ಕ್ಷಮೆ ಯಾಚಿಸಿ, ಇಲ್ಲವೇ 100 ಕೋಟಿ ಡಾಲರ್ ದಾವೆ ಎದುರಿಸಿ : ಬಿಬಿಸಿಗೆ ಟ್ರಂಪ್ ಎಚ್ಚರಿಕೆ
PC | timesofindia
ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಜನವರಿ 6ರ ಭಾಷಣದಲ್ಲಿ ಹೇಳಿದ್ದಾಗಿ ಪನೋರಮಾ ಸಾಕ್ಷ್ಯಚಿತ್ರದಲ್ಲಿ ಉಲ್ಲೇಖಿಸಿರುವ "ಸುಳ್ಳು, ಮಾನಹಾನಿಕರ, ಅಗೌರವಕ್ಕೆ ಕಾರಣವಾಗುವ ಮತ್ತು ಪ್ರಚೋದನಾತ್ಮಕ ಹೇಳಿಕೆಗಳ"ನ್ನು ವಾಪಾಸು ಪಡೆದು ಕ್ಷಮೆ ಯಾಚಿಸಬೇಕು. ಇಲ್ಲವೇ, 100 ಕೋಟಿ ಡಾಲರ್ ನ ದಾವೆ ಎದುರಿಸಬೇಕಾಗುತ್ತದೆ ಎಂದು ಬಿಬಿಸಿಗೆ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
ಈ ಸಂಬಂಧ ಟ್ರಂಪ್ ಕಾನೂನು ತಂಡ ಬಿಬಿಸಿಯ ಪ್ರತಿಕ್ರಿಯೆಗೆ ಶುಕ್ರವಾರದ ಗಡುವು ವಿಧಿಸಿದೆ ಎಂದು ಫೋಕ್ಸ್ ನ್ಯೂಸ್ ಹೇಳಿದೆ. ಇಬ್ಬರು ಉನ್ನತ ಅಧಿಕಾರಿಗಳ ರಾಜೀನಾಮೆಯಿಂದ ಬಿಬಿಸಿ ಈಗಾಗಲೇ ಆಘಾತ ಅನುಭವಿಸಿದೆ. ವಿವಾದ ಭುಗಿಲೇಳುತ್ತಿದ್ದಂತೆಯೇ ಬಿಬಿಸಿ ಮಹಾನಿರ್ದೇಶಕ ಟಿಮ್ ಡೇವ್ ಮತ್ತು ಬಿಬಿಸಿ ನ್ಯೂಸ್ ಮುಖ್ಯಸ್ಥ ದೆಬ್ರೋಹ್ ಟ್ರೂನೆಸ್ ರಾಜೀನಾಮೆ ನೀಡಿದ್ದಾರೆ.
2024ರ ಅ.28ರಂದು ಪ್ರಸಾರವಾದ "ಟ್ರಂಪ್: ಎ ಸೆಕೆಂಡ್ ಚಾನ್ಸ್" ಎಂಬ ಪನೋರಮಾ ಚಿತ್ರದ ತುಣುಕಿನ ಬಗ್ಗೆ ವಿವಾದ ಸೃಷ್ಟಿಯಾಗಿದೆ. ಟ್ರಂಪ್ ಬೆಂಬಲಿಗರು ನಡೆಸಿದ ಕ್ಯಾಪಿಟೋಲ್ ದಾಳಿಗೆ ಮುನ್ನ ಟ್ರಂಪ್ ಮಾಡಿದ ಭಾಷಣದ ಕಿರು ಹಾಗೂ ತಿದ್ದಿದ ಭಾಗವನ್ನು ಇಲ್ಲಿ ಉಲ್ಲೇಖಿಸಲಾಗಿದೆ. ಆ ದಿನ ಟ್ರಂಪ್ ಮಾಡಿದ ಭಾಷಣವನ್ನು ತಪ್ಪಾಗಿ ಬಿಂಬಿಸಲಾಗಿದೆ ಎನ್ನುವುದು ಟ್ರಂಪ್ ಆಪ್ತರ ಆರೋಪ. ಬಿಬಿಸಿಯ ಅವತರಣಿಕೆ ತಪ್ಪುದಾರಿಗೆ ಎಳೆಯುವಂಥದ್ದು ಎಂದು ಟ್ರಂಪ್ ಹೇಳಿದ್ದಾರೆ.
ಟ್ರಂಪ್ ಪರ ವಕೀಲರು ಈಗಾಗಲೇ ಬಿಬಿಸಿಗೆ ಕಾನೂನಾತ್ಮಕ ನೋಟಿಸ್ ನೀಡಿದ್ದಾರೆ.