×
Ad

ಅಮೆರಿಕ ಚುನಾವಣೆ | ಭಾರತೀಯ ಮೂಲದ ಅಮೆರಿಕನ್ನರ ಮೈಲಿಗಲ್ಲು: ಝೊಹ್ರಾನ್ ಮಮ್ದಾನಿ, ಅಫ್ತಾಬ್ ಪುರೇವಾಲ್ ಹಾಗೂ ಗಝಾಲಾ ಹಶ್ಮಿಗೆ ಭಾರಿ ಜಯ

ಹೈದರಾಬಾದ್ ನಲ್ಲಿ ಜನಿಸಿದ ಗಝಾಲಾ ಹಷ್ಮಿ ವರ್ಜೀನಿಯಾದ ಪ್ರಥಮ ಮುಸ್ಲಿಂ ಲೆಫ್ಟಿನೆಂಟ್ ಗವರ್ನರ್ !

Update: 2025-11-05 13:07 IST

ಝೊಹ್ರಾನ್ ಮಮ್ದಾನಿ, ಗಝಾಲಾ ಹಶ್ಮಿ ಹಾಗೂ ಅಫ್ತಾಬ್ ಪುರೇವಾಲ್ (Photo credit: PTI,X)

ವಾಷಿಂಗ್ಟನ್: ಅಮೆರಿಕ ರಾಜಕಾರಣದಲ್ಲಿ ಭಾರತೀಯ ಮೂಲದ ಅಭ್ಯರ್ಥಿಗಳು ಹಾಗೂ ದಕ್ಷಿಣ ಏಶ್ಯ ಅಮೆರಿಕನ್ನರಿಗೆ ಐತಿಹಾಸಿಕ ಗೆಲುವು ದೊರೆತಿದ್ದು, ಝೊಹ್ರಾನ್ ಮಮ್ದಾನಿ, ಅಫ್ತಾಬ್ ಪುರೇವಾಲ್ ಹಾಗೂ ಗಝಾಲಾ ಹಶ್ನಿ ಕ್ರಮವಾಗಿ ನ್ಯೂಯಾರ್ಕ್, ಸಿನ್ಸಿನಾಟಿ ಹಾಗೂ ವರ್ಜೀನಿಯಾ ನಗರಗಳ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದಾರೆ. ಈ ಮೂವರೂ ಮುಸ್ಲಿಂ ಸಮುದಾಯಕ್ಕೆ ಸೇರಿರುವುದು ಮತ್ತೊಂದು ವಿಶೇಷ.

ನ್ಯೂಯಾರ್ಕ್ ಮೇಯರ್ ಹುದ್ದೆಗೆ ಸ್ಪರ್ಧಿಸಿದ್ದ ಡೆಮಾಕ್ರಟಿಕ್ ಸೋಷಿಯಲಿಸ್ಟ್ ಪಕ್ಷದ ಅಭ್ಯರ್ಥಿಯಾಗಿದ್ದ 34 ವರ್ಷದ ಝೊಹ್ರಾನ್ ಮಮ್ದಾನಿ, ಇದೀಗ ಅಮೆರಿಕದ ಬೃಹತ್ ನಗರವಾದ ನ್ಯೂಯಾರ್ಕ್ ನ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದಾರೆ.

