screengrab : X

ದುಬೈ: ದುಬೈನಿಂದ ಟೆಲ್ ಅವೀವ್‍ಗೆ ತೆರಳುತ್ತಿದ್ದ ಫ್ಲೈದುಬೈ ಎಫ್‍ಝಡ್1073 ವಿಮಾನದಲ್ಲಿ ನಡೆದ ಘಟನೆಯ ಕುರಿತು ಗುರುವಾರ ತನಿಖೆ ಆರಂಭಿಸಲಾಗಿದೆ. ಈ ಪ್ರಕರಣವನ್ನು ಯುಎಇಯ ನ್ಯಾಯಾಂಗ ಪ್ರಾಧಿಕಾರಗಳು ತನಿಖೆ ಮಾಡುತ್ತವೆ ಎಂದು ಯುಎಇ ವಿದೇಶಾಂಗ ಸಚಿವಾಲಯ ಹೇಳಿದೆ.

ಬುಧವಾರ ವಿಮಾನದ ಕಾಕ್‍ಪಿಟ್‍ನಲ್ಲಿ ನಡೆದ ಜಗಳದ ಕಾರಣದಿಂದಾಗಿ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಬೇಕಾಯಿತು. ಬಳಿಕ ಸೌದಿ ಅಧಿಕಾರಿಗಳು ಒಮನ್ ಮೂಲದವನೆನ್ನಲಾದ ಸಹ-ಪೈಲಟ್‍ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ವರದಿಯ ಪ್ರಕಾರ, ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್, ವಿಮಾನವನ್ನು ಪತನಗೊಳಿಸಲು ಯತ್ನಿಸಿದ ಸಹ-ಪೈಲಟ್ ಜೊತೆ ಹೋರಾಡಿದ್ದಾರೆ. ಕಾಕ್‍ಪಿಟ್‍ನಲ್ಲಿ ಮಚ್ಚರ್ ಅವರಿಗೆ ಚಾಕುವಿನಿಂದ ಇರಿಯಲಾಗಿದ್ದು, ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ವಿಮಾನದಲ್ಲಿ 27 ಮಕ್ಕಳು ಸೇರಿದಂತೆ ಒಟ್ಟು 174 ಪ್ರಯಾಣಿಕರಿದ್ದರು.

ವಿಮಾನದಲ್ಲಿದ್ದ ಫ್ಲೈದುಬೈ ಸಿಬ್ಬಂದಿ ಮಧ್ಯಪ್ರವೇಶಿಸಿ ವಿಮಾನವನ್ನು ಸುರಕ್ಷಿತಗೊಳಿಸಿದರು ಎಂದು ಫ್ಲೈದುಬೈ ಪ್ರಕಟಿಸಿದೆ. ಘಟನೆಯ ಸಂದರ್ಭ ಮತ್ತು ಕಾರಣಗಳನ್ನು ತನಿಖೆ ಮಾಡಲು ಪಬ್ಲಿಕ್ ಪ್ರಾಸಿಕ್ಯೂಷನ್‍ನ ವಿಶೇಷ ಸದಸ್ಯರ ತಂಡವನ್ನು ರಚಿಸಲು ಯುಎಇ ಅಟಾರ್ನಿ ಜನರಲ್ ಆದೇಶಿಸಿದ್ದಾರೆ. ಈ ವಿಮಾನವು ಯುಎಇಯಲ್ಲಿ ನೋಂದಾಯಿಸಲ್ಪಟ್ಟಿದ್ದು ಮತ್ತು ಅಲ್ಲಿನ ಧ್ವಜವನ್ನು ಹೊಂದಿರುವುದರಿಂದ, ಅನ್ವಯವಾಗುವ ಕಾನೂನಿನಡಿಯಲ್ಲಿ ಯುಎಇ ನ್ಯಾಯಾಂಗ ಪ್ರಾಧಿಕಾರಗಳಿಗೆ ಈ ತನಿಖೆಯ ಅಧಿಕಾರವಿದೆ. ವಿಮಾನದಲ್ಲಿ ನಡೆಯುವ ಅಪರಾಧಗಳು ಯುಎಇ ಪ್ರದೇಶದ ಹೊರಗೆ ನಡೆದಿದ್ದರೂ ಸಹ ಯುಎಇ ಕಾನೂನು ಅನ್ವಯಿಸುತ್ತದೆ ಎಂದು ಸಚಿವಾಲಯ ತಿಳಿಸಿದೆ. ಫ್ಲೈದುಬೈ ದುಬೈ ಮೂಲದ ಯುಎಇ ಸರಕಾರಿ ಒಡೆತನದ ವಿಮಾನಯಾನ ಸಂಸ್ಥೆಯಾಗಿದೆ.

