ಅಫ್ಘಾನ್ ಬಳಸಿಕೊಂಡು ಪಾಕ್ ಅಸ್ಥಿರತೆಗೆ ಭಾರತದ ಯತ್ನ: ಪಾಕಿಸ್ತಾನದ ರಕ್ಷಣಾ ಸಚಿವರ ಆರೋಪ
Photo : NDTV
ಇಸ್ಲಾಮಾಬಾದ್, ಅ.11: ಪಾಕಿಸ್ತಾನವನ್ನು ಅಸ್ಥಿರಗೊಳಿಸಲು ಭಾರತವು ಅಫ್ಘಾನಿಸ್ತಾನವನ್ನು ಬಳಸಿಕೊಳ್ಳುತ್ತಿದೆ. ಅಫ್ಘಾನಿಸ್ತಾನದ ನೆಲದಿಂದ ಇತ್ತೀಚೆಗೆ ಗಡಿಯಾಚೆಗಿನ ದಾಳಿಗಳನ್ನು ಭಾರತದ ಆಜ್ಞೆಯ ಮೇರೆಗೆ ನಡೆಸಲಾಗುತ್ತಿದೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಕ್ವಾಜಾ ಆಸಿಫ್ ಆರೋಪಿಸಿದ್ದಾರೆ.
ಅಫ್ಘಾನಿಸ್ತಾನದ ಮೂಲಕ ತನ್ನ ಹಿಂದಿನ ಸೋಲಿನ ಅವಮಾನವನ್ನು ಅಳಿಸಿ ಹಾಕಲು ಭಾರತ ಪ್ರಯತ್ನಿಸಿದರೆ ಭಾರತ ಮತ್ತು ಅಫ್ಘಾನಿಸ್ತಾನ ಎರಡೂ ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿರುವುದಾಗಿ ವರದಿಯಾಗಿದೆ.
ಅಫ್ಘಾನಿಸ್ತಾನದ ವಿದೇಶಾಂಗ ಸಚಿವ ಅಮಿರ್ ಖಾನ್ ಮುತ್ತಾಕಿ ಭಾರತಕ್ಕೆ ನೀಡಿರುವ ಭೇಟಿಯನ್ನು ಉಲ್ಲೇಖಿಸಿದ ಪಾಕ್ ರಕ್ಷಣಾ ಸಚಿವರು ` ಅಫ್ಘಾನ್ ರಕ್ಷಣಾ ಸಚಿವರು ದಿಲ್ಲಿಯಲ್ಲಿ ಕುಳಿತು ಪಾಕಿಸ್ತಾನದ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ಅಂದರೆ ಅವರು ಭಾರತದ ಅನುಮತಿಯಿದ್ದರೆ ಮಾತ್ರ ಮಾತನಾಡುತ್ತಾರೆಯೇ? ಎಂದು ಪ್ರಶ್ನಿಸಿದರು.
` ಉಗ್ರರ ಅಡಗುದಾಣಗಳನ್ನು ಮುಚ್ಚುವಂತೆ ನಾವು ಅಫ್ಘಾನಿಸ್ತಾನಕ್ಕೆ ಸೂಚಿಸಿದ್ದೆವು. ಆದರೆ ಅವರು ನಮಗೆ ಹಣ ಕೊಟ್ಟರೆ ಉಗ್ರರನ್ನು ಸ್ಥಳಾಂತರಿಸುವುದಾಗಿ ಪ್ರತಿಕ್ರಿಯಿಸಿದ್ದಾರೆ. ಅವರ ಮಾತಿನಲ್ಲಿ ನಮಗೆ ವಿಶ್ವಾಸವಿಲ್ಲ' ಎಂದು ಹೇಳಿದ್ದಾರೆ.
ಐಎಸ್ಐ(ಪಾಕ್ ಮಿಲಿಟರಿ ಗುಪ್ತಚರ ಏಜೆನ್ಸಿ) ಮಾಜಿ ಮುಖ್ಯಸ್ಥ ಜ| ಫಯಾಜ್ ಹಮೀದ್ ತಾಲಿಬಾನ್ ನಾಯಕರಿಗೆ ಬುಲೆಟ್ ಪ್ರೂಫ್ ವಾಹನವನ್ನು ಕೊಡುಗೆ ನೀಡಿದ್ದರು. ಜ| ಫಯಾಜ್ ಮತ್ತು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಅಧಿಕಾರಾವಧಿಯಲ್ಲಿ ಪಾಕಿಸ್ತಾನದ ಭದ್ರತೆಯನ್ನು ಕಡೆಗಣಿಸಿ ಸುಮಾರು 5000 ಟಿಟಿಪಿ(ತೆಹ್ರೀಕೆ ತಾಲಿಬಾನ್ ಪಾಕಿಸ್ತಾನ್) ಹೋರಾಟಗಾರರು ಖೈಬರ್ ಪಖ್ತೂಂಕ್ವಾದಲ್ಲಿ ನೆಲೆಗೊಳ್ಳಲು ಅನುಕೂಲ ಮಾಡಿಕೊಟ್ಟರು. ಈ ಹೋರಾಟಗಾರರು ಮರು ಸಂಘಟನೆಗೊಂಡು ಇದೀಗ ಪಾಕಿಸ್ತಾನದ ಭದ್ರತಾ ವ್ಯವಸ್ಥೆಗೆ ಸವಾಲೆಸೆಯುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಪಾಕಿಸ್ತಾನ ಮಾತುಕತೆಗೆ ಸಿದ್ಧವಿದೆ. ಆದರೆ ಅಫ್ಘಾನ್ ತಾಲಿಬಾನ್ ತನ್ನ ಭೂಪ್ರದೇಶದಿಂದ ಹೊರಹೊಮ್ಮುವ ಭಯೋತ್ಪಾದಕ ಚಟುವಟಿಕೆಗಳನ್ನು ತಡೆಯುವ ಭರವಸೆಯನ್ನು ನೀಡುವಲ್ಲಿ ವಿಫಲವಾಗಿದೆ ಎಂದು ಖ್ವಾಜಾ ಆಸಿಫ್ ಪ್ರತಿಪಾದಿಸಿದ್ದಾರೆ. ಈ ಮಧ್ಯೆ, ಅಫ್ಘಾನಿಸ್ತಾನದಲ್ಲಿ ತೆಹ್ರೀಕೆ ತಾಲಿಬಾನ್ ಪಾಕಿಸ್ತಾನ್(ಟಿಟಿಪಿ) ಮುಖ್ಯಸ್ಥ ನೂರ್ ವಾಲಿ ಮೆಹ್ಸುದ್ ನನ್ನು ಗುರಿಯಾಗಿಸಿ ಪಾಕಿಸ್ತಾನ ನಡೆಸಿದ್ದ ವೈಮಾನಿಕ ದಾಳಿ ವಿಫಲವಾಗಿದೆ. ದಾಳಿಯಲ್ಲಿ ಮೆಹ್ಸುದ್ ತೀವ್ರ ಗಾಯಗೊಂಡಿದ್ದರೂ ಪ್ರಾಣಾಪಾಯದಿಂದ ಪಾರಾಗಿದ್ದು ಈಗ ಅಫ್ಘಾನ್ ತಾಲಿಬಾನ್ ನ ವಶದಲ್ಲಿರುವುದಾಗಿ ಗುಪ್ತಚರ ಮೂಲಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.