Texas | ATM ಮೇಲೆ ಸಿಕ್ಕಿತು 1.28 ಲಕ್ಷ ಡಾಲರ್: ಒಂದು ಡಾಲರ್ ಕೂಡ ಮುಟ್ಟದೆ ಹಿಂತಿರುಗಿಸಿದ ಕ್ಷೌರಿಕ
ಬ್ಯಾಂಕ್ ಆಫ್ ಅಮೇರಿಕಾಗೆ ಹಣ ವಾಪಸ್
Photo Credit : AP
ಲೆವಿಸ್‌ವಿಲ್ಲೆ (ಟೆಕ್ಸಾಸ್): ಬ್ಯಾಂಕ್ ಆಫ್ ಅಮೇರಿಕಾ ಎಟಿಎಂ ಮೇಲೆ ಬಿದ್ದಿದ್ದ 1,28,514 ಡಾಲರ್ (ಸುಮಾರು 1.23 ಕೋಟಿ ರೂ.) ನಗದನ್ನು ಒಂದು ಡಾಲರ್ ಕೂಡ ಕಡಿಮೆಯಾಗದಂತೆ ಹಿಂತಿರುಗಿಸಿದ 37 ವರ್ಷದ ಕ್ಷೌರಿಕರೊಬ್ಬರ ಪ್ರಾಮಾಣಿಕತೆಯನ್ನು ಲೆವಿಸ್‌ವಿಲ್ಲೆ ಪೊಲೀಸರು ಶ್ಲಾಘಿಸಿದ್ದಾರೆ.
ಗುರುತನ್ನು ಬಹಿರಂಗಪಡಿಸಲು ಇಚ್ಛಿಸದ ವ್ಯಕ್ತಿಗೆ ಆಗಸ್ಟ್ 3ರಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ವೆಸ್ಟ್ ಮೇನ್ ಸ್ಟ್ರೀಟ್ ನಲ್ಲಿರುವ ಬ್ಯಾಂಕ್ ಆಫ್ ಅಮೇರಿಕಾ ಶಾಖೆಯ ಹೊರಗೆ ಹಣದ ಚೀಲ ಸಿಕ್ಕಿತ್ತು. ಆ ವೇಳೆ ಅವರೊಂದಿಗೆ 42 ವರ್ಷದ ಮಹಿಳೆಯೊಬ್ಬರು ಇದ್ದರು. ಸಮೀಪದಲ್ಲೇ ಪೊಲೀಸರಿಗೆ ಮತ್ತೊಂದು ಚಿಕ್ಕ ಚೀಲವೂ ಸಿಕ್ಕಿದ್ದು, ಅದರಲ್ಲಿ 19 ಚೆಕ್ ಗಳಿದ್ದವು ಎಂದು CBS ನ್ಯೂಸ್ ಟೆಕ್ಸಾಸ್ ವರದಿ ಮಾಡಿದೆ.
ಚೀಲದಲ್ಲಿದ್ದ ಮಾಹಿತಿಯ ಆಧಾರದಲ್ಲಿ ಹಣವು ಸಮೀಪದ ‘ಚಿಕ್-ಫಿಲ್-ಎ’ ರೆಸ್ಟೋರೆಂಟ್‌ಗೆ ಸೇರಿರಬಹುದು ಎಂದು ಭಾವಿಸಿದ ವ್ಯಕ್ತಿ, ಅದನ್ನು ಹಿಂತಿರುಗಿಸಲು ಅಲ್ಲಿಗೆ ತೆರಳಿದರು. ಆದರೆ ಹಣ ತಮ್ಮದಲ್ಲ ಎಂದು ರೆಸ್ಟೋರೆಂಟ್ ವ್ಯವಸ್ಥಾಪಕರು ತಿಳಿಸಿದರು. ಬಳಿಕ ವ್ಯಕ್ತಿ 911ಕ್ಕೆ ಕರೆ ಮಾಡಿದರು. ಸ್ಥಳಕ್ಕೆ ಬಂದ ಪೊಲೀಸರು ಎರಡೂ ಚೀಲಗಳನ್ನು ವಶಕ್ಕೆ ಪಡೆದರು.
ನಗದು ಇದ್ದ ಚೀಲದಲ್ಲಿನ ಬ್ಯಾಂಕ್ ರಸೀದಿಯಲ್ಲಿ ನಿಖರವಾದ ಹಣದ ಮೊತ್ತ ನಮೂದಾಗಿತ್ತು. ಪೊಲೀಸರು ಹಣವನ್ನು ಎರಡು ಬಾರಿ ಕೈಯಿಂದ ಎಣಿಸಿದರು. ಬಳಿಕ ಡಿಜಿಟಲ್ ಕರೆನ್ಸಿ ಕೌಂಟರ್ ಬಳಸಿ ಮೊತ್ತವನ್ನು ಮತ್ತೊಮ್ಮೆ ಪರಿಶೀಲಿಸಿದರು. ಸೀಲ್ ಮಾಡಲಾದ ಚೀಲವನ್ನು ಲೆವಿಸ್‌ವಿಲ್ಲೆ ಪೊಲೀಸ್ ಇಲಾಖೆಯ ಆಸ್ತಿ ಸಂರಕ್ಷಣಾ ಕೊಠಡಿಗೆ ಕಳುಹಿಸಲಾಯಿತು.
ತನಿಖೆಯಲ್ಲಿ ಹಣವು ಬ್ಯಾಂಕ್ ಆಫ್ ಅಮೇರಿಕಾಗೆ ಸೇರಿದ್ದು ಹಾಗೂ ಬ್ಯಾಂಕ್ ನ ನಗದು ನಿರ್ವಹಣಾ ಸಂಸ್ಥೆಯಾದ ‘ಬ್ರಿಂಕ್ಸ್’ ಅದನ್ನು ನಿರ್ವಹಿಸುತ್ತಿತ್ತು ಎಂಬುದು ಪತ್ತೆಯಾಯಿತು. ಎಟಿಎಂನಲ್ಲಿ ಕೆಲಸ ಮುಗಿಸಿ ತೆರಳುವಾಗ ಬ್ರಿಂಕ್ಸ್ ನ ತಂತ್ರಜ್ಞರೊಬ್ಬರು ಹಣದ ಚೀಲವನ್ನು ಆಕಸ್ಮಿಕವಾಗಿ ಅಲ್ಲಿಯೇ ಬಿಟ್ಟುಹೋಗಿದ್ದರು ಎಂದು ತನಿಖಾಧಿಕಾರಿಗಳು ಕಂಡುಕೊಂಡರು. ಈ ಘಟನೆಗೆ ಯಾವುದೇ ಅಪರಾಧ ಕೃತ್ಯದ ನಂಟಿಲ್ಲ ಎಂದು ಪೊಲೀಸರು ಖಚಿತಪಡಿಸಿದರು. ಬಳಿಕ ಬ್ಯಾಂಕ್ ಆಫ್ ಅಮೇರಿಕಾ ಹಣವನ್ನು ಮರಳಿ ಪಡೆಯಿತು.
ಹಿಂದೆಂದೂ ಇಂಥ ಮೊತ್ತ ನೋಡಿಲ್ಲ
ಲೆವಿಸ್‌ವಿಲ್ಲೆ ಪೊಲೀಸ್ ಪತ್ತೇದಾರಿ ಜೀನಾ ಮಿಲ್ಲರ್, ತಮ್ಮ ವೃತ್ತಿಜೀವನದಲ್ಲಿ ಇಷ್ಟು ದೊಡ್ಡ ಮೊತ್ತದ ಹಣ ಸಿಕ್ಕಿರುವ ಪ್ರಕರಣವನ್ನು ಹಿಂದೆಂದೂ ನೋಡಿರಲಿಲ್ಲ ಎಂದು ಹೇಳಿದರು.
