×
Ad

ಸುಡಾನ್‌ನಲ್ಲಿ ಕಾಲರಾದಿಂದ 3 ತಿಂಗಳಲ್ಲಿ 158 ಮೃತ್ಯು : ವರದಿ

Update: 2025-08-25 22:15 IST

Photo | aa.com.tr

ಖಾರ್ಟಮ್, ಆ.25: ಸುಡಾನ್‍ ನ ದಕ್ಷಿಣ ದಾರ್ಫರ್‍ ನಲ್ಲಿ ಮೇ ತಿಂಗಳಾಂತ್ಯದಿಂದ ಕಾಲರಾ ರೋಗದಿಂದ ಕನಿಷ್ಠ 158 ಸಾವು ಸಂಭವಿಸಿದೆ ಎಂದು ಅರೆ ಸೇನಾಪಡೆಯ ನಿಯಂತ್ರಣದಲ್ಲಿರುವ ದಕ್ಷಿಣ ದಾರ್ಫರ್ ಸರಕಾರದ ಆರೋಗ್ಯ ಸಚಿವಾಲಯ ಹೇಳಿದೆ.

ಸುಡಾನ್‍ನಲ್ಲಿ ಸೇನೆ ಮತ್ತು ಅರೆ ಸೇನಾಪಡೆಯ ನಡುವೆ ಎರಡು ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ಸಂಘರ್ಷ ಮುಂದುವರಿದಿದ್ದು ದಾರ್ಫರ್‍ನ ಹೆಚ್ಚಿನ ಭಾಗ ಅರೆ ಸೇನಾಪಡೆಯ ನಿಯಂತ್ರಣದಲ್ಲಿದೆ ಮತ್ತು ಈ ಪ್ರದೇಶಕ್ಕೆ ತುರ್ತು ನೆರವು ಪೂರೈಕೆಯಾಗುತ್ತಿಲ್ಲ. ಸೇನೆಯ ವಶದಲ್ಲಿರುವ ಉತ್ತರ ದಾರ್ಫರ್‍ ನ ರಾಜಧಾನಿ ಎಲ್-ಫಾಶರ್ ಕಳೆದ ವರ್ಷದ ಮೇ ತಿಂಗಳಿಂದ ಅರೆ ಸೇನಾಪಡೆಯ ಮುತ್ತಿಗೆಗೆ ಒಳಗಾಗಿದ್ದು ನಗರದೊಳಗೆ ಸಿಕ್ಕಿಬಿದ್ದಿರುವ ನಾಗರಿಕರ ಪರಿಸ್ಥಿತಿ ಭಯಾನಕವಾಗಿದೆ ಎಂದು ವಿಶ್ವಸಂಸ್ಥೆ ಏಜೆನ್ಸಿಗಳು ಹೇಳಿವೆ.

ಮೇ ತಿಂಗಳಾಂತ್ಯದಲ್ಲಿ ದಕ್ಷಿಣ ದಾರ್ಫರ್‍ ನಲ್ಲಿ ಮೊದಲ ಕಾಲರಾ ಪ್ರಕರಣ ದಾಖಲಾದಂದಿನಿಂದ ಪ್ರಾಂತದ ಐದೂ ರಾಜಧಾನಿಗಳಲ್ಲಿ ಕಾಲರಾ ಪ್ರಕರಣ ವರದಿಯಾಗಿದೆ. ಇದುವರೆಗೆ 2,880 ಕಾಲರಾ ಪ್ರಕರಣ ದಾಖಲಾಗಿದ್ದು ಇದರಲ್ಲಿ 158 ಸಾವು ಸಂಭವಿಸಿದೆ. ದಾರ್ಫರ್‍ನಲ್ಲಿ ಕಾಲರಾ ಉಲ್ಬಣಿಸಿದ್ದು ನೆರೆಯ ದಕ್ಷಿಣ ಸುಡಾನ್ ಮತ್ತು ಚಾಡ್ ದೇಶಗಳಿಗೆ ಹರಡುವ ಅಪಾಯವಿದೆ. ಯುದ್ಧದ ಕಾರಣ ನಾಗರಿಕರ ಸಾಮೂಹಿಕ ಸ್ಥಳಾಂತರ ಹೆಚ್ಚಿರುವುದು ಮತ್ತು ನಾಗರಿಕರಿಗೆ ಶುದ್ಧ ಕುಡಿಯುವ ನೀರಿನ ಕೊರತೆಯು ದಾರ್ಫರ್‍ ನಲ್ಲಿ ಕಾಲರಾ ಕ್ಷಿಪ್ರಗತಿಯಲ್ಲಿ ಹರಡಲು ಪ್ರಮುಖ ಕಾರಣ ಎಂದು ಸರ್ಕಾರೇತರ ಸಂಸ್ಥೆ (ಎನ್‍ಜಿಒ) `ಡಾಕ್ಟರ್ಸ್ ವಿದೌಟ್ ಬಾರ್ಡರ್ಸ್' ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News