ಪರ್ವತನೇನಿ ಹರೀಶ್ | Photo Credit : PTI 

ವಿಶ್ವಸಂಸ್ಥೆ: ಭದ್ರತಾ ಮಂಡಳಿಯಲ್ಲಿ ವೀಟೊ ಅಧಿಕಾರವಿಲ್ಲದ ಖಾಯಂ ಸದಸ್ಯರ ಹೊಸ ವರ್ಗವನ್ನು ಸೃಷ್ಟಿಸಿದರೆ, ಅವರಿಗೆ ಎರಡನೇ ದರ್ಜೆಯ ಸ್ಥಾನಮಾನ ನೀಡಿದಂತಾಗುತ್ತದೆ. ಇದರಿಂದ ಹಾಲಿ ಖಾಯಂ ಸದಸ್ಯ ರಾಷ್ಟ್ರಗಳೇ ನೀತಿ ನಿರ್ಧಾರ ಪ್ರಕ್ರಿಯೆಯ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿರುವ ವ್ಯವಸ್ಥೆ ಮುಂದುವರಿಯಲಿದೆ ಎಂದು ಭಾರತ ಪ್ರತಿಪಾದಿಸಿದೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಸೋಮವಾರ ನಡೆದ ಅಂತರಸರ್ಕಾರಿ ಮಾತುಕತೆಗಳ (IGN) ಪೂರ್ಣ ಅಧಿವೇಶನದಲ್ಲಿ ಮಾತನಾಡಿದ ವಿಶ್ವಸಂಸ್ಥೆಗೆ ಭಾರತದ ರಾಯಭಾರಿ ಪರ್ವತನೇನಿ ಹರೀಶ್, ಭದ್ರತಾ ಮಂಡಳಿಯ ಸುಧಾರಣೆಯ ಬಳಿಕವೂ ವೀಟೊ ಅಧಿಕಾರ ಮುಂದುವರಿಯುವುದಾದರೆ, ಆ ಹಕ್ಕು ಎಲ್ಲ ಖಾಯಂ ಸದಸ್ಯರಿಗೂ ಇರಬೇಕು ಎಂದು ಹೇಳಿದರು.

ವೀಟೊ ಅಧಿಕಾರವಿಲ್ಲದ ಖಾಯಂ ಸದಸ್ಯರ ಮತ್ತೊಂದು ವರ್ಗವನ್ನು ಸೃಷ್ಟಿಸುವುದರಿಂದ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ಬದಲಿಗೆ, ಭದ್ರತಾ ಮಂಡಳಿಯಲ್ಲಿ ಈಗಾಗಲೇ ಇರುವ ಅಸಮಾನತೆ ಮತ್ತಷ್ಟು ಹೆಚ್ಚಲಿದೆ ಎಂದು ಅವರು ಅಭಿಪ್ರಾಯಪಟ್ಟರು.

►ಖಾಯಂ ಸದಸ್ಯರ ಸಂಖ್ಯೆ ಹೆಚ್ಚಳಕ್ಕೆ ಒತ್ತು

15 ಸದಸ್ಯ ಬಲದ ಭದ್ರತಾ ಮಂಡಳಿಯಲ್ಲಿ ಚೀನಾ, ಫ್ರಾನ್ಸ್, ರಶ್ಯ, ಬ್ರಿಟನ್ ಮತ್ತು ಅಮೆರಿಕ ಖಾಯಂ ಸದಸ್ಯ ರಾಷ್ಟ್ರಗಳಾಗಿವೆ. ಈ ಐದು ರಾಷ್ಟ್ರಗಳು ವೀಟೊ ಚಲಾಯಿಸುವ ವಿಶೇಷಾಧಿಕಾರ ಹೊಂದಿವೆ. ಉಳಿದ 10 ರಾಷ್ಟ್ರಗಳು ಎರಡು ವರ್ಷಗಳ ಅವಧಿಗೆ ಆಯ್ಕೆಯಾಗುವ ಖಾಯಂ ಅಲ್ಲದ ಸದಸ್ಯರಾಗಿವೆ.

