ಇಸ್ರೇಲ್ ಚುನಾವಣೆಯಲ್ಲಿ ಅರಬ್ ಪಕ್ಷಗಳ ಸ್ಪರ್ಧೆಗೆ ಸುಪ್ರೀಂಕೋರ್ಟ್ ಅನುಮತಿ
Photo Credit : aljazeera.com
ಜೆರುಸಲೇಮ್: ಮುಂಬರುವ ಚುನಾವಣೆಯಲ್ಲಿ ರಾಜಕೀಯ ಕಿಂಗ್‍ಮೇಕರ್ ಆಗಬಲ್ಲ ಅರಬ್ ಪಕ್ಷಕ್ಕೆ ಇಸ್ರೇಲ್‍ನ ಸುಪ್ರೀಂ ಕೋರ್ಟ್ ಶುಕ್ರವಾರ ಚುನಾವಣೆಯಲ್ಲಿ ಸ್ಪರ್ಧಿಸಲು ಮರು ಅನುಮತಿ ನೀಡಿದೆ. ನ್ಯಾಯಾಲಯದ ಒತ್ತಡಕ್ಕೆ ಮಣಿದು ಅರಬ್-ಇಸ್ರೇಲಿ ರಾಜಕಾರಣಿಯೊಬ್ಬರು ಸ್ಪರ್ಧೆಯಿಂದ ಹಿಂದೆ ಸರಿದ ಕೆಲವೇ ಗಂಟೆಗಳಲ್ಲಿ ಈ ಬೆಳವಣಿಗೆ ನಡೆದಿದೆ.
ಅಕ್ಟೋಬರ್ 27ರ ಸಾರ್ವತ್ರಿಕ ಚುನಾವಣೆಗೆ ಯುನೈಟೆಡ್ ಅರಬ್ ಲಿಸ್ಟ್ ಪಕ್ಷ ಸೇರಿದಂತೆ ಹಲವು ಅಭ್ಯರ್ಥಿಗಳನ್ನು ಅನರ್ಹಗೊಳಿಸಲು ಸಂಸದರನ್ನೊಳಗೊಂಡ ಚುನಾವಣಾ ಸಮಿತಿಯು ಸೆಪ್ಟೆಂಬರ್‌ನಲ್ಲಿ ಮತ ಚಲಾಯಿಸಿತ್ತು. ಈ ಪಕ್ಷವು 2021ರ ಚುನಾವಣೆಯ ನಂತರ ಸಂಸದೀಯ ಇತಿಹಾಸ ಸೃಷ್ಟಿಸಿತ್ತು. ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಅಧಿಕಾರದಿಂದ ಕೆಳಗಿಳಿಸಲು ರಚನೆಯಾಗಿದ್ದ ಮೈತ್ರಿಕೂಟಕ್ಕೆ ಬೆಂಬಲ ನೀಡುವ ಮೂಲಕ ಇಸ್ರೇಲ್ ಸರ್ಕಾರವನ್ನು ಸೇರಿದ ಮೊದಲ ಅರಬ್ ಪಕ್ಷ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.
ಶುಕ್ರವಾರ ಸುಪ್ರೀಂಕೋರ್ಟ್, ಸಂಸದರ ನಿರ್ಧಾರವನ್ನು ಸರ್ವಾನುಮತದಿಂದ ತಡೆಹಿಡಿದು ಯುನೈಟೆಡ್ ಅರಬ್ ಲಿಸ್ಟ್ ಮತ್ತು ಮತ್ತೊಂದು ಅರಬ್ ಪಕ್ಷಕ್ಕೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿದೆ. ಫೆಲೆಸ್ತೀನೀಯರ ಮೇಲಿನ ಇಸ್ರೇಲ್‍ನ ಕ್ರಮವನ್ನು ತೀವ್ರವಾಗಿ ಟೀಕಿಸುವ ಎಡಪಂಥೀಯ ಯಹೂದಿ ಸಂಸದ ಆಫರ್ ಕಾಸಿಫ್ ಅವರ ಉಮೇದುವಾರಿಕೆಯನ್ನು ನ್ಯಾಯಾಧೀಶರು 7-2 ಮತಗಳ ಅಂತರದಿಂದ ಎತ್ತಿಹಿಡಿದಿದ್ದಾರೆ.