ಇಸ್ರೇಲ್ ಚುನಾವಣೆ: 1977ರ ಬಳಿಕದ ಗರಿಷ್ಠ ಮತದಾನ
Photo Credit : aljazeera.com
ಜೆರುಸಲೇಂ, ಅ.27: ಇಸ್ರೇಲ್ನಲ್ಲಿ ಸಾರ್ವತ್ರಿಕ ಚುನಾವಣೆಗೆ ಮಂಗಳವಾರ ಮತದಾನ ನಡೆದಿದ್ದು, ಮತದಾನದ ಆರಂಭಿಕ ಗಂಟೆಗಳಲ್ಲಿ 1977ರ ಬಳಿಕದ ಗರಿಷ್ಠ ಪ್ರಮಾಣದ ಮತದಾನ ದಾಖಲಾಗಿದೆ ಎಂದು ವರದಿಯಾಗಿದೆ. ವಿವಿಧ ಅವಧಿಗಳಲ್ಲಿ ಒಟ್ಟು 19 ವರ್ಷಗಳ ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸಿರುವ ಬೆಂಜಮಿನ್ ನೆತನ್ಯಾಹು ಅವರ ರಾಜಕೀಯ ಭವಿಷ್ಯವನ್ನು ಈ ಚುನಾವಣೆ ನಿರ್ಧರಿಸಲಿದೆ. ಅಕ್ಟೋಬರ್ 7ರ ಹಮಾಸ್ ದಾಳಿ, ಗಾಝಾ ಸಂಘರ್ಷ ಹಾಗೂ ಇರಾನ್ ಯುದ್ಧ ಚುನಾವಣೆಯ ಪ್ರಮುಖ ವಿಷಯಗಳಾಗಿವೆ ಎಂದು ಚುನಾವಣಾ ಪೂರ್ವ ಸಮೀಕ್ಷೆಗಳು ತಿಳಿಸಿವೆ.
ಮತದಾನ ಆರಂಭಗೊಂಡ ಮೊದಲ ಐದು ಗಂಟೆಗಳಲ್ಲಿ ಶೇ.31.5ರಷ್ಟು ಮತದಾನವಾಗಿತ್ತು.
ಈ ಚುನಾವಣೆಯಲ್ಲಿ ನೆತನ್ಯಾಹು ಅವರಿಗೆ ಮಾಜಿ ಸೇನಾ ವರಿಷ್ಠ ಗಾಡಿ ಐಸೆನ್ಕೊಟ್ ಪ್ರಬಲ ಸ್ಪರ್ಧೆ ನೀಡುತ್ತಿದ್ದಾರೆ. ಅಕ್ಟೋಬರ್ 7ರಂದು ಇಸ್ರೇಲ್ ನಾಗರಿಕರ ಮೇಲೆ ನಡೆದ ದಾಳಿಗೆ ಕಾರಣವಾದ ಭದ್ರತಾ ವೈಫಲ್ಯಗಳಿಗೆ ಯಾರು ಹೊಣೆ ಎಂಬುದನ್ನು ನಿರ್ಧರಿಸುವುದಾಗಿ ಅವರು ಭರವಸೆ ನೀಡಿದ್ದಾರೆ. ಇಸ್ರೇಲ್ಗೆ ಹೊಸ ಚೈತನ್ಯ ನೀಡುವ ಉದ್ದೇಶ ಹೊಂದಿರುವುದಾಗಿ ಅವರು ಹೇಳಿದ್ದಾರೆ. ತಾವು ಅಧಿಕಾರಕ್ಕೇರಿದರೆ ಅಕ್ಟೋಬರ್ 7ರ ದಾಳಿಯ ಕುರಿತು ರಾಷ್ಟ್ರೀಯ ಮಟ್ಟದ ತನಿಖೆ ನಡೆಸುವುದಾಗಿ ವಿರೋಧ ಪಕ್ಷಗಳು ಘೋಷಿಸಿವೆ.
