Photo: x.com/ani_digital

ಹೊಸದಿಲ್ಲಿ: ವಿಮಾನ ಹಾರಾಟದ ವೇಳೆ ಎದುರಾದ ತುರ್ತು ಪರಿಸ್ಥಿತಿಯಲ್ಲಿ ಧೈರ್ಯ ಮತ್ತು ಸಮಯಪ್ರಜ್ಞೆ ಮೆರೆದು ಅನೇಕ ಪ್ರಯಾಣಿಕರ ಜೀವ ಉಳಿಸಿದ ಫ್ಲೈದುಬೈ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಶ್ಲಾಘಿಸಿದ್ದಾರೆ. ಅಲ್ಲದೆ, ಇಸ್ರೇಲ್‌ ನ ಸ್ವಾತಂತ್ರ್ಯ ದಿನಾಚರಣೆಯ ಸಮಾರಂಭದಲ್ಲಿ ಜ್ಯೋತಿ ಬೆಳಗಿಸಲು ಮಚ್ಚರ್ ಅವರನ್ನು ಆಹ್ವಾನಿಸಿದ್ದಾರೆ.

ಶನಿವಾರ ಮಚ್ಚರ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ನೆತನ್ಯಾಹು, ‘ನೀವು ಇಸ್ರೇಲ್, ಭಾರತ ಮತ್ತು ಇಡೀ ಜಗತ್ತಿನ ಪಾಲಿಗೆ ಒಬ್ಬ ಹೀರೋ’ ಎಂದು ಶ್ಲಾಘಿಸಿದರು. ಇದೇ ವೇಳೆ, ಮಚ್ಚರ್ ಅವರನ್ನು ಇಸ್ರೇಲ್‌ನ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮಕ್ಕೆ ಆಹ್ವಾನಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರಿಗೂ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದರು.

‘ಇಸ್ರೇಲ್‌ನ ಸ್ವಾತಂತ್ರ್ಯ ದಿನಾಚರಣೆಯ ಸಮಾರಂಭದಲ್ಲಿ ಜ್ಯೋತಿ ಬೆಳಗಿಸಲು ನಿಮ್ಮನ್ನು ಆಹ್ವಾನಿಸುತ್ತೇನೆ. ಇದು ಇಸ್ರೇಲ್ ತನ್ನ ಸ್ವಾತಂತ್ರ್ಯ ದಿನದಂದು ನೀಡುವ ಅತ್ಯುನ್ನತ ಗೌರವ’ ಎಂದು ನೆತನ್ಯಾಹು ಹೇಳಿದರು.

‘ಸಾಮಾನ್ಯವಾಗಿ ಈ ಗೌರವವನ್ನು ಇಸ್ರೇಲ್‌ನ ನಾಗರಿಕರಿಗೆ ಮಾತ್ರ ನೀಡಲಾಗುತ್ತದೆ. ಆದರೆ ಈ ಸಂದರ್ಭದಲ್ಲಿ ಇಸ್ರೇಲ್‌ ನ ಎಲ್ಲ ನಾಗರಿಕರೂ ನಿಮ್ಮನ್ನು ಅಪ್ಪಿಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ’ ಎಂದರು. 

ಸೆಪ್ಟೆಂಬರ್ 30ರಂದು ದುಬೈನಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನ FZ1073ರಲ್ಲಿ ಈ ಘಟನೆ ನಡೆದಿತ್ತು. ಒಮನಿ ಸಹ-ಪೈಲಟ್ ಎಂದು ಗುರುತಿಸಲಾದ ಹಮಮ್ ಅಲ್-ಹಮಮಿ, ವಿಮಾನವನ್ನು ಕೆಳಗಿಳಿಸಲು ಯತ್ನಿಸುತ್ತಾ ಕ್ಯಾಪ್ಟನ್ ಮಚ್ಚರ್ ಅವರ ಮೇಲೆ ಹಲ್ಲೆ ನಡೆಸಿದ್ದರು ಎನ್ನಲಾಗಿದೆ. 

ದಾಳಿಯ ಪರಿಣಾಮ ವಿಮಾನವು ಕೇವಲ ಎರಡು ನಿಮಿಷಗಳಲ್ಲಿ 17,000 ಅಡಿಗಳಿಗಿಂತಲೂ ಹೆಚ್ಚು ಕೆಳಕ್ಕೆ ಇಳಿದಿತ್ತು. ಬಳಿಕ ವಿಮಾನ ಅಪಹರಣದ ತುರ್ತು ಸಂಕೇತವನ್ನು ರವಾನಿಸಲಾಗಿತ್ತು.

ಹಲ್ಲೆಗೊಳಗಾದರೂ ಮಚ್ಚರ್ ಅವರು ಕಾಕ್‌ಪಿಟ್‌ ನ ಬಾಗಿಲು ತೆರೆಯುವಲ್ಲಿ ಯಶಸ್ವಿಯಾದರು. ಇದರಿಂದ ಇತರ ಪ್ರಯಾಣಿಕರು ಕಾಕ್‌ ಪಿಟ್‌ ಗೆ ನುಗ್ಗಿ ಸಹ-ಪೈಲಟ್‌ ನನ್ನು ಹತೋಟಿಗೆ ತೆಗೆದುಕೊಂಡರು. ಬಳಿಕ ವಿಮಾನದ ನಿಯಂತ್ರಣವನ್ನು ಮರಳಿ ಪಡೆಯಲು ಸಾಧ್ಯವಾಯಿತು.

ಮಚ್ಚರ್ ಅವರ ಕಾರ್ಯವನ್ನು ವಿಶ್ವದಾದ್ಯಂತ ಶ್ಲಾಘಿಸಲಾಗಿದ್ದು, ಇದೀಗ ನೆತನ್ಯಾಹು ಅವರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಘಟನೆಯ ಬಗ್ಗೆ ಮಚ್ಚರ್ ಅವರಿಂದಲೇ ವಿವರ ಕೇಳಿದ ನೆತನ್ಯಾಹು, ನಿಖರವಾಗಿ ಏನಾಯಿತು ಎಂದು ವಿಚಾರಿಸಿದರು.

ಸಹ-ಪೈಲಟ್ ಪ್ರಾರ್ಥನೆಗಾಗಿ ತೆರಳುವುದಾಗಿ ಹೇಳಿ ಅನುಮತಿ ಪಡೆದಿದ್ದರು. ಮಚ್ಚರ್ ಅವರ ಗಮನ ಬೇರೆಡೆ ಇದ್ದಾಗ, ತಲೆಯ ಹಿಂಭಾಗಕ್ಕೆ ‘ಬಲವಾದ ಹೊಡೆತ’ ಬಿದ್ದ ಅನುಭವವಾಯಿತು. ಆರಂಭದಲ್ಲಿ ವಿಮಾನದಲ್ಲಿನ ಯಾವುದೋ ತಾಂತ್ರಿಕ ದೋಷದಿಂದ ಹೀಗಾಗಿದೆ ಎಂದು ಭಾವಿಸಿದ್ದಾಗಿ ಅವರು ಹೇಳಿದರು.

‘ಆದರೆ ಬಳಿಕ ಒಂದರ ನಂತರ ಒಂದರಂತೆ ಹೊಡೆತಗಳು ಬೀಳತೊಡಗಿದವು. ಆಗ ಇದು ವಿಮಾನದ ಸಮಸ್ಯೆಯಲ್ಲ, ನನ್ನೊಂದಿಗೆ ಕಾಕ್‌ ಪಿಟ್‌ ನಲ್ಲಿದ್ದ ವ್ಯಕ್ತಿಯೇ ಹೀಗೆ ಮಾಡುತ್ತಿದ್ದಾನೆ ಎಂಬುದು ಅರಿವಾಯಿತು. ನಾನು ಆತನನ್ನು ತಡೆಯಲು ಪ್ರಯತ್ನಿಸಿದೆ. ಆದರೆ ಆರಂಭಿಕ ಹೊಡೆತಗಳಿಂದ ನನ್ನ ದೃಷ್ಟಿ ಮಂಜಾಗಿ, ಬಹುತೇಕ ಏನೂ ಕಾಣದಂತಾಗಿತ್ತು’ ಎಂದು ವಿವರಿಸಿದರು.

ಒಮ್ಮೆ ಕಾಕ್‌ಪಿಟ್‌ ನ ಬಾಗಿಲು ತೆರೆಯಲು ಪ್ರಯತ್ನಿಸಿದಾಗ ಹಮಮ್ ಅಲ್-ಹಮಮಿ ಅದನ್ನು ಮುಚ್ಚಿದ್ದಾನೆ ಎಂದೂ ಮಚ್ಚರ್ ಹೇಳಿದರು.

