×
Ad

ಜೀವನಶೈಲಿ ಬದಲಾವಣೆಯಿಂದ ಮಾತ್ರವೇ MASLD ಗೆ ಪರಿಹಾರ!

ಏನಿದು MASLD ರೋಗ?

Update: 2026-01-15 16:18 IST

ಸಾಂದರ್ಭಿಕ ಚಿತ್ರ | Photo Credit : freepik

ಈ ರೋಗದ ಬಗ್ಗೆ ಬಹಳಷ್ಟು ಮಂದಿಗೆ ಆರಂಭಿಕ ಹಂತದಲ್ಲಿಯೇ ತಿಳಿದಿರುತ್ತದೆ. ಇದನ್ನು ಸಂಪೂರ್ಣವಾಗಿ ಸರಿಪಡಿಸಬಹುದು ಎನ್ನುವುದು ಅವರಿಗೆ ತಿಳಿದೇ ಇಲ್ಲ!

ಬಹಳ ಸಾಮಾನ್ಯವೆನಿಸಿರುವ ದೀರ್ಘಕಾಲೀನ ಲಿವರ್ ರೋಗವೆಂದರೆ ಆಲ್ಕೋಹಾಲ್ ರಹಿತ ಉಬ್ಬಿದ ಲಿವರ್ ರೋಗ ಅಥವಾ MASLD (ಮೆಟಬಾಲಿಕ್ ಡಿಸ್ಫಂಕ್ಷನ್-ಅಸೋಸಿಯೇಟೆಡ್ ಸ್ಟೆಟಾಟಿಕ್ ಲಿವರ್ ಡಿಸೀಸ್) ಎಂಬ ವಿಚಾರ ಗುರುವಾರ ‘ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಲ್ಲಿದೆ. ಏನಿದು MASLD ರೋಗ? ಯಾಕೆ ಮುಖ್ಯವಾಗಿದೆ?

ಸರಿಪಡಿಸಬಹುದಾದ ರೋಗ MASLD

ಲಿವರ್ ಡಾಕ್ ಎಂದೇ ಪ್ರಸಿದ್ಧವಾಗಿರುವ ಖ್ಯಾತ ಭಾರತೀಯ ಹೆಪಟಾಲಜಿಸ್ಟ್ ಡಾ. ಸಿರಿಯಾಕ್ ಅಬ್ಬಿ ಫಿಲಿಪ್ಸ್ ಅವರು ತಮ್ಮ ಪೋಸ್ಟ್ನಲ್ಲಿ MASLD ಕುರಿತ ಅಧ್ಯಯನವೊಂದನ್ನು ಬೊಟ್ಟು ಮಾಡಿ ವಿವರ ಬರೆದಿದ್ದಾರೆ. “ಅಧ್ಯಯನದಲ್ಲಿರುವ ಸಂಖ್ಯೆಯನ್ನು ನೋಡಿ ನೀವು ದಿಗ್ಭ್ರಮೆಗೊಳ್ಳುವಿರಿ. ಸಾಮಾನ್ಯ ವಯಸ್ಕ ಜನಸಂಖ್ಯೆಯ ಶೇ 30ರಿಂದ ಶೇ 40 ಮಂದಿಯಲ್ಲಿ ಈ ಸಮಸ್ಯೆಯಿದೆ. ಶೇ 60ರಿಂದ ಶೇ 70ರಷ್ಟು ಟೈಪ್ 2 ಮಧುಮೇಹಿಗಳಲ್ಲಿ ಈ ಸಮಸ್ಯೆಯಿದೆ. ಶೇ 70ರಿಂದ ಶೇ 80ರಷ್ಟು ಸ್ಥೂಲಕಾಯದ ಸಮಸ್ಯೆ ಇರುವ ಮಂದಿಯಲ್ಲಿ MASLD ರೋಗವಿದೆ. ಈ ರೋಗದ ಬಗ್ಗೆ ಬಹಳಷ್ಟು ಮಂದಿಗೆ ಆರಂಭಿಕ ಹಂತದಲ್ಲಿಯೇ ತಿಳಿದಿರುತ್ತದೆ. ಇದನ್ನು ಸಂಪೂರ್ಣವಾಗಿ ಸರಿಪಡಿಸಬಹುದು ಎನ್ನುವುದು ಅವರಿಗೆ ತಿಳಿದೇ ಇಲ್ಲ!”

