×
Ad

ಅಫ್ಘಾನಿಸ್ತಾನದಲ್ಲಿ 6.0 ತೀವ್ರತೆಯ ಭೂಕಂಪ : ಕನಿಷ್ಠ 800 ಮಂದಿ ಮೃತ್ಯು, 2,500 ಜನರಿಗೆ ಗಾಯ

Update: 2025-09-01 22:33 IST

PC : PTI

ಕಾಬೂಲ್‌,ಸೆ.1: ನಿನ್ನೆ ಮಧ್ಯರಾತ್ರಿಯ ಸುಮಾರಿಗೆ ಪಾಕಿಸ್ತಾನ ಗಡಿ ಸಮೀಪದ ಅಫ್ಘಾನಿಸ್ಥಾನದ ಪರ್ವತ ಪ್ರದೇಶದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಮನೆಗಳು ನೆಲಸಮಗೊಂಡು 800ಕ್ಕೂ ಅಧಿಕ ಜನರು ಮೃತಪಟ್ಟಿದ್ದು, 2,500ಕ್ಕೂ ಹೆಚ್ಚಿನ ಜನರು ಗಾಯಗೊಂಡಿದ್ದಾರೆ. ಬೃಹತ್ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ತಾಲಿಬಾನ್ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಮಧ್ಯರಾತ್ರಿಗೆ ಕೆಲವೇ ಕ್ಷಣಗಳ ಮೊದಲು ರಿಕ್ಟರ್ ಮಾಪಕದಲ್ಲಿ 6.0 ತೀವ್ರತೆಯ ಭೂಕಂಪನ ಸಂಭವಿಸಿದೆ. ಭೂಕಂಪದ ತೀವ್ರತೆಗೆ ನೆರೆಯ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ ನಲ್ಲೂ ಕಂಪನ ಸಂಭವಿಸಿತ್ತು.

ಯುಎಸ್ ಭೂವೈಜ್ಞಾನಿಕ ಸರ್ವೆ(ಯುಎಸ್‌ಜಿಎಸ್) ಪ್ರಕಾರ, 12 ಲ.ಕ್ಕೂ ಅಧಿಕ ಜನರಿಗೆ ಪ್ರಬಲ ಭೂಕಂಪನದ ಅನುಭವವಾಗಿದೆ. ಪೂರ್ವ ಅಫ್ಘಾನಿಸ್ತಾನದಲ್ಲಿ ಭೂಕಂಪನದ ಕೇಂದ್ರಬಿಂದುವಿನ ಸಮೀಪದ ಕುನಾರ್ ಪ್ರಾಂತ್ಯವೊಂದರಲ್ಲೇ ಸುಮಾರು 800 ಜನರು ಮೃತಪಟ್ಟಿದ್ದಾರೆ ಮತ್ತು 2,500 ಜನರು ಗಾಯಗೊಂಡಿದ್ದಾರೆ. ನೆರೆಯ ನಂಗರ್ಹಾರ್ ಪ್ರಾಂತ್ಯದಲ್ಲಿ ಇನ್ನೂ 12 ಜನರು ಮೃತಪಟ್ಟಿದ್ದಾರೆ ಮತ್ತು 225 ಜನರು ಗಾಯಗೊಂಡಿದ್ದಾರೆ ಎಂದು ತಾಲಿಬಾನ್ ಸರಕಾರದ ಮುಖ್ಯ ವಕ್ತಾರ ಝಬಿಹುಲ್ಲಾ ಮುಜಾಹಿದ್ ತಿಳಿಸಿದರು.

ಹಲವಾರು ಮನೆಗಳು ನಾಶಗೊಂಡಿವೆ ಎಂದು ಆಂತರಿಕ ಸಚಿವಾಲಯದ ವಕ್ತಾರ ಅಬ್ದುಲ್ ಮತೀನ್ ಕನಿ ಸುದ್ದಿಸಂಸ್ಥೆಗೆ ತಿಳಿಸಿದರು. ಹೆಚ್ಚಿನ ಅಫ್ಘಾನಿಗಳು ಸುಲಭವಾಗಿ ಕುಸಿಯುವ ಕಡಿಮೆ ಎತ್ತರದ ಮಣ್ಣಿನ ಇಟ್ಟಿಗೆಗಳಿಂದ ನಿರ್ಮಿತ ಮನೆಗಳಲ್ಲಿ ವಾಸಿಸುತ್ತಿದ್ದಾರೆ.