‘ನನ್ನಲ್ಲಿ ಕೊನೆಯದಾಗಿ ಒಂದು ಹೋರಾಟದ ಛಲ ಮಾತ್ರ ಉಳಿದಿತ್ತು. ಇದನ್ನು ಮಾಡದಿದ್ದರೆ ನಾನು ಸಾಯುತ್ತೇನೆ ಎಂಬ ಭಾವನೆ ಮೂಡಿತ್ತು. ಆಗ ನನ್ನ ಸಂಪೂರ್ಣ ಶಕ್ತಿಯನ್ನು ಒಗ್ಗೂಡಿಸಿ ಬಾಗಿಲಿನತ್ತ ನುಗ್ಗಿ ಅದನ್ನು ತೆರೆದೆ’ ಎಂದು ಅವರು ನೆತನ್ಯಾಹು ಅವರಿಗೆ ತಿಳಿಸಿದರು.

ಮಚ್ಚರ್ ಅವರ ಮಾತುಗನ್ನು ಆಲಿಸಿದ ನೆತನ್ಯಾಹು, ಅವರ ಧೈರ್ಯವನ್ನು ಕೊಂಡಾಡಿದರು.

‘ನಿಮ್ಮ ಧೈರ್ಯ ಹಾಗೂ ಅಸಾಧ್ಯ ಪರಿಸ್ಥಿತಿಯಲ್ಲೂ ನೀವು ತೋರಿದ ಸಂಯಮ ಮತ್ತು ವಿವೇಚನೆಯನ್ನು ಕಂಡು ನನಗೆ ಆಶ್ಚರ್ಯವಾಗಿದೆ’ ಎಂದು ಹೇಳಿದರು.

‘ನೀವು ಅನೇಕ ಜೀವಗಳನ್ನು ಉಳಿಸಿದ್ದೀರಿ. ನನ್ನ ಮತ್ತು ನನ್ನ ಪತ್ನಿಯ ಪರವಾಗಿ ನಿಮ್ಮ ಪತ್ನಿಗೆ ಶುಭಾಶಯಗಳನ್ನು ತಿಳಿಸಿ. ನಿಮಗೆ ಕುಟುಂಬವಿದೆ ಎಂಬುದು ನನಗೆ ಗೊತ್ತು. ಆದಷ್ಟು ಬೇಗ ಗುಣಮುಖರಾಗಿ’ ಎಂದು ನೆತನ್ಯಾಹು ಹೇಳಿದರು.

ಗಾಯಗೊಂಡ ಪೈಲಟ್, ಪ್ರಯಾಣಿಕರು ಮತ್ತು ಇತರ ಸಿಬ್ಬಂದಿ ‘9/11 ಮಾದರಿಯ ದುರಂತವನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ’ ಎಂದು ನೆತನ್ಯಾಹು ಈ ಹಿಂದೆ ಹೇಳಿದ್ದರು.

ಘಟನೆಯ ಬಳಿಕ ಫ್ಲೈದುಬೈ ಇಸ್ರೇಲ್‌ಗೆ ವಿಮಾನಯಾನವನ್ನು ಸ್ಥಗಿತಗೊಳಿಸಿದ್ದು, ‘ಸುರಕ್ಷತೆಯೇ ನಮ್ಮ ಪ್ರಥಮ ಆದ್ಯತೆ’ ಎಂದು ಹೇಳಿದೆ.

ದುಬೈಯ ಕ್ರೌನ್ ಪ್ರಿನ್ಸ್ ಹಮ್ದಾನ್ ಅವರು ಆಸ್ಪತ್ರೆಯಲ್ಲಿ ಸ್ಮಿತ್ ಮಚ್ಚರ್ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ. ಬಿಕ್ಕಟ್ಟಿನ ಸಂದರ್ಭದಲ್ಲಿ ಮಚ್ಚರ್ ಅವರ ಪತ್ನಿ ಹೇಗೆ ಪ್ರತಿಕ್ರಿಯಿಸಿದ್ದರು ಎಂಬ ಬಗ್ಗೆಯೂ ವರದಿಗಳು ಪ್ರಕಟವಾಗಿವೆ. ಮಾಜಿ ಸಹೋದ್ಯೋಗಿಗಳು ಮಚ್ಚರ್ ಅವರ ಸಾಹಸವನ್ನು ಶ್ಲಾಘಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor