Photo Credit : AP 

ಬುನಿಯಾ: ಕಾಂಗೋದಲ್ಲಿ ಎಬೋಲಾ ಸಾಂಕ್ರಾಮಿಕ ರೋಗದಿಂದ ಮೃತಪಟ್ಟವರ ಸಂಖ್ಯೆ 4,000 ದಾಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದು ಇತಿಹಾಸದಲ್ಲೇ ಅತ್ಯಂತ ವೇಗವಾಗಿ ಹರಡುತ್ತಿರುವ ಎಬೋಲಾ ಸಾಂಕ್ರಾಮಿಕ ರೋಗವಾಗಿದ್ದು, ಇದನ್ನು ನಿಯಂತ್ರಿಸಲು ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ.

ಮೇ 15 ರಂದು ಪೂರ್ವ ಕಾಂಗೋದಲ್ಲಿ ಈ ಸಾಂಕ್ರಾಮಿಕ ರೋಗ ಕಾಣಿಸಿಕೊಂಡ ನಂತರ ದಾಖಲಾದ 8,300 ಪ್ರಕರಣಗಳಲ್ಲಿ 4,018 ಜನರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವಾಲಯದ ಇತ್ತೀಚಿನ ಅಂಕಿಅಂಶಗಳು ತಿಳಿಸಿವೆ.

ಆಗಸ್ಟ್ ಅಂತ್ಯದಿಂದ ದಾಖಲಾದ ಹೊಸ ದೃಢಪಟ್ಟ ಪ್ರಕರಣಗಳಲ್ಲಿ ಶೇಕಡಾ 40 ರಷ್ಟು ಪ್ರಕರಣಗಳು ಉತ್ತರ ಕಿವೂ ಪ್ರಾಂತದಲ್ಲೇ ಕಂಡುಬಂದಿದ್ದು, ಅಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ ಎಂದು `ಡಾಕ್ಟರ್ಸ್ ವಿತೌಟ್ ಬೋರ್ಡರ್ಸ್' (ಎಂಎಸ್‍ಎಫ್) ಎಂಬ ಸಮಾಜಸೇವಾ ಸಂಸ್ಥೆ ಶುಕ್ರವಾರ ತಿಳಿಸಿದೆ.

`ಇದು ಕಾಡ್ಗಿಚ್ಚಿನ ವಿರುದ್ಧ ಹೋರಾಡಿದಂತೆ. ಒಂದೇ ಸಮಯದಲ್ಲಿ, ವಿವಿಧ ಸ್ಥಳಗಳಲ್ಲಿ ವಿಭಿನ್ನ ತೀವ್ರತೆಯೊಂದಿಗೆ ಅನೇಕ ಕಡೆ ರೋಗ ಹರಡುತ್ತಿದೆ' ಎಂದು ಬುಟೇಂಬೊದಲ್ಲಿರುವ ಎಂಎಸ್‍ಎಫ್ ಸಂಯೋಜಕಿ ಸ್ಟೆಫಾನಿ ಹಾಫ್‍ಮನ್ ಹೇಳಿದ್ದಾರೆ.

ಈ ಮಧ್ಯೆ, ತಮಗೆ ಬರಬೇಕಾದ ವೇತನವನ್ನು ಪಾವತಿಸುವಂತೆ ಆಗ್ರಹಿಸಿ ಕೆಲವು ಆರೋಗ್ಯ ಕಾರ್ಯಕರ್ತರು ಇಟುರಿ ಪ್ರಾಂತದ ಕೇಂದ್ರ ಸ್ಥಳದಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದರು. ಸಾಂಕ್ರಾಮಿಕ ರೋಗ ಹರಡಲು ಪ್ರಾರಂಭವಾದಾಗಿನಿಂದ ಮುಂಚೂಣಿ ಕಾರ್ಯಕರ್ತರು ಹಲವು ಬಾರಿ ಮುಷ್ಕರ ನಡೆಸಿದ್ದು, ಇದು ರೋಗ ನಿಯಂತ್ರಣದ ಪ್ರಯತ್ನಗಳಿಗೆ ಮತ್ತಷ್ಟು ಅಡ್ಡಿಯುಂಟು ಮಾಡಿದೆ.

