ಚೀನಾ ಜೊತೆ ಮಹತ್ವದ ವ್ಯಾಪಾರ ಒಪ್ಪಂದ ಮಾಡಿಕೊಂಡ ಅಮೆರಿಕ
ಡೊನಾಲ್ಡ್ ಟ್ರಂಪ್ | pc : x
ವಾಶಿಂಗ್ಟನ್: ಚೀನಾದದೊಂದಿಗೆ ಏರ್ಪಟ್ಟ ನೂತನ ವ್ಯಾಪಾರ ಒಪ್ಪಂದದಡಿ ಅಮೆರಿಕ ಆಯಸ್ಕಾಂತಗಳನ್ನು ಹಾಗೂ ಅಪರೂಪದ ಖನಿಜಗಳನ್ನು ಆ ದೇಶದಿಂದ ಪಡೆಯಲಿದೆ ಹಾಗೂ ಚೀನಿ ಸಾಮಾಗ್ರಿಗಳ ಮೇಲಿನ ಸುಂಕವನ್ನು ಶೇ.55ಕ್ಕೆ ಏರಿಕೆ ಮಾಡಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಪ್ರಕಟಿಸಿದ್ದಾರೆ.
ಇದಕ್ಕೆ ಪ್ರತಿಯಾಗಿ ಅಮೆರಿಕದ ಕಾಲೇಜು ಹಾಗೂ ವಿಶ್ವವಿದ್ಯಾನಿಲಯಗಳಲ್ಲಿ ಚೀನಿ ವಿದ್ಯಾರ್ಥಿಗಳ ಪ್ರವೇಶಕ್ಕೆ ಅನುಮತಿ ನೀಡಲಾಗುವುದು ಎಂದವರು ಹೇಳಿದ್ದಾರೆ. ಈ ಬಗ್ಗೆ ಟ್ರಂಪ್ ಅವರು ತನ್ನ ಸಾಮಾಜಿಕ ಜಾಲತಾಣ ಟ್ರೂಥ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಚೀನಾದೊಂದಿಗೆ ನಾವು ಒಪ್ಪಂದವೇರ್ಪಡಿಸಿಕೊಂಡಿದ್ದೇವೆ. ಇದು ಚೀನಿ ಅಧ್ಯಕ್ಷ ಕ್ಸಿ ಹಾಗೂ ನನ್ನ ಅಂತಿಮ ಅನುಮೋದನೆಗೆ ಬದ್ಧವಾಗಿದೆ’’ ಎಂದು ಟ್ರಂಪ್ ಹೇಳಿದ್ದಾರೆ.
ಅಮೆರಿಕ ಹಾಗೂ ಚೀನಾ ನಡುವಿನ ವಾಣಿಜ್ಯ ಮಾತುಕತೆಗಳನ್ನು ಹಳಿಗೆ ತರುವ ನಿಟ್ಟಿನಲ್ಲಿ ಕಾರ್ಯಚೌಕಟ್ಟೊಂದನ್ನು ರೂಪಿಸಲು ಒಪ್ಪಿಕೊಳ್ಳಲಾಗಿದೆಯೆಂದು ಹಿರಿಯ ಅಮೆರಿಕ ಹಾಗೂ ಚೀನಿ ಸಂಧಾನಕಾರರು ಪ್ರಕಟಿಸಿದ್ದಾರೆ.
ಗಣಿಗಾರಿಕೆಗೆ ಚೀನದಿಂದ ಜೀತದಾಳುಗಳಾಗಿ ಉಯಿಘರ್‌ಗಳ ಬಳಕೆ : ಮಾನವಹಕ್ಕುಗಳ ಸಂಘಟನೆ ಕಳವಳ
ನೂತನ ಒಪ್ಪಂದದನ್ವಯ ಆ್ಯವೊನ್, ವಾಲ್‌ಮಾರ್ಟ್, ನೆಸ್‌ಕೆಫೆ, ಕೋಕಾ-ಕೋಲಾ ಹಾಗೂ ಪೇಂಟ್ ಪೂರೈಕೆ ಸಂಸ್ಥೆ ಶೆರ್ವಿನ್ ವಿಲಿಯಮ್ಸ್‌ನಂತಹ ಅಮೆರಿಕದ ಜಾಗತಿಕ ಬ್ರಾಂಡ್‌ಗಳು ಚೀನಾದ ಕ್ಸಿನ್‌ಜಿಯಾಂಗ್ ಪ್ರಾಂತದಿಂದ ಟೈಟಾನಿಯಂನಂತಹ ಅಪರೂಪದ ಖನಿಜಗಳನ್ನು ಪಡೆದುಕೊಳ್ಳಲಿವೆ. ಚೀನಿ ಆಡಳಿತವು ಖನಿಜಗಳ ಗಣಿಗಾರಿಕೆಗಾಗಿ ಉಯಿ ಘರ್ ಮುಸ್ಲಿಮರು ಮತ್ತಿತರ ಅಲ್ಪಸಂಖ್ಯಾತರನ್ನು ಜೀತದಾಳುಗಳಾಗಿ ಬಳಸಿಕೊಳ್ಳುವ ಸಾಧ್ಯತೆಯಿದೆಯೆಂದು ನೆದರ್‌ಲ್ಯಾಂಡ್ಸ್ ಮೂಲದ ಜಾಗತಿಕ ಹಕ್ಕುಗಳ ಅನುಸರಣಾ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ.
ಟೈಟಾನಿಯಂ, ಲೀಥಿಯಂ, ಬೆರಿಲಿಯಂ ಹಾಗೂ ಮ್ಯಾಗ್ನೇಶಿಯಂ ಕೈಗಾರಿಕೆಗಳಲ್ಲಿನ 77 ಮಂದಿ ಚೀನಿ ಪೂರೈಕೆದಾರರು ಕ್ಸಿನ್‌ಜಿಯಾಂಗ್ ಪ್ರಾಂತದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಚೀನಿ ಸರಕಾರದ ಕಾರ್ಮಿಕ ವರ್ಗಾವಣೆ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಈ ಪೂರೈಕೆದಾರರು ಅಲ್ಪಸಂಖ್ಯಾತ ಉಯಿಘರ್ ಮುಸ್ಲಿಮರನ್ನು ತಮ್ಮ ಕಾರ್ಖಾನೆಗಳಲ್ಲಿ ಬಲವಂತವಾಗಿ ದುಡಿಸಿಕೊಳ್ಳುತ್ತಿದ್ದಾರೆಂದು ವರದಿ ಹೇಳಿದೆ.