ಈ ಘಟನೆಯು ಯಾವುದೇ ಭಯೋತ್ಪಾದಕ ಚಟುವಟಿಕೆ ಅಥವಾ ಉದ್ದೇಶದೊಂದಿಗೆ ಸಂಪರ್ಕ ಹೊಂದಿದೆಯೇ ಮತ್ತು ಯಾವುದೇ ಮುಂಚಿತ ಯೋಜನೆಯೇ ಎಂಬುದನ್ನು ಒಳಗೊಂಡಂತೆ ಘಟನೆಗೆ ಸಂಬಂಧಿಸಿದ ಎಲ್ಲಾ ಸಂದರ್ಭಗಳು ಮತ್ತು ಉದ್ದೇಶಗಳನ್ನು ತನಿಖೆ ಪರೀಕ್ಷಿಸಲಿದೆ. ತನಿಖಾ ತಂಡವು ಯುಎಇಯ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಮತ್ತು ಇತರ ಸಂಬಂಧಿತ ಅಧಿಕಾರಿಗಳ ಸಮನ್ವಯದೊಂದಿಗೆ ತನ್ನ ಕೆಲಸವನ್ನು ಪ್ರಾರಂಭಿಸಿದೆ ಎಂದು ಸಚಿವಾಲಯ ತಿಳಿಸಿದೆ.

ತನಿಖೆ ಪೂರ್ಣಗೊಳ್ಳುವವರೆಗೆ ಅಧಿಕೃತ ಮೂಲಗಳು ಹೊರಡಿಸುವ ಮಾಹಿತಿಯನ್ನಷ್ಟೇ ನಂಬಬೇಕು ಮತ್ತು ಊಹಾಪೋಹ ಅಥವಾ ನಂಬಲರ್ಹವಲ್ಲದ ವರದಿಗಳನ್ನು ತಪ್ಪಿಸಬೇಕು ಎಂದು ವಿದೇಶಾಂಗ ಸಚಿವಾಲಯ ಒತ್ತಿ ಹೇಳಿದೆ.

ವಿಮಾನ ಕಳುಹಿಸುವ ಇಸ್ರೇಲ್ ಕೋರಿಕೆ ತಿರಸ್ಕರಿಸಿದ ಸೌದಿ

ಸೌದಿ ಅರೇಬಿಯಾದಲ್ಲಿ ತುರ್ತು ಭೂಸ್ಪರ್ಶ ಮಾಡಿದ ಫ್ಲೈದುಬೈ ವಿಮಾನದ ಪ್ರಯಾಣಿಕರನ್ನು ವಾಪಸ್ ಕರೆತರಲು ತನ್ನ ವಿಮಾನಗಳನ್ನು ಸೌದಿ ದೇಶದೊಳಗೆ ಹಾರಿಸಲು ಅನುಮತಿ ನೀಡಬೇಕೆಂಬ ಇಸ್ರೇಲ್‍ನ ಕೋರಿಕೆಯನ್ನು ಸೌದಿ ಅರೇಬಿಯಾ ತಿರಸ್ಕರಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ `ರಾಯ್ಟರ್ಸ್' ವರದಿ ಮಾಡಿದೆ.

ಇಸ್ರೇಲ್‍ನೊಂದಿಗೆ ಯಾವುದೇ ರಾಜತಾಂತ್ರಿಕ ಸಂಬಂಧಗಳನ್ನು ಹೊಂದಿಲ್ಲದ ಸೌದಿ ಅರೇಬಿಯಾದಲ್ಲಿ ಸಿಲುಕಿರುವ ಇಸ್ರೇಲಿ ಪ್ರಯಾಣಿಕರನ್ನು ಕರೆತರಲು ತನ್ನ ಮಿಲಿಟರಿ ವಿಮಾನಗಳಿಗೆ ಅನುಮತಿ ನೀಡಬೇಕೆಂದು ಇಸ್ರೇಲ್ ಮನವಿ ಮಾಡಿತ್ತು ಎಂದು ಮೂಲಗಳು ತಿಳಿಸಿವೆ.

ಈ ಮಧ್ಯೆ, ಕಾಕ್‍ಪಿಟ್‍ನಲ್ಲಿ ನಡೆದ ಘಟನೆಯನ್ನು ಅಧಿಕಾರಿಗಳು ತನಿಖೆ ಮಾಡುತ್ತಿರುವ ಹಿನ್ನೆಲೆಯಲ್ಲಿ, ಫ್ಲೈದುಬೈ ಸಂಸ್ಥೆಯು ಇಸ್ರೇಲ್‍ಗೆ ಮತ್ತು ಇಸ್ರೇಲ್‍ನಿಂದ ಆಗಮಿಸುವ ತನ್ನ ವಿಮಾನ ಸೇವೆಗಳನ್ನು ಅಮಾನತುಗೊಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor