ಗಾಝಾದ ವಸತಿ ಕಟ್ಟಡದ ಮೇಲೆ ಇಸ್ರೇಲ್ ದಾಳಿ; ಕಳೆದ 24 ಗಂಟೆಗಳಲ್ಲಿ 266 ಫೆಲೆಸ್ತೀನೀಯರು ಮೃತ್ಯು
Update: 2023-10-23 12:46 IST
Photo: PTI
ಗಾಝಾ ಸಿಟಿ: ಗಾಝಾದ ಜಬಾಲಿಯಾ ನಿರಾಶ್ರಿತರ ಶಿಬಿರ ಇರುವ ಅಲ್-ಶಹುದಾ ಪ್ರದೇಶದ ವಸತಿ ಕಟ್ಟಡವೊಂದರ ಮೇಲೆ ಇಸ್ರೇಲ್ ವಾಯು ದಾಳಿಯಿಂದಾಗಿ ಕನಿಷ್ಠ 30 ಫೆಲೆಸ್ತೀನೀಯರು ಮೃತಪಟ್ಟಿದ್ದಾರೆ. ಈ ದಾಳಿಯಿಂದಾಗಿ ಕಟ್ಟಡ ನೆಲಸಮಗೊಂಡಿದ್ದೇ ಅಲ್ಲದೆ ಹತ್ತಿರದ ಮನೆಗಳೂ ನಾಶವಾಗಿವೆ.
ಗಾಝಾ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ ಕಳೆದ 24 ಗಂಟೆಗಳ ಅವಧಿಯಲ್ಲಿ ಇಸ್ರೇಲಿ ವಾಯು ದಾಳಿಗಳಿಗೆ 117 ಮಕ್ಕಳ ಸಹಿತ 266 ಫೆಲೆಸ್ತೀನೀಯರು ಬಲಿಯಾಗಿದ್ದಾರೆ.
ಗಾಝಾ ಅಧಿಕಾರಿಗಳ ಪ್ರಕಾರ ಅಕ್ಟೋಬರ್ 7ರಂದು ಆರಂಭಗೊಂಡ ಇಸ್ರೇಲ್ ದಾಳಿಗಳಿಂದಾಗಿ ಇಲ್ಲಿಯ ತನಕ ಕನಿಷ್ಠ 4,600 ಜನರು ಮೃತಪಟ್ಟಿದ್ದಾರೆ.
ಸೋಮವಾರ ಮುಂಜಾನೆ ಲೆಬನಾನ್‌ನಲ್ಲಿ ಎರಡು ಹಿಜ್ಬುಲ್ಲಾ ಶಿಬಿರಗಳ ಮೇಲೆ ದಾಳಿ ನಡೆಸಿದ್ದಾಗಿ ಇಸ್ರೇಲ್ ತಿಳಿಸಿದೆ. ಇಸ್ರೇಲ್‌ನತ್ತ ಹಿಜ್ಬುಲ್ಲಾ ಘಟಕಗಳು ಕ್ಷಿಪಣಿ ದಾಳಿ ನಡೆಸುವ ಸಾಧ್ಯತೆಯನ್ನು ಅರಿತು ಈ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ಹೇಳಿದೆ.