ಬಿರುಸಿನ ಸ್ಪರ್ಧೆಗೆ ಸಾಕ್ಷಿಯಾದ ನ್ಯೂಯಾರ್ಕ್ ಮೇಯರ್ ಚುನಾವಣೆಯಲ್ಲಿ ತಮ್ಮ ಸಮೀಪದ ಪ್ರತಿಸ್ಪರ್ಧಿಗಳಾದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನ್ಯೂಯಾರ್ಕ್ ನ ಮಾಜಿ ಗವರ್ನರ್ ಆ್ಯಂಡ್ರ್ಯೂ ಕುಯೋಮೊ ಹಾಗೂ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಕುರ್ಟಿಸ್ ಸಿಲ್ವಾರನ್ನು ಪರಾಭವಗೊಳಿಸುವ ಮೂಲಕ ಝೊಹ್ರಾನ್ ಮಮ್ದಾನಿ ನ್ಯೂಯಾರ್ಕ್ ನಗರದ ನೂತನ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಇಲ್ಲಿಯವರೆಗೆ ಶೇ. 83ರಷ್ಟು ಮತಗಳ ಎಣಿಕೆ ಪೂರ್ಣಗೊಂಡಿದ್ದು, ಈ ಪೈಕಿ ಶೇ. 50.6ರಷ್ಟು ಮತಗಳನ್ನು (9,48,202 ಮತಗಳು) ಮಮ್ದಾನಿ ಗಳಿಸಿದ್ದಾರೆ. ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕುಯೋಮೊ ಶೇ. 41.3 (7,76,547) ಹಾಗೂ ಕುರ್ಟಿಸ್ ಸಿಲ್ವ 1,37,030 ಮತಗಳನ್ನು ಪಡೆದಿದ್ದಾರೆ.

ಚಿತ್ರ ನಿರ್ಮಾಪಕಿ ಮೀರಾ ನಾಯರ್ ಹಾಗೂ ವಿದ್ವಾಂಸ ಮಹ್ಮೂದ್ ಮಮ್ದಾನಿಯವರ ಉಗಾಂಡ ಸಂಜಾತ ಪುತ್ರರಾದ ಝೊಹ್ರಾನ್ ಮಮ್ದಾನಿ, ತಮ್ಮ ಚುನಾವಣಾ ಪ್ರಚಾರದ ವೇಳೆ ನ್ಯೂಯಾರ್ಕ್ ನಗರವಾಸಿಗಳ ಜೀವನ ವೆಚ್ಚ ಕಡಿತ, ಉದ್ಯೋಗಸ್ಥ ನ್ಯೂಯಾರ್ಕ್ ವಾಸಿಗಳ ಜೀವನ ಸುಧಾರಣೆ ಮತ್ತಿತರ ಚುನಾವಣಾ ಭರವಸೆಗಳನ್ನು ನೀಡಿದ್ದರು. ಇದು ಯುವ ಹಾಗೂ ಆರ್ಥಿಕವಾಗಿ ಭಾರ ಅನುಭವಿಸುತ್ತಿದ್ದ ಮತದಾರರನ್ನು ಝೊಹ್ರಾನ್ ಮಮ್ದಾನಿಯತ್ತ ಸೆಳೆದಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

1969ರ ನಂತರ ಇದೇ ಪ್ರಥಮ ಬಾರಿಗೆ ಸುಮಾರು 20 ಲಕ್ಷ ಮತದಾನವಾಗಿದೆ ಎಂದು ನ್ಯೂಯಾರ್ಕ್ ಸಿಟಿ ಬೋರ್ಡ್ ಆಫ್ ಎಲೆಕ್ಷನ್ಸ್ ವರದಿ ಮಾಡಿದೆ.

ಸಿನ್ಸಿನಾಟಿ ಮೇಯರ್ ಆಗಿ ಅಫ್ತಾಬ್ ಪುರೇವಾಲ್ ಆಯ್ಕೆ:

ಮತ್ತೊಂದು ಪ್ರಮುಖ ಸ್ಪರ್ಧೆಯಲ್ಲಿ ಡೆಮಾಕ್ರಟ್ ಪಕ್ಷದ ಅಫ್ತಾಬ್ ಪುರೇವಾಲ್ ಅವರು ರಿಪಬ್ಲಿಕನ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸೆನೆಟರ್ ಜೆ.ಡಿ.ವಾನ್ಸ್ ಅವರ ಮಲ ಸಹೋದರ ಕೋರಿ ಬೌಮೆನ್ ರನ್ನು ಪರಾಭವಗೊಳಿಸಿ, ಸಿನ್ಸಿನಾಟಿ ನಗರದ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.

