×
Ad

ಅಫ್ಘಾನ್, ಪಾಕ್ ಪಡೆಗಳ ನಡುವೆ ಭೀಕರ ಗಡಿಕಾಳಗ : ಉಭಯ ಪಡೆಗಳಲ್ಲಿಯೂ ಭಾರೀ ಸಾವುನೋವು

ಮೃತರಲ್ಲಿ 12ಕ್ಕೂ ಅಧಿಕ ಮಂದಿ ನಾಗರಿಕರು

Update: 2025-10-15 21:12 IST

ಸಾಂದರ್ಭಿಕ ಚಿತ್ರ | Photo Credi : aljazeera.com 

ಕಾಬೂಲ್,ಅ.18: ಅಫ್ಘಾನ್ ಹಾಗೂ ಪಾಕಿಸ್ತಾನದ ಪಡೆಗಳ ನಡುವೆ ಬುಧವಾರ ಮುಂಜಾನೆ ಮತ್ತೆ ಗಡಿ ಕಾಳಗ ಭುಗಿಲೆದ್ದಿದ್ದು, ಎರಡೂ ಕಡೆಗಳಲ್ಲಿ ಭಾರೀ ಸಾವುನೋವು ಸಂಭವಿಸಿರುವುದಾಗಿ ವರದಿಯಾಗಿದೆ. ಘರ್ಷಣೆಯಲ್ಲಿ ಕನಿಷ್ಠ 12 ಮಂದಿ ನಾಗರಿಕರು ಮೃತಪಟ್ಟಿದ್ದಾರೆ.

ತಾಲಿಬಾನ್ ಪಡೆಗಳು ಪಾಕ್ ಸೇನೆಯ ಗಡಿ ಹೊರಠಾಣೆಯನ್ನು ನಾಶಪಡಿಸಿವೆ ಮತ್ತು ಟ್ಯಾಂಕ್ ಒಂದನ್ನು ಕೂಡಾ ಧ್ವಂಸಗೊಳಿಸಿದೆ.

ಪಾಕಿಸ್ತಾನದ ಚಮನ್ ಜಿಲ್ಲೆ ಹಾಗೂ ಆಗ್ನೇಯ ಅಫ್ಘಾನಿಸ್ತಾನದ ಸ್ಪಿನ್ ಬೊಲ್ಡಾಕ್ ಜಿಲ್ಲೆಯಲ್ಲಿ ಭುಗಿಲೆದ್ದಿರುವ ಭೀಕರ ಘರ್ಷಣೆಗೆ ಎರಡೂ ದೇಶಗಳು ಪರಸ್ಪರರ ವಿರುದ್ಧ ದೋಷಾರೋಪ ಮಾಡುತ್ತಿವೆ.

ಸ್ಪಿನ್ ಬೊಲ್ಡಾಕ್ ಪ್ರಾಂತದಲ್ಲಿ ಪಾಕ್ ಪಡೆಗಳ ಮೋರ್ಟಾರ್ ದಾಳಿಗೆ 15 ಮಂದಿ ನಾಗರಿಕರು ಮೃತಪಟ್ಟಿದ್ದಾರೆಂದು ಸ್ಥಳೀಯ ಮಾಹಿತಿ ಇಲಾಖೆಯ ವಕ್ತಾರ ಅಲಿ ಮುಹಮ್ಮದ್ ಹಕ್ಮಾಲ್ ತಿಳಿಸಿದ್ದಾರೆ. ಈ ದಾಳಿಯಲ್ಲಿ 80ಕ್ಕೂ ಅಧಿಕ ಮಹಿಳೆಯರು ಹಾಗೂ ಮಕ್ಕಳು ಗಾಯಗೊಂಡಿದ್ದಾರೆ.

ರಾತ್ರಿಯಿಡೀ ನಡೆಸಿದ ಗಡಿ ಕಾರ್ಯಾಚರಣೆಗಳಲ್ಲಿ ತನ್ನ ಪಡೆಗಳು 58 ಪಾಕಿಸ್ತಾನಿ ಸೈನಿಕರನ್ನು ಹತ್ಯೆಗೈದಿವೆ ಎಂದು ಅಫ್ಘಾನ್ ಸೇನೆ ಹೇಳಿಕೊಂಡಿದೆ. ಇತ್ತ ಪಾಕಿಸ್ತಾನ ಕೂಡಾ ತಾನು 200ಕ್ಕೂ ಅಧಿಕ ಅಫ್ಘಾನ್ ಸೈನಿಕರನ್ನು ಹತ್ಯೆಗೈದಿದ್ದು, ತನ್ನ 23 ಸೈನಿಕರನ್ನು ಕಳೆದುಕೊಂಡಿರುವುದಾಗಿ ಹೇಳಿಕೊಂಡಿದೆ.

