ಕಾಂಬೋಡಿಯಾ | ಡಾಟಾ ಎಂಟ್ರಿ ಉದ್ಯೋಗಕ್ಕೆ ತೆರಳಿ ಒತ್ತಾಯಪೂರ್ವಕವಾಗಿ ಸೈಬರ್ ಜೀತಗಾರಿಕೆ ನಡೆಸುತ್ತಿರುವ 5000 ಭಾರತೀಯರು

Update: 2024-03-29 07:09 GMT

Photo: indianexpress.com

ಹೊಸದಿಲ್ಲಿ: ಕಾಂಬೋಡಿಯಾದಲ್ಲಿ ಸುಮಾರು 5,000ಕ್ಕೂ ಹೆಚ್ಚು ಮಂದಿ ಭಾರತೀಯರು ಸಿಲುಕಿ ಹಾಕಿಕೊಂಡಿದ್ದು, ತಮ್ಮ ಇಚ್ಛೆಗೆ ವಿರುದ್ಧವಾಗಿ ಮತ್ತು ಒತ್ತಾಯಪೂರ್ವಕವಾಗಿ ತವರಿನ ಜನರಿಗೆ ಸೈಬರ್ ವಂಚನೆ ಎಸಗುವಂತೆ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಕಳೆದ ಆರು ತಿಂಗಳಲ್ಲಿ ವಂಚಕರು ಭಾರತದಲ್ಲಿನ ಜನರಿಗೆ ಕನಿಷ್ಠ ಪಕ್ಷ ರೂ. 500 ಕೋಟಿ ವಂಚಿಸಿದ್ದಾರೆ ಎಂದು ಸರಕಾರ ಅಂದಾಜಿಸಿದೆ.

ಈ ತಿಂಗಳ ಆರಂಭದಲ್ಲಿ ಕಾಂಬೋಡಿಯಾದಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ರಕ್ಷಿಸಲು ವ್ಯೂಹತಂತ್ರವೊಂದನ್ನು ಹೆಣೆಯಲು ಗೃಹ ಸಚಿವಾಲಯವು ವಿದೇಶಾಂಗ ವ್ಯವಹಾರಗಳ ಸಚಿವಾಲಯ, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ, ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ (I4C) ಹಾಗೂ ಇನ್ನಿತರ ರಕ್ಷಣಾ ತಜ್ಞರೊಂದಿಗೆ ಸಭೆ ನಡೆಸಿತ್ತು.

“ಅವರ ಸಭೆಯ ಕಾರ್ಯಸೂಚಿಯು ಸಂಘಟಿತ ಜಾಲ ಹಾಗೂ ಅದರಲ್ಲಿ ಸಿಲುಕಿಕೊಂಡಿರುವವರನ್ನು ಮರಳಿ ತರುವ ಕುರಿತಾಗಿತ್ತು. ಕಾಂಬೋಡಿಯಾ ಮೂಲದಿಂದ ನಡೆಯುತ್ತಿರುವ ಸೈಬರ್ ಅಪರಾಧದಿಂದ ಕಳೆದ ಆರು ತಿಂಗಳಲ್ಲಿ ಭಾರತೀಯರು ರೂ. 500 ಕೋಟಿ ನಷ್ಟ ಅನುಭವಿಸಿದ್ದಾರೆ ಎಂದು ದತ್ತಾಂಶಗಳು ಹೇಳುತ್ತಿವೆ” ಎಂದು ಮೂಲಗಳು ತಿಳಿಸಿದ್ದು, ಏಜೆಂಟ್ ಗಳ ಜನರನ್ನು, ಬಹುತೇಕ ದೇಶದ ದಕ್ಷಿಣ ಭಾಗದ ಜನರನ್ನು ಬಲೆಗೆ ಕೆಡವಿಕೊಳ್ಳುತ್ತಿದ್ದು, ಅವರನ್ನೆಲ್ಲ ಡಾಟಾ ಎಂಟ್ರಿ ಉದ್ಯೋಗದ ನೆಪದಲ್ಲಿ ಕಾಂಬೋಡಿಯಾಗೆ ರವಾನಿಸುತ್ತಿದ್ದಾರೆ. ಅಲ್ಲಿ ಅವರನ್ನು ಸೈಬರ್ ವಂಚನೆಗೆ ಒತ್ತಾಯಪೂರ್ವಕವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದೂ ಹೇಳಿವೆ.