2021ರಲ್ಲಿ ಪ್ರಥಮ ಬಾರಿಗೆ ಸಿನ್ಸಿನಾಟಿ ನಗರದ ಮೇಯರ್ ಆಗಿ ಆಯ್ಕೆಯಾಗಿದ್ದ ಅಫ್ತಾಬ್ ಪುರೇವಾಲ್, ನಗರದಲ್ಲಿ ಆರ್ಥಿಕ ಅವಕಾಶಗಳನ್ನು ವಿಸ್ತರಿಸಿದ ಹಾಗೂ ನಗರದ ಸಾರ್ವಜನಿಕ ಸೇವೆಗಳನ್ನು ಸುಧಾರಿಸಿದ ಹಿರಿಮೆಗೆ ಭಾಜನರಾಗಿದ್ದಾರೆ.

ವರ್ಜೀನಿಯಾ ನಗರದ ಪ್ರಥಮ ಮುಸ್ಲಿಂ ಲೆಫ್ಟಿನೆಂಟ್ ಗವರ್ನರ್ ಆಗಿ ಗಝಾಲಾ ಹಶ್ಮಿ ಆಯ್ಕೆ:

ಭಾರತೀಯ ಮೂಲದ ಅಮೆರಿಕನ್ ರಾಜಕಾರಣಿ ಗಝಾಲಾ ಹಶ್ಮಿ ವರ್ಜೀನಿಯಾದ ಲೆಫ್ಟಿನೆಂಟ್ ಗವರ್ನರ್ ಆಗಿ ಆಯ್ಕೆಯಾಗಿದ್ದಾರೆ. ರಾಜ್ಯದ ಈ ಉನ್ನತ ಹುದ್ದೆಗೆ ಆಯ್ಕೆಯಾದ ಮೊದಲ ಮುಸ್ಲಿಂ ಮತ್ತು ದಕ್ಷಿಣ ಏಷ್ಯಾದ ಅಮೆರಿಕನ್ ಮಹಿಳೆ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.

ಡೆಮೋಕ್ರಾಟ್ ಪಕ್ಷದ 61 ವರ್ಷದ ಗಝಲಾ ಅವರು 1,465,634 (54.2%) ಮತಗಳನ್ನು ಗಳಿಸಿ, ರಿಪಬ್ಲಿಕನ್ ಅಭ್ಯರ್ಥಿ ಜಾನ್ ರೀಡ್ (1,232,242 ಮತಗಳು) ಅವರನ್ನು ಸೋಲಿಸಿದರು. ವರ್ಜೀನಿಯಾದ ಈ ಚುನಾವಣೆ ಅಮೆರಿಕಾದಾದ್ಯಂತ ಸ್ಪರ್ಧಿಸಿದ್ದ 30 ಕ್ಕೂ ಹೆಚ್ಚು ಭಾರತೀಯ-ಅಮೆರಿಕನ್ ಮತ್ತು ದಕ್ಷಿಣ ಏಷ್ಯಾದ ಅಭ್ಯರ್ಥಿಗಳ ಪೈಕಿ ಗಝಲಾ ಅವರ ಗೆಲುವು ವಿಶೇಷ ಗಮನ ಸೆಳೆದಿದೆ.

2019ರಲ್ಲಿ ವರ್ಜೀನಿಯಾ ಸೆನೆಟ್‌ಗೆ ಆಯ್ಕೆಯಾದ ಗಝಾಲಾ, ಅಲ್ಲಿ ಮೊದಲ ಮುಸ್ಲಿಂ ಮತ್ತು ದಕ್ಷಿಣ ಏಷ್ಯಾದ ಮೂಲದ ಅಮೆರಿಕನ್ ಸೆನೆಟರ್ ಆಗಿ ಸೇವೆ ಸಲ್ಲಿಸಿದ್ದರು. ಇದೀಗ ಅವರು ಮತ್ತೊಮ್ಮೆ ಇತಿಹಾಸ ನಿರ್ಮಿಸಿ ರಾಜ್ಯದ ಲೆಫ್ಟಿನೆಂಟ್ ಗವರ್ನರ್ ಹುದ್ದೆಗೂ ಏರಿದ್ದಾರೆ.

