ಅತ್ಯಾಧುನಿಕ ಶಸ್ತ್ರಾಸ್ತ್ರ ಪೂರೈಸಲು ಅಮೆರಿಕಕ್ಕೆ ಪಾಕಿಸ್ತಾನ ಮನವಿ
PC : NDTV
ಇಸ್ಲಾಮಾಬಾದ್ : ತಮ್ಮ ದೇಶಕ್ಕೆ ಭಯೋತ್ಪಾದನೆ ವಿರುದ್ಧದ ಕಾರ್ಯಾಚರಣೆ ಯಶಸ್ಸಿಗೆ ನಿರ್ಣಾಯಕವಾಗಿರುವ ಅತ್ಯಾಧುನಿಕ ಸಣ್ಣ ಶಸ್ತ್ರಾಸ್ತ್ರಗಳು ಮತ್ತು ಇತರ ಆಧುನಿಕ ಅಸ್ತ್ರಗಳ ತುರ್ತು ಅಗತ್ಯವಿದೆ ಎಂದು ಅಮೆರಿಕಕ್ಕೆ ಪಾಕಿಸ್ತಾನದ ರಾಯಭಾರಿ ಮಸೂದ್ ಖಾನ್ ಹೇಳಿರುವುದಾಗಿ ಜಿಯೊ ನ್ಯೂಸ್ ವರದಿ ಮಾಡಿದೆ.
ಸರಕಾರ ಅನುಮೋದನೆ ನೀಡಿದ ಬಳಿಕ ಆರಂಭಿಸಲಾದ `ಆಪರೇಷನ್ ಅಝ್ಮೆ ಇಸ್ತೆಕಾಮ್' ಕಾರ್ಯಾಚರಣೆ ದೇಶದಿಂದ ಭಯೋತ್ಪಾದಕರನ್ನು ತೊಡೆದು ಹಾಕಲಿದೆ. ಆದರೆ ಇದಕ್ಕೆ ನಮಗೆ ಅತ್ಯಾಧುನಿಕ ಸಣ್ಣ ಶಸ್ತ್ರಾಸ್ತ್ರಗಳು ಮತ್ತು ಸಂವಹನ ಸಾಧನದ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಪಾಕಿಸ್ತಾನ ಮತ್ತು ಅಮೆರಿಕ ಬಲವಾದ ಭದ್ರತಾ ಸಂಪರ್ಕಗಳನ್ನು ಹೊಂದಿರಬೇಕು ಮತ್ತು ಎರಡೂ ದೇಶಗಳು ತಮ್ಮ ನಡುವೆ ಗುಪ್ತಚರ ಸಹಕಾರಗಳನ್ನು ಹೆಚ್ಚಿಸಬೇಕು. ಪಾಕಿಸ್ತಾನಕ್ಕೆ ಅತ್ಯಾಧುನಿಕ ಮಿಲಿಟರಿ ವ್ಯವಸ್ಥೆಗಳನ್ನು ಅಮೆರಿಕ ಒದಗಿಸಬೇಕು. ಇದು ಪ್ರಾದೇಶಿಕ ಭದ್ರತೆಗೆ ಮತ್ತು ಅಮೆರಿಕ ಹಾಗೂ ಅದರ ಮಿತ್ರರ ಹಿತಾಸಕ್ತಿಗೆ ವಿರುದ್ಧವಾದ ಭಯೋತ್ಪಾದನೆಯನ್ನು ತಡೆಯಲು ನಿರ್ಣಾಯಕವಾಗಿದೆ. ಅಲ್ಲದೆ ಒಂದೆರಡು ಸಣ್ಣ ಸಣ್ಣ ವಿಷಯಗಳು ಸಂಬಂಧವನ್ನು ಹಾಳುಗೆಡವಬಾರದು ಎಂದವರು ಆಗ್ರಹಿಸಿದ್ದಾರೆ.
ಅಫ್ಘಾನಿಸ್ತಾನದಲ್ಲಿ ರಾಜತಾಂತ್ರಿಕ ಪುನರಾಗಮನಕ್ಕೆ ಪಾಕಿಸ್ತಾನವನ್ನು ಪಾಲುದಾರನನ್ನಾಗಿ ಮಾಡುವುದನ್ನು ಅಮೆರಿಕ ಪರಿಗಣಿಸಬೇಕು. ಭಯೋತ್ಪಾದನೆ ನಿಗ್ರಹದ ಪ್ರಯತ್ನಗಳು ಅಫ್ಘಾನಿಸ್ತಾನದಲ್ಲಿ ಮಹಿಳೆಯರು ಮತ್ತು ಹುಡುಗಿಯರ ಹಕ್ಕಿಗೆ ಸಂಬಂಧಿಸಿದೆ ಬಿಕ್ಕಟ್ಟನ್ನು ಪರಿಹರಿಸುವ ಕಾರ್ಯದಲ್ಲಿ ಪಾಕಿಸ್ತಾನದೊಂದಿಗೆ ಕೆಲಸ ಮಾಡಬೇಕು ಎಂದವರು ಒತ್ತಾಯಿಸಿದ್ದಾರೆ. ಕಳೆದ ವರ್ಷ ಪಾಕಿಸ್ತಾನವು 364 ದಶಲಕ್ಷ ಡಾಲರ್ ಮೊತ್ತದ ಶಸ್ತ್ರಾಸ್ತ್ರ ಖರೀದಿಗೆ ಅಮೆರಿಕದ ಎರಡು ಖಾಸಗಿ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಆದರೆ ಈ ಶಸ್ತ್ರಾಸ್ತ್ರಗಳನ್ನು ತುರ್ತು ಅಗತ್ಯವಿರುವ ಉಕ್ರೇನ್‍ಗೆ ಒದಗಿಸಲಾಗಿದೆ ಎಂದು ವರದಿಯಾಗಿದೆ.