ಕಂದುಬಣ್ಣದ ಮೂತ್ರ ಕಂಡುಬಂದರೆ ಭಯ ಪಡಬೇಕೆ?
ಸಾಂದರ್ಭಿಕ ಚಿತ್ರ | Photo Credit : freepik
ಕಡು ಕಂದು ಬಣ್ಣದ ಅಥವಾ ಚಹಾದ ಬಣ್ಣದಂತಹ ಮೂತ್ರ ವಿಸರ್ಜನೆಗೆ ಹಲವು ಕಾರಣಗಳು ಇರಬಹುದು.
ಒಮ್ಮೆಗೆ ಮೂತ್ರ ಕಡು ಬಣ್ಣಕ್ಕೆ ತಿರುಗಿದಲ್ಲಿ ಭಯವಾಗುವುದು ಸಹಜವೇ. ಅನೇಕ ಮಂದಿ ಕಡು ಬಣ್ಣದ ಮೂತ್ರ ಕಂಡು ಬಂದಾಗ ಕಿಡ್ನಿ ಸಮಸ್ಯೆಯೆಂದು ಭಯ ಬೀಳುತ್ತಾರೆ. ಅಂತರ್ಜಾಲದಲ್ಲಿ ವಿಶ್ವಾಸಾರ್ಹವಲ್ಲದ ಮಾಹಿತಿಗಳು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಬಹುದು. Quora ದಲ್ಲಿ ಒಬ್ಬರು ತಮ್ಮ ಅಳಲನ್ನು ಹೀಗೆ ತೋಡಿಕೊಂಡಿದ್ದರು, “ನಾನು ಕಡು ಬಣ್ಣದ ಮೂತ್ರ ವಿಸರ್ಜನೆ ಮಾಡುತ್ತಿದ್ದೇನೆ. ಇದು ಕಾಫಿಯಂತೆ ಕಾಣಿಸುತ್ತದೆ. ಇದು ನನ್ನ ಕಿಡ್ನಿ (ಮೂತ್ರಪಿಂಡ) ಸಮಸ್ಯೆ ಎಂದು ಅನಿಸುತ್ತಿದೆ. ಲಿವರ್ (ಯಕೃತ್ತು) ಮತ್ತು ಕಿಡ್ನಿ ಕಾರ್ಯನಿರ್ವಹಿಸುವುದು ನಿಲ್ಲಿಸಿದಾಗ ಬೇರೆ ಏನಾದರೂ ರೋಗ ಚಿಹ್ನೆಗಳು ಕಂಡುಬರುತ್ತವೆಯೆ?” ಎಂದು ಅವರು ಪ್ರಶ್ನಿಸಿದ್ದರು. ಈ ಕುರಿತು ವೈದ್ಯರು ಹೇಳುವುದೇನು?
ಬೆಂಗಳೂರಿನ ಮಾರ್ತಹಳ್ಳಿಯ ಕಾವೇರಿ ಆಸ್ಪತ್ರೆಯಲ್ಲಿ ನೆಫ್ರಾಲಜಿ & ಕಿಡ್ನಿ ಕಸಿ ವಿಭಾಗದಲ್ಲಿ ವೈದ್ಯರಾಗಿರುವ ಡಾ ನಿಶ್ಚಯ್ ಭಾನುಪ್ರಕಾಶ್ ಅವರು ಹೇಳುವ ಪ್ರಕಾರ, “ಕಿಡ್ನಿ ಅಥವಾ ಲಿವರ್ ವಿಫಲವಾದಾಗ ರೋಗ ಚಿಹ್ನೆಗಳು ಕೇವಲ ಮೂತ್ರದಲ್ಲಿ ಮಾತ್ರ ಕಂಡುಬರುವುದಿಲ್ಲ. ಹೀಗಾಗಿ ತಕ್ಷಣವೇ ದೊಡ್ಡ ಸಮಸ್ಯೆ ಬಂದಿದೆ ಎಂದು ಭಯಪಡಬೇಕಾಗಿಲ್ಲ.”
ಕಿಡ್ನಿಯಲ್ಲಿ ಸಮಸ್ಯೆ ಕಂಡುಬಂದರೆ, ಕಣ್ಣುಗಳು, ಪಾದಗಳು ಅಥವಾ ಕಣಕಾಲುಗಳ ಸುತ್ತ ಊತ, ಆಯಾಸ, ಹಸಿವಿನ ಕೊರತೆ, ವಾಕರಿಕೆಯ ಜೊತೆಗೆ ಮೂತ್ರ ವಿಸರ್ಜನೆ ಕಡಿಮೆಯಾಗುತ್ತದೆ. ಹಾಗೆಯೇ ಲಿವರ್ ಗೆ ಸಮಸ್ಯೆಯಾದಲ್ಲಿ ಕಣ್ಣುಗಳು ಮತ್ತು ಚರ್ಮ ಹಳದಿ ಬಣ್ಣಕ್ಕೆ ತಿರುಗುತ್ತದೆ. ಮಲ ಮಸುಕಾಗುವುದು ಹೊಟ್ಟೆಯ ಊತ ಮತ್ತು ನಿರಂತರ ಆಯಾಸ ಕಂಡುಬರುತ್ತದೆ.
