ಸಾಂದರ್ಭಿಕ ಚಿತ್ರ

ಪ್ಯಾರಿಸ್: ಏರುತ್ತಿರುವ ಇಂಧನ ಬೆಲೆಗಳಿಗೆ ಪ್ರತಿಕ್ರಿಯೆಯಾಗಿ ಜಿ7 ರಾಷ್ಟ್ರಗಳು ಮುಂಬರುವ ವಾರಗಳಲ್ಲಿ 10 ಕೋಟಿ ಬ್ಯಾರಲ್ ತೈಲ ಮತ್ತು ಇಂಧನ ಉತ್ಪನ್ನಗಳನ್ನು ಬಿಡುಗಡೆ ಮಾಡಲು ಸಮ್ಮತಿಸಿವೆ. ಆರಂಭಿಕ ಹಂತದಲ್ಲಿ ಭಾರಿ ಪ್ರಮಾಣದ ಡೀಸಲ್ ಅನ್ನು ಪೂರೈಸಲು ನಿರ್ಧರಿಸಲಾಗಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಏರುತ್ತಿರುವ ಇಂಧನ ವೆಚ್ಚಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿ7 ನಾಯಕರ ಮೇಲೆ ಒತ್ತಡ ಹೇರಿದ ನಂತರ ಈ ನಿರ್ಧಾರಕ್ಕೆ ಬರಲಾಗಿದೆ. ಮುಂಬರುವ ದಿನಗಳಲ್ಲಿ ಹೆಚ್ಚಿನ ಪ್ರಮಾಣದ ಡೀಸಲ್ ಬಿಡುಗಡೆ ಮಾಡಲಾಗುವುದು ಹಾಗೂ ಉಳಿದ ಪ್ರಮಾಣವನ್ನು ಮುಂದಿನ ನಾಲ್ಕು ತಿಂಗಳುಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಒಕ್ಕೂಟ ತಿಳಿಸಿದೆ. ಜಿ7 ಅಧ್ಯಕ್ಷತೆಯನ್ನು ವಹಿಸಿರುವ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರ ಅಧ್ಯಕ್ಷತೆಯಲ್ಲಿ ವೀಡಿಯೊ ಕಾನ್ಫರೆನ್ಸ್ ಮೂಲಕ ನಡೆದ ಜಿ7 ನಾಯಕರ ಸಭೆಯ ನಂತರ ಈ ನಿರ್ಧಾರವನ್ನು ಪ್ರಕಟಿಸಲಾಗಿದೆ.

ಈ ಒಪ್ಪಂದವು ಜಿ7 ರಾಷ್ಟ್ರಗಳ ನಡುವಿನ ಒಗ್ಗಟ್ಟನ್ನು ತೋರಿಸುತ್ತದೆ ಮತ್ತು ಈ ಹೆಚ್ಚುವರಿ ಪೂರೈಕೆಯು ಇಂಧನ ಮಾರುಕಟ್ಟೆಯಲ್ಲಿ ಲಭ್ಯತೆಯನ್ನು ಹೆಚ್ಚಿಸಿ, ಬೆಲೆಗಳನ್ನು ಇಳಿಸಲು ನೆರವಾಗಲಿದೆ ಎಂದು ಮ್ಯಾಕ್ರೋನ್ ಪ್ರತಿಪಾದಿಸಿದರು.

ಜಿ7 ಒಕ್ಕೂಟವು ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಬ್ರಿಟನ್ ಮತ್ತು ಅಮೆರಿಕ ದೇಶಗಳನ್ನು ಒಳಗೊಂಡಿದ್ದು, ಯುರೋಪಿಯನ್ ಯೂನಿಯನ್ ಕೂಡ ಇದರಲ್ಲಿ ಪ್ರತಿನಿಧಿಸುತ್ತದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor