11 ಸಾವಿರ ಉದ್ಯೋಗಿಗಳಿಗೆ 'ಗೇಟ್‌ಪಾಸ್' ನೀಡಿದ ಆಕ್ಸೆಂಚರ್!
ಆಕ್ಸೆಂಚರ್ ಕಂಪನಿ| ಸಿಇಓ ಜ್ಯೂಲಿ ಸ್ವೀಟ್ PC: x.com/layoffhub
ಹೊಸದಿಲ್ಲಿ: ಕಳೆದ ಮೂರು ತಿಂಗಳಲ್ಲಿ ಆಕ್ಸೆಂಚರ್ ವಿಶ್ವಾದ್ಯಂತ 11 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳನ್ನು ಕಿತ್ತುಹಾಕಿದೆ. ಎಐ ಯುಗಕ್ಕೆ ಕಂಪನಿಯ ಉದ್ಯೋಗಿಗಳನ್ನು ಮರುರೂಪಿಸಬೇಕಾಗಿರುವ ಹಿನ್ನೆಲೆಯಲ್ಲಿ ಎಐ ಕ್ಷೇತ್ರದಲ್ಲಿ ತರಬೇತಿ ನೀಡಲು ಸಾಧ್ಯವಾಗದ ಉದ್ಯೋಗಿಗಳನ್ನು ವಜಾ ಮಾಡಿರುವುದಾಗಿ ಕಂಪನಿ ಸ್ಪಷ್ಟಪಡಿಸಿದೆ. ಈಗಾಗಲೇ 11 ಸಾವಿರ ಮಂದಿಯನ್ನು ಮನೆಗೆ ಕಳುಹಿಸಿರುವುದನ್ನು ಕಂಪನಿ ದೃಢಪಡಿಸಿದ್ದು, ಸಂಖ್ಯೆ ಮುಂದಿನ ಹಣಕಾಸು ವರ್ಷದಲ್ಲಿ ಹೆಚ್ಚಲಿದೆ ಎಂಬ ಸುಳಿವು ನೀಡಿದೆ.
ಹಾಲಿ ಉದ್ಯೋಗಿಗಳ ಪೈಕಿ ಕೃತಕ ಬುದ್ಧಿಮತ್ತೆ ಕೌಶಲದಲ್ಲಿ ಮರು ತರಬೇತಿ ನೀಡಬಹುದು ಎನಿಸಿದ ಮಂದಿಯನ್ನು ಕಂಪನಿ ಉಳಿಸಿಕೊಂಡಿದೆ. ಇದೇ ವೇಳೆ ಸಂಖ್ಯೆಯನ್ನು ಮುಂದಿನ ಹಣಕಾಸು ವರ್ಷದಲ್ಲಿ ಹೆಚ್ಚಿಸಲಾಗುವುದು ಎಂದು ಕಂಪನಿಯ ಸಿಇಓ ಜ್ಯೂಲಿ ಸ್ವೀಟ್ ಹೇಳಿದ್ದಾಗಿ ಬ್ಯುಸಿನೆಸ್ ಇನ್ಸೈಡರ್ ವರದಿ ಮಾಡಿದೆ.
ಆಗಸ್ಟ್ ಕೊನೆಯ ವೇಳೆಗೆ ಆಕ್ಸೆಂಚರ್ ಒಟ್ಟು 7.79 ಲಕ್ಷ ಉದ್ಯೋಗಿಗಳನ್ನು ಹೊಂದಿದೆ. ಮೂರು ತಿಂಗಳ ಹಿಂದೆ ಈ ಸಂಖ್ಯೆ 7,91,000 ಆಗಿತ್ತು. ಈ ವರ್ಷದ ಆರಂಭದಿಂದ ಉದ್ಯೋಗಿಗಳ ವಜಾ ಪ್ರಕ್ರಿಯೆ ಆರಂಭವಾಗಿದ್ದು, 2025ರ ನವೆಂಬರ್ ವರೆಗೆ ಮುಂದುವರಿಯಲಿದೆ ಎಂದು ತಿಳಿದುಬಂದಿದೆ. ಕಂಪನಿಯ ಪುನರ್ರಚನೆಯಲ್ಲಿ ಬೇರ್ಪಡಿಕೆ ವೆಚ್ಚ ಸೇರಿದ್ದು, ಕಂಪನಿಗೆ ಸುಮಾರು 100 ಕೋಟಿ ಡಾಲರ್ ಉಳಿತಾಯವಾಗಲಿದೆ ಎಂದು ಸ್ಪಷ್ಟಪಡಿಸಿದೆ.