ಕಾಂಬೋಡಿಯಾದಲ್ಲಿ ಸಿಲುಕೊಂಡಿರುವವರನ್ನು ಒತ್ತಾಯಪೂರ್ವಕವಾಗಿ ಭಾರತದಲ್ಲಿನ ಜನರಿಗೆ ವಂಚಿಸಲು ಬಳಸಿಕೊಳ್ಳಲಾಗುತ್ತಿದ್ದು, ಕೆಲವು ಪ್ರಕರಣಗಳಲ್ಲಿ ಪಾರ್ಸೆಲ್ ಗಳಲ್ಲಿ ನಾವು ಕೆಲವು ಸಂಶಯಾಸ್ಪದ ವಸ್ತುಗಳನ್ನು ಪತ್ತೆ ಹಚ್ಚಿದ್ದೇವೆ ಎಂದು ಕಾನೂನು ಜಾರಿ ಪ್ರಾಧಿಕಾರದ ಅಧಿಕಾರಿಗಳ ಸೋಗಿನಲ್ಲಿ ಜನರನ್ನು ಸುಲಿಯಲೂ ಬಳಸಿಕೊಳ್ಳಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಈವರೆಗೆ ಕಾಂಬೋಡಿಯಾದಲ್ಲಿ ಸಿಲುಕಿಕೊಂಡಿದ್ದ ಮೂವರು ಬೆಂಗಳೂರು ನಿವಾಸಿಗಳನ್ನು ಮರಳಿ ಭಾರತಕ್ಕೆ ಕರೆ ತರಲಾಗಿದೆ.

ಕಳೆದ ವರ್ಷ ಡಿಸೆಂಬರ್ 30ರಂದು ಒಡಿಶಾದಲ್ಲಿನ ರೂರ್ಕೆಲಾ ಪೊಲೀಸರು ಸೈಬರ್ ಅಪರಾಧ ಗುಂಪನ್ನು ಭೇದಿಸಿದ ನಂತರ ಈ ವಿಷಯ ಬೆಳಕಿಗೆ ಬಂದಿದ್ದು, ಕಾಂಬೋಡಿಯಾಗೆ ಜನರನ್ನು ಸಾಗಿಸುವ ಕೃತ್ಯದಲ್ಲಿ ಭಾಗಿಯಾಗಿದ್ದ ಆರೋಪದಲ್ಲಿ ಎಂಟು ಮಂದಿಯನ್ನು ಬಂಧಿಸಲಾಗಿತ್ತು.

ರೂರ್ಕೆಲಾ ಪೊಲೀಸರ ಕಾರ್ಯಾಚರಣೆಯ ಬಗ್ಗೆ ಮಾಹಿತಿಗಳನ್ನು ಹಂಚಿಕೊಂಡಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, ಈ ವಿಷಯವನ್ನು ಹಿರಿಯ ಕೇಂದ್ರ ಸರಕಾರಿ ಅಧಿಕಾರಿಯೊಬ್ಬರು ತನಗೆ ರೂ. 70 ಲಕ್ಷ ವಂಚಿಸಲಾಗಿದೆ ಎಂದು ದೂರು ನೀಡಿದ ನಂತರ ಭೇದಿಸಲಾಯಿತು ಎಂದು ತಿಳಿಸಿದ್ದಾರೆ. “ದೇಶದ ವಿವಿಧ ಭಾಗಗಳಿಂದ ನಾವು ಎಂಟು ಮಂದಿಯನ್ನು ಬಂಧಿಸಿದ್ದು, ವಂಚನೆಯಲ್ಲಿ ಹಲವಾರು ಮಂದಿ ಭಾಗಿಯಾಗಿರುವ ಕುರಿತು ನಮ್ಮ ಬಳಿ ಮೇಲ್ನೋಟದ ಸಾಕ್ಷಿಗಳಿವೆ. ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಕಾಂಬೋಡಿಯಾದಿಂದ ಮರಳಿದ್ದ ಹರೀಶ್ ಕುರಪತಿ ಹಾಗೂ ನಾಗ ವೆಂಕಟ ಸೌಜನ್ಯ ಕುರಪತಿ ಅವರನ್ನು ವಲಸೆ ದಳವು ವಶಕ್ಕೆ ಪಡೆದ ನಂತರ ನಾವು 16 ಮಂದಿಯ ವಿರುದ್ಧ ಲುಕ್ ಔಟ್ ಸುತ್ತೋಲೆಗಳನ್ನು ಹೊರಡಿಸಿದ್ದೇವೆ” ಎಂದು ಅವರು ಮಾಹಿತಿ ನೀಡಿದ್ದಾರೆ.