ಬುನಿಯಾ ಹೊರವಲಯದ ಕಿಗೊಂಝೆಯಲ್ಲಿ ಸೈನಿಕರು ಬಂಡುಕೋರರು ಅಡಗಿಸಿಟ್ಟಿರುವ ಶಸ್ತ್ರಾಸ್ತ್ರಗಳನ್ನು ಹುಡುಕುವಾಗ ಎಬೋಲಾ ಪೀಡಿತ ನಿರಾಶ್ರಿತರ ಶಿಬಿರ ಮತ್ತು ಸೋಂಕಿತ ರೋಗಿಗಳ ಟ್ರಾನ್ಸಿಟ್ ಕೇಂದ್ರವನ್ನು ಸುಟ್ಟುಹಾಕಿದ್ದಾರೆ. ಇದರಿಂದಾಗಿ ಶಿಬಿರದಲ್ಲಿದ್ದ 19,000 ಜನರು ಪಲಾಯನ ಮಾಡಿದ್ದಾರೆ ಎಂದು ವಿಶ್ವಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇಂತಹ ಟ್ರಾನ್ಸಿಟ್ ಮತ್ತು ಚಿಕಿತ್ಸಾ ಕೇಂದ್ರಗಳನ್ನು ಸ್ಥಾಪಿಸುವುದು ದೊಡ್ಡ ಸವಾಲಾಗಿದೆ. ಇದಕ್ಕೆ ಹಣ ಮತ್ತು ಸಿಬ್ಬಂದಿಯ ಅಗತ್ಯವಿದ್ದು, ಎರಡರ ಅಭಾವವೂ ಕಾಡುತ್ತಿದೆ ಎಂದು ವಿಶ್ವಸಂಸ್ಥೆಯ ಹಿರಿಯ ಎಬೋಲಾ ಸಂಯೋಜಕ ಜೂಲಿಯನ್ ಹಾರ್ನಿಸ್ ಕಳವಳ ವ್ಯಕ್ತಪಡಿಸಿದ್ದಾರೆ.

ಅಧಿಕಾರಿಯನ್ನು ಥಳಿಸಿ ಹತ್ಯೆ

ಆರೋಗ್ಯ ಕಾರ್ಯಕರ್ತರು ಮತ್ತು ಅಧಿಕಾರಿಗಳ ಮೇಲಿನ ಜನರ ಅಪನಂಬಿಕೆ ಹಾಗೂ ಆಕ್ರೋಶವೂ ಸಹ ಸಾಂಕ್ರಾಮಿಕ ರೋಗವನ್ನು ಹತೋಟಿಗೆ ತರಲು ಸರಕಾರ ನಡೆಸುತ್ತಿರುವ ಪ್ರಯತ್ನಗಳಿಗೆ ತೊಡಕಾಗಿ ಪರಿಣಮಿಸಿದೆ.

ಕಾಂಗೋ ಗಣರಾಜ್ಯದ ಆಡಳಿತಾರೂಢ ಯುಡಿಪಿಎಸ್ ಪಕ್ಷದ ಹಿರಿಯ ಸದಸ್ಯರೊಬ್ಬರು ಈ ಸಾಂಕ್ರಾಮಿಕ ರೋಗದ ಕುರಿತು ಜಾಗೃತಿ ಮೂಡಿಸಲು ರೇಡಿಯೋ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಬಳಿಕ ಅವರ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿದೆ.

ಯುಡಿಪಿಎಸ್ ಸ್ಥಳೀಯ ಅಧಿಕಾರಿಯಾದ ಮೇರಿ-ಸೆಲೆಸ್ಟಿನ್ ಕರೋಂಡ್ವಾ ಅವರ ಮನೆಗೆ ನುಗ್ಗಿದ ಜನರ ಗುಂಪು ಅವರ ಮೇಲೆ ಹಲ್ಲೆ ನಡೆಸಿದ ಬಳಿಕ ಅವರ ಮನೆಗೆ ಬೆಂಕಿ ಹಚ್ಚಿದ್ದು, ತೀವ್ರ ಗಾಯಗೊಂಡಿದ್ದ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor