Flydubai ವಿಮಾನದಲ್ಲಿ ಇರಿತ ಪ್ರಕರಣ | ಪೈಲಟ್ ಮಚ್ಚಾರ್ ಗೆ ‘ವಿಶಿಷ್ಟ ಗುಜರಾತ್ ಗರಿಮಾ ಪುರಸ್ಕಾರ’ ಘೋಷಣೆ
ಸ್ಮಿತ್ ಮಚ್ಚಾರ್ |Screengrab : X
ಅಹ್ಮದಾಬಾದ್: ಇಸ್ರೇಲ್ ನ ಟೆಲ್ಅವೀವ್ ಗೆ ತೆರಳುತ್ತಿದ್ದ ಫ್ಲೈದುಬೈ ವಾಯುಯಾನ ಸಂಸ್ಥೆಯ ವಿಮಾನದಲ್ಲಿ ಸಹಪೈಲಟ್ ನಿಂದ ಇರಿತಕ್ಕೊಳಗಾದರೂ, ತುರ್ತು ಪರಿಸ್ಥಿತಿಯಲ್ಲಿ ಅಸಾಧಾರಣ ಶೌರ್ಯ ಪ್ರದರ್ಶಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್ ಅವರಿಗೆ ‘ವಿಶಿಷ್ಟ ಗುಜರಾತ್ ಗರಿಮಾ ಪುರಸ್ಕಾರ’ ನೀಡಲಾಗುವುದು ಎಂದು ಗುಜರಾತ್ ಸರಕಾರ ಗುರುವಾರ ಘೋಷಿಸಿದೆ.
ಮಚ್ಚಾರ್ ಅವರು ಇರಿತದ ಗಾಯಗಳಿಗಾಗಿ ಸೌದಿ ಅರೇಬಿಯದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಮಾನ ಹಾರಾಟದ ಸಂದರ್ಭ ಎದುರಾದ ತುರ್ತು ಸನ್ನಿವೇಶದಲ್ಲಿ ಅವರು ತೋರಿದ ಶೌರ್ಯವು ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ. ಗಂಭೀರವಾಗಿ ಗಾಯಗೊಂಡಿದ್ದರೂ ಮಚ್ಚಾರ್ ಅವರು ಕಾಕ್ಪಿಟ್ ಬಾಗಿಲು ತೆರೆಯಲು ನೆರವಾದರು. ಬಳಿಕ ವಿಮಾನದಲ್ಲಿದ್ದ ಪ್ರಯಾಣಿಕರು ಹಾಗೂ ಸಿಬ್ಬಂದಿ ಸಹಪೈಲಟ್ ನನ್ನು ನಿಯಂತ್ರಿಸಲು ಸಾಧ್ಯವಾಯಿತು. ವಿಮಾನವನ್ನು ಸೌದಿ ಅರೇಬಿಯದ ತಬೂಕ್ ನಲ್ಲಿ ಸುರಕ್ಷಿತವಾಗಿ ಇಳಿಸಲಾಯಿತು.
ಮಚ್ಚಾರ್ ಅವರ ಶೌರ್ಯವು ವಿಮಾನದಲ್ಲಿದ್ದ 174 ಮಂದಿಯ ಪ್ರಾಣ ಉಳಿಸಲು ನೆರವಾಗಿದೆ ಎಂದು ಗುಜರಾತ್ ಸರಕಾರದ ಹೇಳಿಕೆ ತಿಳಿಸಿದೆ.
ಮಚ್ಚಾರ್ ಅವರ ಕಾರ್ಯವು ಧೈರ್ಯ ಹಾಗೂ ಸಮರ್ಪಣಾಭಾವಕ್ಕೆ ನಿದರ್ಶನವಾಗಿದೆ ಎಂದು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಮಚ್ಚಾರ್ ಗೆ ಪುರಸ್ಕಾರ ಘೋಷಿಸುತ್ತಾ ಹೇಳಿದ್ದಾರೆ.
‘‘ಇಸ್ರೇಲ್ಗೆ ತೆರಳುತ್ತಿದ್ದ ವಿಮಾನದ ಪೈಲಟ್ ಆಗಿದ್ದ ಕ್ಯಾಪ್ಟನ್ ಮಚ್ಚಾರ್ ಅವರು ತೋರಿದ ಧೈರ್ಯಕ್ಕೆ ಇಂದು ಇಡೀ ವಿಶ್ವವೇ ಸಲ್ಯೂಟ್ ಹೊಡೆಯುತ್ತಿದೆ. ಗಂಭೀರವಾಗಿ ಗಾಯಗೊಂಡಿದ್ದರೂ, ಮಚ್ಚಾರ್ ಅವರು ಛಲಬಿಡದೆ ಕಾರ್ಯಪ್ರವೃತ್ತರಾಗಿ 174 ಮಂದಿಯ ಪ್ರಾಣ ಉಳಿಸಿದ್ದಾರೆ’’ ಎಂದು ಪಟೇಲ್ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮಚ್ಚಾರ್ ಅವರ ಕಾರ್ಯಗಳು ಗುಜರಾತ್ ಹಾಗೂ ಭಾರತಕ್ಕೆ ಮನ್ನಣೆಯನ್ನು ತಂದುಕೊಟ್ಟಿವೆ. ಅವರ ಅಸಾಧಾರಣ ಶೌರ್ಯ ಹಾಗೂ ಮಾನವೀಯತೆಯನ್ನು ಗೌರವಿಸಲು ‘ವಿಶಿಷ್ಟ ಗುಜರಾತ್ ಗರಿಮಾ ಪುರಸ್ಕಾರ’ ನೀಡಲಾಗುತ್ತಿದೆ ಎಂದು ಪಟೇಲ್ ತಿಳಿಸಿದ್ದಾರೆ.