ಪಾಕಿಸ್ತಾನ | 7 ವರ್ಷದ ಬಾಲಕನ ವಿರುದ್ಧ ಭಯೋತ್ಪಾದನೆ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲು!
AI image
ಪೇಷಾವರ, ಆ.3: ಬಲೂಚಿಸ್ತಾನದ ಗ್ವದರ್ ನಗರದ 7 ವರ್ಷದ ಬಾಲಕನ ವಿರುದ್ಧ ಭಯೋತ್ಪಾದನೆ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿರುವುದಾಗಿ ವರದಿಯಾಗಿದ್ದು ವ್ಯಾಪಕ ಟೀಕೆಗೆ ಒಳಗಾಗಿದೆ.
ಪ್ರಮುಖ ಮಾನವ ಹಕ್ಕುಗಳ ಕಾರ್ಯಕರ್ತ ಗುಲ್ಝಾರ್ ದೋಸ್ತ್ ಅವರ ಟಿಕ್ಟಾಕ್ ವೀಡಿಯೊವನ್ನು `ಶೇರ್' ಮಾಡಿಕೊಂಡಿರುವುದು ಈ ಬಾಲಕನ `ಅಪರಾಧವಾಗಿದೆ'. ಈ ಬಗ್ಗೆ ಭಯೋತ್ಪಾದನೆ ನಿಗ್ರಹ ಇಲಾಖೆ ಪ್ರಕರಣ ದಾಖಲಿಸಿಕೊಂಡಿದ್ದು `ಆರೋಪಿ' ಬಾಲಕ ಭಯೋತ್ಪಾದನೆ ನಿಗ್ರಹ ನ್ಯಾಯಾಲಯದಲ್ಲಿ ಹಾಜರಾಗಬೇಕೆಂದು ಸೂಚಿಸಿದೆ. ಈ ಕ್ರಮವನ್ನು ಪಾಕಿಸ್ತಾನದ ಮಾನವ ಹಕ್ಕುಗಳ ಆಯೋಗ ಖಂಡಿಸಿದ್ದು ಮಗುವಿನ ವಿರುದ್ಧ ಭಯೋತ್ಪಾದನೆ ವಿರೋಧಿ ಕಾಯ್ದೆಯಡಿ ಪ್ರಕರಣ ದಾಖಲಿಸಿರುವುದು ಮಕ್ಕಳ ಹಕ್ಕುಗಳ ಗಂಭೀರ ಉಲ್ಲಂಘನೆಯಾಗಿದೆ ಎಂದು ಟೀಕಿಸಿದೆ.
ಬಲೂಚಿಸ್ತಾನ ಪ್ರಾಂತದ ಜನರ ಕಾನೂನುಬದ್ಧ ಭಿನ್ನಾಭಿಪ್ರಾಯವನ್ನು ಹತ್ತಿಕ್ಕಲು ಪಾಕ್ ಸರಕಾರ ಈ ರೀತಿಯ ಕಾನೂನುಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ ಎಂದು ಮಾಧ್ಯಮಗಳು ವಿಶ್ಲೇಷಿಸಿವೆ.