ಶಂಕಿತ ಮಾನವ ಕಳ್ಳಸಾಗಣೆ ಪ್ರಕರಣ: ಫ್ರಾನ್ಸ್ ನಲ್ಲಿ ಆಶ್ರಯ ಕೋರಿದ 11 ಭಾರತೀಯರು
ಸಾಂದರ್ಭಿಕ ಚಿತ್ರ (PTI)
ಪ್ಯಾರಿಸ್: ಮಾನವ ಕಳ್ಳಸಾಗಣೆಯ ಶಂಕೆಯಲ್ಲಿ ಫ್ರಾನ್ಸ್ ನಲ್ಲಿ ನೆಲಕ್ಕಿಳಿಸಲಾದ ವಿಮಾನದಲ್ಲಿದ್ದ 303 ಭಾರತೀಯರ ಪೈಕಿ ಅಪ್ರಾಪ್ತ ವಯಸ್ಕರು ಸೇರಿದಂತೆ 11 ಮಂದಿ ಫ್ರಾನ್ಸ್ ನಲ್ಲಿ ಆಶ್ರಯ ಕೋರಿರುವುದಾಗಿ ಎಎಫ್ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.
ಯುಎಇಯಿಂದ ಮಧ್ಯ ಅಮೆರಿಕಾದ ನಿಕರಾಗುವಾಕ್ಕೆ ಪ್ರಯಾಣಿಸುತ್ತಿದ್ದ ರೊಮಾನಿಯಾದ ವಿಮಾನವನ್ನು ಪ್ಯಾರಿಸ್ ಸಮೀಪದ ವಟ್ರಿ ವಿಮಾನ ನಿಲ್ದಾಣದಲ್ಲಿ ಕೆಳಗಿಳಿಸಿದ ಎರಡು ದಿನಗಳ ಬಳಿಕ ಈ ಬೆಳವಣಿಗೆ ನಡೆದಿದೆ. ಮಾನವ ಕಳ್ಳಸಾಗಣೆ ನಡೆಯುತ್ತಿದೆ ಎಂಬ ಅನಾಮಿಕ ಮಾಹಿತಿಯ ಹಿನ್ನೆಲೆಯಲ್ಲಿ ಶುಕ್ರವಾರ ಫ್ರಾನ್ಸ್ ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದು ವಿಮಾನದಲ್ಲಿ ಅಪ್ರಾಪ್ತ ವಯಸ್ಕರ ಸಹಿತ 303 ಪ್ರಯಾಣಿಕರಿದ್ದರು ಎಂದು ಎಎಫ್ಪಿ ವರದಿ ಮಾಡಿದೆ.
ವಿಮಾನದಲ್ಲಿ 11 ಏಕಾಂಗಿ(ಜತೆಗಾರರಿಲ್ಲದ) ಅಪ್ರಾಪ್ತ ವಯಸ್ಕರಿದ್ದರು. ಇವರಲ್ಲಿ 6 ಮಂದಿ ಸೇರಿದಂತೆ ಒಟ್ಟು 11 ಮಂದಿ ಆಶ್ರಯ ಕೋರಿ ಅರ್ಜಿ ಸಲ್ಲಿಸಲು ಆಸಕ್ತಿ ತೋರಿದ್ದಾರೆ ಎಂದು ಪ್ರಯಾಣಿಕರನ್ನು ಪ್ರತಿನಿಧಿಸಲು ನೇಮಕಗೊಂಡಿರುವ ನ್ಯಾಯವಾದಿ ಅರೋರ್ ಒಪ್ರಿಚಾಲ್ ಹೇಳಿದ್ದಾರೆ. ಆಶ್ರಯ ಕೋರಿದವರ ಜತೆ ಮಾತನಾಡಿ, ಅವರು ರಾಜಕೀಯ ನಿರಾಶ್ರಿತರ ಸ್ಥಾನಮಾನಕ್ಕೆ ಅರ್ಹರೇ ಎಂಬುದನ್ನು ತಕ್ಷಣ ನಿರ್ಧರಿಸಲಾಗುವುದು. ನಾವು ವಿದೇಶೀಯರನ್ನು 96 ಗಂಟೆಗಳಿಗಿಂತ ಹೆಚ್ಚು ಸಮಯ ಕಾಯುವ ವಲಯದಲ್ಲಿ ಇರಿಸಲು ಸಾಧ್ಯವಿಲ್ಲದ ಕಾರಣ ಇದು ತುರ್ತು ಗಮನ ಹರಿಸಬೇಕಾದ ಪ್ರಕರಣವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರಯಾಣಿಕರು ಶನಿವಾರವೂ ವಿಮಾನನಿಲ್ದಾಣದ ಪ್ರವೇಶ ಹಾಲ್ ನಲ್ಲಿಯೇ ಕಳೆದಿದ್ದಾರೆ. ಅವರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಫ್ರಾನ್ಸ್ ಅಧಿಕಾರಿಗಳು ಒದಗಿಸಿಲ್ಲ. ಹಾಲ್ ನ ಗಾಜಿನ ಗೋಡೆ ಹಾಗೂ ಸಮೀಪದ ಕಟ್ಟಡಗಳಿಗೆ ಪೊಲೀಸರು ಟರ್ಪಾಲು ಹೊದಿಸಿದ್ದು ಹಾಲ್ ಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಪ್ರಯಾಣಿಕರು ಮಧ್ಯ ಅಮೆರಿಕಕ್ಕೆ ಪ್ರಯಾಣಿಸಿ ಅಲ್ಲಿಂದ ಅಕ್ರಮವಾಗಿ ಅಮೆರಿಕ ಅಥವಾ ಕೆನಡಾ ಪ್ರವೇಶಿಸುವ ಯೋಜನೆ ರೂಪಿಸಿದ್ದರು ಎಂದು ಮೂಲಗಳನ್ನು ಉಲ್ಲೇಖಿಸಿ ಎಎಫ್ಪಿ ವರದಿ ಮಾಡಿದೆ. ಶುಕ್ರವಾರದಿಂದ ಅಧಿಕಾರಿಗಳ ವಶದಲ್ಲಿರುವ ಇಬ್ಬರು ಪ್ರಯಾಣಿಕರ ಕಸ್ಟಡಿ ಅವಧಿಯನ್ನು ಶನಿವಾರ ಮತ್ತೆ 48 ಗಂಟೆಯವರೆಗೆ ವಿಸ್ತರಿಸಲಾಗಿದ್ದು ಇವರ ವಿಚಾರಣೆ ನಡೆಯುತ್ತಿದೆ. ಈ ಪ್ರಕರಣದ ಬಗ್ಗೆ ಫ್ರಾನ್ಸ್ ಸರಕಾರದೊಂದಿಗೆ ಸಂಪರ್ಕದಲ್ಲಿದ್ದು ವಿಮಾನದಲ್ಲಿದ್ದ ಪ್ರಯಾಣಿಕರಿಗೆ ಕಾನ್ಸುಲರ್ ಸಂಪರ್ಕ ಸೌಲಭ್ಯ ಒದಗಿಸಿರುವುದಾಗಿ ಪ್ಯಾರಿಸ್ ನಲ್ಲಿನ ಭಾರತದ ರಾಯಭಾರಿ ಕಚೇರಿ ಹೇಳಿದೆ.
ವಿಮಾನ ನಿಲ್ದಾಣದಲ್ಲಿ ಭಾರತ ದೂತಾವಾಸದ ಸಿಬಂದಿ ನಿಯೋಜನೆ
ಸಮಸ್ಯೆಯನ್ನು ಸಾಧ್ಯವಾದಷ್ಟು ಬೇಗ ಪರಿಹರಿಸುವ ನಿಟ್ಟಿನಲ್ಲಿ ಫ್ರಾನ್ಸ್ ನಲ್ಲಿನ ಭಾರತದ ರಾಯಭಾರಿ ಕಚೇರಿ ಫ್ರಾನ್ಸ್ ಅಧಿಕಾರಿಗಳ ಜತೆ ಉನ್ನತ ಮಟ್ಟದ ಸಭೆಯಲ್ಲಿ ನಿರತವಾಗಿದೆ. ವಿಮಾನದಲ್ಲಿರುವ ಎಲ್ಲಾ 303 ಪ್ರಯಾಣಿಕರಿಗೂ ಕಾನ್ಸುಲರ್ ಸಂಪರ್ಕ ಸೌಲಭ್ಯ ಒದಗಿಸಲಾಗಿದ್ದು ಅವರ ಯೋಗಕ್ಷೇಮದ ಬಗ್ಗೆ ಗಮನ ಹರಿಸಲಾಗಿದೆ.
ನಿಲ್ದಾಣದ ಪ್ರವೇಶ ಹಾಲ್ ನಲ್ಲಿರುವ ಪ್ರಯಾಣಿಕರಿಗೆ ತುರ್ತು ಸೇವೆ, ತಾತ್ಕಾಲಿಕ ಮಲಗುವ ವ್ಯವಸ್ಥೆ, ಊಟ, ಬೆಚ್ಚಗಿನ ಪಾನೀಯ, ವಿಶ್ರಾಂತಿಗೆ ವ್ಯವಸ್ಥೆ ಮಾಡಲಾಗಿದೆ ಎಂದು ರಾಯಭಾರ ಕಚೇರಿ ಹೇಳಿದೆ.
ಇಂದು ಬಿಡುಗಡೆ ಸಾಧ್ಯತೆ
ಮಾನವ ಕಳ್ಳಸಾಗಣೆಯ ಶಂಕೆಯಲ್ಲಿ ವಶಕ್ಕೆ ಪಡೆಯಲಾದ ಸುಮಾರು 11 minors among 303 Indian passengers on flight grounded by France: Report
ಭಾರತೀಯರು ಸೋಮವಾರ ತಮ್ಮ ಪ್ರಯಾಣ ಮುಂದುವರಿಸುವ ಸಾಧ್ಯತೆಯಿದೆ ಎಂದು ಫ್ರಾನ್ಸ್ ನ ನ್ಯಾಯಾಂಗ ಮೂಲಗಳು ಹೇಳಿವೆ.
ಈ ಪ್ರಯಾಣಿಕರನ್ನು ನಾಲ್ಕು ನ್ಯಾಯಾಧೀಶರು ರವಿವಾರ ವಿಚಾರಣೆ ನಡೆಸಿದ್ದು, ಪ್ರಯಾಣದ ಉದ್ದೇಶದ ಬಗ್ಗೆ ಅವರಿಂದ ಮಾಹಿತಿ ಪಡೆದಿದ್ದಾರೆ. ನ್ಯಾಯಾಧೀಶರಿಗೆ ಬಂಧನವನ್ನು ವಿಸ್ತರಿಸುವ ಅಧಿಕಾರವಿದ್ದರೂ, ಈ ಪ್ರಯಾಣಿಕರ ನಿರ್ಗಮನಕ್ಕೆ ಸೋಮವಾರ ಬೆಳಿಗ್ಗೆ `ಕ್ಲಿಯರೆನ್ಸ್' ಸಿಗುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ.