×
Ad

ಸಿರಿಯಾದಲ್ಲಿ ಹೊಸ ಕದನ ವಿರಾಮ ಒಪ್ಪಂದ

Update: 2025-07-17 21:12 IST

PC : NDTV 

ದಮಾಸ್ಕಸ್, ಜು.17: ಕೆಲ ದಿನಗಳಿಂದ ಮುಂದುವರಿಯುತ್ತಿರುವ ತೀವ್ರ ಘರ್ಷಣೆಯನ್ನು ಕೊನೆಗೊಳಿಸುವ ಉದ್ದೇಶದಿಂದ ಸಿರಿಯಾ ಸರಕಾರದ ಅಧಿಕಾರಿಗಳು ಮತ್ತು ಡ್ರೂಝ್ ಸಮುದಾಯದ ಮುಖಂಡರು ಹೊಸ ಕದನ ವಿರಾಮ ಘೋಷಿಸಿದ್ದಾರೆ.

ಡ್ರೂಝ್ ಸಮುದಾಯದ ನೆರವಿಗೆ ಧಾವಿಸಿದ್ದ ಇಸ್ರೇಲ್ ಬುಧವಾರ ತಡರಾತ್ರಿ ಸಿರಿಯಾ ರಾಜಧಾನಿ ದಮಾಸ್ಕಸ್‍ ನ ಕೇಂದ್ರಭಾಗದಲ್ಲಿರುವ ಸಿರಿಯಾದ ರಕ್ಷಣಾ ಇಲಾಖೆಯ ಕೇಂದ್ರ ಕಚೇರಿ ಹಾಗೂ ಅಧ್ಯಕ್ಷರ ಅರಮನೆಯನ್ನು ಗುರಿಯಾಗಿಸಿ ಭಾರೀ ಬಾಂಬ್ ದಾಳಿ ನಡೆಸಿದ್ದು ಕನಿಷ್ಠ ಮೂವರು ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಡ್ರೂಝ್ ಅಲ್ಪಸಂಖ್ಯಾತ ಸಮುದಾಯದ ಬಾಹುಳ್ಯವಿರುವ ದಕ್ಷಿಣ ಸಿರಿಯಾದ ಸುವೈದಾ ಪ್ರಾಂತದಿಂದ ಪಡೆಗಳನ್ನು ಹಿಂಪಡೆಯುವಂತೆ ದಾಳಿಗೂ ಮುನ್ನ ಇಸ್ರೇಲ್ ಎಚ್ಚರಿಕೆ ನೀಡಿತ್ತು ಎಂದು ವರದಿಯಾಗಿದೆ.

ಉದ್ವಿಗ್ನತೆ ತೀವ್ರಗೊಳ್ಳುತ್ತಿರುವಂತೆಯೇ ಮಧ್ಯ ಪ್ರವೇಶಿಸಿರುವ ಅಮೆರಿಕ, ತಪ್ಪು ತಿಳುವಳಿಕೆಯಿಂದ ಹಿಂಸಾಚಾರ ಭುಗಿಲೆದ್ದಿದ್ದು ಎಲ್ಲಾ ಪಕ್ಷದವರೂ ಆಕ್ರಮಣವನ್ನು ಸ್ಥಗಿತಗೊಳಿಸಲು ಒಪ್ಪಿದ್ದಾರೆ ಎಂದು ಹೇಳಿದೆ.

ಈ ಮಧ್ಯೆ, ಸುವೈದಾ ಪ್ರಾಂತದಿಂದ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುವ ಪ್ರಕ್ರಿಯೆ ಆರಂಭಿಸಿರುವುದಾಗಿ ಸಿರಿಯಾ ಸರಕಾರ ಘೋಷಿಸಿದೆ. ದೇಶವು ಯುದ್ಧಕ್ಕೆ ಹೆದರುತ್ತಿಲ್ಲ. ಆದರೆ ವಿನಾಶ ಮತ್ತು ಅವ್ಯವಸ್ಥೆಯ ಸ್ಥಿತಿಯಲ್ಲಿ ನಮ್ಮ ಜನರನ್ನು ಇರಿಸಲು ನಾವು ಬಯಸುವುದಿಲ್ಲ ಎಂದು ಸಿರಿಯಾ ಅಧ್ಯಕ್ಷ ಅಹ್ಮದ್ ಅಲ್-ಶರಾ ಹೇಳಿದ್ದಾರೆ.

ಟಿವಿ ವಾಹಿನಿಯ ಮೂಲಕ ದೇಶವನ್ನುದ್ದೇಶಿಸಿ ಮಾತನಾಡಿದ ಅವರು `ಸಿರಿಯಾಕ್ಕೆ ಎರಡು ಆಯ್ಕೆಗಳಿದ್ದವು. ನಮ್ಮ ಡ್ರೂಝ್ ಪ್ರಜೆಗಳನ್ನು ತೊಂದರೆಗೆ ಒಡ್ಡಿ ಇಸ್ರೇಲ್ ಜೊತೆ ಯುದ್ಧ ಅಥವಾ ಡ್ರೂಝ್ ನಾಯಕರು ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ರಾಷ್ಟೀಯ ಹಿತಾಸಕ್ತಿಗೆ ಆದ್ಯತೆ ನೀಡಲು ಅವಕಾಶ ನೀಡುವುದು. ನಾವು ಯುದ್ಧವನ್ನು ಬಯಸುವುದಿಲ್ಲ ಮತ್ತು ಡ್ರೂಝ್ ಸಮುದಾಯದವರ ಹಕ್ಕುಗಳನ್ನು ರಕ್ಷಿಸಲು ಬದ್ಧ' ಎಂದು ಹೇಳಿದರು.

ಸಿರಿಯಾದ ಜನರನ್ನು ವಿಭಜಿಸಲು ಇಸ್ರೇಲ್ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ ಅವರು, ನಮ್ಮನ್ನು ಅಸ್ಥಿರಗೊಳಿಸಲು ಮತ್ತು ನಮ್ಮನ್ನು ವಿಭಜನೆಗೊಳಿಸಲು ನಿರಂತರ ಪ್ರಯತ್ನಿಸುವ ಇಸ್ರೇಲ್ ಮತ್ತೊಮ್ಮೆ ನಮ್ಮ ಭೂಮಿಯನ್ನು ಯುದ್ಧಕ್ಷೇತ್ರವನ್ನಾಗಿ ಪರಿವರ್ತಿಸಲು ಮತ್ತು ನಮ್ಮ ಜನರೊಳಗಿನ ಸೌಹಾರ್ದತೆಯನ್ನು ಹಳಿತಪ್ಪಿಸಲು ಬಯಸಿದೆ ಎಂದರು.

*ಅಮೆರಿಕದ ಮಧ್ಯಪ್ರವೇಶ

ಸಿರಿಯಾದಲ್ಲಿ ಭುಗಿಲೆದ್ದಿರುವ ಘರ್ಷಣೆಯನ್ನು ಕೊನೆಗೊಳಿಸಲು ಅಮೆರಿಕ ಮಧ್ಯಪ್ರವೇಶಿಸಿದ್ದು ವಿದೇಶಾಂಗ ಕಾರ್ಯದರ್ಶಿ ಮಾರ್ಕೋ ರೂಬಿಯೊ ಸಂಘರ್ಷಕ್ಕೆ ಸಂಬಂಧಿಸಿದ ಎಲ್ಲಾ ಪಕ್ಷದವರೊಂದಿಗೆ ಸರಣಿ ಮಾತುಕತೆ ನಡೆಸಿದ್ದರು.

ಹೊಸ ಕದನ ವಿರಾಮದ ಪ್ರಕಾರ `ಮಿಲಿಟರಿ ಕಾರ್ಯಾಚರಣೆ ಸಂಪೂರ್ಣ ಸ್ಥಗಿತಗೊಳ್ಳಲಿದೆ. ಡ್ರೂಝ್ ಮುಖಂಡರು ಹಾಗೂ ಸಮುದಾಯದ ಸದಸ್ಯರನ್ನು ಒಳಗೊಂಡ ಒಂದು ಮೇಲ್ವಿಚಾರಣಾ ಸಮಿತಿಯನ್ನು ರೂಪಿಸಲಾಗುವುದು ಮತ್ತು ಈ ಸಮಿತಿಯು ಸುವೈದಾ ಪ್ರಾಂತದಲ್ಲಿ ಭದ್ರತೆಯ ಹೊಣೆ ವಹಿಸುತ್ತದೆ'.

ಮಿಲಿಟರಿ ಕಾರ್ಯಾಚರಣೆ ತಕ್ಷಣ ಮತ್ತು ಸಂಪೂರ್ಣ ಸ್ಥಗಿತಗೊಳ್ಳಲು ಮತ್ತು ಎಲ್ಲಾ ಕಡೆಯವರೂ ಉದ್ವಿಗ್ನತೆ ಶಮನಕ್ಕೆ ಆದ್ಯತೆ ನೀಡಲು ಹಾಗೂ ಸೇನೆಯು ತನ್ನ ನೆಲೆಗೆ ಹಿಂತಿರುಗುವ ಷರತ್ತುಗಳನ್ನು ಒಳಗೊಂಡ ಕದನ ವಿರಾಮ ಒಪ್ಪಂದ ಏರ್ಪಟ್ಟಿರುವುದಾಗಿ ಡ್ರೂಝ್ ನಾಯಕರು ದೃಢಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News