ಕಾಂಬೋಡಿಯಾದಲ್ಲಿ ಸಿಲುಕಿಕೊಂಡಿದ್ದ ಮೂವರು ಕರ್ನಾಟಕದ ನಿವಾಸಿಗಳನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ನೆರವಿನಿಂದ ರಕ್ಷಿಸಲಾಗಿದೆ ಎಂದು ಕರ್ನಾಟಕ ಸರಕಾರದ ಅನಿವಾಸಿ ಭಾರತೀಯರ ವೇದಿಕೆಯ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ ಹೇಳುತ್ತಾರೆ. “ನಮ್ಮ ಸಂಘಟನೆಯನ್ನು ಅವರ ಕುಟುಂಬದ ಸದಸ್ಯರು ಎದುರುಗೊಂಡು, ನಮ್ಮ ಮಕ್ಕಳು ಡಾಟಾ ಎಂಟ್ರಿ ಆಪರೇಟರ್ ಉದ್ಯೋಗ ಮಾಡಲು ತೆರಳಿದ್ದರು. ಆದರೆ, ಅವರನ್ನು ಒತ್ತಾಯಪೂರ್ವಕವಾಗಿ ಸೈಬರ್ ಅಪರಾಧವೆಸಗಲು ಬಳಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು. ನಮ್ಮ ಸಂಘಟನೆಯು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹಾಗೂ ಕಾಂಬೋಡಿಯಾದಲ್ಲಿನ ಭಾರತೀಯ ರಾಯಭಾರ ಕಚೇರಿಯೊಂದಿಗೆ ಸಮನ್ವಯ ಸಾಧಿಸಿ, ಅವರನ್ನು ಮರಳಿ ಭಾರತಕ್ಕೆ ಕರೆ ತಂದಿತು” ಎಂದು ಅವರು ಹೇಳಿದ್ದಾರೆ. ಕಾಂಬೋಡಿಯಾಕ್ಕೆ ಕರ್ನಾಟಕದಿಂದ ತೆರಳಿರುವ ಸುಮಾರು 200 ಮಂದಿ ಅಲ್ಲಿ ಸಿಲುಕಿಕೊಂಡಿದ್ದಾರೆ ಎಂದು ರಕ್ಷಿಸಲ್ಪಟ್ಟ ಯುವಕರು ನಮಗೆ ತಿಳಿಸಿದರು ಎಂದೂ ಅವರು ಹೇಳಿದ್ದಾರೆ.

ರಕ್ಷಿಸಲ್ಪಟ್ಟ ಯುವಕರ ಪೈಕಿ ಸ್ಟೀಫನ್ ಎಂಬ ಯುವಕನ ಪ್ರಕಾರ, “ಮಂಗಳೂರಿನಲ್ಲಿರುವ ಏಜೆಂಟ್ ಒಬ್ಬ ನನಗೆ ಕಾಂಬೋಡಿಯಾದಲ್ಲಿ ಡಾಟಾ ಎಂಟ್ರಿ ಉದ್ಯೋಗ ಇರುವುದಾಗಿ ಆಹ್ವಾನ ನೀಡಿದ. ನಾನು ಡಿಪ್ಲೊಮಾ ಪದವೀಧರನಾಗಿದ್ದು, ಕೋವಿಡ್ ಅವಧಿಯಲ್ಲಿ ಸ್ವಲ್ಪ ಕಂಪ್ಯೂಟರ್ ಕೋರ್ಸ್ ಗಳನ್ನು ಕಲಿತಿದ್ದೆ. ಅಲ್ಲಿ ಆಂಧ್ರದ ಬಾಬು ರಾವ್ ಸೇರಿದಂತೆ ನಾವು ಒಟ್ಟು ಮೂರು ಮಂದಿಯಿದ್ದೆವು. ವಲಸೆ ಪ್ರಾಧಿಕಾರದ ಬಳಿ, ನಾವು ಪ್ರವಾಸಿ ವೀಸಾದಲ್ಲಿ ಕಾಂಬೋಡಿಯಾಗೆ ತೆರಳುತ್ತಿದ್ದೇವೆ ಎಂದು ಏಜೆಂಟ್ ತಿಳಿಸಿದ. ಇದರಿಂದ ನನಗೆ ಸಂಶಯ ಉಂಟಾಯಿತು. ಕಾಂಬೋಡಿಯಾದಲ್ಲಿ ನಮ್ಮನ್ನು ಕಚೇರಿ ಸ್ಥಳವೊಂದಕ್ಕೆ ಕರೆದುಕೊಂಡು ಹೋಗಲಾಯಿತು ಹಾಗೂ ಅಲ್ಲಿ ನಡೆದ ಸಂದರ್ಶನದಲ್ಲಿ ನಾವಿಬ್ಬರೂ ತೇರ್ಗಡೆಯಾದೆವು. ಅವರು ನಮ್ಮ ಟೈಪಿಂಗ್ ವೇಗ ಇತ್ಯಾದಿಗಳನ್ನು ಪರೀಕ್ಷಿಸಿದರು. ನಂತರ, ಫೇಸ್ ಬುಕ್ ನಲ್ಲಿ ಸ್ವವಿವರಗಳನ್ನು ಗಮನಿಸಿ, ಯಾವ ವ್ಯಕ್ತಿಗಳನ್ನು ವಂಚಿಸಬಹುದು ಎಂದು ಗುರುತಿಸುವುದು ನಮ್ಮ ಉದ್ಯೋಗ ಎಂಬುದು ಅರಿವಾಯಿತು. ಆ ತಂಡವು ಚೀನಾದಾಗಿದ್ದರೂ, ಅವರ ಸೂಚನೆಗಳನ್ನು ಮಲೇಶಿಯಾ ಪ್ರಜೆಯೊಬ್ಬ ನಮಗೆ ಅನುವಾದಿಸುತ್ತಿದ್ದ” ಎಂದು ಹೇಳಿದ್ದಾನೆ.

ತಮ್ಮ ದಿನಚರಿಯ ಕುರಿತು ಪ್ರತಿಕ್ರಿಯಿಸಿರುವ ಸ್ಟೀಫನ್, “ವಿವಿಧ ವೇದಿಕೆಗಳಲ್ಲಿ ದೊರೆಯುವ ಮಹಿಳೆಯರ ಭಾವಚಿತ್ರಗಳನ್ನು ಬಳಸಿಕೊಂಡು ನಾವು ನಕಲಿ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಸೃಷ್ಟಿಸಬೇಕಿತ್ತು. ಆದರೆ, ಈ ಭಾವಚಿತ್ರಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಹುಷಾರಾಗಿರುವಂತೆ ನಮಗೆ ಹೇಳಲಾಗಿತ್ತು. ಹೀಗಾಗಿ ಉತ್ತರದವರನ್ನು ಬಲೆಗೆ ಕೆಡವಿಕೊಳ್ಳಲು ದಕ್ಷಿಣ ಭಾರತದ ಯುವತಿಯ ಸ್ವವಿವರವನ್ನು ಬಳಸಿಕೊಳ್ಳಬೇಕಿತ್ತು. ಇದರಿಂದ ಸಂಶಯಕ್ಕೆ ಅವಕಾಶವಿರುತ್ತಿರಲಿಲ್ಲ. ನಮಗೆ ಗುರಿಗಳಿರುತ್ತಿದ್ದವು ಹಾಗೂ ನಾವು ಒಂದು ವೇಳೆ ಆ ಗುರಿಯನ್ನು ತಲುಪದಿದ್ದರೆ, ನಮಗೆ ಊಟ ನೀಡುತ್ತಿರಲಿಲ್ಲ ಹಾಗೂ ನಮ್ಮ ಕೋಣೆಗಳಿಗೆ ಹೋಗಲು ಅವಕಾಶ ನೀಡುತ್ತಿರಲಿಲ್ಲ. ಕೊನೆಗೆ, ಒಂದೂವರೆ ತಿಂಗಳ ನಂತರ ನಾನು ನನ್ನ ಕುಟುಂಬದ ಸದಸ್ಯರನ್ನು ಸಂಪರ್ಕಿಸಿದೆ. ಅವರು ರಾಯಭಾರ ಕಚೇರಿಯೊಂದಿಗೆ ಮಾತನಾಡಲು ಕೆಲವು ಸ್ಥಳೀಯ ರಾಜಕಾರಣಿಗಳ ನೆರವು ಪಡೆದರು” ಎಂದು ವಿವರಿಸಿದ್ದಾರೆ.

