×
Ad

ಅಫ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪ : 20 ಮಂದಿ ಮೃತ್ಯು

Update: 2025-09-01 07:53 IST

ಸಾಂದರ್ಭಿಕ ಚಿತ್ರ (PTI)

ಕಾಬೂಲ್: ಪೂರ್ವ ಅಫ್ಘಾನಿಸ್ತಾನದಲ್ಲಿ ಪಾಕಿಸ್ತಾನ ಗಡಿಯ ಸನಿಹದಲ್ಲಿ 6.0 ತೀವ್ರತೆಯ ಭೂಕಂಪ ಸಂಭವಿಸಿದೆ. ಘಟನೆಯಲ್ಲಿ 20ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಕನಿಷ್ಠ 115 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ನಂಗ್ರಾರ್ ಮತ್ತು ಕುನಾರ್ ಪ್ರಾಂತ್ಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಭಾನುವಾರ ತಡರಾತ್ರಿ ಈ ಭೂಕಂಪ ಸಂಭವಿಸಿದ್ದು, ಆ ಬಳಿಕವೂ ಕಂಪನದ ಅನುಭವ ಆಗುತ್ತಿತ್ತು ಎಂದು ಅಮೆರಿಕದ ಜಿಯಾಲಾಜಿಕಲ್ ಸರ್ವೆ ಹೇಳಿದೆ.

ಭೂಕಂಪ ಸ್ಥಳೀಯ ಕಾಲಮಾನದ ಪ್ರಕಾರ ರಾತ್ರಿ 11.47ಕ್ಕೆ ಸಂಭವಿಸಿದೆ. ಈ ಭೂಕಂಪ 8 ಕಿಲೋಮೀಟರ್ ಆಳದಲ್ಲಿ ಸಂಭವಿಸಿದ್ದು, ಇದರ ಕೇಂದ್ರ ಬಿಂದು ಜಲಾಲಾಬಾದ್‍ನಿಂದ 27 ಕಿಲೋಮೀಟರ್ ಪೂರ್ವ-ಈಶಾನ್ಯಕ್ಕೆ ಇತ್ತು ಎಂದು ವಿವರಿಸಿದೆ.

ಮನೆಗಳ ಛಾವಣಿಗಳು ಕುಸಿದು ಬಿದ್ದು, ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಮೃತಪಟ್ಟಿದ್ದಾಗಿ ಪ್ರಾಂತೀಯ ಅಧಿಕಾರಿಗಳು ಹೇಳಿದ್ದಾರೆ. ಹಲವು ಮಂದಿ ಗಾಯಗೊಂಡಿದ್ದಾರೆ ಎಂದು ಆರಂಭಿಕ ವರದಿಗಳು ಹೇಳಿವೆ.

ಪೂರ್ವ ಅಫ್ಘಾನಿಸ್ತಾನದ ಹಲವು ಕಡೆಗಳಲ್ಲಿ ಕಟ್ಟಡಗಳು ಹಲವು ಸೆಕೆಂಡ್‍ಗಳ ಕಾಲ ಕಂಪಿಸಿವೆ. 370 ಕಿಲೋಮೀಟರ್ ದೂರದ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‍ನಲ್ಲಿ ಕೂಡಾ ಭೂಕಂಪ ಸಂಭವಿಸಿದೆ ಎಂದು ಎಎಫ್‍ಪಿ ಪತ್ರಕರ್ತ ಹೇಳಿದ್ದಾರೆ.

ಶುಕ್ರವಾರ ಮತ್ತು ಶನಿವಾರ ನಂಗ್ರಹಾರ್ ಪ್ರಾಂತ್ಯ ಭಾರೀ ಪ್ರವಾಹಕ್ಕೆ ತುತ್ತಾಗಿದ್ದು, ಐದು ಮಂದಿ ಮೃತಪಟ್ಟಿದ್ದರು. ವ್ಯಾಪಕ ಬೆಳೆ ಹಾನಿಯೂ ಸಂಭವಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News