×
Ad

ಉಕ್ರೇನ್ ಮೇಲೆ ರಶ್ಯದ ಕ್ಷಿಪಣಿ ಮಳೆ ಒಂದೇ ದಿನ 122 ಕ್ಷಿಪಣಿ, 36 ಡ್ರೋನ್ ದಾಳಿ

Update: 2023-12-29 22:17 IST

Photo: @JayinKyiv\ X

ಕೀವ್: ಗುರುವಾರ ರಶ್ಯವು ಉಕ್ರೇನ್ ವಿರುದ್ಧ ಕ್ಷಿಪಣಿಗಳ ಮಳೆಗರೆದಿದ್ದು ಉಕ್ರೇನ್ ನೆಲೆಗಳನ್ನು ಗುರಿಯಾಗಿಸಿ 122 ಕ್ಷಿಪಣಿಗಳು ಹಾಗೂ 36 ಡ್ರೋನ್‍ಗಳ ಮೂಲಕ ನಡೆಸಿದ ದಾಳಿಯಲ್ಲಿ ಕನಿಷ್ಟ 20 ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ಹೇಳಿದ್ದಾರೆ.

2022ರ ಫೆಬ್ರವರಿಯಲ್ಲಿ ಆರಂಭಗೊಂಡ ಯುದ್ಧದಲ್ಲಿ ಇದು ರಶ್ಯ ನಡೆಸಿದ ಅತೀ ದೊಡ್ಡ ವೈಮಾನಿಕ ದಾಳಿಯಾಗಿದೆ. ಉಕ್ರೇನ್‍ನ ವಾಯುಪಡೆ ಹಲವು ಬ್ಯಾಲಿಸ್ಟಿಕ್ ಕ್ಷಿಪಣಿ ಹಾಗೂ ಡ್ರೋನ್‍ಗಳನ್ನು ಹೊಡೆದುರುಳಿಸಿದೆ. 18 ಗಂಟೆ ನಿರಂತರ ನಡೆದ ದಾಳಿಯಲ್ಲಿ ಕನಿಷ್ಟ 88 ಮಂದಿ ಗಾಯಗೊಂಡಿದ್ದು ಕುಸಿದುಬಿದ್ದ ಕಟ್ಟಡದ ಅವಶೇಷಗಳಡಿ ಹಲವರು ಸಿಲುಕಿರುವ ಮಾಹಿತಿಯಿದೆ. ಶಾಲೆ, ಹೆರಿಗೆ ಆಸ್ಪತ್ರೆ ಹಾಗೂ ಜನವಸತಿ ಕಟ್ಟಡಗಳಿಗೆ ಹಾನಿಯಾಗಿದೆ ಎಂದು ಉಕ್ರೇನ್ ಮಿಲಿಟರಿ ಮುಖ್ಯಸ್ಥ ವ್ಯಲೇರಿ ಝಲುಜ್ನಿಯನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

ರಶ್ಯ ತನ್ನ ಬತ್ತಳಿಕೆಯಲ್ಲಿರುವ ಬಹುತೇಕ ಎಲ್ಲಾ ವಿಧದ ಶಸ್ತ್ರಗಳನ್ನು ಇವತ್ತು ಪ್ರಯೋಗಿಸಿದೆ. ಗುರುವಾರ ರಾಜಧಾನಿ ಕೀವ್ ಸೇರಿದಂತೆ 6 ನಗರಗಳು ದಾಳಿಯ ಗುರಿಯಾಗಿತ್ತು. ದೇಶದಾದ್ಯಂತ ಸಾವು-ನೋವು, ನಾಶ-ನಷ್ಟದ ವರದಿ ಬರುತ್ತಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್‍ಸ್ಕಿ ಹೇಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ವೈಮಾನಿಕ ದಾಳಿಯನ್ನು ಕಡಿಮೆಗೊಳಿಸಿದ್ದ ರಶ್ಯ, ತನ್ನ ಶಸ್ತ್ರಾಸ್ತ್ರಗಳನ್ನು ಚಳಿಗಾಲಕ್ಕೆ ಸಂಗ್ರಹಿಸಿಟ್ಟುಕೊಂಡಿದೆ. ಚಳಿಗಾಲದಲ್ಲಿ ದಾಳಿ ಹೆಚ್ಚಿಸುವ ಮೂಲಕ ಉಕ್ರೇನ್ ಅನ್ನು ಕಂಗೆಡಿಸುವ ತಂತ್ರ ಬಳಸುತ್ತಿದೆ ಎಂದು ಪಾಶ್ಚಿಮಾತ್ಯ ಮುಖಂಡರು ಕಳೆದ ವಾರ ಅಭಿಪ್ರಾಯಪಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News