ಗಝಾಲಾ ಅವರ ಆದ್ಯತೆಗಳಲ್ಲಿ ಸಾರ್ವಜನಿಕ ಶಿಕ್ಷಣದ ಬಲಪಡಿಕೆ, ಮತದಾನದ ಹಕ್ಕುಗಳ ರಕ್ಷಣೆ, ಸಂತಾನೋತ್ಪತ್ತಿ ಸ್ವಾತಂತ್ರ್ಯ, ಬಂದೂಕು ಹಿಂಸಾಚಾರ ತಡೆ, ಪರಿಸರ ಸಂರಕ್ಷಣೆ, ವಸತಿ ಮತ್ತು ಕೈಗೆಟುಕುವ ಆರೋಗ್ಯ ಸೇವೆ ಸೇರಿದಂತೆ ಹಲವಾರು ಜನಕೇಂದ್ರೀಕೃತ ವಿಷಯಗಳು ಸೇರಿವೆ.

ಇಂಡಿಯನ್ ಅಮೆರಿಕನ್ ಇಂಪ್ಯಾಕ್ಟ್ ಫಂಡ್ ಗಝಲಾ ಅವರ ಐತಿಹಾಸಿಕ ಗೆಲುವಿಗೆ ಅಭಿನಂದನೆ ಸಲ್ಲಿಸಿದೆ. “ವಲಸಿಗರಾಗಿ, ಶಿಕ್ಷಕಿಯಾಗಿ ಹಾಗೂ ಸಮಾನತೆಯ ಹೋರಾಟಗಾರ್ತಿಯಾಗಿ ಗಝಾಲಾ ವರ್ಜೀನಿಯಾದಾದ್ಯಂತ ದುಡಿಯುವ ಕುಟುಂಬಗಳ ಪರ ಕೆಲಸ ಮಾಡಿದ್ದಾರೆ. ಅವರ ಗೆಲುವು ಪ್ರಜಾಪ್ರಭುತ್ವದ ವಿಜಯ” ಎಂದು ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಚಿಂತನ್ ಪಟೇಲ್ ಹೇಳಿದ್ದಾರೆ.

ಗಝಾಲಾ ಅವರ ಚುನಾವಣಾ ಅಭಿಯಾನಕ್ಕೆ ಸಂಸ್ಥೆಯು 1.75 ಲಕ್ಷ ಡಾಲರ್ (ಸುಮಾರು 1.45 ಕೋಟಿ ರೂಪಾಯಿ) ಸಹಾಯ ನೀಡಿತ್ತು.

ಭಾರತದ ಹೈದರಾಬಾದ್ ನಲ್ಲಿ ಜನಿಸಿದ ಗಝಾಲಾ ಅವರು ನಾಲ್ಕು ವರ್ಷದವರಿದ್ದಾಗ ತಾಯಿ ಮತ್ತು ಅಣ್ಣನೊಂದಿಗೆ ಅಮೆರಿಕಕ್ಕೆ ವಲಸೆ ಹೋದರು. ಜಾರ್ಜಿಯಾದಲ್ಲಿ ಬೆಳೆದ ಅವರು ಜಾರ್ಜಿಯಾ ಸದರ್ನ್ ವಿಶ್ವವಿದ್ಯಾಲಯದಿಂದ ಬಿಎ ಮತ್ತು ಎಮೋರಿ ವಿಶ್ವವಿದ್ಯಾಲಯದಿಂದ ಅಮೆರಿಕನ್ ಸಾಹಿತ್ಯದಲ್ಲಿ ಪಿಎಚ್‌ಡಿ ಪದವಿಗಳನ್ನು ಪಡೆದಿದ್ದಾರೆ.