‘ಒಳ್ಳೆಯ ಮನಸ್ಥಿತಿಯ ಜನರು ತಮಗೆ ಸಿಕ್ಕ ವ್ಯಾಲೆಟ್ ಗಳು, ಗುರುತಿನ ಚೀಟಿಗಳು ಮುಂತಾದವುಗಳನ್ನು ಒಪ್ಪಿಸಿದ ಪ್ರಕರಣಗಳನ್ನು ನಾನು ನೋಡಿದ್ದೇನೆ. ಆದರೆ 1,28,000 ಡಾಲರ್ ನಂತಹ ದೊಡ್ಡ ಮೊತ್ತದ ಹಣವನ್ನು ಯಾರಾದರೂ ತಂದು ಒಪ್ಪಿಸಿರುವ ಘಟನೆ ನನಗೆ ಹಿಂದೆಂದೂ ಎದುರಾಗಿರಲಿಲ್ಲ’ ಎಂದು ಮಿಲ್ಲರ್ CBS ನ್ಯೂಸ್ ಟೆಕ್ಸಾಸ್‌ಗೆ ತಿಳಿಸಿದರು.
ಲೆವಿಸ್‌ವಿಲ್ಲೆ ಪೊಲೀಸ್ ಮುಖ್ಯಸ್ಥ ಬ್ರೂಕ್ ರೋಲಿನ್ಸ್ ಅವರು ವ್ಯಕ್ತಿಯ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
‘ಅವರು ಕಿಂಚಿತ್ತೂ ಹಿಂಜರಿಯಲಿಲ್ಲ. ಹಣವನ್ನು ಎಲ್ಲಿ ಒಪ್ಪಿಸಬೇಕು ಎಂದು ಅವರಿಗೆ ಅನ್ನಿಸಿತೋ, ನೇರವಾಗಿ ಅಲ್ಲಿಗೇ ಅದನ್ನು ಕೊಂಡೊಯ್ದರು’ ಎಂದು ರೋಲಿನ್ಸ್ NBC DFWಗೆ ತಿಳಿಸಿದರು.
ಹಣವನ್ನು ಹಿಂತಿರುಗಿಸಿದ ವ್ಯಕ್ತಿ ಪ್ರತಿಯಾಗಿ ಏನನ್ನೂ ನಿರೀಕ್ಷಿಸದೆ ಅಲ್ಲಿಂದ ತೆರಳಿದರು. ಬ್ಯಾಂಕ್ ಆಫ್ ಅಮೇರಿಕಾ ಅವರಿಗೆ ಕೃತಜ್ಞತೆ ಸಲ್ಲಿಸಿದೆ.
ಒಂದು ವೇಳೆ ಹಣವನ್ನು ಹಿಂತಿರುಗಿಸದಿದ್ದರೆ, ಗಂಭೀರ ಸ್ವರೂಪದ ಕಳ್ಳತನದ (ಫೆಲನಿ) ಆರೋಪ ಎದುರಿಸಬೇಕಾಗಬಹುದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಾಮಾಣಿಕತೆ ಮೆರೆದ ವ್ಯಕ್ತಿಯನ್ನು ಗೌರವಿಸಲು ಲೆವಿಸ್‌ವಿಲ್ಲೆ ಅಧಿಕಾರಿಗಳು ಮುಂದಾಗಿದ್ದಾರೆ. ಇಲಾಖೆಯ ಆಂತರಿಕ ಸಮಾರಂಭವೊಂದರಲ್ಲಿ ಭಾಗವಹಿಸಲು ತಾವು ಸಮ್ಮತಿಸಿರುವುದಾಗಿ ಆ ವ್ಯಕ್ತಿ CBS ನ್ಯೂಸ್ ಟೆಕ್ಸಾಸ್ ಗೆ ತಿಳಿಸಿದ್ದಾರೆ.