ಉತ್ತರ ಗಾಝಾಕ್ಕೆ 3,76,000 ಫೆಲೆಸ್ತೀನೀಯರ ವಾಪಸಾತಿ: ವಿಶ್ವಸಂಸ್ಥೆ ವರದಿ
PC : NDTV
ವಿಶ್ವಸಂಸ್ಥೆ: ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧದಿಂದ ಸ್ಥಳಾಂತರಗೊಂಡ 3,76,000ಕ್ಕೂ ಅಧಿಕ ಫೆಲೆಸ್ತೀನೀಯರು 2 ದಿನದಲ್ಲಿ ಉತ್ತರ ಗಾಝಾಕ್ಕೆ ಮರಳಿದ್ದಾರೆ ಎಂದು ಮಾನವೀಯ ವ್ಯವಹಾಗಳಿಗೆ ಸಂಬಂಧಿಸಿದ ವಿಶ್ವಸಂಸ್ಥೆಯ ಏಜೆನ್ಸಿ ಒಸಿಎಚ್‍ಎ ಮಂಗಳವಾರ ಹೇಳಿದೆ.
`ನೆಟ್‍ಝರಿಮ್ ಕಾರಿಡಾರ್ ಅನ್ನು ಸಂಪರ್ಕಿಸುವ ಎರಡು ಪ್ರಮುಖ ರಸ್ತೆಗಳಿಂದ ಇಸ್ರೇಲಿ ಪಡೆಗಳು ಹಿಂದೆ ಸರಿದ ಬಳಿಕ 3,76,000ಕ್ಕೂ ಅಧಿಕ ಮಂದಿ ಉತ್ತರ ಗಾಝಾದ ತಮ್ಮ ಮೂಲ ಸ್ಥಾನಗಳಿಗೆ ಆಗಮಿಸಿದ್ದಾರೆ ಎಂದು ಒಸಿಎಚ್‍ಎ ಹೇಳಿಕೆ ತಿಳಿಸಿದೆ.
ಸುಮಾರು 15 ತಿಂಗಳ ಬಳಿಕ ಹುಟ್ಟಿದೂರಿಗೆ ಮರಳುವುದು ವಿಶಿಷ್ಟ ಅನುಭವವಾಗಿದೆ. ಆದರೆ ನಮ್ಮಲ್ಲಿ ಬಹುತೇಕ ಎಲ್ಲರೂ 15 ತಿಂಗಳ ಯುದ್ಧದಲ್ಲಿ ತಮ್ಮ ಕುಟುಂಬದ ಸದಸ್ಯರು ಅಥವಾ ಬಂಧುಗಳನ್ನು ಕಳೆದುಕೊಂಡ ಸಂಕಟದಲ್ಲಿದ್ದೇವೆ. ಉತ್ತರ ಗಾಝಾದಲ್ಲಿ ನಾವು ಬಿಟ್ಟುಬಂದ ಮನೆ, ಆಸ್ತಿಗಳು ಸಂಪೂರ್ಣ ನಾಶಗೊಂಡಿರುವ ವರದಿಯಿಂದ ಕಳವಳಗೊಂಡಿರುವುದಾಗಿ ಹಲವು ಫೆಲೆಸ್ತೀನೀಯರು ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ಖತರ್, ಈಜಿಪ್ಟ್ ಮತ್ತು ಅಮೆರಿಕದ ಮಧ್ಯಸ್ಥಿಕೆಯಲ್ಲಿ ಸಹಿ ಹಾಕಲಾದ ಕದನ ವಿರಾಮ ಒಪ್ಪಂದವು ಯುದ್ಧವನ್ನು ಅಂತ್ಯಗೊಳಿಸುವ ಮತ್ತು ಗಾಝಾದಲ್ಲಿ ಒತ್ತೆಸೆರೆಯಲ್ಲಿರುವರು ಹಾಗೂ ಇಸ್ರೇಲ್ ವಶದಲ್ಲಿರುವ ನೂರಾರು ಫೆಲೆಸ್ತೀನೀಯರನ್ನು ಬಂಧಮುಕ್ತಗೊಳಿಸುವ ಉದ್ದೇಶ ಹೊಂದಿದೆ. ಈ ಮಧ್ಯೆ , ಆಕ್ರಮಿತ ಪಶ್ಚಿಮದಂಡೆ ಮತ್ತು ಪೂರ್ವ ಜೆರುಸಲೇಂನಲ್ಲಿ ` ಫೆಲೆಸ್ತೀನೀಯನ್ ನಿರಾಶ್ರಿತರಿಗೆ ಸಂಬಂಧಿಸಿದ ವಿಶ್ವಸಂಸ್ಥೆಯ ನೆರವು ಏಜೆನ್ಸಿ(ಯುಎನ್‍ಆರ್‍ಡಬ್ಲ್ಯೂಎ)ಯ' ಕಾರ್ಯಾಚರಣೆಯನ್ನು ರದ್ದುಗೊಳಿಸುವ ಇಸ್ರೇಲ್ ಪಾರ್ಲಿಮೆಂಟ್‍ನ ನಿರ್ಧಾರದ ಬಗ್ಗೆ ಹಲವಾರು ದೇಶಗಳು ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ತೀವ್ರ ಕಳವಳ ವ್ಯಕ್ತಪಡಿಸಿವೆ.