ಇಸ್ರೇಲ್ನ ವಿರೋಧಿಗಳನ್ನು ಎದುರಿಸುವ ಸಾಮರ್ಥ್ಯ ತನಗೆ ಮಾತ್ರ ಇದೆ ಎಂದು ನೆತನ್ಯಾಹು ಚುನಾವಣಾ ಪ್ರಚಾರದಲ್ಲಿ ಪ್ರತಿಪಾದಿಸುತ್ತಾ ಬಂದಿದ್ದಾರೆ.
ನೆತನ್ಯಾಹು ನೇತೃತ್ವದ ಕಟ್ಟಾ ಬಲಪಂಥೀಯ ಮೈತ್ರಿಕೂಟದ ನೀತಿಗಳು ದೇಶದ ಜನರ ನಡುವೆ ವಿಭಜನೆ ಮೂಡಿಸಿವೆ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಇಸ್ರೇಲ್ ಅನ್ನು ಪ್ರತ್ಯೇಕಿಸಿವೆ ಎಂಬ ಟೀಕೆಗಳ ನಡುವೆಯೇ ಈ ಚುನಾವಣೆ ನಡೆಯುತ್ತಿದೆ. ವಿರೋಧ ಪಕ್ಷಗಳ ಬೆಂಬಲಿಗರು ಹಾಗೂ ಅರಬ್ ಮೂಲದ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿರುವುದನ್ನು ಗಮನಿಸಿದ ನೆತನ್ಯಾಹು, ತಮ್ಮ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗಳಿಗೆ ಆಗಮಿಸಿ ಮತ ಚಲಾಯಿಸುವಂತೆ ಕರೆ ನೀಡಿದ್ದಾರೆ.
ಚುನಾವಣಾ ಪೂರ್ವ ಸಮೀಕ್ಷೆಗಳು ನೆತನ್ಯಾಹು ಮತ್ತು ಗಾಡಿ ಐಸೆನ್ಕೊಟ್ ನೇತೃತ್ವದ ಮೈತ್ರಿಕೂಟಗಳ ನಡುವೆ ತೀವ್ರ ಪೈಪೋಟಿ ಇರುವುದನ್ನು ಸೂಚಿಸಿವೆ. ಈ ಬಾರಿಯ ಚುನಾವಣೆಯಲ್ಲಿ ಅಲ್ಪಸಂಖ್ಯಾತ ಅರಬ್ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿರುವುದು ಕುತೂಹಲ ಮೂಡಿಸಿದೆ.
120 ಸದಸ್ಯ ಬಲದ ಇಸ್ರೇಲ್ ಸಂಸತ್ತಿನಲ್ಲಿ ಬಹುಮತಕ್ಕೆ 61 ಸ್ಥಾನಗಳ ಅಗತ್ಯವಿದೆ. ಒಂದು ವೇಳೆ ನೆತನ್ಯಾಹು ಅಥವಾ ಐಸೆನ್ಕೊಟ್ ನೇತೃತ್ವದ ಮೈತ್ರಿಕೂಟಕ್ಕೆ ಬಹುಮತ ದೊರೆಯದಿದ್ದರೆ, ಹೊಸ ಸರಕಾರ ರಚನೆಯಾಗುವವರೆಗೆ ನೆತನ್ಯಾಹು ಹಂಗಾಮಿ ಪ್ರಧಾನಿಯಾಗಿ ಮುಂದುವರಿಯುವ ಸಾಧ್ಯತೆ ಇದೆ ಎನ್ನಲಾಗಿದೆ.
ನೆತನ್ಯಾಹು ನೇತೃತ್ವದ ಸರಕಾರ ಇಸ್ರೇಲ್ ಇತಿಹಾಸದಲ್ಲೇ ಅತ್ಯಂತ ಕೆಟ್ಟ ಸರಕಾರವಾಗಿದ್ದು, ಅದನ್ನು ಅಧಿಕಾರದಿಂದ ಕೆಳಗಿಳಿಸಬೇಕೆಂದು ಅವರ ಪ್ರಮುಖ ಪ್ರತಿಸ್ಪರ್ಧಿ ಗಾಡಿ ಐಸೆನ್ಕೊಟ್ ಕರೆ ನೀಡಿದ್ದಾರೆ.