ನೇಪಾಳ | ಹಿಮಪಾತಕ್ಕೆ 15 ಕಾರ್ಮಿಕರು ಮೃತ್ಯು
Screengrab : X
ಕಠ್ಮಂಡು: ಮಧ್ಯ ನೇಪಾಳದಲ್ಲಿ ವಿದೇಶಿ ಪರ್ವತಾರೋಹಿಗಳಿಗಾಗಿ ಸಿದ್ಧಪಡಿಸುತ್ತಿದ್ದ ಪರ್ವತ ಶಿಬಿರದ ಸ್ಥಳದಲ್ಲಿ ಹಿಮಪಾತ ಸಂಭವಿಸಿ ಕನಿಷ್ಠ 15 ನೇಪಾಳಿ ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ರಕ್ಷಣಾ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.
ಉತ್ತರ ಮನಾಂಗ್ ಜಿಲ್ಲೆಯ 23,379 ಅಡಿ ಎತ್ತರದ ಹಿಮ್ಲುಂಗ್ ಹಿಮಾಲ್ ಪರ್ವತದ ಬೇಸ್ ಕ್ಯಾಂಪ್‍ನಲ್ಲಿ ನೇಪಾಳಿ ಕಾರ್ಮಿಕರು ಟೆಂಟ್‍ಗಳನ್ನು ಹಾಕುತ್ತಿದ್ದಾಗ ಮತ್ತು ಹಗ್ಗಗಳನ್ನು ಕಟ್ಟುತ್ತಿದ್ದಾಗ ಸಂಭವಿಸಿದ ಹಿಮಪಾತವು ಇಡೀ ಕ್ಯಾಂಪ್ ಅನ್ನು ಹೂತುಹಾಕಿದೆ. ಸ್ಥಳದಿಂದ ಇದುವರೆಗೆ 15 ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಒಬ್ಬ ವ್ಯಕ್ತಿ ಇನ್ನೂ ನಾಪತ್ತೆಯಾಗಿದ್ದಾರೆ ಎಂದು ನೇಪಾಳ ನ್ಯಾಷನಲ್ ಮೌಂಟೇನ್ ಗೈಡ್ ಅಸೋಸಿಯೇಷನ್ ಅಧ್ಯಕ್ಷರು ತಿಳಿಸಿದ್ದಾರೆ.