1991ರಲ್ಲಿ ಪತಿ ಅಝರ್ ಅವರೊಂದಿಗೆ ರಿಚ್ಮಂಡ್ ಪ್ರದೇಶಕ್ಕೆ ಸ್ಥಳಾಂತರಗೊಂಡ ಅವರು, ಸುಮಾರು ಮೂರು ದಶಕಗಳ ಕಾಲ ಬೋಧನಾ ವೃತ್ತಿಯಲ್ಲಿ ತೊಡಗಿಕೊಂಡಿದ್ದರು. ಅವರು ರೆನಾಲ್ಡ್ಸ್ ಸಮುದಾಯ ಕಾಲೇಜಿನ ಸೆಂಟರ್ ಫಾರ್ ಎಕ್ಸಲೆನ್ಸ್ ಇನ್ ಟೀಚಿಂಗ್ ಅಂಡ್ ಲರ್ನಿಂಗ್ (CETL) ನ ಸ್ಥಾಪಕ ನಿರ್ದೇಶಕಿಯಾಗಿಯೂ ಕಾರ್ಯನಿರ್ವಹಿಸಿದ್ದರು.

2024ರಲ್ಲಿ ಅವರನ್ನು ವರ್ಜೀನಿಯಾ ಸೆನೆಟ್‌ನ ಶಿಕ್ಷಣ ಮತ್ತು ಆರೋಗ್ಯ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ವಸತಿ, ಶಿಕ್ಷಣ, ಆರೋಗ್ಯ ಹಾಗೂ ಪರಿಸರ ನ್ಯಾಯ ಕ್ಷೇತ್ರಗಳಲ್ಲಿ ಅವರು ಕೈಗೊಂಡ ಹೋರಾಟ ವರ್ಜೀನಿಯಾ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಗಝಾಲಾ ಹಶ್ಮಿಯವರ ಜಯವು ಅಮೆರಿಕಾದ ರಾಜಕೀಯದಲ್ಲಿ ಭಾರತೀಯ ಮೂಲದ ಸಮುದಾಯದ ಪ್ರಾತಿನಿಧ್ಯವನ್ನು ಮತ್ತಷ್ಟು ಬಲಪಡಿಸಿದೆ.

61 ವರ್ಷದ ಭಾರತೀಯ ಸಂಜಾತ ಘಝಲ ಹಶ್ಮಿ ಅವರು ವರ್ಜೀನಿಯಾ ನಗರದ ಪ್ರಪ್ರಥಮ ಲೆಫ್ಟಿನೆಂಟ್ ಗವರ್ನರ್ ಆಗಿ ಆಯ್ಕೆಯಾಗುವ ಮೂಲಕ, ವರ್ಜೀನಿಯಾ ರಾಜ್ಯದ ಇತಿಹಾಸದಲ್ಲೇ ಪ್ರಪ್ರಥಮ ಮುಸ್ಲಿಂ ಹಾಗೂ ದಕ್ಷಿಣ ಏಶ್ಯ ಲೆಫ್ಟಿನೆಂಟ್ ಗವರ್ನರ್ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ.

ದೀರ್ಘಕಾಲದಿಂದ ರಾಜ್ಯ ಸೆನೆಟರ್ ಆಗಿರುವ ಡೆಮಾಕ್ರಟ್ ಪಕ್ಷದ ಅಭ್ಯರ್ಥಿ ಗಝಾಲ ಹಶ್ಮಿ, 14,65,634 (ಶೇ. 54.2) ಮತಗಳನ್ನು ಪಡೆಯುವ ಮೂಲಕ, 12,32,242 ಮತಗಳನ್ನು ಪಡೆದ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಜಾನ್ ರೀಡ್ ರನ್ನು ಸೋಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News