ಅಫ್ಘಾನ್ ತಾಲಿಬಾನ್ ವಕ್ತಾರ ಝಬಿನುಲ್ಲಾ ಮುಜಾಹಿದ್ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಬುಧವಾರ ಈ ಬಗ್ಗೆ ಹೇಳಿಕೆಯೊಂದನ್ನು ಪೋಸ್ಟ್ ಮಾಡಿದ್ದು, ಪಾಕ್ ಪಡೆಗಳು ಗಡಿಜಿಲ್ಲೆಯಲ್ಲಿ ಲಘು ಹಾಗೂ ಘನ ಆಯುಧಗಳನ್ನು ಬಳಸಿ ಮುಂಜಾನೆ ವೇಳೆ ದಾಳಿ ನಡೆಸಿರುವುದಾಗಿ ತಿಳಿಸಿದ್ದಾರೆ. ಅಫ್ಘಾನ್ ಪಡೆಗಳ ಪ್ರತೀಕಾರ ದಾಳಿಗೆ ಹಲವಾರು ಪಾಕ್ ಸೈನಿಕರು ಮೃತಪಟ್ಟಿರುವುದಾಗಿ ಅವರು ಹೇಳಿದ್ದಾರೆ.

ಪಾಕಿಸ್ತಾನಿ ಸೇನೆಯ ಶಸ್ತ್ರಾಸ್ತ್ರಗಳು ಹಾಗೂ ಟ್ಯಾಂಕ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಪಾಕ್ ಸೇನಾ ಸ್ಥಾಪನೆಗಳನ್ನು ನಿರ್ನಾಮಗೊಳಿಸಲಾಗಿದೆಯೆಂದು ಅವರು ಹೇಳಿದ್ದಾರೆ.

ಇತ್ತೀಚಿನ ಗಡಿಘರ್ಷಣೆಗಳಲ್ಲಿ ಮೃತಪಟ್ಟಿರುವ 10ಕ್ಕೂ ಅಧಿಕ ಪೊಲೀಸ್ ಹಾಗೂ ಭದ್ರತಾಪಡೆಗಳ ಯೋಧರ ಮೃತದೇಹಗಳ ವೀಡಿಯೊವನ್ನು ಕೂಡಾ ಅಫ್ಘಾನ್ ತಾಲಿಬಾನ್ ಬಿಡುಗಡೆಗೊಳಿಸಿದೆ.

ಆದರೆ ಪಾಕಿಸ್ತಾನದ ಅಧಿಕೃತ ಮಾಧ್ಯಮವೊಂದು ಅಫ್ಘಾನಿ ಪಡೆಗಳು ಹಾಗೂ ಪಾಕಿಸ್ತಾನಿ ತಾಲಿಬಾನ್ ಜಂಟಿಯಾಗಿ ಪಾಕ್ ಠಾಣೆಯೊಂದರ ಮೇಲೆ ಅಪ್ರಚೋದಿತವಾಗಿ ಗುಂಡಿನ ದಾಳಿ ನಡೆಸಿದ್ದಾಗಿ ಹೇಳಿದೆ. ಇದಕ್ಕೆ ಪಾಕ್‌ಪಡೆಗಳು ಖೈಬರ್‌ಪಖ್ತೂನ್‌ಖ್ವಾ ಪ್ರಾಂತದ ಕುರ‌್ರಮ್ ಜಿಲ್ಲೆಯಲ್ಲಿ ಪ್ರಬಲವಾದ ಪ್ರತಿಕ್ರಿಯೆ ನೀಡಿವೆಯೆಂದು ಅದು ಹೇಳಿದೆ.

ಪಾಕ್ ಪಡೆಗಳು ಅಫ್ಘಾನ್ ಟ್ಯಾಂಕ್‌ಗಳು ಹಾಗೂ ಸೇನಾ ಠಾಣೆಗಳನ್ನು ನಾಶಪಡಿಸಿವೆ. ಅಲ್ಲದೆ ಪಾಕ್ ತಾಲಿಬಾನ್‌ನ ವಿಶಾಲವಾದ ತರಬೇತಿ ಕೇಂದ್ರವನ್ನು ಕೂಡಾ ಧ್ವಂಸಗೊಳಿಸಿರುವುದಾಗಿ ಪಾಕ್ ಮಾಧ್ಯಮ ವರದಿ ಮಾಡಿದೆ.

ಪಾಕಿಸ್ತಾನದ ಒರಾಕ್‌ಝಾಯಿ ಪ್ರಾಂತ್ಯದಲ್ಲಿ ನಡೆದ ಪ್ರತ್ಯೇಕ ದಾಳಿಯೊಂದರಲ್ಲಿ ಪಾಕಿಸ್ತಾನದ ಎಂಟು ಮಂದಿ ಮುಂಚೂಣಿ ಪಡೆ(ಎಫ್‌ಸಿ)ಯೋಧರನ್ನು ಪಾಕ್ ತಾಲಿಬಾನ್ ಹತ್ಯೆಗೈದಿದೆ ಹಾಗೂ ಹಲವಾರು ಮಂದಿಯನ್ನು ಗಾಯಗೊಳಿಸಿದೆ. ಘಟನೆಯಲ್ಲಿ ಪಾಕ್‌ನ ಕೆಲವು ಮುಂಚೂಣಿ ಯೋಧರು ಕೂಡಾ ನಾಪತ್ತೆಯಾಗಿದ್ದಾರೆಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News