ಭಾರತ - ಪಾಕ್ ಪಂದ್ಯ | 26 ನಾಗರಿಕರ ಜೀವಗಳಿಗಿಂತ ಹಣ ಹೆಚ್ಚು ಅಮೂಲ್ಯವೇ? ಬಿಜೆಪಿಗೆ ಅಸಾದುದ್ದೀನ್ ಉವೈಸಿ ಪ್ರಶ್ನೆ
Photo I indiatoday
ಹೊಸದಿಲ್ಲಿ: ದುಬೈನಲ್ಲಿ ನಡೆಯಲಿರುವ ಭಾರತ-ಪಾಕಿಸ್ತಾನ ಪಂದ್ಯ ತೀವ್ರ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹೊರತಾಗಿಯೂ ಪಾಕಿಸ್ತಾನದ ಜೊತೆಗೆ ಪಂದ್ಯವನ್ನು ಆಡುವ ನಿರ್ಧಾರವನ್ನು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಉವೈಸಿ ಪ್ರಶ್ನಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಉವೈಸಿ, ಅಸ್ಸಾಂ ಮುಖ್ಯಮಂತ್ರಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಮತ್ತು ಇತರರಿಗೆ ನನ್ನ ಪ್ರಶ್ನೆಯೆಂದರೆ, ಪಹಲ್ಗಾಮ್‌ನಲ್ಲಿರುವ ನಮ್ಮ 26 ನಾಗರಿಕರ ಧರ್ಮವನ್ನು ಕೇಳಿ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಪಾಕಿಸ್ತಾನದ ಜೊತೆ ಕ್ರಿಕೆಟ್ ಪಂದ್ಯವನ್ನು ಆಡುವುದನ್ನು ನಿರಾಕರಿಸುವ ಅಧಿಕಾರ ನಿಮಗೆ ಇಲ್ವ? ಎಂದು ಕೇಳಿದರು.
ರಕ್ತ ಮತ್ತು ನೀರು ಒಟ್ಟಿಗೆ ಹರಿಯಲು ಸಾಧ್ಯವಿಲ್ಲ, ಮಾತುಕತೆ ಮತ್ತು ಭಯೋತ್ಪಾದನೆ ಒಟ್ಟಿಗೆ ನಡೆಯಲು ಸಾಧ್ಯವಿಲ್ಲ ಎಂದು ನೀವೇ ಹೇಳಿದ್ದೀರಿ, ಒಂದು ಕ್ರಿಕೆಟ್ ಪಂದ್ಯದಿಂದ ಬಿಸಿಸಿಐ ಎಷ್ಟು ಹಣವನ್ನು ಪಡೆಯುತ್ತದೆ? 2,000 ಕೋಟಿ ರೂ. ಅಥವಾ 3,000 ಕೋಟಿ? ನಮ್ಮ 26 ನಾಗರಿಕರ ಜೀವಗಳ ಮೌಲ್ಯಕ್ಕಿಂತ ಹಣ ಮುಖ್ಯವೇ? ಇದನ್ನೇ ಬಿಜೆಪಿ ಹೇಳಬೇಕು ಎಂದು ಉವೈಸಿ ಹೇಳಿದರು.
ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ 26 ನಾಗರಿಕರ ಕುಟುಂಬಸ್ಥರ ಜೊತೆ ಎಐಎಂಐಎಂ ಪಕ್ಷವು ಆರಂಭದಿಂದಲೂ ನಿಂತಿದೆ, ಮುಂದೆಯೂ ನಿಲ್ಲಲಿದೆ ಎಂದು ಉವೈಸಿ ಇದೇ ವೇಳೆ ಹೇಳಿದರು.