ಇಸ್ರೇಲ್ ಮತ್ತು ಯುಎನ್‍ಆರ್‍ಡಬ್ಲ್ಯೂಎ ನಡುವಿನ 1967ರ ಒಪ್ಪಂದದಿಂದ ಹಿಂದೆ ಸರಿಯುವ ಇಸ್ರೇಲ್‍ನ ನಿರ್ಧಾರ ಮತ್ತು ವಿಶ್ವಸಂಸ್ಥೆ ಸಾಮಾನ್ಯ ಸಭೆ ವಹಿಸಿದ ಜವಾಬ್ದಾರಿಯನ್ನು ನಿರ್ವಹಿಸುವ ಏಜೆನ್ಸಿಯ ಸಾಮಥ್ರ್ಯಕ್ಕೆ ತಡೆಯೊಡ್ಡುವ ಯಾವುದೇ ಪ್ರಯತ್ನವನ್ನು ಖಂಡಿಸುವುದಾಗಿ ಬೆಲ್ಜಿಯಂ, ಐರ್ಲೆಂಡ್, ಲಕ್ಸೆಂಬರ್ಗ್, ಮಾಲ್ಟಾ, ನಾರ್ವೆ, ಸ್ಲೊವೇನಿಯಾ ಮತ್ತು ಸ್ಪೇನ್ ಜಂಟಿ ಹೇಳಿಕೆಯಲ್ಲಿ ತಿಳಿಸಿವೆ.
ಈ ನಿಷೇಧವು ಆಕ್ರಮಿತ ಫೆಲೆಸ್ತೀನಿಯನ್ ಪ್ರದೇಶದಲ್ಲಿ ನಿರ್ಣಾಯಕ ಕ್ಷಣದಲ್ಲಿ ಅಸ್ಥಿರತೆಯನ್ನು ಹೆಚ್ಚಿಸುತ್ತದೆ ಮತ್ತು ಹತಾಶೆಯನ್ನು ಗಾಢವಾಗಿಸುತ್ತದೆ ಎಂದು ಯುಎನ್‍ಆರ್‍ಡಬ್ಲ್ಯೂಎ ಪ್ರಧಾನ ಕಮಿಷನರ್ ಫಿಲಿಪ್ ಲಝಾರಿನಿ ಮಂಗಳವಾರ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಸಭೆಯಲ್ಲಿ ಹೇಳಿದ್ದಾರೆ. ಗಾಝಾದಾದ್ಯಂತ 13,000 ಸಿಬ್ಬಂದಿಗಳನ್ನು ಹೊಂದಿರುವ ಮತ್ತು 300 ಕಚೇರಿಗಳನ್ನು ಹೊಂದಿರುವ ಯುಎನ್‍ಆರ್‍ಡಬ್ಯ್ಲೂಎ ಅನೇಕ ಫೆಲೆಸ್ತೀನೀಯರಿಗೆ ಜೀವನದ ಒಂದು ಮೂಲಾಧಾರವಾಗಿದೆ.