ಅಮೆರಿಕ ಮಧ್ಯಂತರ ಚುನಾವಣೆ ಸಮೀಕ್ಷೆ | ಟ್ರಂಪ್ ಬೆಂಬಲಿಸಿದ್ದ ಶೇ.25ರಷ್ಟು ದಕ್ಷಿಣ ಏಷ್ಯ ಮೂಲದ ಮತದಾರರ ಒಲವು ಡೆಮಾಕ್ರಾಟಿಕ್ ಪಕ್ಷದತ್ತ
ಡೊನಾಲ್ಡ್ ಟ್ರಂಪ್ | Photo Credit : PTI
ವಾಶಿಂಗ್ಟನ್, ಅ.27: 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಪರವಾಗಿ ಮತ ಚಲಾಯಿಸಿದ್ದ ದಕ್ಷಿಣ ಏಷ್ಯ ಮೂಲದ ಅಮೆರಿಕನ್ ಮತದಾರರ ಪೈಕಿ ಶೇ.25ರಷ್ಟು ಮಂದಿ ನವೆಂಬರ್ 3ರಂದು ನಡೆಯಲಿರುವ ಮಧ್ಯಂತರ ಚುನಾವಣೆಯಲ್ಲಿ ಡೆಮಾಕ್ರಾಟಿಕ್ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಲಿದ್ದಾರೆ ಎಂದು ಚುನಾವಣಾ ಪೂರ್ವ ಸಮೀಕ್ಷೆಯೊಂದು ತಿಳಿಸಿದೆ.
‘ಇಂಡಿಯನ್ ಅಮೆರಿಕನ್ ಇಂಪ್ಯಾಕ್ಟ್’ ಸಂಘಟನೆಯು ಈ ಸಮೀಕ್ಷೆ ನಡೆಸಿದೆ. ಜೀವನನಿರ್ವಹಣಾ ವೆಚ್ಚ (ಶೇ.65), ಆರೋಗ್ಯ ಪಾಲನೆ (ಶೇ.53), ಉದ್ಯೋಗ ಹಾಗೂ ವೇತನ (ಶೇ.33) ಮತ್ತು ಶಿಕ್ಷಣ (ಶೇ.28) ಮಧ್ಯಂತರ ಚುನಾವಣೆಯಲ್ಲಿ ಮತದಾರರ ಮೇಲೆ ಪರಿಣಾಮ ಬೀರಲಿರುವ ಪ್ರಮುಖ ವಿಷಯಗಳಾಗಿವೆ ಎಂದು ಸಮೀಕ್ಷೆ ತಿಳಿಸಿದೆ.
ಸಮೀಕ್ಷೆಯಲ್ಲಿ ಪಾಲ್ಗೊಂಡ 800 ದಕ್ಷಿಣ ಏಷ್ಯ ಮೂಲದ ಮತದಾರರ ಪೈಕಿ ಶೇ.87ರಷ್ಟು ಮಂದಿ ಭಾರತೀಯ ಮೂಲದವರಾಗಿದ್ದಾರೆ. ಉಳಿದ ಶೇ.13ರಷ್ಟು ಮಂದಿ ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ, ನೇಪಾಳ, ಭೂತಾನ್, ಮಾಲ್ದೀವ್ಸ್, ಅಫ್ಘಾನಿಸ್ತಾನ, ಖಮೇರ್ ಹಾಗೂ ಮ್ಯಾನ್ಮಾರ್ ಮೂಲದವರಾಗಿದ್ದಾರೆ.
2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಕಮಲಾ ಹ್ಯಾರಿಸ್ ಪರವಾಗಿ ಮತ ಚಲಾಯಿಸಿದ್ದ ಶೇ.96ರಷ್ಟು ಮಂದಿ ಈ ಬಾರಿಯೂ ಡೆಮಾಕ್ರಾಟಿಕ್ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಅವರನ್ನು ಬೆಂಬಲಿಸಿದ್ದ ದಕ್ಷಿಣ ಏಷ್ಯ ಮೂಲದ ಮತದಾರರ ಪೈಕಿ ಶೇ.67ರಷ್ಟು ಮಂದಿ ಮಧ್ಯಂತರ ಚುನಾವಣೆಯಲ್ಲೂ ರಿಪಬ್ಲಿಕನ್ ಅಭ್ಯರ್ಥಿಗಳನ್ನು ಬೆಂಬಲಿಸಲಿದ್ದಾರೆ. ಆದರೆ, ಶೇ.25ರಷ್ಟು ಮಂದಿ ಈ ಬಾರಿ ಡೆಮಾಕ್ರಾಟಿಕ್ ಅಭ್ಯರ್ಥಿಗಳನ್ನು ಬೆಂಬಲಿಸಲು ನಿರ್ಧರಿಸಿದ್ದಾರೆ. ಟೆಕ್ಸಾಸ್ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಮುಂಚಿತ ಮತದಾನ ಆರಂಭಗೊಂಡಿರುವ ಸಂದರ್ಭದಲ್ಲೇ ಈ ಸಮೀಕ್ಷೆಯ ಫಲಿತಾಂಶ ಹೊರಬಿದ್ದಿದೆ. ಮಧ್ಯಂತರ ಚುನಾವಣೆಯಲ್ಲಿ ಅಮೆರಿಕದ ಪ್ರತಿನಿಧಿ ಸಭೆಯ (ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್) ಎಲ್ಲ 435 ಸ್ಥಾನಗಳು ಹಾಗೂ ಸೆನೆಟ್ನ ಮೂರನೇ ಒಂದರಷ್ಟು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.