×
Ad

ವಿಶ್ವ ಸಂಸ್ಥೆ ಸಾಮಾನ್ಯ ಸಭೆ ಉದ್ದೇಶಿಸಿ ಮಾತನಾಡಿದ ಮೊದಲ ದಲಿತ ಮಹಿಳೆ ಬೀನಾ ಜಾನ್ಸನ್

Update: 2023-10-05 16:15 IST

ಬೀನಾ ಜಾನ್ಸನ್ (Photo: thenewsminute.com)

ನ್ಯೂಯಾರ್ಕ್: ಸೆ. 18ರಂದು ನಡೆದ ವಿಶ್ವ ಸಂಸ್ಥೆಯ ಸಾಮಾನ್ಯ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ಭಾರತದ ಪ್ರಪ್ರಥಮ ದಲಿತ ಮಹಿಳೆ ಎಂಬ ಖ್ಯಾತಿಗೆ ದಲಿತ ಮಾನವ ಹಕ್ಕುಗಳಿಗಾಗಿ ರಾಷ್ಟ್ರೀಯ ಅಭಿಯಾನ(NCDHR) ಸಂಘಟನೆಯ ಪ್ರಧಾನ ಕಾರ್ಯದರ್ಶಿ ಬೀನಾ ಜಾನ್ಸನ್ ಪಾತ್ರರಾಗಿದ್ದಾರೆ ಎಂದು thenewsminute.com ವರದಿ ಮಾಡಿದೆ.

ಬಡತನವನ್ನು ನಿರ್ಮೂಲನೆ ಮಾಡಬೇಕಿದ್ದರೆ ತಾರತಮ್ಯರಹಿತ ಸಿದ್ಧಾಂತಗಳನ್ನು ಎತ್ತಿ ಹಿಡಿಯಬೇಕಿದೆ ಹಾಗೂ ತಾರತಮ್ಯಕ್ಕೊಳಗಾಗಿರುವ ಹಾಗೂ ಶೋಷಿತ ಸಮುದಾಯಗಳಲ್ಲಿನ ಮಹಿಳಾ ಮತ್ತು ತೃತೀಯ ಲಿಂಗಿ ಸಮುದಾಯಕ್ಕೆ ಬೆಂಬಲ ನೀಡಲು ನಿರ್ದಿಷ್ಟ ವ್ಯವಸ್ಥೆಯ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

2030ರ ಸುಸ್ಥಿರ ಬೆಳವಣಿಗೆ ಕಾರ್ಯಸೂಚಿ ಹಾಗೂ 17 ಸುಸ್ಥಿರ ಬೆಳವಣಿಗೆ ಗುರಿಗಳ ಜಾರಿಯ ಪರಾಮರ್ಶೆಗಾಗಿ ಕಳೆದ ತಿಂಗಳು ನ್ಯೂಯಾರ್ಕ್ ನಗರದಲ್ಲಿ ನಡೆದ ದ್ವಿತೀಯ ‘ಸುಸ್ಥಿರ ಬೆಳವಣಿಗೆ ಗುರಿಗಳು’ ಶೃಂಗಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

“ನಾನು ದಲಿತ ಸಮುದಾಯಕ್ಕೆ ಸೇರಿರುವ ವ್ಯಕ್ತಿಯಾಗಿದ್ದು, ಉದ್ಯೋಗದ ಸ್ಥಳಗಳಲ್ಲಿ ತಾರತಮ್ಯ ಹಾಗೂ ಭಿನ್ನಾಭಿಪ್ರಾಯಕ್ಕೆ ಗುರಿಯಾಗಿರುವ ಸಮುದಾಯಗಳ ಪರವಾದ ತಲೆತಲೆಮಾರಿನಿಂದ ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಬಹಿಷ್ಕರಿಸಲ್ಪಟ್ಟಿರುವ ಹಾಗೂ ತಾರತಮ್ಯಕ್ಕೊಳಗಾಗಿರುವ ದಲಿತರು, ಹರಾತಿನ್, ರೋಮಾ, ಕಿಲ್ಲಂಬೊಲ ಹಾಗೂ ಇತರ ಸಮುದಾಯಗಳ ಜನರ ಗುಂಪನ್ನು ಪ್ರತಿನಿಧಿಸುತ್ತಿದ್ದೇನೆ. ಎಲ್ಲ ಖಂಡಗಳಲ್ಲೂ ಮೂಲನಿವಾಸಿಗಳೊಂದಿಗೆ ನಮ್ಮ ಜನಸಂಖ್ಯೆಯು ಸುಮಾರು 270 ದಶಲಕ್ಷವಿದೆ. ಆಫ್ರಿಕಾ ಸಂತತಿಯ ಜನರು, ವಿಕಲಚೇತನರು, ಸಲಿಂಗ ಕಾಮಿಗಳೊಂದಿಗೆ ಸುಸ್ಥಿರ ಬೆಳವಣಿಗೆ ಗುರಿಯಾಗಿರುವ ‘ಯಾರನ್ನೂ ಹಿಂದೆ ಬಿಡಬೇಡಿ’ ಧ್ಯೇಯವಾಕ್ಯ ಅನ್ವಯವಾಗಬೇಕಾದ ಅಂಚಿನ ಸಮುದಾಯಗಳ ಪೈಕಿ ನಾವು ನೈಜ ಸಮುದಾಯವಾಗಿದ್ದೇವೆ” ಎಂದು ಬೀನಾ ಜಾನ್ಸನ್ ಹೇಳಿದ್ದಾರೆ.

“ಯಾರನ್ನೂ ಹಿಂದೆ ಬಿಡಬೇಡಿ” ಎಂಬುದು 2030ರ ಸುಸ್ಥಿರ ಬೆಳವಣಿಗೆ ಗುರಿಗಳ ಧ್ಯೇಯ ವಾಕ್ಯವಾಗಿದ್ದು, ಇದನ್ನು 2015ರಲ್ಲಿ ವಿಶ್ವ ಸಂಸ್ಥೆಯ ಸದಸ್ಯ ರಾಷ್ಟ್ರಗಳು ಅಳವಡಿಸಿಕೊಂಡಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News