ಆರೋಪಿಗಳು ಚತುರ ವಂಚಕ ಏಜೆಂಟ್ ಗಳಾಗಿದ್ದು, ಉದ್ಯೋಗ ಕೊಡಿಸುವ ಭರವಸೆ ನೀಡಿ ಜನರನ್ನು ಕಾಂಬೋಡಿಯಾಗೆ ಕರೆದೊಯ್ಯುತ್ತಿದ್ದರು ಎಂದು ರೂರ್ಕೆಲಾ ಉಪ ವಿಭಾಗ ಪೊಲೀಸ್ ಅಧಿಕಾರಿ ಉಪಾಸನಾ ಪಢಿ ಹೇಳಿದ್ದಾರೆ. “ಆದರೆ, ಅವರು ಕಾಂಬೋಡಿಯಾದಲ್ಲಿ ಇಳಿಯುತ್ತಿದ್ದಂತೆಯೆ, ವಂಚನೆಯಲ್ಲಿ ತೊಡಗಿಸಿಕೊಂಡಿರುವ ಈ ಸಂಸ್ಥೆಗಳಿಗೆ ಸೇರ್ಪಡೆಯಾಗುವಂತೆ ಮಾಡಲಾಗುತ್ತಿತ್ತು. ಈ ಸಂಸ್ಥೆಗಳು ಅವರಿಂದ ಪಾಸ್ ಪೋರ್ಟ್ ಗಳನ್ನು ಕಸಿದುಕೊಂಡು, ದಿನಕ್ಕೆ 12 ಗಂಟೆಗಳ ಕಾಲ ಕೆಲಸ ನಿರ್ವಹಿಸುವಂತೆ ಮಾಡುತ್ತಿದ್ದವು. ಒಂದು ವೇಳೆ ಅವರು ಹೇಳಿದ ಕೆಲಸಗಳನ್ನು ಮಾಡಲು ಯಾರಾದರೂ ನಿರಾಕರಿಸಿದರೆ, ಅಂಥವರ ಮೇಲೆ ದೈಹಿಕ ಹಲ್ಲೆ, ವಿದ್ಯುದಾಘಾತ, ಒಂಟಿ ಬಂಧನ ಇತ್ಯಾದಿ ಮಾರ್ಗಗಳ ಮೂಲಕ ಕಿರುಕುಳ ನೀಡಲಾಗುತ್ತಿತ್ತು. ಇಂತಹ ಕೃತ್ಯದಲ್ಲಿ ಭಾಗಿಯಾಗಲು ಇಚ್ಛಿಸದ ಹಲವಾರು ಭಾರತೀಯರು ಅಲ್ಲಿ ಸಿಲುಕಿಕೊಂಡಿದ್ದಾರೆ. ನಾವು ಅವರನ್ನು ಗುರುತಿಸಲು, ಸಂಪರ್ಕಿಸಲು ಹಾಗೂ ಸೂಕ್ತ ಮಾರ್ಗಗಳ ಮೂಲಕ ಭಾರತಕ್ಕೆ ಮರಳಿ ತರಲು ಪ್ರಯತ್ನಿಸುತ್ತಿದ್ದೇವೆ” ಎಂದು ಅವರು ಹೇಳಿದ್ದಾರೆ.