“ಮೂತ್ರ ಕಡು ಬಣ್ಣಕ್ಕೆ ತಿರುಗಿದರೆ ಅದರಲ್ಲಿ ರಕ್ತ ಅಥವಾ ವರ್ಣದ್ರವ್ಯಗಳ ತ್ಯಾಜ್ಯ ಸೇರಿರಬಹುದು. ಬಣ್ಣ ತಿರುಗಿದ ಮಾತ್ರಕ್ಕೆ ಲಿವರ್ ಅಥವಾ ಕಿಡ್ನಿ ವೈಫಲ್ಯವಾಗಿದೆ ಎಂದು ತಿಳಿದುಕೊಳ್ಳಬಾರದು.” ಚಿಕಿತ್ಸಾತ್ಮಕವಾಗಿ ಮೌಲ್ಯಮಾಪನ ಮಾಡುವುದು ಮತ್ತು ಪ್ರಯೋಗಾಲಯದ ಪರೀಕ್ಷೆಯಿಂದ ಮಾತ್ರವೇ ಸೂಕ್ತ ರೋಗಪರಿಶೀಲನೆ ನಡೆಸಬಹುದು. ಆದರೆ ಅಸಹಜವಾದ ಬಣ್ಣಕ್ಕೆ ನಿಖರವಾದ ಕಾರಣವೇನು?
ಚಿಂತೆ ಮಾಡಬೇಕಾದ ಸ್ಥಿತಿ ಯಾವುದು?
ಕಡು ಕಂದು ಅಥವಾ ಚಹಾಬಣ್ಣದ ಮೂತ್ರಕ್ಕೆ ಹಲವು ಕಾರಣಗಳಿರಬಹುದು. ತಕ್ಷಣವೇ ಅವಯವಗಳು ಕಾರ್ಯನಿರ್ವಹಿಸುವುದು ನಿಂತಿದೆ ಎಂದು ಅರ್ಥಮಾಡಿಕೊಳ್ಳಬೇಕಾಗಿಲ್ಲ. ಆದರೆ ನಿಜವಾಗಿಯೂ ಕಿಡ್ನಿ ಅಥವಾ ಲಿವರ್ ವೈಫಲ್ಯವೆಂದು ನಿರ್ಧರಿಸುವುದು ಯಾವಾಗ? ಮೂತ್ರಪಿಂಡ ಶಾಸ್ತ್ರಜ್ಞರು ಹೇಳುವ ಪ್ರಕಾರ, ರಕ್ತ ಮತ್ತು ಸ್ನಾಯುಗಳಲ್ಲಿ ಬ್ರೇಕ್ಡೌನ್ (ವೈಫಲ್ಯದಿಂದಾದ) ಉತ್ಪನ್ನಗಳಾದ ಮಿಯೊಗ್ಲೋಬಿನ್ ತುಂಬುವುದು. ಅದರಿಂದ ಕಿಡ್ನಿ ಸಮಸ್ಯೆ ಎಂದು ಪರಿಗಣಿಸಬಹುದು.
ಕೆಂಪು ರಕ್ತ ಕಣಗಳ ವಿಭಜನೆಯಾಗುವಾಗ ಉತ್ಪತ್ತಿಯಾಗುವ ವರ್ಣದ್ರವ್ಯವಾದ ಬಿಲಿರುಬಿನ್ (ಪಿತ್ತವರ್ಣಕ) ಊದಿಕೊಂಡಿದ್ದರೆ ಲಿವರ್ ಸಂಬಂಧಿತ ಸಮಸ್ಯೆ ಎಂದು ಕಂಡುಕೊಳ್ಳಬಹುದು. ಲಿವರ್ ಮತ್ತು ಬೈಲ್ ಡಕ್ಟ್ಗಳು (ಪಿತ್ತವಾಹಿನಿ) ಸರಿಯಾಗಿ ಕೆಲಸ ಮಾಡದೆ ಇದ್ದರೆ ಬಿಲಿರುಬಿನ್ ಮೂತ್ರದ ಜೊತೆಗೆ ಸೇರಿಕೊಳ್ಳುತ್ತದೆ. “ಸರಳವಾಗಿ ಹೇಳುವುದಾದಲ್ಲಿ ಕಿಡ್ನಿ ಸಂಬಂಧಿತ ಮೂತ್ರಪಿಂಡದ ಬದಲಾವಣೆಗಳು ಕಂಡುಬಂದಲ್ಲಿ ನೊರೆಬರುವ ಮೂತ್ರ, ಊತ ಅಥವಾ ಕಡಿಮೆ ಮೂತ್ರದ ಸಮಸ್ಯೆ ಕಂಡುಬರುತ್ತದೆ. ಲಿವರ್ ಸಂಬಂಧಿತ ಬದಲಾವಣೆಗಳಲ್ಲಿ ಚರ್ಮದ ಅಥವಾ ಕಣ್ಣುಗಳ ಬಣ್ಣ ಹಳದಿಯಾಗುವುದು ಮತ್ತು ಮಸುಕಾದ ಮಲವಿಸರ್ಜನೆ ಕಂಡುಬರುತ್ತದೆ.
ಹೀಗಾಗಿ ಕಡು ಬಣ್ಣದ ಮೂತ್ರವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಅದು ನಿರಂತರವಾಗಿ ಇದ್ದರೆ, ಕಣ್ಣುಗಳು ಹಳದಿಬಣ್ಣಕ್ಕೆ ತಿರುಗುವುದು, ಊತ, ಮೂತ್ರ ಕಡಿಮೆಯಾಗಿರುವುದು, ಮೂತ್ರ ಹೋಗುವಾಗ ಅತಿಯಾದ ಸುಸ್ತು ಕಾಣಿಸಿಕೊಂಡಲ್ಲಿ, ಹೊಟ್ಟೆ ಊದಿಕೊಂಡಲ್ಲಿ ತುರ್ತಾಗಿ ವೈದ್ಯರನ್ನು ಕಾಣಬೇಕು.
ಕೃಪೆ: indianexpress.com