1965ರಲ್ಲಿ ಜಾರಿಗೆ ಬಂದ ಭದ್ರತಾ ಮಂಡಳಿಯ ವಿಸ್ತರಣೆಯನ್ನು ಸ್ಮರಿಸಿದ ಹರೀಶ್, ಆಗ ಖಾಯಂ ಅಲ್ಲದ ಸದಸ್ಯರ ಸಂಖ್ಯೆಯನ್ನು ಆರರಿಂದ 10ಕ್ಕೆ ಹೆಚ್ಚಿಸಲಾಗಿತ್ತು. ಇದರಿಂದ ಖಾಯಂ ಮತ್ತು ಖಾಯಂ ಅಲ್ಲದ ಸದಸ್ಯರ ಅನುಪಾತವು 5:6ರಿಂದ 5:10ಕ್ಕೆ ಬದಲಾಯಿತು. ಇದು ಖಾಯಂ ಸದಸ್ಯ ರಾಷ್ಟ್ರಗಳ ಪ್ರಭಾವವನ್ನು ಮತ್ತಷ್ಟು ಹೆಚ್ಚಿಸಿತು ಎಂದು ಹೇಳಿದರು.

ಭದ್ರತಾ ಮಂಡಳಿಯ ಖಾಯಂ ಹಾಗೂ ಖಾಯಂ ಅಲ್ಲದ ಸದಸ್ಯರ ಸಂಖ್ಯೆ ಎರಡನ್ನೂ ಹೆಚ್ಚಿಸಬೇಕಿದೆ. ಕೇವಲ ಖಾಯಂ ಅಲ್ಲದ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸುವುದಕ್ಕೆ ಆದ್ಯತೆ ನೀಡಿದರೆ, ಮಂಡಳಿಯ ಸುಧಾರಣೆಯ ಪ್ರಯತ್ನಗಳು ವಿಫಲವಾಗಲಿವೆ ಎಂದು ಭಾರತ ಎಚ್ಚರಿಸಿದೆ.

►ಖಾಯಂ ಸದಸ್ಯತ್ವಕ್ಕೆ ಭಾರತದ ಪ್ರತಿಪಾದನೆ

ಭದ್ರತಾ ಮಂಡಳಿಯ ಖಾಯಂ ಸದಸ್ಯತ್ವಕ್ಕೆ ತಾನು ಅರ್ಹ ಅಭ್ಯರ್ಥಿ ಎಂದು ಭಾರತ ಒತ್ತಿಹೇಳುತ್ತಾ ಬಂದಿದೆ. 2028–2029ರ ಅವಧಿಗೆ ಖಾಯಂ ಅಲ್ಲದ ಸದಸ್ಯ ಸ್ಥಾನಕ್ಕಾಗಿ 2027ರ ಜೂನ್ನಲ್ಲಿ ನಡೆಯಲಿರುವ ಚುನಾವಣೆಯಲ್ಲೂ ಭಾರತ ಸ್ಪರ್ಧಿಸಲಿದೆ. ಏಷ್ಯಾ–ಪೆಸಿಫಿಕ್ ಗುಂಪಿನ ಒಂದು ಸ್ಥಾನಕ್ಕೆ ಭಾರತ ಮತ್ತು ತಜಿಕಿಸ್ತಾನ ಸ್ಪರ್ಧಿಸಲಿವೆ.

ಪ್ರಸ್ತುತ ಐದು ಖಾಯಂ ಸದಸ್ಯ ರಾಷ್ಟ್ರಗಳಿಗೆ ಮಾತ್ರ ಇರುವ ವೀಟೊ ಅಧಿಕಾರವನ್ನು ಚಲಾಯಿಸುವಾಗ ಸಂಯಮ ವಹಿಸಬೇಕು. ಅದನ್ನು ಸಂಕುಚಿತ ರಾಜಕೀಯ ಲಾಭಕ್ಕಾಗಿ ಬಳಸಬಾರದು ಎಂದು ಹರೀಶ್ ಕರೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor