ಅಫ್ಘಾನಿಸ್ತಾನ ಮೇಲೆ ಪಾಕಿಸ್ತಾನದಿಂದ ವಾಯುದಾಳಿ: 9 ನಾಗರಿಕರು ಮೃತ್ಯು
Photo Credit : aljazeera.com
ಕಾಬೂಲ್: ಪಾಕಿಸ್ತಾನವು ಬುಧವಾರ ರಾತ್ರಿ ಅಫ್ಘಾನಿಸ್ತಾನದ ಎರಡು ಪ್ರಾಂತಗಳ ಮೇಲೆ ನಡೆಸಿದ ವಾಯುದಾಳಿಯಲ್ಲಿ 9 ಮಂದಿ ಮೃತಪಟ್ಟಿದ್ದು, ಇತರ 11 ನಾಗರಿಕರು ಗಾಯಗೊಂಡಿದ್ದಾರೆ ಎಂದು ಅಫ್ಘಾನಿಸ್ತಾನ ಹೇಳಿದೆ.
ಎರಡು ಪ್ರದೇಶಗಳಲ್ಲಿದ್ದ ಭಯೋತ್ಪಾದಕರ ಅಡಗುದಾಣಗಳ ಮೇಲೆ ವಾಯುದಾಳಿ ನಡೆಸಲಾಗಿದ್ದು, 22 ಭಯೋತ್ಪಾದಕರು ಹತರಾಗಿದ್ದಾರೆ ಎಂದು ಪಾಕಿಸ್ತಾನದ ಮಾಹಿತಿ ಸಚಿವಾಲಯ ತಿಳಿಸಿದೆ.
ದಕ್ಷಿಣದ ಹೆಲ್ಮಂಡ್ ಪ್ರಾಂತ ಮತ್ತು ಪೂರ್ವದ ಕುನಾರ್ ಪ್ರಾಂತದಲ್ಲಿರುವ ನಾಗರಿಕರ ಮನೆಗಳ ಮೇಲೆ ವಾಯುದಾಳಿ ನಡೆದಿದ್ದು, ಮೂರು ಮನೆಗಳು ಧ್ವಂಸಗೊಂಡಿವೆ. ಇದರಿಂದ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 9 ಮಂದಿ ಮೃತಪಟ್ಟು, ಇತರ 11 ನಾಗರಿಕರು ಗಾಯಗೊಂಡಿದ್ದಾರೆ ಎಂದು ಅಫ್ಘಾನಿಸ್ತಾನ ಸರಕಾರದ ವಕ್ತಾರ ಝಬಿಹುಲ್ಲಾ ಮುಜಾಹಿದ್ ತಿಳಿಸಿದ್ದಾರೆ.