ಟ್ರಂಪ್ ಅವರ ಕಾರ್ಯ ನಿರ್ವಹಣೆಗೆ ಅಮೆರಿಕದ ಜನರಿಂದ ತೀವ್ರ ಅಸಮಾಧಾನ: ಸಮೀಕ್ಷಾ ವರದಿ
ಡೊನಾಲ್ಡ್ ಟ್ರಂಪ್ | Photo Credit : PTI
ವಾಶಿಂಗ್ಟನ್: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆರ್ಥಿಕ ನಿರ್ವಹಣೆ ಮತ್ತು ಏರುತ್ತಿರುವ ಬೆಲೆಗಳ ಬಗ್ಗೆ ಅಮೆರಿಕನ್ನರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೆಚ್ಚಾಗುತ್ತಿರುವ ವೆಚ್ಚಗಳು ನವೆಂಬರ್‌ನಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಅವರ ಪಕ್ಷದ ಗೆಲುವಿನ ಸಾಧ್ಯತೆಗಳಿಗೆ ಸವಾಲೊಡ್ಡಿದ್ದು, ಹೆಚ್ಚಿನ ಜನರು ಅವರ ಕಾರ್ಯಕ್ಷಮತೆಯನ್ನು ಟೀಕಿಸಿದ್ದಾರೆ ಮತ್ತು ಸಮಸ್ಯೆಗೆ ಅವರ ನೀತಿಗಳನ್ನೇ ಹೊಣೆ ಮಾಡಿದ್ದಾರೆ.
`ದಿ ಅಸೋಸಿಯೇಟೆಡ್ ಪ್ರೆಸ್-ನಾರ್ಕ್ ಸೆಂಟರ್ ಫಾರ್ ಪಬ್ಲಿಕ್ ಅಫೇರ್ಸ್ ರಿಸರ್ಚ್' ನಡೆಸಿರುವ ಹೊಸ ಸಮೀಕ್ಷೆಯ ಪ್ರಕಾರ, ಅಮೆರಿಕದ ವಯಸ್ಕರಲ್ಲಿ ಕೇವಲ 17% ಜನರು ಮಾತ್ರ ಜೀವನಾವಶ್ಯಕ ವೆಚ್ಚಗಳನ್ನು ನಿರ್ವಹಿಸುವಲ್ಲಿ ಟ್ರಂಪ್ ಕಾರ್ಯವೈಖರಿಯನ್ನು ಅನುಮೋದಿಸಿದ್ದಾರೆ. ಆರ್ಥಿಕತೆಯ ನಿರ್ವಹಣೆಯಲ್ಲಿ ಅವರ ಕಾರ್ಯಕ್ಷಮತೆಯನ್ನು ಕೇವಲ 26% ಜನರು ಬೆಂಬಲಿಸಿದ್ದು, ಇದು ಹೊಸ ಕನಿಷ್ಠ ಮಟ್ಟವನ್ನು ತಲುಪಿದೆ. ಟ್ರಂಪ್ ಅವರ ನೀತಿಗಳೇ ಈ ನಿರಂತರ ಬೆಲೆ ಏರಿಕೆಗೆ ಕಾರಣ ಎಂದು ಶೇಕಡಾ 65 ರಷ್ಟು ಅಮೆರಿಕದ ವಯಸ್ಕರು ಆರೋಪಿಸುತ್ತಿದ್ದಾರೆ. ಇದು ಅವರು ಜಾರಿಗೆ ತರುತ್ತಿರುವ ತೀವ್ರ ಸ್ವರೂಪದ ಸುಂಕಗಳು ಮತ್ತು ಇರಾನ್ ಜೊತೆಗಿನ ಯುದ್ಧದ ಬಗ್ಗೆ ಜನರಲ್ಲಿ ಬೆಳೆಯುತ್ತಿರುವ ಬೇಸರವನ್ನು ತೋರಿಸುತ್ತದೆ.
69%ದಷ್ಟು ಅಮೆರಿಕನ್ನರು ಈ ಯುದ್ಧವನ್ನು ಮಾಡುವುದು ವ್ಯರ್ಥ ಎಂದು ಭಾವಿಸುತ್ತಿದ್ದು, ಇದು ಜುಲೈನಲ್ಲಿ ಇದ್ದ 64% ಕ್ಕಿಂತ ಕೊಂಚ ಹೆಚ್ಚಾಗಿದೆ. ಕೇವಲ 28% ಜನರು ಮಾತ್ರ ಇರಾನ್ ಪರಿಸ್ಥಿತಿಯನ್ನು ಟ್ರಂಪ್ ನಿರ್ವಹಿಸುತ್ತಿರುವ ರೀತಿ ಸೂಕ್ತವಾಗಿದೆ ಎಂದಿದ್ದಾರೆ.
ಇತರ ದೇಶಗಳೊಂದಿಗಿನ ವ್ಯಾಪಾರ ಮಾತುಕತೆಗಳನ್ನು ಅವರು ನಿರ್ವಹಿಸುತ್ತಿರುವ ವಿಧಾನವನ್ನು ಕೇವಲ 30% ಜನರು ಮಾತ್ರ ಅನುಮೋದಿಸಿದ್ದು, 64% ಜನರು ಇತರ ದೇಶಗಳ ಮೇಲೆ ಹೊಸ ಸುಂಕಗಳನ್ನು ವಿಧಿಸುವಲ್ಲಿ ಟ್ರಂಪ್ `ಮಿತಿ ಮೀರಿದ್ದಾರೆ' ಎಂದು ಹೇಳಿದ್ದಾರೆ.
ಅಧ್ಯಕ್ಷರಾಗಿ ಅವರ ಕಾರ್ಯನಿರ್ವಹಣೆಯನ್ನು ಕೇವಲ 30% ಅಮೆರಿಕನ್ನರು ಬೆಂಬಲಿಸಿದ್ದಾರೆ ಮತ್ತು ಸುಮಾರು 60% ಜನರು ಟ್ರಂಪ್ ಅವರ ಎರಡನೇ ಅವಧಿ ಪ್ರಾರಂಭವಾದಾಗಿನಿಂದ ದೇಶದ ಒಟ್ಟಾರೆ ಪರಿಸ್ಥಿತಿ ಬಹಳಷ್ಟು ಹದಗೆಟ್ಟಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ ಗಡಿ ಭದ್ರತೆ ವಿಷಯದಲ್ಲಿ ಸುಮಾರು 50%ದಷ್ಟು ಅಮೆರಿಕನ್ನರು ಟ್ರಂಪ್ ಅವರ ಕಾರ್ಯಕ್ಷಮತೆಯನ್ನು ಬೆಂಬಲಿಸಿದ್ದಾರೆ.