ಸೌದಿಯಲ್ಲಿ 25,000 ಸೈನಿಕರ ನಿಯೋಜನೆಗೆ ಪಾಕಿಸ್ತಾನ ಪರಿಶೀಲನೆ : ವರದಿ
ಸಾಂದರ್ಭಿಕ ಚಿತ್ರ | Photo Credit : facebook
ಇಸ್ಲಮಾಬಾದ್: ಯಮನ್‍ನ ಹೌದಿಗಳಿಂದ ಬೆದರಿಕೆ ಹೆಚ್ಚುತ್ತಿರುವ ನಡುವೆ, ಸೌದಿ ಅರೇಬಿಯಾದಲ್ಲಿ ಸುಮಾರು 25,000 ಸೈನಿಕರನ್ನು ನಿಯೋಜಿಸುವ ಕುರಿತು ಪಾಕಿಸ್ತಾನ ಪರಿಶೀಲನೆ ನಡೆಸುತ್ತಿದೆ ಎಂದು ಉನ್ನತ ಭದ್ರತಾ ಮೂಲವನ್ನು ಉಲ್ಲೇಖಿಸಿ `ಸಿಎನ್‍ಎನ್-ನ್ಯೂಸ್18' ವರದಿ ಮಾಡಿದೆ.
ಪಾಕಿಸ್ತಾನ, ಸೌದಿ ಅರೇಬಿಯಾ ಮತ್ತು ತುರ್ಕಿಯೆ ನಡುವಿನ `ಮಕ್ಕಾ ಜಂಟಿ ರಕ್ಷಣಾ ಒಪ್ಪಂದ'ದ ಅಡಿಯಲ್ಲಿ ಈ ಪ್ರಸ್ತಾವಿತ ಸೈನಿಕ ನಿಯೋಜನೆಯು ಬೆಳೆಯುತ್ತಿರುವ ರಕ್ಷಣಾ ಸಹಕಾರದ ಭಾಗವಾಗಿದೆ. ಮೂಲಗಳ ಪ್ರಕಾರ, ಈಗಾಗಲೇ 15,000ಕ್ಕೂ ಹೆಚ್ಚು ಪಾಕಿಸ್ತಾನಿ ಸೈನಿಕರು ಸೌದಿ ಅರೇಬಿಯಾದಲ್ಲಿದ್ದಾರೆ. ಸೌದಿಯ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ಹೆಚ್ಚುವರಿ ಸಿಬ್ಬಂದಿ ಮತ್ತು ಮಿಲಿಟರಿ ಉಪಕರಣಗಳನ್ನು ಕಳುಹಿಸಲು ಇಸ್ಲಾಮಾಬಾದ್ ಸಿದ್ಧತೆ ನಡೆಸುತ್ತಿದೆ. ಎರಡೂ ದೇಶಗಳು ಕಾರ್ಯಾಚರಣೆಯ ರಕ್ಷಣಾ ಸಹಕಾರವನ್ನು ವಿಸ್ತರಿಸುತ್ತಿರುವುದರಿಂದ ಪಾಕಿಸ್ತಾನವು ಸೌದಿ ಅರೇಬಿಯಾಕ್ಕೆ 25,000 ದವರೆಗೆ ಸೈನಿಕರನ್ನು ನಿಯೋಜಿಸುವ ಸಾಧ್ಯತೆಯಿದೆ ಎಂದು ಭದ್ರತಾ ಮೂಲಗಳು ತಿಳಿಸಿವೆ.