ಡೊನಾಲ್ಡ್ ಟ್ರಂಪ್ | Photo Credit : PTI

ವಾಷಿಂಗ್ಟನ್: ಅ. 27: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಅತ್ಯಾಚಾರದ ಗಂಭೀರ ಆರೋಪ ಕೇಳಿಬಂದಿದೆ. 1993ರಲ್ಲಿ ಟ್ರಂಪ್ ತಮ್ಮ ಮೇಲೆ ಅತ್ಯಾಚಾರ ಎಸಗಿದ್ದರು ಎಂದು ಮಾಜಿ ‘ಮಿಸ್ ಸ್ವಿಟ್ಝರ್ಲೆಂಡ್’ ಬೀಟ್ರಿಸ್ ಕಿಯುಲ್ ಆರೋಪಿಸಿದ್ದಾರೆ. ಘಟನೆಯ ವೇಳೆ ತಮ್ಮ ಉಡುಪು ಹರಿದಿತ್ತು, ದೇಹದ ಹಲವು ಭಾಗಗಳಲ್ಲಿ ಗಾಯಗಳಾಗಿ ರಕ್ತಸ್ರಾವವಾಗಿತ್ತು ಎಂದು ಅವರು ಹೇಳಿರುವುದಾಗಿ ಡೆಮೋಕ್ರಟ್ ಗಳು ಸಿದ್ಧಪಡಿಸಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಟ್ರಂಪ್ ತಮ್ಮನ್ನು ಅಸಭ್ಯವಾಗಿ ಮುಟ್ಟಿದ್ದರು ಎಂದು 1993ರ ನವೆಂಬರ್‌ ನಲ್ಲಿ ಕಿಯುಲ್ ಈ ಹಿಂದೆ ಆರೋಪಿಸಿದ್ದರು. ಇದೀಗ ಅದೇ ಘಟನೆಯ ಸಂದರ್ಭದಲ್ಲಿ ಅತ್ಯಾಚಾರವೂ ನಡೆದಿತ್ತು ಎಂದು ಅವರು ಆರೋಪಿಸಿದ್ದಾರೆ. ಅಮೆರಿಕದ ಹೌಸ್ ಜುಡಿಷಿಯರಿ ಸಮಿತಿಯ ಡೆಮೋಕ್ರಟ್ ಸದಸ್ಯರು ಸಿದ್ಧಪಡಿಸಿರುವ 53 ಪುಟಗಳ ವರದಿಯಲ್ಲಿ ಈ ಆರೋಪಗಳಿವೆ.

ಆದರೆ, ವರದಿಯಲ್ಲಿನ ಆರೋಪಗಳನ್ನು ಶ್ವೇತಭವನ ನಿರಾಕರಿಸಿದೆ. ಟ್ರಂಪ್ ಅವರ ಸಾಧನೆಗಳಿಂದ ರಿಪಬ್ಲಿಕನ್ ಪಕ್ಷದ ಜನಪ್ರಿಯತೆ ಹೆಚ್ಚುತ್ತಿರುವುದರಿಂದ ಅಮೆರಿಕನ್ನರ ಗಮನವನ್ನು ಬೇರೆಡೆಗೆ ಸೆಳೆಯಲು ಡೆಮೋಕ್ರಟ್ ಗಳು ಹತಾಶ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಶ್ವೇತಭವನದ ವಕ್ತಾರರು ತಿರುಗೇಟು ನೀಡಿದ್ದಾರೆ.

►‘ಕ್ರೂರ’ ಕೃತ್ಯ ಎಂದು ಆರೋಪ

ಕಿಯುಲ್ ಅವರಿಗೆ 24 ವರ್ಷ ವಯಸ್ಸಾಗಿದ್ದಾಗ ಟ್ರಂಪ್ ಅವರನ್ನು ಮೊದಲ ಬಾರಿಗೆ ಭೇಟಿಯಾಗಿದ್ದರು. ನ್ಯೂಯಾರ್ಕ್ ನ ಪ್ಲಾಝಾ ಹೋಟೆಲ್ ನಲ್ಲಿ ನಡೆದ ಸೌಂದರ್ಯ ಸ್ಪರ್ಧೆಯಲ್ಲಿ ಈ ಭೇಟಿ ನಡೆದಿತ್ತು. ಆಗ ಹೋಟೆಲ್ ಟ್ರಂಪ್ ಅವರ ಒಡೆತನದಲ್ಲಿತ್ತು.

‘ದಿ ಟೆಲಿಗ್ರಾಫ್’ ವರದಿಯ ಪ್ರಕಾರ, ಕಿಯುಲ್ ಅವರಿಗೆ ವೀಸಾ ವ್ಯವಸ್ಥೆ ಮಾಡಿಕೊಡುವುದಾಗಿ ಹಾಗೂ ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ (NYU) ಪ್ರವೇಶ ದೊರಕಿಸಿಕೊಡುವುದಾಗಿ ಟ್ರಂಪ್ ಭರವಸೆ ನೀಡಿದ್ದರು. ‘ನಾನು ನಿನ್ನನ್ನು ನೋಡಿಕೊಳ್ಳುತ್ತೇನೆ’ ಎಂದೂ ಹೇಳಿದ್ದರು ಎನ್ನಲಾಗಿದೆ.

ಟ್ರಂಪ್ ಅವರೊಂದಿಗಿನ ಮಾತುಕತೆ ಮುಗಿದ ಬಳಿಕ, ಎಪ್ಸ್ಟೀನ್ ಕಿಯುಲ್ ಅವರ ಬಳಿಗೆ ಬಂದು, ತಾನು ಟ್ರಂಪ್ ಅವರ ಆಪ್ತ ಸ್ನೇಹಿತ ಎಂದು ಪರಿಚಯಿಸಿಕೊಂಡಿದ್ದ. ಬಳಿಕ ಮಾರ್-ಎ-ಲಾಗೊದಲ್ಲಿ ನಡೆಯಲಿರುವ ಪಾರ್ಟಿಯೊಂದಕ್ಕೆ ಕಿಯುಲ್ ಅವರನ್ನು ಆಹ್ವಾನಿಸಿದ್ದ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ನಂತರ ಟ್ರಂಪ್ ಅವರ ಪ್ರತಿನಿಧಿಯೊಬ್ಬರು, ಪ್ಲಾಝಾ ಹೋಟೆಲ್ ನ ಮೇಲಿನ ಮಹಡಿಯಲ್ಲಿ ಟ್ರಂಪ್ ಅವರನ್ನು ಭೇಟಿಯಾಗುವಂತೆ ಕಿಯುಲ್ ಅವರಿಗೆ ಆಹ್ವಾನ ನೀಡಿದ್ದರು. ಅಲ್ಲಿಗೆ ಹೋದಾಗ ಟ್ರಂಪ್ ಹಿಂದಿನಿಂದ ತಮ್ಮನ್ನು ಹಿಡಿದು ಬಲವಂತವಾಗಿ ಅತ್ಯಾಚಾರ ಎಸಗಿದರು. ಈ ವೇಳೆ ಉಡುಪನ್ನು ಹರಿದುಹಾಕಿದ್ದು, ದೇಹದ ಹಲವು ಭಾಗಗಳಲ್ಲಿ ಗಾಯಗಳಾಗಿ ರಕ್ತಸ್ರಾವವಾಗಿತ್ತು ಎಂದು ಕಿಯುಲ್ ಆರೋಪಿಸಿದ್ದಾರೆ.

ಈ ಕೃತ್ಯವನ್ನು ಅವರು ‘ಕ್ರೂರ’ ಎಂದು ಹೇಳಿದ್ದಾರೆ. ಘಟನೆಯ ಬಳಿಕ ಟ್ರಂಪ್ ತಮ್ಮನ್ನು ಹಾಸಿಗೆಯ ಅಂಚಿನಲ್ಲಿ ಕೂರಿಸಿ, ವೀಸಾ ಮತ್ತು NYU ಪ್ರವೇಶ ಕೊಡಿಸುವ ಭರವಸೆಯನ್ನು ಪುನರುಚ್ಚರಿಸಿದ್ದರು. ಈ ವಿಷಯವನ್ನು ಯಾರಿಗೂ ಹೇಳಬಾರದು ಎಂದು ಮಾತು ಪಡೆದಿದ್ದರು. ‘ಶೋ ಮುಂದುವರಿಯಲೇಬೇಕು’ (The show must go on) ಎಂದೂ ಹೇಳಿದ್ದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

►ಎಪ್ಸ್ಟೀನ್ ನಂಟಿನ ಬಗ್ಗೆ ತನಿಖೆಗೆ ಆಗ್ರಹ

ಅಪ್ರಾಪ್ತ ವಯಸ್ಕರ ಲೈಂಗಿಕ ಕಳ್ಳಸಾಗಣೆ ಆರೋಪ ಎದುರಿಸುತ್ತಿದ್ದ ಜೆಫ್ರಿ ಎಪ್ಸ್ಟೀನ್, 2019ರಲ್ಲಿ ಫೆಡರಲ್ ಅಧಿಕಾರಿಗಳ ವಶದಲ್ಲಿದ್ದಾಗ ಆತ್ಮಹತ್ಯೆ ಮಾಡಿಕೊಂಡಿದ್ದ. ಎಪ್ಸ್ಟೀನ್ ವಿರುದ್ಧ ಅಪರಾಧಗಳ ಆರೋಪಗಳು ಕೇಳಿಬರುವುದಕ್ಕೂ ಬಹಳ ಹಿಂದೆಯೇ ಆತನೊಂದಿಗಿನ ಸ್ನೇಹವನ್ನು ಕಡಿದುಕೊಂಡಿದ್ದಾಗಿ ಟ್ರಂಪ್ ಹೇಳಿಕೊಂಡಿದ್ದಾರೆ.

‘ಎಪ್ಸ್ಟೀನ್ ಫೈಲ್ಸ್’ ಎಂದು ಕರೆಯಲಾಗುವ ದಾಖಲೆಗಳನ್ನು ಬಿಡುಗಡೆ ಮಾಡದಂತೆ ತಡೆಯಲು ಟ್ರಂಪ್ ಹಲವು ತಿಂಗಳುಗಳ ಕಾಲ ಪ್ರಯತ್ನಿಸಿದ್ದರು ಎಂದು ವರದಿ ಹೇಳಿದೆ. ಬಳಿಕ ಕಾಂಗ್ರೆಸ್ ಅಂಗೀಕರಿಸಿದ ಕಾನೂನಿಗೆ ಅವರು ಸಹಿ ಹಾಕಿದ್ದು, ಅದರ ಪರಿಣಾಮವಾಗಿ ದಾಖಲೆಗಳನ್ನು ಪ್ರಕಟಿಸಬೇಕಾಗಿ ಬಂತು.

ದಾಖಲೆಗಳಲ್ಲಿ ಟ್ರಂಪ್ ಅವರ ಹೆಸರು ಹಲವು ಬಾರಿ ಕಾಣಿಸಿಕೊಂಡಿದೆ. ಆದರೆ, ಅವರು ಯಾವುದೇ ತಪ್ಪು ಮಾಡಿರುವುದನ್ನು ನಿರಾಕರಿಸಿದ್ದಾರೆ. ಎಪ್ಸ್ಟೀನ್ ಜೊತೆಗಿನ ಸಂಬಂಧಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ಯಾವುದೇ ಕ್ರಿಮಿನಲ್ ಆರೋಪ ದಾಖಲಾಗಿಲ್ಲ.

►ಐವರು ಮಹಿಳೆಯರಿಂದ ಆರೋಪ: ರಾಸ್ಕಿನ್

ಟ್ರಂಪ್ ವಿರುದ್ಧ ಈ ಹಿಂದೆ ಕೇಳಿಬಂದಿದ್ದ ಲೈಂಗಿಕ ದೌರ್ಜನ್ಯದ ಆರೋಪಗಳಿಗೆ ಬೀಟ್ರಿಸ್ ಕಿಯುಲ್ ಅವರ ಆರೋಪವೂ ಸೇರ್ಪಡೆಯಾಗಿದೆ ಎಂದು ಡೆಮೋಕ್ರಟ್ ಗಳು ಹೇಳಿದ್ದಾರೆ. ಎಪ್ಸ್ಟೀನ್ ಜೊತೆಗಿನ ಟ್ರಂಪ್ ಅವರ ನಂಟಿನ ಸಂದರ್ಭದಲ್ಲಿ ನಡೆದಿರಬಹುದಾದ ಲೈಂಗಿಕ ದೌರ್ಜನ್ಯದ ಆರೋಪಗಳ ಸರಣಿಯಲ್ಲಿ ಇದೂ ಒಂದು ಎಂದು ಅವರು ಪ್ರತಿಪಾದಿಸಿದ್ದಾರೆ.

ಹೌಸ್ ಜುಡಿಷಿಯರಿ ಸಮಿತಿಯ ಡೆಮೋಕ್ರಟಿಕ್ ಪಕ್ಷದ ಪ್ರಮುಖ ಸದಸ್ಯ ಜೇಮಿ ರಾಸ್ಕಿನ್, ಟ್ರಂಪ್ ಅವರನ್ನು ರಕ್ಷಿಸುವ ಉದ್ದೇಶದಿಂದ ನ್ಯಾಯಾಂಗ ಇಲಾಖೆಯು ಪ್ರಕರಣಗಳಿಗೆ ಸಂಬಂಧಿಸಿದ ಅಪರಾಧಗಳನ್ನು ಮುಚ್ಚಿಹಾಕುತ್ತಿದೆ ಎಂದು ಆರೋಪಿಸಿದ್ದಾರೆ.

‘ಎಪ್ಸ್ಟೀನ್ ಜೊತೆಗಿದ್ದಾಗ ಅಥವಾ ಅವರ ಸಂಪರ್ಕದಲ್ಲಿದ್ದ ಸಂದರ್ಭದಲ್ಲಿ ಟ್ರಂಪ್ ಅತ್ಯಾಚಾರ ಅಥವಾ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಐವರು ಮಹಿಳೆಯರು ನೇರವಾಗಿ ಆರೋಪಿಸಿದ್ದಾರೆ’ ಎಂದು ರಾಸ್ಕಿನ್ ಹೇಳಿದ್ದಾರೆ.

ಟ್ರಂಪ್ ಮತ್ತು ಎಪ್ಸ್ಟೀನ್ ನಡುವಿನ ಸಂಬಂಧಗಳ ಕುರಿತು ತನಿಖೆ ನಡೆಸಲು ಸ್ವತಂತ್ರ ವಿಶೇಷ ವಕೀಲರನ್ನು ನೇಮಿಸುವಂತೆ ಡೆಮೋಕ್ರಟ್ ಗಳು ಅಟಾರ್ನಿ ಜನರಲ್ ಟಾಡ್ ಬ್ಲಾಂಚೆ ಅವರನ್ನು ಒತ್ತಾಯಿಸಿದ್ದಾರೆ. ಅಧ್ಯಕ್ಷರನ್ನು ಮಾತ್ರವಲ್ಲದೆ, ಎಪ್ಸ್ಟೀನ್ ನ ಸಂಭಾವ್ಯ ಸಹಚರರು ಮತ್ತು ಸಹ-ಪಿತೂರಿಗಾರರನ್ನೂ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ಆದರೆ, ಟ್ರಂಪ್ ಅವರ ಮಾಜಿ ವಕೀಲರಾಗಿದ್ದ ಬ್ಲಾಂಚೆ ನೇತೃತ್ವದ ನ್ಯಾಯಾಂಗ ಇಲಾಖೆ ಈ ಕ್ರಮ ಕೈಗೊಳ್ಳುವ ಸಾಧ್ಯತೆ ಇಲ್ಲ ಎಂದು ಡೆಮೋಕ್ರಟ್ ಗಳು ಅಭಿಪ್ರಾಯಪಟ್ಟಿದ್ದಾರೆ. ನ್ಯಾಯಾಂಗ ಇಲಾಖೆ ಮತ್ತು ಫೆಡರಲ್ ತನಿಖಾ ಸಂಸ್ಥೆ (FBI), ಅಧ್ಯಕ್ಷರನ್ನು ರಕ್ಷಿಸುವ ಪ್ರಯತ್ನದಲ್ಲಿ ಎಪ್ಸ್ಟೀನ್ ನ ಲೈಂಗಿಕ ಕಳ್ಳಸಾಗಣೆ ಜಾಲವನ್ನು ಮುಚ್ಚಿಹಾಕುತ್ತಿವೆ ಎಂದೂ ಅವರು ಆರೋಪಿಸಿದ್ದಾರೆ.

ನವೆಂಬರ್ 3ರಂದು ನಡೆಯಲಿರುವ ಕಾಂಗ್ರೆಸ್ ಚುನಾವಣೆಗೆ ಮುನ್ನ, ಎಪ್ಸ್ಟೀನ್ ಗೆ ಸಂಬಂಧಿಸಿದ ಜಾಹೀರಾತುಗಳಿಗಾಗಿ ಡೆಮೋಕ್ರಟ್ ಗಳು 35 ಮಿಲಿಯನ್ ಡಾಲರ್ ಗಿಂತಲೂ ಹೆಚ್ಚು ಹಣ ಖರ್ಚು ಮಾಡಿದ್ದಾರೆ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor