಮತ್ತು ಚಲನೆ ನಿಧಾನಗತಿಯಲ್ಲಿದ್ದಾಗ ಫೈಬರ್ ದೀರ್ಘಕಾಲ ಉಳಿಯುತ್ತದೆ. ಅಲ್ಲೇ ಹುದುಗುತ್ತದೆ, ಗ್ಯಾಸ್ ಸೃಷ್ಟಿಸುತ್ತದೆ ಮತ್ತು ಉಬ್ಬಿಕೊಂಡ ಕರುಳಿನ ಗೋಡೆಗಳ ಮೇಲೆ ಒತ್ತಡ ಹೇತುತ್ತದೆ. ಇದೇ ಕಾರಣಕ್ಕೆ ಜನರು ಹೊಟ್ಟೆ ಉಬ್ಬರಿಸುವಿಕೆ, ಸೆಳೆತ ಅಥವಾ ಮಲಬದ್ಧತೆ ಎದುರಿಸುತ್ತಾರೆ” ಎನ್ನುತ್ತಾರೆ ವೈದ್ಯರು.
ಫೈಬರ್ ಕಡಿಮೆ ಮಾಡುವುದು ಸರಿಯಾದ ಹೆಜ್ಜೆಯೆ?
ವೈದ್ಯರ ಪ್ರಕಾರ ಬಹಳಷ್ಟು ಮಂದಿಗೆ ಫೈಬರ್ ಸೇವನೆ ಕಡಿಮೆಗೊಳಿಸುವುದರಿಂದ ಕರುಳಿನ ಸಮಸ್ಯೆ ಸರಿಯಾಗುತ್ತದೆ. ಜೀರ್ಣಾಂಗ ವ್ಯವಸ್ಥೆಯ ಒಳಪದರವು ಒರಟಾದ ರಚನೆ ಮತ್ತು ಹುದುಗುವಿಕೆಯಿಂದ ವಿರಾಮ ಪಡೆದಾಗ ಉಬ್ಬುವುದು ಕಡಿಮೆಯಾಗುತ್ತದೆ ಮತ್ತು ನಿಧಾನವಾಗಿ ಚಲನೆ ಸುಧಾರಿಸುತ್ತದೆ. ಉರಿಯೂತ ನಿಂತ ಮೇಲೆ ಫೈಬರ್ ಅಂಶವನ್ನು ನಿಧಾನವಾಗಿ ಮರಳಿ ತರಬಹುದು. ಅಂದರೆ, ಗಾಯವನ್ನು ಉಜ್ಜುವ ಮೊದಲು ಶಮನವಾಗಲು ಅವಕಾಶ ಕೊಡುವುದು.
ಈ ಹಂತದಲ್ಲಿ ಕೊಬ್ಬು ಮತ್ತು ಉಪ್ಪು ಏಕೆ ಮುಖ್ಯ?
ತುಪ್ಪ, ಆಲಿವ್ ಎಣ್ಣೆ, ಕಡಲೆಗಳು ಅಥವಾ ಬೀಜಗಳು ಕರುಳನ್ನು ನಯಗೊಳಿಸಲು ಮತ್ತು ಸುಗಮ ಕರುಳಿನ ಚಲನೆಯನ್ನು ಉತ್ತೇಜಿಸುತ್ತವೆ. ಉಪ್ಪು ಕರುಳಿನ ಒಳಗೆ ಜಲಸಂಚಯನಕ್ಕೆ ನೆರವಾಗುತ್ತದೆ. ಇದು ಮುಖ್ಯ. ಏಕೆಂದರೆ ದೇಹ ನಿರ್ಜಲೀಕರಣಗೊಂಡಾಗ ಜೀರ್ಣಕ್ರಿಯೆ ನಿಧಾನಗೊಳ್ಳುತ್ತದೆ. ಬಹಳಷ್ಟು ಮಂದಿ ತೂಕ ಹೆಚ್ಚಾಗುತ್ತದೆ ಎಂದು ಕೊಬ್ಬು ಕಡಿಮೆ ಮಾಡುತ್ತಾರೆ. ಆದರೆ ಆರೋಗ್ಯಕರ ಕೊಬ್ಬು ಜೀರ್ಣಕ್ರಿಯೆ, ಚಯಾಪಚಯ ಕ್ರಿಯೆ ಮತ್ತು ಒಟ್ಟು ಹಾರ್ಮೋನಲ್ ಸಮತೋಲನ ಸ್ವಸ್ಥಾನಕ್ಕೆ ಬರಲು ನೆರವಾಗುತ್ತದೆ.
ಕರುಳಿನ ಆರೋಗ್ಯಕ್ಕೆ ಏನು ಅಗತ್ಯ?
ಹಸಿ ಆಹಾರ, ಅತಿಯಾದ ಫೈಬರ್ ಅಂಶ, ಭಾರವಾದ ಊಟ ಅಥವಾ ಅನಿಯಮಿತ ಊಟದ ಮಾದರಿಯನ್ನು ತೊರೆಯಬೇಕು. ಈ ಹಂತದಲ್ಲಿ ಜಲಸಂಚಯನ, ಸಾಕಷ್ಟು ಉಪ್ಪು ಸೇವನೆ, ಮಧ್ಯಮ ಕೊಬ್ಬು ಸೇವನೆ ಅತಿಯಾದ ಫೈಬರ್ ಅಂಶಕ್ಕಿಂತ ಉತ್ತಮ. ಒಮ್ಮೆ ಉಬ್ಬಿದ ಕರುಳಿನ ಲೈನಿಂಗ್ ಸರಿಯಾದ ನಂತರ ಗ್ಯಾಸ್ ಸರಿಯಾಗುತ್ತದೆ, ಮೃದುವಾಗಿ ಬೇಯಿಸಿದ ಆಹಾರ ಸೇವಿಸಬಹುದು. ನಂತರ ಫೈಬರ್ ಅನ್ನು ನಿಧಾನವಾಗಿ ಪರಿಚಯಿಸಬಹುದು.
ದೀರ್ಘಕಾಲದಲ್ಲಿ ಏನು ಅಗತ್ಯ?
ಜೀರ್ಣಕ್ರಿಯ ಸರಾಗವಾಗಿ ಆಗುವಂತಹ ಸ್ಥಿತಿ ನಿರ್ಮಿಸಬೇಕು. ಸಮತೋಲಿತ ಆಹಾರ, ದೈನಂದಿನ ಆಹಾರ ನಿಯಮಿತ ಸಮಯದಲ್ಲಿ ಸೇವನೆ, ಒತ್ತಡ ನಿರ್ವಹಣೆ ಮತ್ತು ದೇಹ ಸರಳವಾಗಿ ಜೀರ್ಣಿಸಿಕೊಳ್ಳುವ ಆಹಾರ ಸೇವನೆ ಮಾಡಬೇಕು. ಫೈಬರ್ ಮುಖ್ಯವಾಗುತ್ತದೆ. ಆದರೆ ಕರುಳು ಅದನ್ನು ಕರಗಿಸಲು ಸ್ಥಿರವಾದ ನಂತರವಷ್ಟೇ ಸೇವಿಸಬೇಕು.
ಕೃಪೆ: ಇಂಡಿಯನ್ ಎಕ್ಸ್ಪ್ರೆಸ್