ವಿಶ್ವಸಂಸ್ಥೆ ಮತ್ತು ತಾಲಿಬಾನಿ ಅಧಿಕಾರಿಗಳು ತೀವ್ರ ಹಾನಿಗೀಡಾಗಿರುವ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆಗಳನ್ನು ಕೈಗೊಂಡಿದ್ದಾರೆ.

ಇತ್ತೀಚಿಗೆ ಇರಾನ್ ಮತ್ತು ಪಾಕಿಸ್ತಾನದಿಂದ ಮರಳಿದ್ದ 40 ಲ.ಕ್ಕೂ ಅಧಿಕ ಅಫ್ಘಾನಿಗಳಲ್ಲಿ ಹೆಚ್ಚಿನವರು ಭೂಕಂಪ ಪೀಡಿತ ಗ್ರಾಮಗಳಲ್ಲಿ ವಾಸವಾಗಿದ್ದಾರೆ.

ಯುಎಸ್‌ಜಿಎಸ್ ಪ್ರಕಾರ ನಂಗರ್ಹಾರ್ ಪ್ರಾಂತ್ಯದ ಜಲಾಲಾಬಾದ್ ನಗರದಿಂದ 27 ಕಿ.ಮೀ.ದೂರದಲ್ಲಿ ಎಂಟು ಕಿ.ಮೀ.ಆಳದಲ್ಲಿ ಭೂಕಂಪನ ಸಂಭವಿಸಿತ್ತು. ನಂಗರ್ಹಾರ್ ಮತ್ತು ಕುನಾರ್ ಪ್ರಾಂತ್ಯಗಳು ಪಾಕಿಸ್ತಾನದ ಗಡಿಗೆ ಹೊಂದಿಕೊಂಡಿವೆ.

ಹಲವಾರು ದೇಶಗಳು ಈ ದುರಂತಕ್ಕೆ ಸಂತಾಪಗಳನ್ನು ವ್ಯಕ್ತಪಡಿಸಿವೆ. ‘ಭೂಂಕಂಪನದ ಈ ಸಂಕಷ್ಟ ಸಮಯದಲ್ಲಿ ನಾನು ಅಫ್ಘಾನಿಸ್ತಾನದ ಜನರ ಜೊತೆಯಲ್ಲಿದ್ದೇನೆ’ಎಂದು ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್ ತನ್ನ ಸಂತಾಪ ಸೂಚಕ ಸಂದೇಶದಲ್ಲಿ ಹೇಳಿದ್ದಾರೆ.

ಅಕ್ಟೋಬರ್ 2023ರಲ್ಲಿ ಹೇರಾತ್ ಪ್ರಾಂತ್ಯದಲ್ಲಿ ಸಂಭವಿಸಿದ್ದ ಭೂಕಂಪನದಿಂದ 1,500ಕ್ಕೂ ಅಧಿಕ ಜನರು ಮೃತ ಪಟ್ಟಿದ್ದು, 63,000ಕ್ಕೂ ಅಧಿಕ ಮನೆಗಳು ಹಾನಿಗೊಂಡಿದ್ದವು ಅಥವಾ ನಾಶಗೊಂಡಿದ್ದವು.

ಜೂನ್ 2022ರಲ್ಲಿ ಪಕ್ಟಿಕಾ ಪ್ರಾಂತ್ಯದಲ್ಲಿ ಸಂಭವಿಸಿದ್ದ ಭೂಕಂಪನದಲ್ಲಿ 1,000ಕ್ಕೂ ಅಧಿಕ ಜನರು ಮೃತಪಟ್ಟು ಸಾವಿರಾರು ಜನರು ನಿರಾಶ್ರಿತರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News