ವಂಚನೆಯ ಸ್ವರೂಪದ ಕುರಿತು ಮಾತನಾಡಿರುವ ಆ ಅಧಿಕಾರಿಯು, ಎಪ್ರಿಲ್ 2023ರಲ್ಲಿ ಯುವಕರನ್ನು ಮೊದಲಿಗೆ ಫ್ನಾಮ್ ಪೆನ್ ನಲ್ಲಿರುವ ವಂಚಕ ಕಂಪನಿಗಳಿಗೆ ಸೇರ್ಪಡೆಯಾಗುವಂತೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಅಲ್ಲಿ ವಂಚಕರು ಡೇಟಿಂಗ್ ತಂತ್ರಾಂಶಗಳಲ್ಲಿ ಮಹಿಳೆಯರಂತೆ ಸೋಗು ಹಾಕಿಕೊಳ್ಳುವಂತೆ ಒತ್ತಾಯ ಹೇರಲಾಗಿದೆ ಹಾಗೂ ಭಾರಿ ಗುರಿಯೊಂದಿಗೆ ಸಂವಾದ ನಡೆಸುವಂತೆ ಮಾಡಲಾಗಿದೆ. “ಕೆಲ ಸಮಯದ ನಂತರ, ವಂಚಕರು ತಮ್ಮ ಬಲೆಗೆ ಬಿದ್ದವರನ್ನು ಕ್ರಿಪ್ಟೊಕರೆನ್ಸಿ ವ್ಯವಹಾರದಲ್ಲಿ ಹಣ ತೊಡಗಿಸುವಂತೆ ಮನವೊಲಿಸುತ್ತಾರೆ. ಈ ರೀತಿಯಲ್ಲಿ ಭಾರತದಲ್ಲಿನ ಹಲವಾರು ಮಂದಿಯನ್ನು ವಂಚಿಸಲಾಗಿದೆ” ಎಂದು ಪಢಿ ಹೇಳುತ್ತಾರೆ.

ರೂರ್ಕೆಲಾ ಪೊಲೀಸರ ಪ್ರಕಾರ, ಅಕ್ಟೋಬರ್ 2023ರಲ್ಲಿ ಹೂಡಿಕೆ ವಂಚನೆಯಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆಯೊಂದಕ್ಕೆ ಏಜೆಂಟ್ ಗಳು ಜನರನ್ನು ಸೇರ್ಪಡೆ ಮಾಡಿದ್ದಾರೆ. “ಈ ಸಂಸ್ಥೆಯು ಜನರನ್ನು ನಕಲಿ ಷೇರುಗಳಲ್ಲಿ ಹೂಡಿಕೆ ಮಾಡುವಂತೆ ಜನರಿಗೆ ಆಮಿಷವೊಡ್ಡುತ್ತವೆ. ಅವರು ನಕಲಿ ಅಂತರ್ಜಾಲ ತಂತ್ರಾಂಶವನ್ನೂ ಸೃಷ್ಟಿಸಿದ್ದಾರೆ” ಎಂದು ಹೇಳುತ್ತಾರೆ.

“ನಾವು ವಂಚನೆ ಎಸಗುವ ಕಂಪನಿಗಳ ಸ್ಥಳ, ಅವರ ಕಾರ್ಯಾಚರಣೆಗಳು, ಕಾರ್ಯಾಚರಣೆಯ ಶೈಲಿ ಹಾಗೂ ಅವರ ಆಡಳಿತ ಶ್ರೇಣಿ ವ್ಯವಸ್ಥೆಯ ಕುರಿತೂ ಮಾಹಿತಿಯನ್ನು ಕಲೆ ಹಾಕಿದ್ದೇವೆ. ನಾವು ಮೂವರು ಉನ್ನತ ಮಟ್ಟದ ಭಾರತೀಯ ಮೂಲಕ ಕಾರ್ಯನಿರ್ವಾಹಕ ಹಾಗೂ ನೇಪಾಳ ಮೂಲದ ಓರ್ವ ಕಾರ್ಯನಿರ್ವಾಹಕನನ್ನು ಗುರುತಿಸಿದ್ದೇವೆ. ಈ ಹಗರಣದಲ್ಲಿನ ಮುಖ್ಯ ಪಾಲುದಾರರನ್ನು ಬಂಧಿಸಲು ಇಂಟರ್ ಪೋಲ್ ನೆರವು ಪಡೆಯಲು ಉದ್ದೇಶಿಸಿದ್ದೇವೆ” ಎಂದು ಪಢಿ ಮಾಹಿತಿ ನೀಡಿದ್ದಾರೆ.

ಸೌಜನ್ಯ: indianexpress.com

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News