ಸಿರಿಯಾಕ್ ಪ್ರಕಾರ, “ಮುಖ್ಯವಾಗಿ ನಿಮ್ಮ ದೇಹ ಮತ್ತು ಆರೋಗ್ಯದ ಮೇಲೆ ನೀವು ನಿಯಂತ್ರಣ ಸಾಧಿಸಬೇಕು. ಶಾರ್ಟ್ಕಟ್ಗಳಿಗೆ ಪ್ರಯತ್ನಿಸಬೇಡಿ. ನಿಧಾನವಾಗಿ ಮತ್ತು ಸ್ಥಿರವಾಗಿ ಪ್ರಯತ್ನಿಸಿ. ನಿಮ್ಮ MASLD ರೋಗಕ್ಕೆ ಮುಖ್ಯ ಕಾರಣ ಇವು ಅಥವಾ ಇವುಗಳಲ್ಲಿ ಒಂದು: ಹೊಟ್ಟೆಯ ಅಧಿಕತೂಕ ಅಥವಾ ಬೊಜ್ಜು, ಮಧುಮೇಹಕ್ಕೆ ಪೂರ್ವಸ್ಥಿತಿ ಅಥವಾ ಟೈಪ್ 2 ಮಧುಮೇಹ, ಅಧಿಕ ರಕ್ತದೊತ್ತಡ, ಹೆಚ್ಚಿದ ಟ್ರೈಗ್ಲಿಸರೈಡ್ಗಳು ಮತ್ತು ಕಡಿಮೆ ಮಟ್ಟದ ಅಧಿಕ ಸಾಂದ್ರತೆಯ ಲಿಪೊಪ್ರೊಟೀನ್ ಕೊಲೆಸ್ಟರಾಲ್.”

ಪೂರಕ ಔಷಧಿಗಳಿಂದ ಪರಿಣಾಮವಾಗದು

ಅವರು ಹೇಳುವಂತೆ, ಈ MASLD ರೋಗಕ್ಕೆ ಅತಿ ಪರಿಣಾಮಕಾರಿ ಚಿಕಿತ್ಸೆಯೆಂದರೆ ವ್ಯಾಯಾಮ ಮತ್ತು ತೂಕ ಇಳಿಸುವುದು. ಸ್ವಲ್ಪವೂ ಆಲ್ಕೋಹಾಲ್ ಸೇವಿಸದೆ ಇರುವುದು ಮತ್ತು ಚಯಾಪಚಯ ರೋಗಗಳನ್ನು ನಿರ್ವಹಿಸುವುದು. ವೈದ್ಯರು ಅಥವಾ ‘ಹೆಲ್ತ್ ಇನ್ಫ್ಲೂಯೆನ್ಸರ್ಗಳು’ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಇತರೆಡೆ (ಆರೋಗ್ಯ ಸಂಬಂಧಿತ ವಿವರಗಳನ್ನು ಪೋಸ್ಟ್ ಮಾಡುವವರು) ಸೂಚಿಸುವಂತಹ ಬಹಳ ಪರಿಣಾಮಕಾರಿ ಚಿಕಿತ್ಸೆಯೆಂದರೆ ಗುಳಿಗೆಗಳು/ಕ್ಯಾಪ್ಸೂಲ್ಗಳು, ಡಿಟಾಕ್ಸ್ ಫೋಷನ್ಗಳು ಮತ್ತು ಲಿವರ್ ಸಪ್ಲಿಮೆಂಟ್ಗಳು! ಆದರೆ ಖಂಡಿತವಾಗಿಯೂ ಇವುಗಳು ಪರಿಹಾರವಲ್ಲ.

ಶಿಸ್ತಿನ ಆಹಾರ ಸೇವಿಸಬೇಕು. ನಿಮ್ಮ ಆಹಾರದಲ್ಲಿ ಉರಿಯೂತಪ್ರಚೋದಿಸುವ ವಸ್ತುಗಳನ್ನು ಬಳಸಬೇಡಿ. ಅಂದರೆ ಅಲ್ಟ್ರಾಪ್ರೊಸೆಸ್ಡ್/ ಪ್ರೊಸೆಸ್ಡ್ ಆಹಾರಗಳನ್ನು ಸೇವಿಸಬೇಡಿ. ರಿಫೈನ್ಡ್ ಸಕ್ಕರೆ ಹೊಂದಿರುವ ಆಹಾರವಾಗಿರುವ ಫ್ರಕ್ಟೋಸ್ ಮತ್ತು ಸ್ಯಾಚುರೇಟೆಡ್ ಕೊಬ್ಬುಗಳನ್ನು (ತೆಂಗಿನ ಎಣ್ಣೆ, ಬೆಣ್ಣೆ, ತುಪ್ಪ) ಬಿಡಬೇಕು.

ವ್ಯಾಯಾಮ ಹೇಗೆ ಮಾಡಬೇಕು?

ವ್ಯಾಯಾಮ ಮಾಡುವಾಗ ಕನಿಷ್ಠ 150 ನಿಮಿಷ ನಡೆಯಬೇಕು ಅಥವಾ ಸಾಮಾನ್ಯ ಪ್ರಮಾಣದ ಅರೋಬಿಕ್ ವ್ಯಾಯಾಮ ಮಾಡಬೇಕು. ಅಥವಾ 75-150 ನಿಮಿಷ ನಡೆಯಬೇಕು ಮತ್ತು ತೀವ್ರತಮ ಅರೋಬಿಕ್ ವ್ಯಾಯಾಮದ ಅಗತ್ಯವಿದೆ. MASLD ಕಾರಣದಿಂದ ದೀರ್ಘಕಾಲೀನ ಲಿವರ್ ರೋಗ ಹೊಂದಿರುವವರು ಹೆಚ್ಚುವರಿಯಾಗಿ ಸಿಹಿ ಬೆರೆಸದ ಕರಿ ಕಾಫಿಯನ್ನು ದಿನವೂ 3 ಕಪ್ಗಳಷ್ಟು ಕುಡಿಯಬೇಕು. ಇದರಿಂದ ರೋಗ ಬೆಳೆಯುವುದು ಮತ್ತು ಲಿವರ್ ಕ್ಯಾನ್ಸರ್ ಆಗಿ ಬದಲಾಗುವುದನ್ನು ತಪ್ಪಿಸಬಹುದು. (ಈ ಶಿಫಾರಸು ಅನ್ನು ಯುರೋಪಿಯನ್ ಆಸೋಸಿಯೇಶನ್ ಫಾರ್ ಸ್ಟಡಿ ಆಫ್ ಲಿವರ್ ಗೈಡ್ಲೈನ್ಸ್ ಪ್ರಕಾರ ಕೊಡಲಾಗಿದೆ.)

MASLD ನಿರ್ವಹಣೆಗೆ ನಿಮ್ಮ ವೈದ್ಯರು ನಿಮಗೆ ವ್ಯಾಯಾಮ ಮತ್ತು ಶಿಸ್ತಿನ ಆಹಾರ ಸೇವಿಸುವಂತೆ ಸೂಚಿಸುತ್ತಿಲ್ಲ ಎಂದಾದಲ್ಲಿ ವೈದ್ಯರನ್ನೇ ಬದಲಿಸುವ ಸಮಯ ಬಂದಿದೆ ಎನ್ನುತ್ತಾರೆ ಸಿರಿಯಾಕ್.

ಆಹಾರವೇ ಔಷಧಿ, ಜೀವನಶೈಲಿಯೇ ಶಮನ

ಸಿರಿಯಾಕ್ ಪೋಸ್ಟ್ಗೆ ಉತ್ತರಿಸಿದ ಅಹಮದಾಬಾದ್ನ ವೈದ್ಯರಾದ ಡಾ ಡಿಂಪಲ್ ಅವರೂ ವ್ಯಾಯಾಮವೇ ಉತ್ತಮ ಔಷಧಿ ಎಂದು ಹೇಳಿದ್ದಾರೆ. “ಚಲನೆ ಜೊತೆಗೆ ಇಡೀ ಧಾನ್ಯಗಳಿಂದ MASLDಯನ್ನು ಹತ್ತಿಕ್ಕಬಹುದೇ ವಿನಾ ಗುಳಿಗೆಗಳಿಂದ ಪ್ರಯೋಜನವಿಲ್ಲ. ನಾನು ಹೇಳುವುದು ತರಕಾರಿಗಳು ಮತ್ತು ಹಣ್ಣುಗಳನ್ನು ಸೇವಿಸಬೇಕು. ಸಂಸ್ಕರಿತ ಆಹಾರ ಕಡಿಮೆ ಮಾಡಿ. ಹೆಚ್ಚು ಪೌಷ್ಠಿಕಾಂಶವಿರುವ ಆಹಾರ ಸೇವಿಸಿ. ಆಹಾರವೇ ಔಷಧಿ.”

ಲಕ್ನೊದ ವೈದ್ಯರಾಗಿರುವ ಮೊಹಮ್ಮದ್ ಅದಿಲ್ ಸಿದ್ದಿಕಿ ಉತ್ತರಿಸಿ, “ಯಾವುದೇ ಗುಳಿಗೆಗಳು ಅಥವಾ ಔಷಧಿಗಳಿಂದ ಪ್ರಯೋಜನವಿಲ್ಲ. ಜೀವನಶೈಲಿಯಲ್ಲಿ ಬದಲಾವಣೆ ಆಗಬೇಕಿದೆ. ಇಲ್ಲದೆ ಹೋದರೆ ನಿಮ್ಮ ವೈದ್ಯರನ್ನೇ ಬದಲಿಸಿ” ಎಂದು ಸೂಚಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News